ನಿತ್ಯಾ ರಾಮನ್ | Photo Credit : Instagram

ವಾಷಿಂಗ್ಟನ್: ಅಮೆರಿಕದ ಲಾಸ್ ಏಂಜಲೀಸ್ ಮೇಯರ್ ಚುನಾವಣೆಯಲ್ಲಿ ಕೇರಳ ಮೂಲದ ಭಾರತೀಯ-ಅಮೆರಿಕನ್ ರಾಜಕಾರಣಿ ನಿತ್ಯಾ ರಾಮನ್ ಮುನ್ನಡೆ ಸಾಧಿಸಿದ್ದಾರೆ. ನವೆಂಬರ್ 3ರಂದು ನಡೆಯಲಿರುವ ಚುನಾವಣೆಗೆ ಮುನ್ನ ಬಿಡುಗಡೆಯಾದ ಸಮೀಕ್ಷೆಯಲ್ಲಿ ಹಾಲಿ ಮೇಯರ್ ಕರೆನ್ ಬಾಸ್‌ ಗಿಂತ ರಾಮನ್ 11 ಅಂಕಗಳ ಮುನ್ನಡೆ ಹೊಂದಿದ್ದಾರೆ.

ನಿರಾಶ್ರಿತರ ಸಮಸ್ಯೆ, ಸಾರ್ವಜನಿಕ ಸುರಕ್ಷತೆ ಮತ್ತು ಕಾಡ್ಗಿಚ್ಚಿನ ನಿರ್ವಹಣೆ ವಿಚಾರವಾಗಿ ಕರೆನ್ ಬಾಸ್ ಅವರ ಆಡಳಿತವನ್ನು ರಾಮನ್ ಟೀಕಿಸಿದ್ದಾರೆ. ಮಂಗಳವಾರ ನಡೆದ ಟಿವಿ ಚರ್ಚೆಯಲ್ಲಿ ಉಭಯ ನಾಯಕರ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಚುನಾವಣಾ ಕಣ ರಂಗೇರಿದೆ.

ಲಾಸ್ ಏಂಜಲೀಸ್ ನಗರ ಮಂಡಳಿಯ ಸದಸ್ಯೆಯಾಗಿರುವ ರಾಮನ್, ಹಿಂದೆ ಕರೆನ್ ಬಾಸ್ ಅವರ ರಾಜಕೀಯ ಮಿತ್ರರಾಗಿದ್ದರು. ಆದರೆ, ನಗರದ ಪ್ರಮುಖ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಹಾಲಿ ಮೇಯರ್ ವಿಫಲರಾಗಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧವೇ ಸ್ಪರ್ಧಿಸುತ್ತಿದ್ದಾರೆ. ರಾಮನ್ ಗೆದ್ದರೆ, ಅಮೆರಿಕದ ಎರಡನೇ ಅತಿದೊಡ್ಡ ನಗರವಾದ ಲಾಸ್ ಏಂಜಲೀಸ್‌ ನ ಮೊದಲ ಭಾರತೀಯ-ಅಮೆರಿಕನ್ ಮೇಯರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ತ್ರಿಶೂರ್‌ನಿಂದ ಅಮೆರಿಕಕ್ಕೆ :

1981ರ ಜುಲೈ 28ರಂದು ಕೇರಳದ ತ್ರಿಶೂರ್‌ನಲ್ಲಿ ಜನಿಸಿದ ನಿತ್ಯಾ ರಾಮನ್, ಆರನೇ ವಯಸ್ಸಿನಲ್ಲಿ ಕುಟುಂಬದೊಂದಿಗೆ ಅಮೆರಿಕಕ್ಕೆ ತೆರಳಿದರು. ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪೊಲಿಟಿಕಲ್ ಥಿಯರಿಯಲ್ಲಿ ಪದವಿ ಪಡೆದ ಅವರು, ಬಳಿಕ ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT)ಯಲ್ಲಿ ಟೌನ್ ಪ್ಲಾನಿಂಗ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದರು.

ನಗರ ಯೋಜನೆಯಲ್ಲಿನ ಶೈಕ್ಷಣಿಕ ಹಿನ್ನೆಲೆಯು ವಸತಿ ಕೈಗೆಟುಕುವಿಕೆ, ನಿರಾಶ್ರಿತರ ಸಮಸ್ಯೆ ಮತ್ತು ನಗರಾಭಿವೃದ್ಧಿ ಕುರಿತ ಅವರ ರಾಜಕೀಯ ನಿಲುವುಗಳಿಗೆ ಆಧಾರವಾಗಿದೆ. ಡೆಮಾಕ್ರಟಿಕ್ ಸೋಷಿಯಲಿಸ್ಟ್ ಚಳವಳಿಯೊಂದಿಗೆ ಸಂಬಂಧ ಹೊಂದಿರುವ ರಾಮನ್, ಆರು ವರ್ಷಗಳಿಂದ ಲಾಸ್ ಏಂಜಲೀಸ್ ನಗರ ಮಂಡಳಿಯ ಸದಸ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ನಗರದ ವಸತಿ ಬಿಕ್ಕಟ್ಟನ್ನು ಪರಿಹರಿಸುವುದು ಮತ್ತು ಕೈಗೆಟುಕುವ ವಸತಿ ಸೌಲಭ್ಯ ಕಲ್ಪಿಸುವುದು ಅವರ ರಾಜಕೀಯ ಕಾರ್ಯಸೂಚಿಯ ಪ್ರಮುಖ ಭಾಗವಾಗಿದೆ. ಆರಂಭದಲ್ಲಿ ಕರೆನ್ ಬಾಸ್ ಅವರ ಮರುಚುನಾವಣೆಗೆ ಬೆಂಬಲ ಸೂಚಿಸಿದ್ದ ರಾಮನ್, ಬಳಿಕ ನಿರ್ಧಾರ ಬದಲಿಸಿ ಅವರ ವಿರುದ್ಧವೇ ಸ್ಪರ್ಧೆಗೆ ಇಳಿದಿದ್ದಾರೆ.

ಸಮೀಕ್ಷೆಯಲ್ಲಿ ರಾಮನ್‌ ಗೆ ಮುನ್ನಡೆ :

ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಬರ್ಕ್ಲಿ ಕ್ಯಾಂಪಸ್‌ನ ಸರ್ಕಾರಿ ಅಧ್ಯಯನ ಸಂಸ್ಥೆ ಮತ್ತು ಲಾಸ್ ಏಂಜಲೀಸ್ ಟೈಮ್ಸ್ ಸಹಯೋಗದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ರಾಮನ್‌ಗೆ ಶೇಕಡಾ 39ರಷ್ಟು ಮಂದಿ ಬೆಂಬಲ ಸೂಚಿಸಿದ್ದಾರೆ. ಬಾಸ್ ಪರವಾಗಿ ಶೇಕಡಾ 28ರಷ್ಟು ಮಂದಿ ಒಲವು ವ್ಯಕ್ತಪಡಿಸಿದ್ದಾರೆ.

ಸೆಪ್ಟೆಂಬರ್ 15ರಿಂದ 20ರವರೆಗೆ ನಡೆದ ಸಮೀಕ್ಷೆಯಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ಮತದಾರರು ತಮ್ಮ ನಿರ್ಧಾರವನ್ನು ಅಂತಿಮಗೊಳಿಸಿರಲಿಲ್ಲ. ಹೀಗಾಗಿ, ಮತದಾನಕ್ಕೂ ಮುನ್ನ ಚುನಾವಣೆಯ ಚಿತ್ರಣ ಬದಲಾಗುವ ಸಾಧ್ಯತೆಯಿದೆ.

ಬುಧವಾರದಂದು ಭವಿಷ್ಯವಾಣಿ ಮಾರುಕಟ್ಟೆ ಕಲ್ಶಿ ಪ್ರಕಟಿಸಿದ ಅಂದಾಜಿನಲ್ಲಿ ರಾಮನ್ ಗೆಲುವಿನ ಸಾಧ್ಯತೆ ಶೇಕಡಾ 56ರಷ್ಟಿದ್ದರೆ, ಬಾಸ್ ಅವರ ಸಾಧ್ಯತೆ ಶೇಕಡಾ 45ರಷ್ಟಿತ್ತು.

ಕಾಡ್ಗಿಚ್ಚಿನ ನಿರ್ವಹಣೆ ಕುರಿತು ಟೀಕೆ :

ಮಂಗಳವಾರ ರಾತ್ರಿ ನಡೆದ ಒಂದು ಗಂಟೆಯ ಟಿವಿ ಚರ್ಚೆಯಲ್ಲಿ ನಿರಾಶ್ರಿತರ ಸಮಸ್ಯೆ, ಪೊಲೀಸ್ ಇಲಾಖೆಯ ನಾಯಕತ್ವ ಮತ್ತು ಸಾರ್ವಜನಿಕ ಸುರಕ್ಷತೆ ಪ್ರಮುಖ ವಿಷಯಗಳಾಗಿದ್ದವು.

2025ರ ಜನವರಿಯಲ್ಲಿ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಸಂಭವಿಸಿದ ವಿನಾಶಕಾರಿ ಪಾಲಿಸೇಡ್ಸ್ ಕಾಡ್ಗಿಚ್ಚಿನ ಸಂದರ್ಭದಲ್ಲಿ ಪರಿಣಾಮಕಾರಿ ನಾಯಕತ್ವ ಒದಗಿಸುವಲ್ಲಿ ಬಾಸ್ ವಿಫಲರಾಗಿದ್ದಾರೆ ಎಂದು ರಾಮನ್ ಆರೋಪಿಸಿದರು. ಸಂಕಷ್ಟದ ಸಂದರ್ಭದಲ್ಲಿ ಮೇಯರ್ ಅವರ ಅನುಪಸ್ಥಿತಿಯನ್ನು ಪ್ರಶ್ನಿಸಿದ ಅವರು, ಬಾಸ್ ಅವರನ್ನು 'ಕಾಣೆಯಾಗಿದ್ದ ಮೇಯರ್' ಎಂದು ಟೀಕಿಸಿದರು.

ಇದಕ್ಕೆ ಪ್ರತಿಯಾಗಿ, ರಾಮನ್ ಅವರು ಗಂಭೀರತೆಯಿಲ್ಲದವರು, ನಿರ್ಧಾರ ಕೈಗೊಳ್ಳಲು ಹಿಂಜರಿಯುವವರು ಮತ್ತು ನಗರವನ್ನು ಮುನ್ನಡೆಸಲು ಸಿದ್ಧರಿಲ್ಲದವರು ಎಂದು ಬಾಸ್ ಆರೋಪಿಸಿದರು.

'ಲಾಸ್ ಏಂಜಲೀಸ್ ನಗರವು ಮತ್ತೊಂದು ನಾಲ್ಕು ವರ್ಷಗಳ ಕುಸಿತ, ದುರುಪಯೋಗ ಅಥವಾ ನೆಪಗಳನ್ನು ಸಹಿಸಲಾರದು' ಎಂದು ರಾಮನ್ ಹೇಳಿದರು.

ಮತದಾರರನ್ನು ಉದ್ದೇಶಿಸಿ ಮಾತನಾಡಿದ ಅವರು, 1980ರ ಅಮೆರಿಕ ಅಧ್ಯಕ್ಷೀಯ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ರೊನಾಲ್ಡ್ ರೇಗನ್ ಕೇಳಿದ್ದ ಪ್ರಸಿದ್ಧ ಪ್ರಶ್ನೆಯನ್ನು ಪ್ರಸ್ತಾಪಿಸಿದರು. 'ನಾಲ್ಕು ವರ್ಷಗಳ ಹಿಂದೆ ನೀವು ಇದ್ದ ಸ್ಥಿತಿಗಿಂತ ಇಂದು ಉತ್ತಮ ಸ್ಥಿತಿಯಲ್ಲಿದ್ದೀರಾ?' ಎಂದು ಪ್ರಶ್ನಿಸಿದರು.

ವಸತಿ ಬಿಕ್ಕಟ್ಟು ಚುನಾವಣೆಯ ಕೇಂದ್ರಬಿಂದು :

ಲಾಸ್ ಏಂಜಲೀಸ್‌ನಲ್ಲಿ ವಸತಿ ಕೈಗೆಟುಕುವಿಕೆ ಮತ್ತು ನಿರಾಶ್ರಿತರ ಸಮಸ್ಯೆಗಳು ಚುನಾವಣೆಯ ಪ್ರಮುಖ ವಿಷಯಗಳಾಗಿವೆ. ನೂರಾರು ಮಿಲಿಯನ್ ಡಾಲರ್‌ ಗಳನ್ನು ವೆಚ್ಚ ಮಾಡಿದರೂ ನಿರಾಶ್ರಿತರ ಸಮಸ್ಯೆ ಸಾಕಷ್ಟು ಸುಧಾರಿಸಿಲ್ಲ ಎಂದು ರಾಮನ್ ಟೀಕಿಸಿದ್ದಾರೆ.

'ಕಾರ್ಯನಿರ್ವಹಣೆಯಲ್ಲಿ ಪರಿಣಾಮಕಾರಿಯಾಗಿರುವ, ಕೈಗೆಟುಕುವ ಜೀವನಕ್ಕೆ ಅವಕಾಶ ಕಲ್ಪಿಸುವ ಮತ್ತು ಜನರು ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು ಸ್ವಾಗತಿಸುವ ನಗರವನ್ನು ನಿರ್ಮಿಸುವುದು ನಮ್ಮ ಆಡಳಿತದ ಆದ್ಯತೆ' ಎಂದು ಅವರು ಹೇಳಿದ್ದಾರೆ.

ನಗರ ಸೇವೆಗಳನ್ನು ಸುಧಾರಿಸುವುದು, ಜೀವನ ವೆಚ್ಚದ ಹೊರೆಯನ್ನು ಕಡಿಮೆ ಮಾಡುವುದು ಮತ್ತು ತುರ್ತು ಪರಿಸ್ಥಿತಿಗಳಿಗೆ ತ್ವರಿತವಾಗಿ ಸ್ಪಂದಿಸುವ ಆಡಳಿತ ಒದಗಿಸುವುದು ತಮ್ಮ ಪ್ರಚಾರದ ಪ್ರಮುಖ ಉದ್ದೇಶಗಳೆಂದು ರಾಮನ್ ತಿಳಿಸಿದ್ದಾರೆ.

'ನಮ್ಮ ಮೇಯರ್ ಎಲ್ಲಿದ್ದಾರೆ?' :

ಪಾಲಿಸೇಡ್ಸ್ ಕಾಡ್ಗಿಚ್ಚಿನ ಸಂದರ್ಭದಲ್ಲಿ ತಮ್ಮ ಕ್ಷೇತ್ರದಿಂದ ಸ್ಥಳಾಂತರಗೊಂಡ ನಿವಾಸಿಗಳಿಗೆ ನೆರವು ಒದಗಿಸುವ ಕಾರ್ಯವನ್ನು ಸಮನ್ವಯಗೊಳಿಸಲು ನಗರದ ತುರ್ತು ಕಾರ್ಯಾಚರಣೆ ಕೇಂದ್ರದಲ್ಲಿ (Emergency Operations Centre) ಉಪಸ್ಥಿತರಿದ್ದುದಾಗಿ ರಾಮನ್ ಹೇಳಿದರು.

ಆ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ನಿವಾಸಿಗಳು ಪದೇ ಪದೇ ಮೇಯರ್ ಎಲ್ಲಿದ್ದಾರೆ ಎಂದು ಪ್ರಶ್ನಿಸುತ್ತಿದ್ದರು ಎಂದು ಅವರು ಸ್ಮರಿಸಿದರು.

'ಅಲ್ಲಿ ಮಾತ್ರವಲ್ಲ, ಇಡೀ ನಗರದಾದ್ಯಂತ ಜನರು ಪದೇ ಪದೇ ಕೇಳುತ್ತಿದ್ದ ಪ್ರಶ್ನೆ ಒಂದೇ—ನಮ್ಮ ಮೇಯರ್ ಎಲ್ಲಿದ್ದಾರೆ? ನಮ್ಮ ಮೇಯರ್ ಎಲ್ಲಿದ್ದಾರೆ?' ಎಂದು ರಾಮನ್ ಹೇಳಿದರು.

ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಆಡಳಿತ ನೀಡುವುದಾಗಿ ಭರವಸೆ ನೀಡಿದ ಅವರು, 'ನಾನು ಮೇಯರ್ ಆಗಿದ್ದರೆ, ನೀವು “ನಮ್ಮ ಮೇಯರ್ ಎಲ್ಲಿದ್ದಾರೆ?” ಎಂದು ಕೇಳುವ ಅಗತ್ಯವೇ ಇರುವುದಿಲ್ಲ. ನಾನು ಸ್ವತಃ ಮುಂಚೂಣಿಯಲ್ಲಿ ಇರುತ್ತೇನೆ' ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor