Photo credit : indiatoday

ಚಿಕಾಗೋ, ಅ. 15: ಅಮೆರಿಕದ ಇಲಿನಾಯ್ಸ್‌ ನ ಅರೋರಾದಲ್ಲಿರುವ ದೇವಾಲಯವೊಂದರಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆಸಲು ಸಂಚು ರೂಪಿಸಿದ ಆರೋಪದ ಮೇಲೆ 19 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಶಂಕಿತನ ಮನೆಯಲ್ಲಿ ನಡೆಸಿದ ಶೋಧದ ವೇಳೆ ರೈಫಲ್‌, ನೂರಾರು ಸುತ್ತು ಮದ್ದುಗುಂಡುಗಳು ಹಾಗೂ ಯುದ್ಧತಂತ್ರದ ಉಪಕರಣಗಳು ಪತ್ತೆಯಾಗಿವೆ. ಬಿಳಿಯರ ಪ್ರಾಬಲ್ಯವಾದಿ ಸಿದ್ಧಾಂತವನ್ನು ಪ್ರತಿಪಾದಿಸುವ ಮತ್ತು ಭಾರತೀಯ ಮೂಲದ ಜನರ ವಿರುದ್ಧದ ಹಿಂಸಾಚಾರವನ್ನು ಉಲ್ಲೇಖಿಸುವ ಪ್ರಣಾಳಿಕೆಯೂ ತನಿಖಾಧಿಕಾರಿಗಳಿಗೆ ದೊರೆತಿದೆ ಎಂದು ಪಿಟಿಐ ವರದಿ ಮಾಡಿದೆ.

ಪ್ಯಾಲಟೈನ್ ನಿವಾಸಿ ಅಲೆಕ್ಸಾಂಡ್ರೋಸ್ ಪಪೊರಾಕಿಸ್‌ನನ್ನು ಅಕ್ಟೋಬರ್ 11ರಂದು ಬಂಧಿಸಲಾಗಿದೆ. ಸಾಮೂಹಿಕ ಗುಂಡಿನ ದಾಳಿ ನಡೆಸುವ ಸಾಧ್ಯತೆ ಕುರಿತು ಪೊಲೀಸರಿಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಲಾಗಿತ್ತು. ರೋಲಿಂಗ್ ಮೆಡೋಸ್‌ ನಲ್ಲಿರುವ ಕುಕ್ ಕೌಂಟಿಯ ಮೂರನೇ ಮುನ್ಸಿಪಲ್ ಜಿಲ್ಲಾ ನ್ಯಾಯಾಲಯದಲ್ಲಿ ಬುಧವಾರ ನಡೆದ ವಿಚಾರಣೆಯ ಬಳಿಕ ನ್ಯಾಯಾಧೀಶರು ಆತನನ್ನು ಬಂಧನದಲ್ಲಿಡಲು ಆದೇಶಿಸಿದ್ದಾರೆ. ಅಕ್ಟೋಬರ್ 30ರಂದು ಆತ ಮತ್ತೆ ನ್ಯಾಯಾಲಯಕ್ಕೆ ಹಾಜರಾಗಬೇಕಿದೆ.

ಪಪೊರಾಕಿಸ್‌ನಿಂದ ಎಲೆಕ್ಟ್ರಾನಿಕ್ ಸಂದೇಶಗಳನ್ನು ಸ್ವೀಕರಿಸಿದ್ದ ವ್ಯಕ್ತಿಯೊಬ್ಬರು ಮೌಂಟ್ ಪ್ರಾಸ್ಪೆಕ್ಟ್ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ತನಿಖೆ ಆರಂಭವಾಯಿತು. ತನಿಖಾಧಿಕಾರಿಗಳ ಪ್ರಕಾರ, ಶಂಕಿತನು ಸಾಮೂಹಿಕ ಗುಂಡಿನ ದಾಳಿಯ ಯೋಜನೆಯನ್ನು ವಿವರಿಸುವ ದಾಖಲೆಯೊಂದನ್ನು ಹಂಚಿಕೊಂಡಿದ್ದ. ಅದರಲ್ಲಿ ರೈಫಲ್‌, ಮದ್ದುಗುಂಡುಗಳ ಮ್ಯಾಗಜೀನ್‌ಗಳು, ದೇಹರಕ್ಷಕ ಕವಚ ಮತ್ತು ಇತರ ಯುದ್ಧತಂತ್ರದ ಉಪಕರಣಗಳ ಚಿತ್ರಗಳಿದ್ದವು.

'ನಾನು ಏಕೆ ಹೋರಾಡಿದೆ : ಎ.ಕೆ.ಎ. :ಅರೋರಾ ಶೂಟರ್‌ನ ಪ್ರಣಾಳಿಕೆ' ಎಂಬ ಶೀರ್ಷಿಕೆಯ ಆ ದಾಖಲೆಯಲ್ಲಿ ದಕ್ಷಿಣ ಏಷ್ಯಾ ಮೂಲದ ಜನರು, ವಿಶೇಷವಾಗಿ ಭಾರತೀಯರ ವಿರುದ್ಧದ ಹಿಂಸಾಚಾರದ ಉಲ್ಲೇಖಗಳಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

'ತನಿಖೆಯ ವೇಳೆ ಸಂಗ್ರಹಿಸಿದ ಮಾಹಿತಿಯ ಆಧಾರದಲ್ಲಿ, ಪಪೊರಾಕಿಸ್ ಅಕ್ಟೋಬರ್ 11ರಂದು ದಾಳಿ ನಡೆಸಲು ಯೋಜಿಸುತ್ತಿದ್ದಿರಬಹುದು. ಅರೋರಾ ಪ್ರದೇಶದ ಪೂಜಾಸ್ಥಳವೊಂದನ್ನು ಗುರಿಯಾಗಿಸುವ ಸಾಧ್ಯತೆಯೂ ಇತ್ತು' ಎಂದು ಪ್ಯಾಲಟೈನ್ ಪೊಲೀಸ್ ಇಲಾಖೆ ಬುಧವಾರ ತಿಳಿಸಿದೆ. ಆದರೆ, ದಾಳಿಗೆ ಉದ್ದೇಶಿಸಲಾಗಿದ್ದ ನಿರ್ದಿಷ್ಟ ಸ್ಥಳವನ್ನು ಇನ್ನೂ ದೃಢಪಡಿಸಿಲ್ಲ. ಈ ಕುರಿತು ತನಿಖೆ ಮುಂದುವರಿದಿದೆ.

ಅಕ್ಟೋಬರ್ 11ರಂದು ಪಪೊರಾಕಿಸ್ ತನ್ನ ಮನೆಯಿಂದ ಹೊರಡುತ್ತಿದ್ದಾಗ ಪ್ಯಾಲಟೈನ್ ಮತ್ತು ಮೌಂಟ್ ಪ್ರಾಸ್ಪೆಕ್ಟ್ ಪೊಲೀಸ್ ಇಲಾಖೆಗಳ ಅಧಿಕಾರಿಗಳು ಆತನನ್ನು ಬಂಧಿಸಿದರು. ಬಳಿಕ ಆತನ ಮನೆಯಲ್ಲಿ ನಡೆಸಿದ ಶೋಧದ ವೇಳೆ ಒಂದು ರೈಫಲ್‌, ತುಂಬಿದ ಹಲವು ಮ್ಯಾಗಜೀನ್‌ಗಳು, ನೂರಾರು ಸುತ್ತು ಮದ್ದುಗುಂಡುಗಳು ಹಾಗೂ ಯುದ್ಧತಂತ್ರದ ಉಪಕರಣಗಳು ಪತ್ತೆಯಾಗಿವೆ. ದೇಹರಕ್ಷಕ ಕವಚವಿರುವ ವೆಸ್ಟ್ ಮತ್ತು ಬಿಳಿಯರ ಪ್ರಾಬಲ್ಯವಾದಿ ಉಗ್ರವಾದಕ್ಕೆ ಸಂಬಂಧಿಸಿದ ಚಿತ್ರಗಳಿರುವ ಪ್ಯಾಚ್ ಕೂಡ ದೊರೆತಿದೆ.

ಸಂಭಾವ್ಯ ಬೆದರಿಕೆಯ ಕುರಿತು ಮಾಹಿತಿ ಪಡೆದ ಅರೋರಾ ಪೊಲೀಸ್ ಇಲಾಖೆ, ತನ್ನ ವ್ಯಾಪ್ತಿಯಲ್ಲಿರುವ ಹಿಂದೂ ಪೂಜಾಸ್ಥಳಗಳನ್ನು ಸಂಪರ್ಕಿಸಿ ತನಿಖೆಯ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿದೆ.

ಭಾರತದ ಕಾನ್ಸುಲೇಟ್‌ನಿಂದ ಪೊಲೀಸರ ಕ್ರಮಕ್ಕೆ ಮೆಚ್ಚುಗೆ :

ಚಿಕಾಗೋದಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದು, ದಾಳಿಯ ಸಂಚನ್ನು ವಿಫಲಗೊಳಿಸಲು ಕಾನೂನು ಜಾರಿ ಅಧಿಕಾರಿಗಳು ತ್ವರಿತವಾಗಿ ಕ್ರಮ ಕೈಗೊಂಡಿದ್ದನ್ನು ಶ್ಲಾಘಿಸಿದೆ.

'ಇಲಿನಾಯ್ಸ್‌ನ ಅರೋರಾದಲ್ಲಿ ಪೂಜಾಸ್ಥಳವೊಂದನ್ನು ಗುರಿಯಾಗಿಸಲು ವಿಫಲ ಪ್ರಯತ್ನ ನಡೆದಿರುವ ವರದಿಗಳ ಬಗ್ಗೆ ಕಾನ್ಸುಲೇಟ್‌ಗೆ ಮಾಹಿತಿ ಇದೆ. ಕಾನೂನು ಜಾರಿ ಅಧಿಕಾರಿಗಳ ತ್ವರಿತ ಕ್ರಮವನ್ನು ನಾವು ಪ್ರಶಂಸಿಸುತ್ತೇವೆ. ಭಾರತೀಯ ವಲಸಿಗ ಸಮುದಾಯದ ಸದಸ್ಯರೊಂದಿಗೆ ಸಂಪರ್ಕದಲ್ಲಿದ್ದು, ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ' ಎಂದು ಕಾನ್ಸುಲೇಟ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.

ಪಪೊರಾಕಿಸ್ ವಿರುದ್ಧ ಭಯೋತ್ಪಾದನೆಯ ಬೆದರಿಕೆ ಒಡ್ಡಿದ ಆರೋಪ ಹಾಗೂ ಕಾನೂನುಬಾಹಿರವಾಗಿ ಶಸ್ತ್ರಾಸ್ತ್ರ ಹೊಂದಿದ್ದ ಆರೋಪದಡಿ ತಲಾ ಒಂದು ಪ್ರಕರಣ ದಾಖಲಿಸಲಾಗಿದೆ. 16 ಇಂಚುಗಳಿಗಿಂತ ಕಡಿಮೆ ಉದ್ದದ ಬ್ಯಾರೆಲ್ ಹೊಂದಿರುವ ರೈಫಲ್ ಹೊಂದಿದ್ದ ಆರೋಪವೂ ಇದರಲ್ಲಿ ಸೇರಿದೆ.

ಶಂಕಿತನನ್ನು ಗುರುತಿಸಿ ಬಂಧಿಸುವಲ್ಲಿ ಎರಡು ಪೊಲೀಸ್ ಇಲಾಖೆಗಳ ನಡುವೆ ತ್ವರಿತವಾಗಿ ಮಾಹಿತಿ ವಿನಿಮಯವಾಗಿದ್ದಕ್ಕೆ ಪ್ಯಾಲಟೈನ್ ಪೊಲೀಸ್ ಮುಖ್ಯಸ್ಥ ವಿಲಿಯಂ ನಾರ್ಡ್ ಕೃತಜ್ಞತೆ ಸಲ್ಲಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿಸಲು ಮತ್ತು ಹೆಚ್ಚುವರಿ ಆರೋಪಗಳನ್ನು ದಾಖಲಿಸುವ ಅಗತ್ಯವಿದೆಯೇ ಎಂಬುದನ್ನು ನಿರ್ಧರಿಸಲು FBI ಜತೆ ಕಾರ್ಯನಿರ್ವಹಿಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸದ್ಯ ಸಾರ್ವಜನಿಕರಿಗೆ ಯಾವುದೇ ನಿರ್ದಿಷ್ಟ ಬೆದರಿಕೆ ಇರುವುದನ್ನು ಗುರುತಿಸಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

FBI ಚಿಕಾಗೋ ವಿಭಾಗದ ವಿಶೇಷ ಏಜೆಂಟ್ ಉಸ್ತುವಾರಿ ರಯಾನ್ ವೇಲೆನ್ ಮಾತನಾಡಿ, ಆಮೂಲಾಗ್ರ ಸಿದ್ಧಾಂತಗಳಿಂದ ಪ್ರೇರಿತವಾದ ಹಿಂಸಾಚಾರದ ಬೆದರಿಕೆಗಳ ತನಿಖೆಗಾಗಿ ಸಂಸ್ಥೆಯು ಸ್ಥಳೀಯ ಮತ್ತು ರಾಜ್ಯದ ಕಾನೂನು ಜಾರಿ ಸಂಸ್ಥೆಗಳೊಂದಿಗೆ ಕಾರ್ಯನಿರ್ವಹಿಸಿದೆ ಎಂದು ತಿಳಿಸಿದ್ದಾರೆ.

ದ್ವೇಷದ ವಿರುದ್ಧ ಒಗ್ಗಟ್ಟಿಗೆ ರಾಜಾ ಕೃಷ್ಣಮೂರ್ತಿ ಕರೆ :

ಭಾರತೀಯ ಮೂಲದ ಅಮೆರಿಕದ ಸಂಸದ ರಾಜಾ ಕೃಷ್ಣಮೂರ್ತಿ ಅವರು ದಾಳಿಯ ಸಂಚಿನ ವರದಿಯಿಂದ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಎಲ್ಲ ರೀತಿಯ ದ್ವೇಷದ ವಿರುದ್ಧ ಒಗ್ಗಟ್ಟಿನಿಂದ ನಿಲ್ಲಬೇಕೆಂದು ಕರೆ ನೀಡಿದ್ದಾರೆ.

'ಅರೋರಾದ ಹಿಂದೂ ದೇವಾಲಯದಲ್ಲಿ ಭಾರತೀಯ ಅಮೆರಿಕನ್ನರನ್ನು ಹತ್ಯೆ ಮಾಡಲು ಬಿಳಿಯರ ಪ್ರಾಬಲ್ಯವಾದಿಯೊಬ್ಬ ಪ್ರಯತ್ನಿಸಿದ್ದಾನೆ ಎಂಬ ವರದಿ ಕೇಳಿ ನನಗೆ ತೀವ್ರ ಆತಂಕವಾಗಿದೆ. ಭಾರತೀಯರ ವಿರುದ್ಧದ ದ್ವೇಷ ಮತ್ತು ಬಿಳಿಯರ ಪ್ರಾಬಲ್ಯವಾದಿ ಸಿದ್ಧಾಂತಗಳ ವಿಷಕಾರಿ ಪರಿಣಾಮಗಳು ಇಂತಹ ಹಂತಕ್ಕೆ ತಲುಪಬಹುದು. ಈ ಅಪಾಯವನ್ನು ಗಂಭೀರವಾಗಿ ಪರಿಗಣಿಸಲು ಅಮಾಯಕರು ಹತ್ಯೆಯಾಗುವವರೆಗೆ ಕಾಯಲು ಸಾಧ್ಯವಿಲ್ಲ. ಮುನ್ನೆಚ್ಚರಿಕೆ ನೀಡಿದ ಸಹೋದ್ಯೋಗಿಗಳಿಗೆ ಮತ್ತು ಮಧ್ಯಪ್ರವೇಶಿಸಿದ ಕಾನೂನು ಜಾರಿ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ' ಎಂದು ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor