×
Ad

ʼಆಪರೇಷನ್ ಸಿಂದೂರ್ʼ ಸಂದರ್ಭ ಪಾಕ್ಗೆ ಗುಪ್ತಚರ ಮಾಹಿತಿಯೊಂದಿಗೆ ಚೀನಾ ಬೆಂಬಲ: ಅಮೆರಿಕದ ವರದಿ

Update: 2025-12-24 21:20 IST

Photo Credit : AP \ PTI 

ವಾಷಿಂಗ್ಟನ್, ಡಿ.24: ಆಪರೇಷನ್ ಸಿಂದೂರ್ ಸಂದರ್ಭ ಚೀನಾವು ಪಾಕಿಸ್ತಾನವನ್ನು ಗುಪ್ತಚರ ಮಾಹಿತಿ ಹಾಗೂ ಮಾಹಿತಿ ಯುದ್ದದ ಮೂಲಕ ಬೆಂಬಲಿಸಿತ್ತು ಎಂದು ಅಮೆರಿಕದ ರಕ್ಷಣಾ ಇಲಾಖೆಗೆ ಸಂಬಂಧಿಸಿದ ವರದಿ ಹೇಳಿದೆ.

ಭಾರತದ ವಿರುದ್ಧ `ಬಹಿರಂಗ ಯುದ್ದದ' ಮಿತಿಯನ್ನು ದಾಟದೆ ನಿರಂತರ ಒತ್ತಡವನ್ನು ಅನ್ವಯಿಸಲು ವಿನ್ಯಾಸಗೊಳಿಸಲಾದ ಕಾರ್ಯಾಚರಣೆ ಮತ್ತು ಸಂಘಟಿತ `ಬೂದು ವಲಯ' ಕಾರ್ಯತಂತ್ರಗಳ ನೀತಿಯನ್ನು ಚೀನಾ ಮತ್ತು ಪಾಕಿಸ್ತಾನವು ಅಳವಡಿಸಿಕೊಂಡಿದೆ. ಈ ಹೊಸ ಸಿದ್ಧಾಂತದ ಮಹತ್ವದ ಪರೀಕ್ಷಾ ಉಪಕ್ರಮಕ್ಕೆ ʼಆಪರೇಷನ್ ಸಿಂಧೂರ್ʼ ಅನ್ನು ವೇದಿಕೆಯಾಗಿ ಬಳಸಿಕೊಳ್ಳಲಾಗಿದೆ ಎಂದು ವರದಿಯನ್ನು ಉಲ್ಲೇಖಿಸಿ ಸಿಎನ್ಎನ್-ನ್ಯೂಸ್ 18 ವರದಿ ಮಾಡಿದೆ.

ವರದಿಯ ಪ್ರಕಾರ, ಕಾರ್ಯಾಚರಣೆಯ ಸಮಯದಲ್ಲಿ ಪಾಕಿಸ್ತಾನವು ಒತ್ತಡದ ಬಹಿರಂಗ ಅಂಶಗಳನ್ನು ಕಾರ್ಯಗತಗೊಳಿಸಿತು. ಚೀನಾವು ಮಾಹಿತಿ ಯುದ್ಧ, ಸೈಬರ್ ಚಟುವಟಿಕೆ, ಗುಪ್ತಚರ ನೆರವು ಮತ್ತು ರಾಜತಾಂತ್ರಿಕ ಕುಶಲತೆಯನ್ನು ಒಳಗೊಂಡ ಅಗೋಚರ ಯುದ್ಧದ ಮೂಲಕ ಹೆಚ್ಚಾಗಿ ಹಿನ್ನೆಲೆಯಲ್ಲಿ ಉಳಿಯಿತು. ಚೀನಾದ ಉಪಗ್ರಹಗಳ ವ್ಯಾಪ್ತಿ, ಇಲೆಕ್ಟ್ರಾನಿಕ್ ಕಣ್ಗಾವಲು ಮಾಹಿತಿಯು ಪಾಕಿಸ್ತಾನಕ್ಕೆ ಪರಿಸ್ಥಿತಿಯ ಕುರಿತ ಸಾಂದರ್ಭಿಕ ಅರಿವನ್ನು ಹೆಚ್ಚಿಸಿದೆ ಎಂದು ನಂಬಲಾಗಿದೆ. ಇದು ಚೀನಾ ಸೇನೆಯ ನೇರ ಒಳಗೊಳ್ಳುವಿಕೆ ಇಲ್ಲದೆಯೇ ಗುರಿ ಮತ್ತು ಕಾರ್ಯಾಚರಣೆಯ ಸಮನ್ವಯವನ್ನು ಸುಧಾರಿಸಿದೆ. ಪಾಕಿಸ್ತಾನವು ತಕ್ಷಣದ ಕ್ರಮವಾಗಿ ಅಂತರಾಷ್ಟ್ರೀಯ ಪರಿಶೀಲನೆಗೆ ಆಗ್ರಹಿಸುವತ್ತ ಗಮನ ಹರಿಸಿದರೆ, ಚೀನಾವು ನಿಯಂತ್ರಿತ ರಾಜತಾಂತ್ರಿಕ ಸಂದೇಶಗಳು ಮತ್ತು ಆನ್ಲೈನ್ ಮಾಹಿತಿ ಅಭಿಯಾನಗಳ ಮೂಲಕ ಪಾಕಿಸ್ತಾನದ ನಿರೂಪಣೆಯನ್ನು ವರ್ಧಿಸುವತ್ತ ಗಮನ ಹರಿಸಿದೆ. ಪಾಕಿಸ್ತಾನದ ವಿರುದ್ಧದ ಆರೋಪಗಳನ್ನು ಮಸುಕಾಗಿಸಲು, ಭಾರತೀಯರ ಪ್ರತಿಪಾದನೆಯನ್ನು ಪ್ರಶ್ನಿಸಲು ಮತ್ತು ಭಾರತದ ಪರವಾಗಿ ಯಾವುದೇ ಅಂತರಾಷ್ಟ್ರೀಯ ಒಮ್ಮತಾಭಿಪ್ರಾಯ ರಚನೆಗೊಳ್ಳುವುದನ್ನು ನಿಧಾನಗೊಳಿಸುವುದು ಈ ಪ್ರಯತ್ನಗಳ ಗುರಿಯಾಗಿತ್ತು.

ಚೀನಾದ ಮಿಲಿಟರಿ ಕಾರ್ಯತಂತ್ರ ಯೋಜಕರು ಭಾರತವನ್ನು ದೀರ್ಘಾವಧಿಯ ಕಾರ್ಯತಂತ್ರದ ಸವಾಲಾಗಿರುವ ಪ್ರಮುಖ ಸಾರ್ವಭೌಮತ್ವ ಎಂದು ಪರಿಗಣಿಸಿದ್ದಾರೆ. ಭಾರತವನ್ನು ಭವಿಷ್ಯದ `ರಾಜಕೀಯ/ಮಿಲಿಟರಿ ಪ್ರಭಾವವನ್ನು ನಿರ್ಬಂಧಿಸುವ' ಗುರಿಯಾಗಿ ಪರಿಗಣಿಸಲಾಗಿದೆ (ವಿಶೇಷವಾಗಿ ಹಿಮಾಲಯದ ಗಡಿ ಮತ್ತು ಹಿಂದೂ ಮಹಾಸಾಗರ ಪ್ರದೇಶದಾದ್ಯಂತ. ಇಲ್ಲಿ ಭಾರತದ ಕಾರ್ಯತಂತ್ರದ ಪ್ರಗತಿಯನ್ನು ಹತ್ತಿಕ್ಕಲು ಚೀನಾ ಬಯಸುತ್ತಿದೆ) ಎಂದು ವರದಿ ಹೇಳಿದೆ.

2024ರ ಅಕ್ಟೋಬರ್ ನಲ್ಲಿ ಚೀನಾವು ವಾಸ್ತವಿಕ ನಿಯಂತ್ರಣ ರೇಖೆಯಾದ್ಯಂತ(ಎಲ್ಎಸಿ) ನಿರ್ಲಿಪ್ತ ಸ್ಥಿತಿ ಕಾಯ್ದುಕೊಳ್ಳುವ ಬಗ್ಗೆ ಭಾರತದೊಂದಿಗೆ ಮಾಡಿಕೊಂಡ ಒಪ್ಪಂದವು ಒಂದು ಲೆಕ್ಕಾಚಾರದ ನಡೆಯೆಂದು ಅಮೆರಿಕದ ರಕ್ಷಣಾ ಇಲಾಖೆ ಪರಿಗಣಿಸಿದೆ. ಪೈಪೋಟಿ ಕಡಿಮೆಯಾಗಿರುವುದನ್ನು ಇದು ಸೂಚಿಸುವುದಿಲ್ಲ. ಅಮೆರಿಕದೊಂದಿಗೆ ರಕ್ಷಣಾ ಹೊಂದಾಣಿಕೆಯನ್ನು ಭಾರತ ಮತ್ತಷ್ಟು ವೇಗಗೊಳಿಸುವುದನ್ನು ತಡೆಯುವ ಕ್ರಮವಾಗಿ ಈ ಲೆಕ್ಕಾಚಾರದ ನಡೆಯನ್ನು ಚೀನಾ ಇಟ್ಟಿದೆ ಎಂದು ವರದಿ ಹೇಳಿದೆ.

ಭವಿಷ್ಯದ ಯಾವುದೇ ಭಾರತ-ಚೀನಾ ಸಂಘರ್ಷವೂ ಯುದ್ಧದ ಹೊಸ್ತಿಲಿಗಿಂತ ಕೆಳಮಟ್ಟದಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ. ಸೈಬರ್ ದಬ್ಬಾಳಿಕೆಗಳು, ಆರ್ಥಿಕ ದಬ್ಬಾಳಿಕೆ, ಮಾಹಿತಿ ಯುದ್ಧತಂತ್ರ ಮತ್ತು ಸೈಬರ್ ದಾಳಿಗಳು ಯುದ್ದಕ್ಕಿಂತ ಮೊದಲು ಸಂಭವಿಸಬಹುದು ಎಂದು ವರದಿಯಲ್ಲಿ ಎಚ್ಚರಿಕೆ ನೀಡಲಾಗಿದೆ.

►ಭಾರತದ ವಿರುದ್ಧ ಒತ್ತಡಕ್ಕೆ ಸಾಧನವಾಗಿ ಪಾಕ್ ಬಳಕೆ

ಈ ಲೆಕ್ಕಾಚಾರದಲ್ಲಿ ಪಾಕಿಸ್ತಾನ ಪ್ರಮುಖ ಪಾತ್ರ ವಹಿಸುತ್ತದೆ. ಪಾಕಿಸ್ತಾನವನ್ನು ಭಾರತದ ವಿರುದ್ಧದ `ಒತ್ತಡದ ಗೇಟಿ'ನಂತೆ ಚೀನಾ ಬಳಸಿಕೊಳ್ಳುತ್ತಿದೆ ಎಂದು ಅಮೆರಿಕದ ಗುಪ್ತಚರ ಮೂಲಗಳು ಬಣ್ಣಿಸಿವೆ. ಭಾರತವನ್ನು ವ್ಯೂಹಾತ್ಮಕವಾಗಿ ವಿಚಲಿತಗೊಳಿಸಲು, ವಿಸ್ತರಿಸುತ್ತಿರುವ ಭಾರತ-ಅಮೆರಿಕ ರಕ್ಷಣಾ ಸಹಕಾರವನ್ನು ದುರ್ಬಲಗೊಳಿಸಲು, ಚೀನಾದ ತುಲನಾತ್ಮಕವಾಗಿ ಕಡಿಮೆ ವೆಚ್ಚದ ಹೈಬ್ರಿಡ್ ಯುದ್ಧ ಮಾದರಿಗಳ ಪ್ರಯೋಗಕ್ಕೆ ಈ ತಂತ್ರವನ್ನು ಚೀನಾ ಬಳಸುತ್ತಿದೆ. ಚೀನಾ ಮತ್ತು ಪಾಕಿಸ್ತಾನ ನಡುವಿನ ಸಮನ್ವಯವು ಪೂರ್ಣ ಪ್ರಮಾಣದ ಸಂಘರ್ಷವನ್ನು ಪ್ರಚೋದಿಸದೆ ಬಹು ಆಯಾಮಗಳ ಒತ್ತಡವನ್ನು ಅನ್ವಯಿಸುವ ಪ್ರಮುಖ ಸಾಧನವಾಗಿ ಹೊರಹೊಮ್ಮುತ್ತಿದೆ ಎಂದು ವರದಿಯಲ್ಲಿ ಎಚ್ಚರಿಕೆ ನೀಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News