ಸುಮಿ ಪ್ರಾಂತದ 4 ಹಳ್ಳಿಗಳು ರಶ್ಯ ಪಡೆಗಳ ವಶಕ್ಕೆ: ವರದಿ
ವ್ಲಾದಿಮಿರ್ ಪುಟಿನ್ | PC : PTI
ಕೀವ್: ರಶ್ಯ-ಉಕ್ರೇನ್ ಗಡಿಭಾಗದ ಬಳಿ `ಬಫರ್ ವಲಯವನ್ನು ರಚಿಸುವ ಪ್ರಯತ್ನಗಳ ಮಧ್ಯೆ ರಶ್ಯದ ಪಡೆಗಳು ಈಶಾನ್ಯ ಉಕ್ರೇನ್ ನ ಸುಮಿ ಪ್ರಾಂತದ 4 ಹಳ್ಳಿಗಳನ್ನು ವಶಪಡಿಸಿಕೊಂಡಿವೆ ಎಂದು ಸುಮಿ ಪ್ರಾಂತದ ಗವರ್ನರ್ ಒಲೆಹ್ ಹ್ರಿಹೊರೊವ್ ಹೇಳಿದ್ದಾರೆ.
ಸುಮಿ ಪ್ರಾಂತದ ನೊವೆಂಕೆ, ಬಸಿವ್ಕಾ, ವೆಸೆಲಿವ್ಕಾ ಮತ್ತು ಝರಾವ್ಕಾ ಹಳ್ಳಿಗಳು ಈಗ ರಶ್ಯದ ಪಡೆಗಳ ನಿಯಂತ್ರಣದಲ್ಲಿದ್ದು ಇಲ್ಲಿನ ನಿವಾಸಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. `ಬಫರ್ ವಲಯ' ಸ್ಥಾಪಿಸುವ ಗುರಿಯೊಂದಿಗೆ ಶತ್ರುಗಳು ಮುನ್ನುಗ್ಗುವ ಪ್ರಯತ್ನ ತೀವ್ರಗೊಳಿಸಿದ್ದು ವೊಲೊಡಿಮಿರಿವ್ಕಾ ಮತ್ತು ಬಿಲೊವೊಡಿವ್ ಗ್ರಾಮಗಳಲ್ಲಿ ತೀವ್ರ ಹೋರಾಟ ನಡೆಯುತ್ತಿದೆ. ಉಕ್ರೇನ್ ಪಡೆಗಳು ಪರಿಸ್ಥಿತಿಯನ್ನು ನಿಯಂತ್ರಿಸುತ್ತಿದ್ದು ಶತ್ರುಗಳಿಗೆ ನಿಖರ ಪ್ರಹಾರ ನೀಡುತ್ತಿದ್ದಾರೆ' ಎಂದವರು ಫೇಸ್‍ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ನಾಲ್ಕು ಹಳ್ಳಿಗಳ ಜೊತೆ ಈ ಎರಡೂ ಗ್ರಾಮಗಳನ್ನು ರಶ್ಯ ಪಡೆ ವಶಪಡಿಸಿಕೊಂಡಿದೆ ಎಂದು ರಶ್ಯದ ರಕ್ಷಣಾ ಇಲಾಖೆ ಹೇಳಿಕೆ ನೀಡಿದೆ.