×
Ad

ದಾಳಿಗೆ ಗುರಿಯಾದ ಮಾದಕ ವಸ್ತುಗಳಿದ್ದ ದೋಣಿ ಅಮೆರಿಕಾದತ್ತ ಚಲಿಸುತ್ತಿರಲಿಲ್ಲ: ವರದಿಯಲ್ಲಿ ಉಲ್ಲೇಖ

Update: 2025-12-07 23:45 IST

Photo : Meta AI

ಕ್ಯಾರಕಸ್: ಸೆಪ್ಟಂಬರ್ 2ರಂದು ವೆನೆಝುವೆಲಾದ ಬಳಿ ಸಾಗುತ್ತಿದ್ದ ಮಾದಕ ವಸ್ತುಗಳಿದ್ದ ದೋಣಿಯ ಮೇಲೆ ಅಮೆರಿಕಾ ನಡೆಸಿದ ದಾಳಿಗೆ ಸಂಬಂಧಿಸಿದ ಹೊಸ ವರದಿಯು ಈ ದೋಣಿ ಅಮೆರಿಕಾದತ್ತ ಸಾಗುತ್ತಿರಲಿಲ್ಲ ಎಂದು ಪ್ರತಿಪಾದಿಸಿದ್ದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆಥ್ ಗೆ ತೀವ್ರ ಹಿನ್ನಡೆಯಾಗಿದೆ.

ಅಮೆರಿಕಾದ ದಾಳಿಯಲ್ಲಿ ದೋಣಿಯಲ್ಲಿದ್ದ 11 ಮಂದಿ ಸಾವನ್ನಪ್ಪಿದರು. ದಾಳಿ ನಡೆದೊಡನೆ ಆ ಕುರಿತ ವಿವರಗಳನ್ನು ಟ್ರಂಪ್ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿಕೊಂಡಿದ್ದು ` ವೆನೆಝುವೆಲಾದ ಮಾದಕ ವಸ್ತು ಭಯೋತ್ಪಾದಕರು ಅಕ್ರಮ ಮಾದಕ ವಸ್ತುಗಳನ್ನು ಅಮೆರಿಕಾದತ್ತ ಸಾಗಿಸುತ್ತಿದ್ದಾಗ ಅಂತರಾಷ್ಟ್ರೀಯ ಸಮುದ್ರದಲ್ಲಿ ಅವರ ಮೇಲೆ ದಾಳಿ ನಡೆಸಲಾಗಿದೆ. ಈ ಅತ್ಯಂತ ಅಪಾಯಕಾರಿ ಮಾದಕ ವಸ್ತು ಸಾಗಾಟ ಪ್ರಕ್ರಿಯೆ ಅಮೆರಿಕಾದ ರಾಷ್ಟ್ರೀಯ ಭದ್ರತೆ, ವಿದೇಶಾಂಗ ನೀತಿ ಮತ್ತು ಅಮೆರಿಕಾದ ಪ್ರಮುಖ ಹಿತಾಸಕ್ತಿಗಳಿಗೆ ಬೆದರಿಕೆಯಾಗಿದೆ. ದಾಳಿಯಲ್ಲಿ ಮೂವರು ಪುರುಷ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ' ಎಂದು ಪೋಸ್ಟ್ ಮಾಡಿದ್ದರು.

ಆದರೆ ದಾಳಿ ನಡೆದ ಕೆಲ ಘಂಟೆಗಳ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ್ದ ಅಮೆರಿಕಾದ ವಿದೇಶಾಂಗ ಸಚಿವ ಮಾರ್ಕೋ ರೂಬಿಯೊ `ದಾಳಿಗೆ ಗುರಿಯಾದ ಆಪಾದಿತ ಮಾದಕ ವಸ್ತು ಸಾಗಾಟದ ದೋಣಿಯು ಬಹುಷಃ ಟ್ರಿನಿಡಾಡ್ ಅಥವಾ ಇತರ ಕ್ಯಾರಿಬಿಯನ್ ದೇಶಗಳತ್ತ ಸಾಗುತ್ತಿತ್ತು' ಎಂದು ಹೇಳಿಕೆ ನೀಡಿದ್ದರು ಎಂದು ಸಿಎನ್ಎನ್ ವರದಿ ಮಾಡಿದೆ. ಅಮೆರಿಕಾದ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಅಡ್ಮಿರಲ್ ಪ್ರಕಾರ ದೋಣಿಯು ಸುರಿನಾಮ್ ಮೂಲಕ ಅಮೆರಿಕಾದತ್ತ ಚಲಿಸುವ ಸಾಧ್ಯತೆಯಿತ್ತು. ಆದರೆ ಸಾಮಾನ್ಯವಾಗಿ ಈ ಸಮುದ್ರ ಮಾರ್ಗವನ್ನು ಯುರೋಪಿಯನ್ ಮಾರ್ಕೆಟ್ ನತ್ತ ಸಾಗಲು ಬಳಸಲಾಗುತ್ತದೆ ಎಂದು ವರದಿ ಹೇಳಿದೆ.

ದೋಣಿಯ ಮೇಲೆ 4 ದಾಳಿ ನಡೆದಿದ್ದು ಮೊದಲ ದಾಳಿಯಲ್ಲಿ ದೋಣಿ ಎರಡು ಭಾಗವಾಗಿದ್ದು ಬದುಕುಳಿದವರು ಒಂದು ಭಾಗವನ್ನು ಹಿಡಿದು ನೇತಾಡುತ್ತಿದ್ದರು. ನಂತರ ನಡೆದ ಎರಡು ದಾಳಿಗಳು ಅವರನ್ನು ಕೊಂದು ದೋಣಿಯನ್ನು ಮುಳುಗಿಸಿದೆ. ದೋಣಿಯಲ್ಲಿದ್ದ ಎಲ್ಲರನ್ನೂ ಕೊಲ್ಲುವಂತೆ ರಕ್ಷಣಾ ಸಚಿವ ಪೀಟ್ ಹೆಗ್ಸೆಥ್ ಆದೇಶಿಸಿದ್ದರು ಎಂದು ಅಡ್ಮಿರಲ್ ಹೇಳಿದ್ದರು. ಇದೀಗ ಸೆಪ್ಟೆಂಬರ್ 2ರಂದು ನಡೆದ ದಾಳಿಯ ಸಂಪೂರ್ಣ ವೀಡಿಯೊವನ್ನು ಬಹಿರಂಗಗೊಳಿಸುವಂತೆ ಹೆಗ್ಸೆಥ್ ಮೇಲೆ ಒತ್ತಡ ಹೆಚ್ಚುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News