×
Ad

ದಾಳಿ ಎಲ್ಲಾ ಉದ್ದೇಶಗಳನ್ನೂ ಸಾಧಿಸಿದೆ; ಪ್ರತಿದಾಳಿಯ ದುಸ್ಸಾಹಸ ಬೇಡ: ಇಸ್ರೇಲ್ ಗೆ ಇರಾನ್ ಎಚ್ಚರಿಕೆ

Update: 2024-04-14 21:55 IST

ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು (File Photo:PTI)

ಟೆಲ್‍ಅವೀವ್: ಇಸ್ರೇಲ್ ಮೇಲೆ ನಡೆಸಿರುವ ದಾಳಿಯು ತನ್ನ ಎಲ್ಲಾ ಉದ್ದೇಶಗಳನ್ನೂ ಈಡೇರಿಸಿದೆ ಎಂದು ಐಆರ್‍ಜಿಸಿ ಮುಖ್ಯಸ್ಥ ಜ| ಹುಸೇನ್ ಸಲಾಮಿ ಪ್ರತಿಪಾದಿಸಿದ್ದಾರೆ.

ದಾಳಿಯ ನಂತರದ ಬೆಳವಣಿಗೆಯ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ. ಆದರೆ ಪ್ರಾಥಮಿಕ ವರದಿಯ ಪ್ರಕಾರ ನಮ್ಮ ಕಾರ್ಯಾಚರಣೆ ಯಶಸ್ವಿಯಾಗಿದೆ. ಶತ್ರುಗಳ ಪಡೆ ನಡೆಸಿದ್ದ ದಾಳಿಗೆ ಸರಿಹೊಂದುವಂತೆ ನಾವು ಸೀಮಿತ ದಾಳಿ ನಡೆಸಿದ್ದೇವೆ. ಆದರೆ ಇದಕ್ಕೆ ಪ್ರತಿಯಾಗಿ ದಾಳಿ ನಡೆಸುವ ದುಸ್ಸಾಹಸಕ್ಕೆ ಇಳಿದರೆ ಭಾರೀ ಬೆಲೆ ತೆರಬೇಕಾಗುತ್ತದೆ' ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಇಸ್ರೇಲ್ ಸಂಕೀರ್ಣವಾದ, ಬಹುವಲಯದ ಮತ್ತು ಅತ್ಯಾಧುನಿಕ ವಾಯುರಕ್ಷಣಾ ವ್ಯವಸ್ಥೆಯನ್ನು ಹೊಂದಿದೆ. ಇದನ್ನು ದಾಟಿಕೊಂಡು ಮುಂದುವರಿಯುವುದು ಸುಲಭವಲ್ಲ. ಆದರೆ ಅತ್ಯಂತ ಹೆಚ್ಚಿನ ನಿಖರತೆಯಿಂದ ರೂಪಿಸಲಾದ ಕಾರ್ಯಾಚರಣೆಯಲ್ಲಿ ನಮ್ಮ ಡ್ರೋನ್‍ಗಳು, ಬ್ಯಾಲಿಸ್ಟಿಕ್ ಕ್ಷಿಪಣಿಗಳು, ಕ್ರೂಸ್ ಕ್ಷಿಪಣಿಗಳು ಶತ್ರುಗಳ ನೆಲಕ್ಕೆ ಅಪ್ಪಳಿಸಿದೆ ಎಂದವರು ಹೇಳಿದ್ದಾರೆ.

ಇಸ್ರೇಲ್ ಮೇಲಿನ ದಾಳಿಗೆ ಅಮೆರಿಕ ಪ್ರತಿದಾಳಿ ನಡೆಸಿದರೆ ಈ ವಲಯದಲ್ಲಿರುವ ಅಮೆರಿಕದ ನೆಲೆಗಳ ಮೇಲೆ ದಾಳಿ ನಡೆಸುವ ಎಚ್ಚರಿಕೆಯನ್ನು ಸ್ವಿಝರ್ಲ್ಯಾಂಡ್ರ ಮೂಲಕ ಅಮೆರಿಕಕ್ಕೆ ರವಾನಿಸಲಾಗಿದೆ ಎಂದು ಇರಾನ್‍ನ ಸಶಸ್ತ್ರ ಪಡೆಗಳ ಮುಖ್ಯಸ್ಥ ಮೇಜರ್ ಜನರಲ್ ಮುಹಮ್ಮದ್ ಬಘೇರಿ ಹೇಳಿದ್ದಾರೆ.

ಗೆಲುವು ನಮ್ಮದೇ: ನೆತನ್ಯಾಹು

ಇರಾನ್‍ನ ದಾಳಿಯನ್ನು ಹಿಮ್ಮಟ್ಟಿಸುವಲ್ಲಿ ಇಸ್ರೇಲ್ ಯಶಸ್ವಿಯಾಗಿದ್ದು ತಮ್ಮ ದೇಶದ ಗೆಲುವು ಶತಸಿದ್ಧ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪ್ರತಿಪಾದಿಸಿದ್ದಾರೆ.

ಇರಾನ್ ಉಡಾಯಿಸಿದ ಸುಮಾರು 300ರಷ್ಟು ಕ್ಷಿಪಣಿ, ಡ್ರೋನ್‍ಗಳನ್ನು ನಮ್ಮ ವಾಯುರಕ್ಷಣಾ ವ್ಯವಸ್ಥೆ ತುಂಡರಿಸಿದೆ. ನಾವು ತಡೆದೆವು, ಹಿಮ್ಮೆಟ್ಟಿಸಿದೆವು. ಅಂತಿಮವಾಗಿ ನಾವೇ ಗೆಲ್ಲುತ್ತೇವೆ' ಎಂದು ನೆತನ್ಯಾಹು ಟ್ವೀಟ್ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News