×
Ad

ಇಸ್ರೇಲ್ ಗೆ Modi ಸಹಿತ ಜಾಗತಿಕ ನಾಯಕರ ಬೆಂಬಲವಿದೆ: ನೆತನ್ಯಾಹು

ಗಾಝಾ ಯುದ್ಧ, ವಿದೇಶಾಂಗ ನೀತಿ ಸಹಿತ ತನ್ನ ಸರಕಾರದ ನೀತಿಯನ್ನು ಸಮರ್ಥಿಸಿದ ಇಸ್ರೇಲ್ ಪ್ರಧಾನಿ

Update: 2025-12-09 22:31 IST

ಬೆಂಜಮಿನ್ ನೆತನ್ಯಾಹು | Photo Credit : PTI  

ಜೆರುಸಲೇಂ,ಡಿ.9: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಸೋಮವಾರ ಇಸ್ರೇಲಿ ಸಂಸತ್ತನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ದೇಶದ ವ್ಯವಹಾರಗಳಿಗೆ ಸಂಬಂಧಿಸಿದಂತೆ ತನ್ನ ನಿರ್ವಹಣೆಯನ್ನು ಸಮರ್ಥಿಸಿಕೊಂಡಿದ್ದಾರೆ. ಯಹೂದಿ ರಾಷ್ಟ್ರವಾದ ಇಸ್ರೇಲ್ ವಿರುದ್ಧ ದ್ವೇಷದ ಭಾವನೆ ವ್ಯಾಪಕವಾಗಿರುವ ಹೊರತಾಗಿಯೂ ಅದು ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ದೇಶಗಳು ಮತ್ತು ನಾಯಕರ ಬೆಂಬಲವನ್ನು ಹೊಂದಿದೆಯೆಂದು ಹೇಳಿದ್ದಾರೆ.

‘40 ಹಸ್ತಾಕ್ಷರಗಳ ಸಂವಾದ’ ಎಂಬ ಚರ್ಚಾಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಇಸ್ರೇಲ್ ನ ವಿದೇಶಾಂಗ ವ್ಯವಹಾರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತನ್ನ ಸರಕಾರದ ನೀತಿಯನ್ನು ಸಮರ್ಥಿಸಿಕೊಂಡರು. ಇಸ್ರೇಲ್ ಈಗ ಹಿಂದೆಂಗಿಂತಲೂ ಹೆಚ್ಚು ಬಲಿಷ್ಠವಾಗಿದೆ ಎಂದವರು ಹೇಳಿದ್ದಾರೆ.

ಹಮಾಸ್ ಜೊತೆಗೆ ಎರಡು ವರ್ಷಗಳ ಸುದೀರ್ಘ ಯುದ್ಧವನ್ನು ನಡೆಸಿದ ಹೊರತಾಗಿಯೂ ಇಸ್ರೇಲ್ ರಾಜತಾಂತ್ರಿಕವಾಗಿ, ಸೈನಿಕವಾಗಿ ಹಾಗೂ ಆರ್ಥಿಕವಾಗಿ ಪ್ರಬಲವಾಗಿಯೇ ಉಳಿದುಕೊಂಡಿದೆಯೆಂದು ನೆತನ್ಯಾಹು ಹೇಳಿದರು.

‘‘ಗಾಝಾ ಸಂಘರ್ಷದಿಂದಾಗಿ ಇಸ್ರೇಲ್ ನ ಜಾಗತಿಕ ಸ್ಥಾನಮಾನ ಪತನಗೊಂಡಿದೆ ಎಂಬ ಪ್ರತಿಪಕ್ಷಗಳ ಟೀಕೆಗಳು ವಾಸ್ತವಕ್ಕೆ ದೂರವಾಗಿದೆ ಮತ್ತು ಇಸ್ರೇಲ್ ಹಿಂದೆಂದಿಗಿಂತಲೂ ಹೆಚ್ಚು ಬಲಶಾಲಿಯಾಗಿದೆ’’ ಎಂದು ನೆತನ್ಯಾಹು ಹೇಳಿದರು.

ಇಸ್ರೇಲ್ ಮಧ್ಯಪ್ರಾಚ್ಯದಲ್ಲಿ ಪ್ರಬಲ ಶಕ್ತಿಯಾಗಿದೆ. ಕೆಲವು ಕ್ಷೇತ್ರಗಳಲ್ಲಿ ಅದು ಜಾಗತಿಕ ಶಕ್ತಿಯಾಗಿ ಹೊರಹೊಮ್ಮಿದೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಇಸ್ರೇಲ್ ವಿರೋಧದ ಅಲೆ ವ್ಯಾಪಕವಾಗಿ ಹರಡುತ್ತಿದೆ . ಯಾಕೆಂದರೆ ತೀವ್ರವಾದಿಗಳು ಈಗ ಯುರೋಪ್ನ ಪ್ರತಿಯೊಂದು ದೇಶವನ್ನೂ ಪ್ರವೇಶಿಸಿದ್ದಾರೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿಯೂ ಇಸ್ರೇಲ್ ವಿರೋಧಿ ಭಾವನೆಯನ್ನು ಕೆರಳಿಸಲಾಗುತ್ತಿದೆ.ಯಹೂದ್ಯ ವಿರೋಧಿ ಸರಕಾರಗಳು ಹಾಗೂ ಸಂಘಟನೆಗಳು, ಈ ಪ್ರಚೋದನೆಯನ್ನು ಇಮ್ಮಡಿಗೊಳಿಸಿವೆ ಎಂದು ನೆತನ್ಯಾಹು ಹೇಳಿದರು.

ಇಸ್ರೇಲ್ ವಿರೋಧಿ ಅಪಪ್ರಚಾರದ ವಿರುದ್ಧ ಹೋರಾಡಲೆಂದೇ ತನ್ನ ಸರಕಾರವು 2.35 ಶತಕೋಟಿ ಡಾಲರ್ ಹಣವನ್ನು ವಿದೇಶಾಂಗ ಸಚಿವಾಲಯಕ್ಕೆ ಅನುದಾನವಾಗಿ ನೀಡಿದೆ ಎಂದು ಅವರು ಹೇಳಿದರು.

ತಾನು ಈ ವಾರದಲ್ಲಿ ಜರ್ಮನಿಯ ಚಾನ್ಸಲರ್ ಫ್ರೆಡ್ರಿಕ್ ಮೆರ್ಝ್ರನ್ನು ಅವ ಆಹ್ವಾನದ ಮೇರೆಗೆ ಭೇಟಿಯಾಗಲಿರುವುದಾಗಿಯೂ ನೆತನ್ಯಾಹು ತಿಳಿಸಿದರು. ಅಲ್ಲದೆ ತನ್ನ ಸ್ನೇಹಿತ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಲು ತೆರಳಲಿದ್ದು, ಇದು ಅವರು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಬಳಿಕ ಅವರನ್ನು ಭೇಟಿಯಾಗಲಿರುವುದು ಇದು 6ನೇ ಬಾರಿ ಎಂದು ನೆತನ್ಯಾಹು ನೆನಪಿಸಿದು.

‘‘ಇಸ್ರೇಲ್ ಗೆ ಅಮೆರಿಕಕ್ಕಿಂತ ಉತ್ತಮ ಗೆಳೆಯ ಮತ್ತೊಬ್ಬನಿಲ್ಲ. ಹಾಗೆಯೇ ಅಮೆರಿಕಕ್ಕೂ ಕೂಡಾ ಇಸ್ರೇಲ್ಗಿಂತ ಉತ್ತಮ ಗೆಳೆಯ ಇನ್ನೊಬ್ಬನಿಲ್ಲ ’’ಎಂದರು.

‘‘ಹಲವಾರು ಜಾಗತಿಕ ಶಕ್ತಿಗಳು ನಮ್ಮ ದಾರಿಗೆ ಬರುತ್ತಿವೆ. ನಾನು ಆಗಾಗ್ಗೆ ನನ್ನ ಹಳೆಯ ಸ್ನೇಹಿತ, ಭಾರತದ ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತನಾಡುತ್ತಿರುತ್ತೇನೆ. ಶೀಘ್ರದಲ್ಲೇ ನಾವಿಬ್ಬರು ಭೇಟಿಯಾಗಲಿದ್ದೇನೆ. ಸುಮಾರು 150 ಕೋಟಿ ಜನಸಂಖ್ಯೆಯಿರುವ ದೇಶವಾದ ಭಾರತ ಕೂಡಾ ನಮ್ಮ ಜೊತೆ ಬಾಂಧವ್ಯಗಳನ್ನು ಬಲಪಡಿಸಲು ಬಯಸುತ್ತಿದೆ ’’ ಎಂದು ಇಸ್ರೇಲ್ ಪ್ರಧಾನಿ ನೆತನ್ಯಾಹು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News