Photo: x.com/NDTVProfit

ವಾಷಿಂಗ್ಟನ್, ಅ. 15: ಚೀನಾದಿಂದ ಪೂರೈಕೆಯಾಗಿರುವ ಬಿಡಿಭಾಗಗಳನ್ನು ಬಳಸಿ ಸೌದಿ ಅರೇಬಿಯ ಮತ್ತು ಇಸ್ರೇಲ್‌ ವರೆಗಿನ ಗುರಿಗಳನ್ನು ತಲುಪಬಲ್ಲ ಸುಧಾರಿತ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ತಯಾರಿಸಲು ಇರಾನ್ ಬೆಂಬಲಿತ ಹೌತಿ ಬಂಡುಕೋರರು ಪ್ರಯತ್ನಿಸುತ್ತಿದ್ದಾರೆ ಎಂದು ‘ದಿ ವಾಲ್ ಸ್ಟ್ರೀಟ್ ಜರ್ನಲ್’ ವರದಿ ಮಾಡಿದೆ.

ಸಂಘರ್ಷಪೀಡಿತ ಪ್ರದೇಶಗಳಲ್ಲಿ ಶಸ್ತ್ರಾಸ್ತ್ರಗಳು ಮತ್ತು ಅವುಗಳ ಪೂರೈಕೆ ಸರಪಳಿಗಳ ಕುರಿತು ತನಿಖೆ ನಡೆಸುವ ಸಂಘರ್ಷ ಶಸ್ತ್ರಾಸ್ತ್ರ ಸಂಶೋಧನಾ ಸಂಸ್ಥೆ (CAR) ನಡೆಸಿದ ತನಿಖೆಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ. ಅಭಿವೃದ್ಧಿಯ ಹಂತದಲ್ಲಿರುವ ಕ್ಷಿಪಣಿಗಳು ಇರಾನ್‌ ನ ‘ಖೈಬರ್ ಶೆಕನ್’ ಕ್ಷಿಪಣಿಯ ವಿನ್ಯಾಸವನ್ನು ಹೋಲುತ್ತವೆ ಎಂದು ವರದಿ ತಿಳಿಸಿದೆ.

ಖೈಬರ್ ಶೆಕನ್ ನಿಖರ ಗುರಿ ನಿರ್ದೇಶಿತ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದ್ದು, ವಾಯು ರಕ್ಷಣಾ ವ್ಯವಸ್ಥೆಗಳಿಂದ ತಪ್ಪಿಸಿಕೊಳ್ಳಲು ಹಾರಾಟದ ವೇಳೆ ದಿಕ್ಕು ಬದಲಿಸುವ ಸಾಮರ್ಥ್ಯ ಹೊಂದಿದೆ. ಈ ವಿನ್ಯಾಸವನ್ನು ಆಧರಿಸಿದ ಕ್ಷಿಪಣಿಗಳು ಸುಮಾರು 1,900 ಕಿ.ಮೀ. ದೂರದವರೆಗೆ ತಲುಪಬಲ್ಲವು. ಇದರಿಂದ ಸೌದಿ ಅರೇಬಿಯ ಮತ್ತು ಇಸ್ರೇಲ್‌ ನ ಬಹುತೇಕ ಪ್ರದೇಶಗಳು ದಾಳಿಯ ವ್ಯಾಪ್ತಿಗೆ ಒಳಪಡುವ ಸಾಧ್ಯತೆಯಿದೆ.

ಸೌದಿ ಅರೇಬಿಯದ ಮೇಲೆ ಹೌತಿಗಳ ದಾಳಿಗಳು ತೀವ್ರಗೊಂಡಿರುವ ಹಾಗೂ ರಿಯಾದ್ ನೇತೃತ್ವದ ದಿಗ್ಬಂಧನದ ವಿಚಾರವಾಗಿ ಉದ್ವಿಗ್ನತೆ ಹೆಚ್ಚಿರುವ ಸಂದರ್ಭದಲ್ಲೇ ಈ ಬೆಳವಣಿಗೆ ನಡೆದಿದೆ. ಹಾರ್ಮುಝ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಮೇಲೆ ಇರಾನ್ ನಡೆಸುತ್ತಿರುವ ದಾಳಿಗಳೂ ಪ್ರಾದೇಶಿಕ ಉದ್ವಿಗ್ನತೆಯನ್ನು ಹೆಚ್ಚಿಸಿವೆ. ಈ ಬೆಳವಣಿಗೆಗಳು ತೈಲ ಬೆಲೆ ಏರಿಕೆಗೂ ಕಾರಣವಾಗಿವೆ ಎಂದು ವರದಿ ಹೇಳಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ‘ಟ್ರೂತ್ ಸೋಷಿಯಲ್’ ವೇದಿಕೆಯಲ್ಲಿ ಹೌತಿಗಳು ಅತ್ಯಂತ ಕೆಟ್ಟದಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಚೀನಾದ ಬಿಡಿಭಾಗಗಳ ಬಳಕೆ

ಹಿಂದಿನ ವರ್ಷ ಎರಡು ಸರಕು ಸಾಗಣೆಗಳನ್ನು ತಡೆಹಿಡಿದ ಬಳಿಕ, ಜುಲೈನಲ್ಲಿ ಯೆಮೆನ್ ಅಧಿಕಾರಿಗಳು ನೀಡಿದ ಮಾಹಿತಿಯನ್ನು ಆಧರಿಸಿ CAR ತನಿಖೆ ನಡೆಸಿದೆ. ಕ್ಷಿಪಣಿ ತಯಾರಿಕೆಗೆ ಸಂಬಂಧಿಸಿದ ಉಪಕರಣಗಳನ್ನು ಇತರ ಸರಕುಗಳ ನಡುವೆ ಮರೆಮಾಚಿ ಸಾಗಿಸಲಾಗುತ್ತಿತ್ತು ಎಂದು ವರದಿ ತಿಳಿಸಿದೆ.

ವಶಪಡಿಸಿಕೊಂಡ ಸಾಮಗ್ರಿಗಳಲ್ಲಿ ಕ್ಷಿಪಣಿಯ ಮೋಟಾರ್ ಮತ್ತು ಹೊರಕವಚದ ತಯಾರಿಕೆಗೆ ಬಳಸುವ ವಿಶೇಷ ಲೋಹದ ಬಿಡಿಭಾಗಗಳು ಹಾಗೂ ಹಾರಾಟದ ವೇಳೆ ಕ್ಷಿಪಣಿಯನ್ನು ಸ್ಥಿರವಾಗಿಡಲು ನೆರವಾಗುವ ರೆಕ್ಕೆಗಳಂತಹ ಭಾಗಗಳು ಸೇರಿವೆ. ಖೈಬರ್ ಶೆಕನ್ ಕ್ಷಿಪಣಿಯ ಘನ ಇಂಧನದ ರಾಕೆಟ್ ಮೋಟಾರ್‌ ಗೆ ಸಂಬಂಧಿಸಿದ ಬಿಡಿಭಾಗಗಳನ್ನೂ ತನಿಖಾಧಿಕಾರಿಗಳು ಗುರುತಿಸಿದ್ದಾರೆ.

ಹಾರಾಟದ ವೇಳೆ ಉಂಟಾಗುವ ತೀವ್ರ ಶಾಖದಿಂದ ಕ್ಷಿಪಣಿಯ ಭಾಗಗಳನ್ನು ರಕ್ಷಿಸುವ ಅಬ್ಲೇಟಿವ್ ವಸ್ತು ಸೇರಿದಂತೆ ಪರೀಕ್ಷಾ ಉಪಕರಣಗಳು, ಯಂತ್ರೋಪಕರಣಗಳು ಮತ್ತು ಕಚ್ಚಾ ವಸ್ತುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

CAR ಪರಿಶೀಲಿಸಿದ ಸಾಗಣೆ ದಾಖಲೆಗಳಲ್ಲಿ, ಏರೋಸ್ಪೇಸ್ ಕ್ಷೇತ್ರಕ್ಕೆ ಅಗತ್ಯವಾದ ವಿಶೇಷ ಬಿಡಿಭಾಗಗಳನ್ನು ತಯಾರಿಸುವುದಾಗಿ ಹೇಳಿಕೊಂಡಿರುವ ಚೀನಾದ ನಿಖರ ಲೋಹ ಸಂಸ್ಕರಣಾ ಕಂಪೆನಿಯೊಂದರ ಹೆಸರು ಪತ್ತೆಯಾಗಿದೆ. ಆದರೆ ವರದಿಯಲ್ಲಿ ಕಂಪೆನಿಯ ಹೆಸರನ್ನು ಬಹಿರಂಗಪಡಿಸಿಲ್ಲ.

ಆಮದು ಮಾಡಿಕೊಂಡ ಕೆಲವು ಬಿಡಿಭಾಗಗಳನ್ನು ನಾಗರಿಕ ಉದ್ದೇಶಗಳಿಗೂ ಬಳಸಬಹುದಾಗಿದೆ. ಆದರೆ ಇತರ ಕೆಲವು ಭಾಗಗಳನ್ನು ನಿರ್ದಿಷ್ಟವಾಗಿ ಕ್ಷಿಪಣಿ ತಯಾರಿಕೆಗೆ ವಿನ್ಯಾಸಗೊಳಿಸಲಾಗಿದೆ. ಹೀಗಾಗಿ ಅವುಗಳನ್ನು ಹೇಗೆ ಸಂಗ್ರಹಿಸಲಾಯಿತು ಮತ್ತು ಪೂರೈಕೆ ಮಾಡಲಾಯಿತು ಎಂಬ ಪ್ರಶ್ನೆಗಳು ಉದ್ಭವಿಸಿವೆ.

ಖೈಬರ್ ಶೆಕನ್ ಏಕೆ ಅಪಾಯಕಾರಿ?

2022ರಲ್ಲಿ ಟೆಹರಾನ್‌ ನಲ್ಲಿ ಮೊದಲ ಬಾರಿಗೆ ಪ್ರದರ್ಶಿಸಲಾದ ಖೈಬರ್ ಶೆಕನ್ ತುಲನಾತ್ಮಕವಾಗಿ ಕಡಿಮೆ ವೆಚ್ಚದ, ಸ್ಥಳಾಂತರಿಸಬಹುದಾದ ನಿಖರ ಗುರಿ ನಿರ್ದೇಶಿತ ಕ್ಷಿಪಣಿಯಾಗಿದೆ. ಹಾರಾಟದ ವೇಳೆ ದಿಕ್ಕು ಬದಲಿಸುವ ಸಾಮರ್ಥ್ಯದಿಂದಾಗಿ ಅದನ್ನು ತಡೆಯುವುದು ಸಾಂಪ್ರದಾಯಿಕ ಬ್ಯಾಲಿಸ್ಟಿಕ್ ಕ್ಷಿಪಣಿಗಳಿಗೆ ಹೋಲಿಸಿದರೆ ವಾಯು ರಕ್ಷಣಾ ವ್ಯವಸ್ಥೆಗಳಿಗೆ ಹೆಚ್ಚು ಕಷ್ಟಕರವಾಗಬಹುದು.

ವಿಶ್ವಸಂಸ್ಥೆಯ ಯೆಮೆನ್ ನಿರ್ಬಂಧಗಳ ಸಮಿತಿಯ ಮಾಜಿ ತಜ್ಞ ಹೆನ್ರಿ ಥಾಂಪ್ಸನ್ ಅವರ ಪ್ರಕಾರ, ಹೌತಿಗಳು ಕನಿಷ್ಠ ಎರಡು ವರ್ಷಗಳಿಂದ ಚೀನಾದಿಂದ ಘನ ಇಂಧನದ ಬ್ಯಾಲಿಸ್ಟಿಕ್ ಕ್ಷಿಪಣಿಗಳಿಗೆ ಅಗತ್ಯವಾದ ಬಿಡಿಭಾಗಗಳನ್ನು ಆಮದು ಮಾಡಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಪುರಾವೆಗಳಿವೆ.

ಮಧ್ಯಮ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳ ನೆರವಿನಿಂದ ಹೌತಿಗಳು ಕ್ರೂಸ್ ಕ್ಷಿಪಣಿಗಳು ಮತ್ತು ಡ್ರೋನ್‌ಗಳಿಗಿಂತ ಹೆಚ್ಚಿನ ಸ್ಫೋಟಕ ಹೊರೆ ಹೊತ್ತ ಕ್ಷಿಪಣಿಗಳನ್ನು ಸೌದಿ ಅರೇಬಿಯದ ಒಳಭಾಗದವರೆಗೆ ಉಡಾಯಿಸಬಹುದು. ಇದರಿಂದ ಅವು ಇನ್ನಷ್ಟು ಪ್ರಬಲ ಬೆದರಿಕೆಯಾಗಲಿವೆ ಎಂದು ಅವರು ಹೇಳಿದ್ದಾರೆ.

ಹೌತಿಗಳ ಶಸ್ತ್ರಾಸ್ತ್ರ ಪೂರೈಕೆಯಲ್ಲಿ ಚೀನಾದ ಪಾತ್ರ

ಹೌತಿಗಳ ಶಸ್ತ್ರಾಸ್ತ್ರ ಕಾರ್ಯಕ್ರಮಕ್ಕೆ ನೆರವು ನೀಡುತ್ತಿರುವ ವಿದೇಶಿ ಪೂರೈಕೆದಾರರ ಜಾಲ ವಿಸ್ತರಿಸುತ್ತಿದೆ ಎಂಬುದನ್ನು ಇತ್ತೀಚಿನ ತನಿಖೆಗಳು ಸೂಚಿಸಿವೆ.

ವಿಶ್ವಸಂಸ್ಥೆಯ ವರದಿಗಳು ಮತ್ತು ಶಸ್ತ್ರಾಸ್ತ್ರ ತಜ್ಞರು ಸಂಗ್ರಹಿಸಿರುವ ಮಾಹಿತಿಯ ಪ್ರಕಾರ, ಹೌತಿಗಳಿಗೆ ಉದ್ದೇಶಿಸಲಾಗಿದ್ದ ವಶಪಡಿಸಿಕೊಂಡ ಸರಕುಗಳ ಪ್ರಮುಖ ಮೂಲಗಳಲ್ಲಿ ಚೀನಾದ ಕಂಪೆನಿಗಳು ಸೇರಿವೆ. ಹೌತಿಗಳೊಂದಿಗೆ ಸಂಪರ್ಕ ಹೊಂದಿರುವ ಕಾರಣ ಅಮೆರಿಕ ನಿರ್ಬಂಧ ವಿಧಿಸಿರುವ ಡ್ರೋನ್ ಬಿಡಿಭಾಗಗಳ ಪೂರೈಕೆದಾರರ ಪೈಕಿ ಹೆಚ್ಚಿನವರು ಚೀನಾದಲ್ಲಿ ನೆಲೆಸಿದ್ದಾರೆ ಎಂದೂ ಮಾಹಿತಿ ಸೂಚಿಸುತ್ತದೆ.

ವಿಶ್ವಸಂಸ್ಥೆಯ ಶಸ್ತ್ರಾಸ್ತ್ರ ನಿರ್ಬಂಧಗಳಿಗೆ ಒಳಪಟ್ಟಿರುವ ಮತ್ತು ಅಮೆರಿಕವು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿರುವ ಹೌತಿಗಳು ಇತ್ತೀಚಿನ ವರ್ಷಗಳಲ್ಲಿ ಚೀನಾ ಸೇರಿದಂತೆ ವಿವಿಧ ದೇಶಗಳ ಪೂರೈಕೆದಾರರೊಂದಿಗೆ ವಾಣಿಜ್ಯ ಸಂಪರ್ಕವನ್ನು ವಿಸ್ತರಿಸಿಕೊಂಡಿದ್ದಾರೆ.

ಕೆಂಪು ಸಮುದ್ರದಲ್ಲಿ ಅಮೆರಿಕದ ಹಡಗುಗಳ ಮೇಲೆ ದಾಳಿ ನಡೆಸಲು ಹೌತಿಗಳಿಗೆ ಚೀನಾದ ಕಂಪೆನಿಯೊಂದು ನೆರವು ನೀಡುತ್ತಿದೆ ಎಂದು ಅಮೆರಿಕ ಕಳೆದ ವರ್ಷ ಆರೋಪಿಸಿತ್ತು.

ಯೆಮೆನ್‌ ನ ಈ ಬಂಡುಕೋರರಿಗೆ ಶಸ್ತ್ರಾಸ್ತ್ರ ಮಾರಾಟ ಮಾಡುವುದರ ಮೇಲಿನ ವಿಶ್ವಸಂಸ್ಥೆಯ ನಿಷೇಧವನ್ನು ಗೌರವಿಸುವುದಾಗಿ ಚೀನಾ ಹೇಳಿದೆ. ಆದರೆ ನಾಗರಿಕ ಮತ್ತು ಮಿಲಿಟರಿ ಉದ್ದೇಶಗಳಿಗೆ ಬಳಸಬಹುದಾದ ಸರಕುಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವುದು ಸವಾಲಾಗಿದೆ. ಹೌತಿಗಳು ಆಮದು ಮಾಡಿಕೊಳ್ಳುವ ಕೆಲವು ವಸ್ತುಗಳನ್ನು ಎರಡೂ ಉದ್ದೇಶಗಳಿಗೆ ಬಳಸಬಹುದಾದರೆ, ಇನ್ನು ಕೆಲವು ನೇರವಾಗಿ ಶಸ್ತ್ರಾಸ್ತ್ರ ವ್ಯವಸ್ಥೆಗಳ ತಯಾರಿಕೆಗೆ ಸಂಬಂಧಿಸಿವೆ.

ಹಿಂದೆಯೂ ಕ್ಷಿಪಣಿ ಬಿಡಿಭಾಗಗಳ ಪತ್ತೆ

ಹೌತಿಗಳು ವಿದೇಶಗಳಿಂದ ವಿಶೇಷ ಕ್ಷಿಪಣಿ ಬಿಡಿಭಾಗಗಳನ್ನು ಪಡೆದುಕೊಳ್ಳುತ್ತಿರುವುದಕ್ಕೆ ಇತ್ತೀಚಿನ ವಶಪಡಿಸಿಕೊಳ್ಳುವಿಕೆಗಳೇ ಮೊದಲ ಸಾಕ್ಷ್ಯವಲ್ಲ.

2024ರ ಕೊನೆಯಲ್ಲಿ ಅಲ್ಪ ದೂರದ ‘ಸದರ್’ ಕ್ಷಿಪಣಿಗೆ ಸಂಬಂಧಿಸಿದ ವಿಶೇಷವಾಗಿ ತಯಾರಿಸಲಾದ ಲೋಹದ ಬಿಡಿಭಾಗಗಳನ್ನು ಆಮದು ಮಾಡಿಕೊಂಡಿರುವುದನ್ನು CAR ತಜ್ಞರು ದಾಖಲಿಸಿದ್ದರು. ಆದರೆ ಆ ಭಾಗಗಳ ಪೂರೈಕೆದಾರರು ಯಾರು ಎಂಬುದು ತಿಳಿದುಬಂದಿರಲಿಲ್ಲ.

ಹೊಸ ತನಿಖೆಯು ಹೌತಿಗಳ ಖರೀದಿ ಜಾಲವು ಈಗ ಇನ್ನಷ್ಟು ಸುಧಾರಿತ ಕ್ಷಿಪಣಿ ವ್ಯವಸ್ಥೆಗಳಿಗೆ ಅಗತ್ಯವಾದ ಉಪಕರಣಗಳತ್ತ ವಿಸ್ತರಿಸುತ್ತಿರಬಹುದು ಎಂಬ ಆತಂಕವನ್ನು ಹೆಚ್ಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor