×
Ad

ತೃತೀಯ ಲಿಂಗಿ ಕ್ರೀಡಾಪಟುಗಳು ಮಹಿಳಾ ಕ್ರೀಡೆಗಳಲ್ಲಿ ಭಾಗವಹಿಸುವುದನ್ನು ನಿಷೇಧಿಸುವ ಆದೇಶಕ್ಕೆ ಟ್ರಂಪ್ ಅಂಕಿತ

Update: 2025-02-06 11:25 IST

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (PTI)

ವಾಷಿಂಗ್ಟನ್: ತೃತೀಯ ಲಿಂಗಿ ಕ್ರೀಡಾಪಟುಗಳು ಮಹಿಳಾ ಕ್ರೀಡೆಗಳಲ್ಲಿ ಭಾಗವಹಿಸುವುದನ್ನು ನಿಷೇಧಿಸುವ ಕಾರ್ಯಕಾರಿ ಆದೇಶಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಂಕಿತ ಹಾಕಿದ್ದಾರೆ.

ಅಮೆರಿಕದ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಾತನಾಡಿದ್ದ ಟ್ರಂಪ್, ‘ಇನ್ನು ಮುಂದೆ ಅಮೆರಿಕದಲ್ಲಿ ಗಂಡು ಮತ್ತು ಹೆಣ್ಣು ಎಂಬ ಎರಡು ಲಿಂಗಗಳನ್ನು ಮಾತ್ರ ಗುರುತಿಸಲಾಗುತ್ತದೆ. ಇದೇ ನಮ್ಮ ಸರಕಾರದ ಅಧಿಕೃತ ನೀತಿಯಾಗಲಿದೆ’ ಎಂದು ಹೇಳಿದ್ದರು. ಇದೀಗ ಶ್ವೇತಭವನದಲ್ಲಿ ತೃತೀಯ ಲಿಂಗಿ ಕ್ರೀಡಾಪಟುಗಳು ಮಹಿಳಾ ಕ್ರೀಡೆಗಳಲ್ಲಿ ಭಾಗವಹಿಸುವುದನ್ನು ನಿಷೇಧಿಸುವ ಕಾರ್ಯಕಾರಿ ಆದೇಶಕ್ಕೆ ಟ್ರಂಪ್ ಅಂಕಿತ ಹಾಕಿದ್ದಾರೆ. ತಕ್ಷಣದಿಂದ ನೂತನ ನಿಯಮ ಜಾರಿಗೆ ಬರಲಿದೆ.

ʼನಾವು ಮಹಿಳಾ ಕ್ರೀಡಾಪಟುಗಳ ಹೆಮ್ಮೆಯ ಸಂಪ್ರದಾಯವನ್ನು ರಕ್ಷಿಸುತ್ತೇವೆ. ಪುರುಷರು ನಮ್ಮ ಮಹಿಳೆಯರನ್ನು, ಬಾಲಕಿಯರನ್ನು ಸೋಲಿಸಲು, ವಂಚಿಸಲು ಅವಕಾಶ ನೀಡುವುದಿಲ್ಲ, ಇಂದಿನಿಂದ ಮಹಿಳಾ ಕ್ರೀಡೆಗಳು ಮಹಿಳೆಯರಿಗೆ ಮಾತ್ರʼ ಎಂದು ಆದೇಶಕ್ಕೆ ಸಹಿ ಹಾಕುವ ಮೊದಲು ಟ್ರಂಪ್ ಹೇಳಿದ್ದಾರೆ. ಸಹಿ ಹಾಕುವ ವೇಳೆ ಮಕ್ಕಳು ಮತ್ತು ಮಹಿಳಾ ಕ್ರೀಡಾಪಟುಗಳು ಅವರನ್ನು ಸುತ್ತುವರಿದಿದ್ದರು. ಟ್ರಂಪ್ ಆದೇಶವನ್ನು ಅವರು ಚಪ್ಪಾಳೆ ತಟ್ಟುವ ಮೂಲಕ ಸ್ವಾಗತಿಸಿದ್ದಾರೆ.

ಈ ಆದೇಶವು, ತೃತೀಯ ಲಿಂಗಿ ಕ್ರೀಡಾಪಟುಗಳು ಮಹಿಳಾ ತಂಡಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡುವ ಶಾಲೆಗಳಿಗೆ ಸರಕಾರದ ನಿಧಿಯನ್ನು ನಿರಾಕರಿಸುವ ಅಧಿಕಾರವನ್ನು ಸರ್ಕಾರಿ ಸಂಸ್ಥೆಗಳಿಗೆ ನೀಡುತ್ತದೆ. ಇದು ಕ್ರೀಡೆಗಳಲ್ಲಿ ನ್ಯಾಯವನ್ನು ಪುನಃಸ್ಥಾಪಿಸುತ್ತದೆ ಎಂದು ರಿಪಬ್ಲಿಕನ್ ಪಕ್ಷವು ಹೇಳಿದೆ, ಆದರೆ, LGBT ಪರ ಮಾನವ ಹಕ್ಕುಗಳ ಸಂಘಟನೆಗಳು ಈ ಕ್ರಮವನ್ನು ತಾರತಮ್ಯ ಎಂದು ಬಣ್ಣಿಸಿವೆ.

ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್‌ ಮಾಡಿ ► https://whatsapp.com/channel/0029VaA8ju86LwHn9OQpEq28

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News