ಛಾಯಾ ಸಮರವನ್ನು ನಿಲ್ಲಿಸಿದರೆ ಇರಾನ್ ಜತೆ ಪರಮಾಣು ಒಪ್ಪಂದ: ಟ್ರಂಪ್
ಡೊನಾಲ್ಡ್ ಟ್ರಂಪ್ | PC : PTI
ದೋಹ : ಇರಾನ್ ನ ಪರಮಾಣು ಶಸ್ತ್ರಾಸ್ತ್ರಗಳ ಅನ್ವೇಷಣೆಯನ್ನು ಕೊನೆಗೊಳಿಸಲು ಆ ದೇಶದೊಂದಿಗೆ ಒಪ್ಪಂದ ಮಾಡಿಕೊಳ್ಳಲು ತುರ್ತಾಗಿ ಬಯಸುತ್ತೇನೆ. ಆದರೆ ಮಧ್ಯಪ್ರಾಚ್ಯದಾದ್ಯಂತ ಇರಾನ್ `ಛಾಯಾ ಗುಂಪು'ಗಳಿಗೆ ನೆರವು ನೀಡುವುದನ್ನು ನಿಲ್ಲಿಸಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಖತರ್‍ನ ಅಮೀರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಜೊತೆಗೆ ನಡೆಸಿದ ಖಾಸಗಿ ಸಭೆಯಲ್ಲಿ ಇರಾನ್ ಕ್ಷಿಪ್ರಗತಿಯಲ್ಲಿ ನಡೆಸುತ್ತಿರುವ ಪರಮಾಣು ಕಾರ್ಯಕ್ರಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಎಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ಬಳಿಕ ಗಲ್ಫ್ ಸಹಕಾರ ಮಂಡಳಿ(ಜಿಸಿಸಿ) ನಾಯಕರ ಸಭೆಯಲ್ಲಿ ಮಾತನಾಡಿದ ಅವರು `ಇರಾನ್ ಭಯೋತ್ಪಾದನೆಯನ್ನು ಪ್ರಾಯೋಜಿಸುವುದನ್ನು ನಿಲ್ಲಿಸಬೇಕು. ಅದರ ರಕ್ತಸಿಕ್ತ ಛಾಯಾ ಯುದ್ಧವನ್ನು ಮತ್ತು ಪರಮಾಣು ಶಸ್ತ್ರಾಸ್ತ್ರಗಳ ಅನ್ವೇಷಣೆಯನ್ನು ಶಾಶ್ವತವಾಗಿ ನಿಲ್ಲಿಸಬೇಕು. ಅವರು ಪರಮಾಣು ಅಸ್ತ್ರವನ್ನು ಹೊಂದಲು ಸಾಧ್ಯವಿಲ್ಲ' ಎಂದರು.
ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿ ಇರಾನ್ ನ ಮೇಲೆ ಒತ್ತಡ ಮುಂದುವರಿಸಿದ ಡೊನಾಲ್ಡ್ ಟ್ರಂಪ್, ರಾಜತಾಂತ್ರಿಕ ಬಿಕ್ಕಟ್ಟಿಗೆ ಸಂಭಾವ್ಯ ವೈಮಾನಿಕ ದಾಳಿ ಅಥವಾ ಒಪ್ಪಂದ ಎಂಬ ಎರಡು ಪರಿಹಾರ ಮಾರ್ಗಗಳು ಮಾತ್ರ ಲಭ್ಯವಿದೆ ಎಂದು ಎಚ್ಚರಿಕೆ ನೀಡಿದರು. ` ಇರಾನ್ ನ ಸಮಸ್ಯೆಯನ್ನು ಬುದ್ಧಿವಂತ ರೀತಿಯಲ್ಲಿ ಪರಿಹರಿಸಬಹುದೇ ಎಂದು ನೋಡಲು ನಾವು ಬಯಸುತ್ತೇವೆ. ಕ್ರೂರ ರೀತಿಯನ್ನು ನಾವು ಬಯಸುವುದಿಲ್ಲ. ಖತರ್‍ನ ಅಮೀರ್ ಇರಾನ್ ಪರ ಹೋರಾಡುತ್ತಿರುವುದು(ಕೆಲಸ ಮಾಡುತ್ತಿದ್ದಾರೆ) ನಿಜಕ್ಕೂ ಇರಾನ್ ನ ಅದೃಷ್ಟವಾಗಿದೆ. ಇರಾನ್ ಗೆ ನಾವು ಭಾರೀ ಪ್ರಹಾರ ನೀಡುವುದನ್ನು ಅವರು ಬಯಸುವುದಿಲ್ಲ. ನೀವಿಬ್ಬರು ಒಪ್ಪಂದ ಮಾಡಿಕೊಳ್ಳಲು ಸಾಧ್ಯ ಎಂದು ಅವರು ನಿರಂತರ ಹೇಳುತ್ತಾ ಬಂದಿದ್ದಾರೆ. ನನ್ನ ಪ್ರಕಾರ ಇರಾನ್ ಅವರಿಗೆ (ಖತರ್ ಅಮೀರ್) ದೊಡ್ಡ ಧನ್ಯವಾದ ಸಮರ್ಪಿಸಬೇಕು' ಎಂದು ಟ್ರಂಪ್ ಹೇಳಿದ್ದಾರೆ.
ಇದಕ್ಕೂ ಮುನ್ನ ಮಂಗಳವಾರ ಸೌದಿ ಅರೆಬಿಯಾದಲ್ಲಿ ಹೂಡಿಕೆ ಶೃಂಗಸಭೆಯಲ್ಲಿ ಮಾತನಾಡಿದ್ದ ಟ್ರಂಪ್ ` ಇರಾನ್ ಮಧ್ಯಪ್ರಾಚ್ಯದಲ್ಲಿನ ಅತ್ಯಂತ ವಿನಾಶಕಾರಿ ಶಕ್ತಿಯಾಗಿದ್ದು ಈ ಪ್ರದೇಶದಾದ್ಯಂತ ಅಸ್ಥಿರತೆಯನ್ನು ಹರಡುತ್ತಿದೆ ಎಂದು ದೂಷಿಸಿದ್ದರು. ಟ್ರಂಪ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಇರಾನ್ ಅಧ್ಯಕ್ಷ ಮಸೂದ್ ಪೆಜೆಷ್ಕಿಯಾನ್ `ನಮ್ಮ ವಿರುದ್ಧ ನಿರ್ಬಂಧ ವಿಧಿಸುವ ಮೂಲಕ ನಮ್ಮನ್ನು ಬೆದರಿಸಿ ಬಳಿಕ ಮಾನವ ಹಕ್ಕುಗಳ ಬಗ್ಗೆ ಮಾತನಾಡಬಹುದು ಎಂದು ಟ್ರಂಪ್ ಭಾವಿಸಿದ್ದಾರೆ. ಎಲ್ಲಾ ಅಪರಾಧಗಳು ಮತ್ತು ಪ್ರಾದೇಶಿಕ ಅಸ್ಥಿರತೆಗಳು ಅವರಿಂದ (ಅಮೆರಿಕ) ಸಂಭವಿಸುತ್ತವೆ. ಇರಾನ್ ನ ಒಳಗೆ ಅಸ್ಥಿರತೆಯನ್ನು ಸೃಷ್ಟಿಸಲು ಅವರು ಬಯಸಿದ್ದಾರೆ' ಎಂದು ಹೇಳಿದ್ದಾರೆ.