ಮಧ್ಯಪ್ರಾಚ್ಯ ಸಂಘರ್ಷ ಜಾಗತಿಕ ಹಣದುಬ್ಬರವನ್ನು ಹೆಚ್ಚಿಸಬಹುದು: ಐಎಂಎಫ್ ಎಚ್ಚರಿಕೆ
ಕ್ರಿಸ್ತಲಿನಾ ಜಾರ್ಜಿವಾ | Photo Credit : AP , PTI
ವಾಷಿಂಗ್ಟನ್, ಮಾ.9: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷವು ತೈಲ ಬೆಲೆಗಳನ್ನು ದೀರ್ಘಕಾಲದವರೆಗೆ ಹೆಚ್ಚಿಸಿದರೆ ಜಾಗತಿಕ ಹಣದುಬ್ಬರದ ಹೊಸ ಅಪಾಯಕ್ಕೆ ಕಾರಣವಾಗಬಹುದು ಎಂದು ಅಂತರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಆಡಳಿತ ನಿರ್ದೇಶಕಿ ಕ್ರಿಸ್ತಲಿನಾ ಜಾರ್ಜಿವಾ ಸೋಮವಾರ ಎಚ್ಚರಿಸಿದ್ದಾರೆ.
ಜಪಾನ್‍ನ ಹಣಕಾಸು ಸಚಿವಾಲಯವು ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಜಾರ್ಜಿವಾ, ಈ ಪ್ರದೇಶದಲ್ಲಿನ ಭೌಗೋಳಿಕ, ರಾಜಕೀಯ ಉದ್ವಿಗ್ನತೆಗಳು ಈಗಾಗಲೇ ಜಾಗತಿಕ ಆರ್ಥಿಕತೆಯ ಸ್ಥಿತಿಸ್ಥಾಪಕತ್ವವನ್ನು ಪರೀಕ್ಷಿಸುತ್ತಿವೆ. ಮಧ್ಯಪ್ರಾಚ್ಯದಲ್ಲಿನ ಹೊಸ ಸಂಘರ್ಷವು ಗಾಯದ ಮೇಲೆ ಉಪ್ಪು ಸವರಿದಂತಾಗಿದೆ. ಬಿಕ್ಕಟ್ಟು ತೈಲ ಮಾರುಕಟ್ಟೆಯಲ್ಲಿ ನಿರಂತರ ಅಡಚಣೆಗಳಿಗೆ ಕಾರಣವಾದರೆ ಇಂಧನ ಬೆಲೆಗಳು ಹಣದುಬ್ಬರದ ಮೇಲೆ ಗಮನಾರ್ಹ ಪರಿಣಾಮ ಬೀರಬಹುದು ಎಂದವರು ಹೇಳಿರುವುದಾಗಿ ರಾಯ್ಟರ್ಸ್ ವರದಿ ಮಾಡಿದೆ.
ವರ್ಷದ ಬಹುಪಾಲು ಅವಧಿಯಲ್ಲಿ ತೈಲ ಬೆಲೆಯಲ್ಲಿ 10% ಹೆಚ್ಚಳವು ಜಾಗತಿಕ ಹಣದುಬ್ಬರವನ್ನು ಸುಮಾರು 40 ಮೂಲಬಿಂದುವಿನಷ್ಟು(ಬೇಸಿಸ್ ಪಾಯಿಂಟ್) ಹೆಚ್ಚಿಸಬಹುದು. ಈ ಹೊಸ ಪರಿಸರದಲ್ಲಿ ನೀತಿ ನಿರೂಪಕರಿಗೆ ನನ್ನ ಸಲಹೆ ಏನೆಂದರೆ ಊಹಿಸಲೂ ಸಾಧ್ಯವಿಲ್ಲದ ವಿಷಯಗಳ ಬಗ್ಗೆ ಯೋಚಿಸಿ ಮತ್ತು ಅದಕ್ಕೆ ಸಿದ್ದರಾಗಿ' ಎಂದವರು ಹೇಳಿದ್ದಾರೆ.
ಇರಾನ್, ಅಮೆರಿಕ ಮತ್ತು ಇಸ್ರೇಲನ್ನು ಒಳಗೊಂಡ ಉದ್ವಿಗ್ನತೆಯು ಉಲ್ಬಣಗೊಂಡ ನಂತರ ಜಾಗತಿಕ ಇಂಧನ ಮಾರುಕಟ್ಟೆಯು ಅನಿಶ್ಚಿತತೆಯನ್ನು ಎದುರಿಸುವ ಸಂದರ್ಭ ಈ ಐಎಂಎಫ್ ಈ ಎಚ್ಚರಿಕೆ ನೀಡಿದೆ. ಭಾರತದ ಹಣಕಾಸು ಸಚಿವಾಲಯದ ವರದಿಯೂ ಮಧ್ಯಪ್ರಾಚ್ಯದಲ್ಲಿನ ದೀರ್ಘಕಾಲದ ಬಿಕ್ಕಟ್ಟು ವಿನಿಮಯ ದರದ ಮೇಲೆ ಒತ್ತಡಕ್ಕೆ ಮತ್ತು ಹಣದುಬ್ಬರ ಸೇರಿದಂತೆ ವ್ಯಾಪಕ ಆರ್ಥಿಕ ಪರಿಣಾಮಗಳನ್ನು ಉಂಟು ಮಾಡಬಹುದು. ಸಂಘರ್ಷವು ಈಗಾಗಲೇ ಹಾರ್ಮುಜ್ ಜಲಸಂಧಿಯ(ಇದು ಜಾಗತಿಕ ತೈಲ ಹರಿವಿನ ಸುಮಾರು 20%ವನ್ನು ನಿರ್ವಹಿಸುವ ವಿಶ್ವದ ಅತ್ಯಂತ ನಿರ್ಣಾಯಕ ಜಲಸಂಧಿಯಾಗಿದೆ) ಮೂಲಕ ಸಾಗಾಟವನ್ನು ಅಡ್ಡಿಪಡಿಸಿದೆ ಎಂದು ಎಚ್ಚರಿಸಿದೆ.
ಇಸ್ರೇಲ್‍ನಿಂದ `ಬಿಳಿರಂಜಕ' ಗುಂಡು ಬಳಕೆ: ಆರೋಪ
ದಕ್ಷಿಣ ಲೆಬನಾನ್‍ನ ಪಟ್ಟಣದ ಮೇಲೆ ಇಸ್ರೇಲ್ `ಬಿಳಿ ರಂಜಕ'ವನ್ನು ಒಳಗೊಂಡ ಮದ್ದುಗುಂಡುಗಳನ್ನು ಅಕ್ರಮವಾಗಿ ಬಳಸಿದೆ ಎಂದು ಮಾನವ ಹಕ್ಕುಗಳ ಸಂಸ್ಥೆಯು ಆರೋಪಿಸಿದೆ.
ದಕ್ಷಿಣ ಲೆಬನಾನ್‍ನ ನಗರದ ಮೇಲೆ `ಬಿಳಿ ರಂಜಕ' ಹೊಂದಿದ ಶೆಲ್‍ಗಳನ್ನು ಇಸ್ರೇಲಿ ಮಿಲಿಟರಿ ಕಾನೂನುಬಾಹಿರವಾಗಿ ಪ್ರಯೋಗಿಸಿದೆ ಎಂದು ಮಾನವ ಹಕ್ಕುಗಳ ಗುಂಪು `ಹ್ಯೂಮನ್ ರೈಟ್ಸ್ ವಾಚ್' ಸೋಮವಾರ ಹೇಳಿದೆ.