ಉಕ್ರೇನ್ ಡ್ರೋನ್ ದಾಳಿ: ರಶ್ಯದ ನಗರದಲ್ಲಿ ತುರ್ತು ಪರಿಸ್ಥಿತಿ ಘೋಷಣೆ
PC : NDTV
ಮಾಸ್ಕೋ: ಉಕ್ರೇನ್‍ನ ಡ್ರೋನ್ ದಾಳಿಯಲ್ಲಿ ವಸತಿ ಕಟ್ಟಡಕ್ಕೆ ಹಾನಿಯಾಗಿದ್ದು ಇಬ್ಬರು ಮಕ್ಕಳ ಸಹಿತ ಕನಿಷ್ಠ ಐದು ಮಂದಿ ಗಾಯಗೊಂಡ ಬಳಿಕ ರಶ್ಯದ ನೊವೊರೊಸಿಯಸ್ಕ್ ನಗರದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿರುವುದಾಗಿ ನಗರದ ಮೇಯರ್ ಆಂಡ್ರೆಯ್ ಕ್ರವ್ಚೆಂಕೊ ಶನಿವಾರ ಹೇಳಿದ್ದಾರೆ.
ಗಾಯಗೊಂಡವರಲ್ಲಿ ಮಹಿಳೆಯೊಬ್ಬರ ಸ್ಥಿತಿ ಗಂಭೀರವಾಗಿದೆ. ಹಲವು ಅಪಾರ್ಟ್‍ಮೆಂಟ್ ಕಟ್ಟಡಗಳಿಗೆ ಹಾನಿಯಾಗಿದ್ದು ತುರ್ತು ಕಾರ್ಯಪಡೆ ಸಿಬ್ಬಂದಿಯನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ ಎಂದವರು ಹೇಳಿದ್ದಾರೆ. ಶುಕ್ರವಾರ ತಡರಾತ್ರಿಯಿಂದ ಶನಿವಾರ ಬೆಳಗ್ಗಿನವರೆಗಿನ ಅವಧಿಯಲ್ಲಿ ಉಕ್ರೇನ್ ಮೇಲೆ ರಶ್ಯವು 183 ಡ್ರೋನ್‍ಗಳು ಹಾಗೂ 2 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪ್ರಯೋಗಿಸಿದೆ ಎಂದು ಉಕ್ರೇನ್ ವಾಯುಪಡೆ ಹೇಳಿದೆ.
ಈ ಮಧ್ಯೆ, ಉಕ್ರೇನ್‍ನ ಎರಡನೇ ದೊಡ್ಡ ನಗರ ಖಾರ್ಕಿವ್ ಮೇಲೆ ರಶ್ಯ ನಡೆಸಿದ ಡ್ರೋನ್ ದಾಳಿಯಲ್ಲಿ 47 ಮಂದಿ ಗಾಯಗೊಂಡಿರುವುದಾಗಿ ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ. ಶುಕ್ರವಾರ ತಡರಾತ್ರಿ ನಡೆದ ದಾಳಿಯಲ್ಲಿ ವಸತಿ ಕಟ್ಟಡಗಳು, ನಾಗರಿಕ ಮೂಲಸೌಕರ್ಯಗಳು ಹಾಗೂ ಹಲವು ವಾಹನಗಳಿಗೆ ಹಾನಿಯಾಗಿದೆ ಎಂದು ಖಾರ್ಕಿವ್ ಮೇಯರ್ ಇಹೊರ್ ಟೆರೆಕೋವ್ ಹೇಳಿದ್ದಾರೆ.