×
Ad

ಟ್ರಂಪ್ ಇಸ್ರೇಲ್‌ನ ಹಿಡಿತದಲ್ಲಿದ್ದಾರೆ: ಎಪ್ಸ್ಟೀನ್ ಕಡತದಲ್ಲಿ ಅಮೆರಿಕ ಅಧ್ಯಕ್ಷರ ಕುರಿತು ಮಹತ್ವದ ವಿಚಾರ ಉಲ್ಲೇಖ

Update: 2026-01-31 19:43 IST

ಡೊನಾಲ್ಡ್ ಟ್ರಂಪ್ | Photo Credit : PTI 

ಹೊಸದಿಲ್ಲಿ: ಎಪ್‌ಸ್ಟೀನ್ ಫೈಲ್ಸ್ ಎಂದೇ ಹೆಸರಾಗಿರುವ ಅಮೆರಿಕದ ಕುಖ್ಯಾತ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್‌ಗೆ ಸಂಬಂಧಿಸಿದ ಮೂರು ಲಕ್ಷಕ್ಕೂ ಅಧಿಕ ಪುಟಗಳು, 2,000ಕ್ಕೂ ಅಧಿಕ ವೀಡಿಯೊಗಳು ಮತ್ತು ಸುಮಾರು 18,000 ಚಿತ್ರಗಳನ್ನು ಅಮೆರಿಕದ ನ್ಯಾಯ ಇಲಾಖೆಯು ಬಹಿರಂಗಗೊಳಿಸಿದ್ದು, ಇವು ಹೊಸ ಆರೋಪಗಳನ್ನು ಹುಟ್ಟುಹಾಕಿವೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಸ್ರೇಲ್‌ನ ಹಿಡಿತದಲ್ಲಿದ್ದಾರೆ ಎಂದು ‘ವಿಶ್ವಾಸಾರ್ಹ’ ಗೌಪ್ಯ ಮೂಲವನ್ನು ಉಲ್ಲೇಖಿಸಿರುವ ಎಫ್‌ಬಿಐ ವರದಿ ಇವುಗಳಲ್ಲಿ ಸೇರಿದೆ.

ಟ್ರಂಪ್ ಅವರ ಅಳಿಯ ಜಾರೆಡ್ ಕುಷ್ನರ್ ಅವರು ಅಧ್ಯಕ್ಷರಾಗಿ ಟ್ರಂಪ್ ಮೊದಲ ಅಧಿಕಾರಾವಧಿಯಲ್ಲಿ ಆಡಳಿತದ ಮೇಲೆ ಅತಿಯಾದ ಪ್ರಭಾವವನ್ನು ಹೊಂದಿದ್ದರು ಎಂದು ವರದಿಯು ಆರೋಪಿಸಿದೆ.

ಕುಷ್ನರ್ ಕುಟುಂಬವು ಭ್ರಷ್ಟಾಚಾರ, ರಶ್ಯನ್ ಹಣದ ಹರಿವುಗಳು ಮತ್ತು ಅಲ್ಟ್ರಾ-ಝಿಯೋನಿಸ್ಟ್ ಚಾಬಾದ್ ಜಾಲದೊಂದಿಗೆ ಸಂಪರ್ಕಗಳನ್ನು ಹೊಂದಿತ್ತು ಎಂದು ಈ ಸ್ಫೋಟಕ ದಾಖಲೆಗಳು ಆರೋಪಿಸಿವೆ. ಕುಷ್ನರ್ ಕುಟುಂಬದ ಇತಿಹಾಸದ ಮೇಲೂ ಬೆಳಕು ಚೆಲ್ಲಿರುವ ವರದಿಯು, ಅವರ ತಂದೆ ಈ ಹಿಂದೆ ಹಣಕಾಸು ಆರೋಪಗಳಲ್ಲಿ ಶಿಕ್ಷೆಗೆ ಗುರಿಯಾಗಿದ್ದರು, ಆದರೆ ನಂತರ ಟ್ರಂಪ್ ಅವರಿಂದ ಅಧ್ಯಕ್ಷೀಯ ಕ್ಷಮಾದಾನವನ್ನು ಪಡೆದಿದ್ದರು ಎಂದು ಬೆಟ್ಟು ಮಾಡಿದೆ.

ಕುಷ್ನರ್ ಗಣನೀಯ ರಷ್ಯನ್ ಹೂಡಿಕೆಯನ್ನು ಬೇರೆಡೆಗೆ ವರ್ಗಾಯಿಸಿದ್ದರು ಮತ್ತು ರಷ್ಯನ್ ಸರಕಾರದೊಂದಿಗೆ ಸಂಬಂಧಿಸಿದ ಸಂಸ್ಥೆಗಳೊಂದಿಗೆ ತನ್ನ ಹಿತಾಸಕ್ತಿಗಳನ್ನು ಸೂಕ್ತವಾಗಿ ಬಹಿರಂಗಗೊಳಿಸಿರಲಿಲ್ಲ. ರಿಯಲ್ ಎಸ್ಟೇಟ್ ಹೂಡಿಕೆ ವೇದಿಕೆ ಕೇಡರ್‌ನಲ್ಲಿ ಕುಷ್ನರ್ ಅವರು ಪಾಲನ್ನು ಹೊಂದಿರುವುದು ಕಳವಳಕಾರಿ ಅಂಶ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದ್ದು,ರಷ್ಯದ ಹಣವನ್ನು ಮಧ್ಯವರ್ತಿಗಳ ಮೂಲಕ ಅಮೆರಿಕದ ಯೋಜನೆಗಳಿಗೆ ಹರಿಸಲಾಗಿತ್ತೇ ಎಂದು ಮೂಲವು ಪ್ರಶ್ನಿಸಿದೆ.

ಜೊತೆಗೆ ಎಫ್‌ಬಿಐ ವರದಿಯು ಟ್ರಂಪ್ ಅವರ ರಿಯಲ್ ಎಸ್ಟೇಟ್ ವ್ಯವಹಾರಗಳ ಕುರಿತ ಹಿಂದಿನ ವರದಿಗಳನ್ನೂ ಉಲ್ಲೇಖಿಸಿದೆ. ಇವುಗಳಲ್ಲಿ ಟ್ರಂಪ್ 14 ಮಿಲಿಯನ್ ಡಾಲರ್‌ಗಳಿಗೆ ಆಸ್ತಿಯೊಂದನ್ನು ಖರೀದಿಸಿ ಬಳಿಕ ಅದನ್ನು ವಿದೇಶಿ ಸಂಪರ್ಕಗಳನ್ನು ಹೊಂದಿದ್ದ ಶೆಲ್ ಕಂಪನಿಯೊಂದಕ್ಕೆ 95 ಮಿಲಿಯನ್ ಡಾಲರ್‌ಗಳಿಗೆ ಮಾರಾಟ ಮಾಡಿದ್ದ ವಿವಾದಾತ್ಮಕ ಬೆವರ್ಲಿ ಹಿಲ್ಸ್ ಮ್ಯಾನ್ಶನ್ ವಹಿವಾಟು ಸೇರಿದೆ. ಈ ವಹಿವಾಟು ವಿಲಕ್ಷಣತೆಗಳು ಮತ್ತು ಎಚ್ಚರಿಕೆಯ ಸಂಕೇತಗಳನ್ನು ಒಳಗೊಂಡಿದ್ದು, ಅಪಾರದರ್ಶಕ ಹಣಕಾಸು ವಹಿವಾಟುಗಳ ವಿಶಾಲ ಮಾದರಿಯ ಭಾಗವಾಗಿ ಪರಿಶೀಲನೆಯನ್ನು ಅಗತ್ಯವಾಗಿಸಿದೆ ಎಂದು ಗುಪ್ತ ಮಾನವ ಮೂಲವನ್ನು ಉಲ್ಲೇಖಿಸಿ ವರದಿಯು ಪ್ರತಿಪಾದಿಸಿದೆ.

ವರದಿಯು ಜೆಫ್ರಿ ಎಪ್‌ಸ್ಟೀನ್ ಪರ ವಕೀಲ ಅಲನ್ ಡೆರ್ಶೊವಿಝ್ ಅವರನ್ನೂ ಹೆಸರಿಸಿದೆ. ಡೆರ್ಶೊವಿಝ್ ಮೊಸಾದ್(ಇಸ್ರೇಲಿ ಗುಪ್ತಚರ ಸಂಸ್ಥೆ) ಜೊತೆಗೆ ಗುರುತಿಸಿಕೊಂಡಿದ್ದು,ಇಸ್ರೇಲಿ ಗುಪ್ತಚರ ಉದ್ದೇಶಗಳಿಗಾಗಿ ಶ್ರೀಮಂತ ಮತ್ತು ರಾಜಕೀಯ ಸಂಪರ್ಕ ಹೊಂದಿದ್ದ ವಿದ್ಯಾರ್ಥಿಗಳನ್ನು ಸಿದ್ಧಪಡಿಸಲು ಪ್ರತಿಷ್ಠಿತ ಸಂಸ್ಥೆಗಳಲ್ಲಿ ತನ್ನ ಪ್ರಭಾವವನ್ನು ಬಳಸಿದ್ದರು ಎಂದು ಗುಪ್ತ ಮೂಲ ಎಫ್‌ಬಿಐಗೆ ತಿಳಿಸಿದ್ದನ್ನು ವರದಿಯು ಉಲ್ಲೇಖಿಸಿದೆ.

2019ರಲ್ಲಿ ಜೈಲಿನಲ್ಲಿಯೇ ಮೃತಪಟ್ಟ ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ನನ್ನೂ ಆತ ಜಾಗತಿಕ ರಾಜಕೀಯ ಮತ್ತು ಹಣಕಾಸು ಜಾಲಗಳೊಂದಿಗೆ ಹೊಂದಿದ್ದ ಸಂಪರ್ಕಗಳಿಂದಾಗಿ ಇದೇ ರೀತಿ ಬಳಸಿಕೊಳ್ಳಲಾಗಿತ್ತು ಎಂಬ ವ್ಯಾಪಕ ಶಂಕೆಯಿದೆ ಎಂದೂ ಮೂಲವು ತಿಳಿಸಿದೆ.

ತಮ್ಮ ನಡುವಿನ ಸಂಬಂಧ ಹದಗೆಡುವ ಮುನ್ನ 1990ರ ದಶಕ ಮತ್ತು 2000ರ ದಶಕದ ಆರಂಭದಲ್ಲಿ ಎಪ್‌ಸ್ಟೀನ್ ಜೊತೆ ಉತ್ತಮ ಸ್ನೇಹವನ್ನು ಹೊಂದಿದ್ದ ಟ್ರಂಪ್ ವಿರುದ್ಧ ಎಪ್ಸೀನ್ ಅಪರಾಧಗಳಿಗೆ ಸಂಬಂಧಿಸಿದಂತೆ ಎಂದಿಗೂ ಔಪಚಾರಿಕವಾಗಿ ಆರೋಪವನ್ನು ಹೊರಿಸಲಾಗಿಲ್ಲ. ಎಪ್‌ಸ್ಟೀನ್‌ನ ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ತನಗೆ ಯಾವುದೇ ಮಾಹಿತಿಯಿಲ್ಲ ಎಂದು ಟ್ರಂಪ್ ಪದೆ ಪದೇ ಹೇಳಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News