×
Ad

ಗಾಝಾ ಕದನ ವಿರಾಮ ಶೃಂಗಕ್ಕೆ ತೆರಳುತ್ತಿದ್ದ ಮೂವರು ಖತರ್ ಅಧಿಕಾರಿಗಳು ಕಾರು ಅಪಘಾತದಲ್ಲಿ ಮೃತ್ಯು

Update: 2025-10-12 10:39 IST

pc: x.com/PalestinePashtu

ಕೈರೊ: ಈಜಿಪ್ಟ್‌ ನ ಶರ್ಮ್ ಅಲ್ ಶೇಖ್‌ ನಲ್ಲಿ ನಡೆಯಬೇಕಿದ್ದ ಹಮಾಸ್–ಇಸ್ರೇಲ್ ಕದನ ವಿರಾಮ ಶೃಂಗಸಭೆಯಲ್ಲಿ ಭಾಗವಹಿಸಲು ತೆರಳುತ್ತಿದ್ದ ಖತರ್ ರಾಜತಾಂತ್ರಿಕ ಅಧಿಕಾರಿಗಳ ಕಾರು ಅಪಘಾತಕ್ಕೀಡಾಗಿ ಮೂವರು ಅಧಿಕಾರಿಗಳು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇತರ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.

ಸಮಾವೇಶ ನಡೆಯಲಿದ್ದ ಶರ್ಮ್ ಅಲ್ ಶೇಖ್‌ನ ರೆಡ್‌ಸೀ ರೆಸಾರ್ಟ್‌ಗೆ 50 ಕಿಲೋಮೀಟರ್ ದೂರದಲ್ಲಿದ್ದಾಗ ಕಾರು ಉರುಳಿ ಬಿದ್ದಿದೆ. ಅಪಘಾತದಲ್ಲಿ ಇತರ ಇಬ್ಬರು ರಾಜತಾಂತ್ರಿಕ ಅಧಿಕಾರಿಗಳು ಗಾಯಗೊಂಡಿದ್ದಾಗಿ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ಎಪಿ ವರದಿ ಮಾಡಿದೆ.

ಖತರ್‌ ನ ಶಿಷ್ಟಾಚಾರ ತಂಡದ ಈ ರಾಜತಾಂತ್ರಿಕರು, ಗಾಝಾಯಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮವನ್ನು ಸಂಭ್ರಮಿಸುವ ಉನ್ನತ ಮಟ್ಟದ ಶೃಂಗಸಭೆಯಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಈಜಿಪ್ಟ್, ಖತರ್, ಅಮೆರಿಕ ಮತ್ತು ಟರ್ಕಿ ಮಧ್ಯಸ್ಥಿಕೆಯಲ್ಲಿ ಸಂಘರ್ಷನಿರತ ಹಮಾಸ್ ಮತ್ತು ಇಸ್ರೇಲ್ ಕದನ ವಿರಾಮಕ್ಕೆ ಬಂದ ಬಳಿಕ, ಒಪ್ಪಂದವನ್ನು ಅಂತಿಮಗೊಳಿಸುವ ಸಲುವಾಗಿ ಈ ಅಂತರರಾಷ್ಟ್ರೀಯ ಶಾಂತಿ ಶೃಂಗಸಭೆಯನ್ನು ಕರೆಯಲಾಗಿತ್ತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾಹ್ ಅಲ್ ಸೀಸಿ ಅವರ ಜಂಟಿ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯಲಿದೆ ಎಂದು ಈಜಿಪ್ಟ್ ಅಧ್ಯಕ್ಷೀಯ ಕಚೇರಿಯ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News