ಬಹ್ರೇನ್ ನಲ್ಲಿ ಸಿಲುಕಿರುವ ಪ್ರಜೆಗಳನ್ನು ಸೌದಿ ಮೂಲಕ ಭಾರತಕ್ಕೆ ಕಳುಹಿಸಿಕೊಡಲು ಟ್ರಾನ್ಸಿಟ್ ವೀಸಾ ವ್ಯವಸ್ಥೆ: ರಾಯಭಾರ ಕಚೇರಿ
Photo Credit : X
ಬಹ್ರೇನ್, ಮಾ. 9: ಮದ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಯಿಂದ ಬಹ್ರೇನ್ ನಲ್ಲಿ ಸಿಕ್ಕಿಹಾಕಿಕೊಂಡಿರುವ ತನ್ನ ಪ್ರಜೆಗಳನ್ನು ಭಾರತಕ್ಕೆ ಕಳುಹಿಸಲು ಸೌದಿ ಅರೇಬಿಯಾ ಮೂಲಕ ಟ್ರಾನ್ಸಿಟ್ ವೀಸಾ ವ್ಯವಸ್ಥೆ ಮಾಡಲಾಗಿದೆ ಎಂದು ಬಹ್ರೇನ್ ನಲ್ಲಿನ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ವಿಶೇಷವಾಗಿ ಪ್ರವಾಸಿ ಅಥವಾ ಅಲ್ಪಾವಧಿ ವೀಸಾಗಳಲ್ಲಿ ಇರುವವರಿಗೆ ಆದ್ಯತೆ ನೀಡಲಾಗುವುದು. ಕೋರಿಕೆಯ ಮೇರೆಗೆ ರಿಯಾದ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸೌದಿ ಸರ್ಕಾರದಿಂದ ವೈಯಕ್ತಿಕ ಟ್ರಾನ್ಸಿಟ್ ವೀಸಾ ಪಡೆಯಲಿದೆ. ಅಗತ್ಯ ಟ್ರಾನ್ಸಿಟ್ ವೀಸಾ ಕೋರಿಕೆಗಳನ್ನು ಬಹ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಸಲ್ಲಿಸಲಿದೆ ಎಂದು ಬಹ್ರೇನ್ ನಲ್ಲಿರುವ ಭಾರತದ ರಾಯಭಾರಿ ವಿನೋದ್ ಕೆ ಜಾಕೋಬ್ ತಿಳಿಸಿದ್ದಾರೆ.
ಸೌದಿ ಅರೇಬಿಯಾ ಮೂಲಕ ಟ್ರಾನ್ಸಿಟ್ ವೀಸಾಗೆ ಸಂಬಂಧಿಸಿದ Standard Operating Procedure (SOP) ಪ್ರಕಟಿಸಲಾಗಿದೆ. ಭಾರತಕ್ಕೆ ಹೊರಡಲಿಚ್ಛಿಸುವ ಪ್ರಯಾಣಿಕರು ದೃಢೀಕೃತ ಏರ್ ಟಿಕೆಟ್ ಹೊಂದಿರಬೇಕು. ಸೌದಿ ಅರೇಬಿಯಾಕ್ಕೆ ಪ್ರವೇಶಿಸುವ ಮೊದಲು ರಿಯಾದ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ನೀಡುವ ಔಪಚಾರಿಕ ಟಿಪ್ಪಣಿಯನ್ನು ಚೆಕ್ ಪಾಯಿಂಟ್ ನಲ್ಲಿರುವ ಸೌದಿ ವಲಸೆ ಅಧಿಕಾರಿಗಳಿಗೆ ತೋರಿಸಬೇಕು ಎಂದು ಸೂಚಿಸಲಾಗಿದೆ.
ಸೌದಿ ಟ್ರಾನ್ಸಿಟ್ ವೀಸಾದ ಅವಧಿಯು 72ರಿಂದ 96 ಗಂಟೆಗಳವರೆಗೆ ಮಾನ್ಯವಾಗಿರುತ್ತದೆ. ಈ ಅವಧಿಯೊಳಗೆ ಪ್ರಯಾಣಿಕರು ಸೌದಿ ಅರೇಬಿಯಾದಿಂದ ಭಾರತಕ್ಕೆ ಹೊರಡಬೇಕು. ಹಗಲಿನ ವೇಳೆಯಲ್ಲಿ ಸೌದಿ ಚೆಕ್‌ಪಾಯಿಂಟ್‌ಗೆ ತಮ್ಮ ಪ್ರಯಾಣವನ್ನು ಮಾಡಬೇಕು ಎಂದು ಸಲಹೆ ನೀಡಲಾಗಿದೆ.
ಪ್ರಸ್ತುತ ಪ್ರಾದೇಶಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಬಹ್ರೇನ್ ನಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳು ಎಚ್ಚರಿಕೆಯಿಂದಿರಬೇಕು ಹಾಗೂ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರಾಯಭಾರ ಕಚೇರಿ ತಿಳಿಸಿದೆ. ಸ್ಥಳೀಯ ಅಧಿಕಾರಿಗಳು ಹಾಗೂ ರಾಯಭಾರ ಕಚೇರಿ ನೀಡುವ ಸಲಹೆ ಸೂಚನೆಗಳನ್ನು ಪಾಲಿಸುವಂತೆ ಮನವಿ ಮಾಡಲಾಗಿದೆ.
ಬಹ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದು, ತುರ್ತು ಅಗತ್ಯಗಳಿಗೆ 24×7 ಸಹಾಯವಾಣಿ ವ್ಯವಸ್ಥೆ ಸಕ್ರಿಯವಾಗಿದೆ. ತುರ್ತು ಸಹಾಯಕ್ಕಾಗಿ +973 39418071 ಮತ್ತು +973 38400433 ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.
ಟ್ರಾನ್ಸಿಟ್ ವೀಸಾ ಸೌಲಭ್ಯವನ್ನು ಬಳಸಿಕೊಳ್ಳಲು ಬಯಸುವ ಭಾರತೀಯರು wel2.bahrain@mea.gov.in ಇಮೇಲ್ ವಿಳಾಸಕ್ಕೆ ವೀಸಾ, ಪಾಸ್‌ಪೋರ್ಟ್ ಸಹಿತ ತಮ್ಮ ವೈಯುಕ್ತಿಕ ಮಾಹಿತಿಗಳೊಂದಿಗೆ ಕೋರಿಕೆಗಳನ್ನು ಸಲ್ಲಿಸಬಹುದು ಎಂದು ರಾಯಭಾರ ಕಚೇರಿ ತಿಳಿಸಿದೆ.