×
Ad

ಲೆಬನಾನಿನಲ್ಲಿ ಇಸ್ರೇಲ್ ಡ್ರೋನ್ ಹೊಡೆದುರುಳಿಸಿದ ವಿಶ್ವಸಂಸ್ಥೆ ಶಾಂತಿಪಾಲನಾ ಪಡೆ: ಆರೋಪ

Update: 2025-10-27 20:49 IST

Photo Credit  ; AP \ PTI 

ಜೆರುಸಲೇಂ, ಆ.27: ದಕ್ಷಿಣ ಲೆಬನಾನಿನಲ್ಲಿ ಗುಪ್ತಚರ ಮಾಹಿತಿ ಸಂಗ್ರಹಿಸುವ ಕಾರ್ಯಾಚರಣೆಯಲ್ಲಿದ್ದ ತನ್ನ ಡ್ರೋನ್ ಅನ್ನು ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯು ಹೊಡೆದುರುಳಿಸಿದೆ ಎಂದು ಇಸ್ರೇಲ್ ಮಿಲಿಟರಿ ಸೋಮವಾರ ಆರೋಪಿಸಿದೆ.

ದಕ್ಷಿಣ ಲೆಬನಾನಿನ ಕಫರ್ ಕಿಲಾ ಪ್ರದೇಶದಲ್ಲಿ ದೈನಂದಿನ ಕಾರ್ಯಾಚರಣೆಗೆ ನಿಯೋಜಿಸಲಾಗಿದ್ದ ಇಸ್ರೇಲ್ ರಕ್ಷಣಾ ಪಡೆ(ಐಡಿಎಫ್)ನ ಡ್ರೋನ್ ಪತನಗೊಂಡಿದೆ. ಸಮೀಪದಲ್ಲಿ ನೆಲೆಗೊಳಿಸಿದ್ದ ವಿಶ್ವಸಂಸ್ಥೆ ಶಾಂತಿಪಾಲನಾ ಪಡೆ(ಯುಎನ್‍ಐಎಫ್‍ಐಎಲ್) ಪಡೆ ಉದ್ದೇಶಪೂರ್ವಕವಾಗಿ ಡ್ರೋನ್‍ಗೆ ಗುಂಡು ಹಾರಿಸಿ ಹೊಡೆದುರುಳಿಸಿರುವುದು ಪ್ರಾಥಮಿಕ ವಿಚಾರಣೆಯಲ್ಲಿ ಕಂಡುಬಂದಿದೆ ಎಂದು ಮಿಲಿಟರಿಯ ವಕ್ತಾರ ಲೆ|ಕ| ನದಾವ್ ಶೊಶಾನಿ ಆರೋಪಿಸಿದ್ದಾರೆ.

ಡ್ರೋನ್ ಪತನಗೊಂಡ ಬಳಿಕ ಆ ಸ್ಥಳದತ್ತ ಮಿಲಿಟರಿಯು ಗ್ರೆನೇಡನ್ನು ಎಸೆದಿದೆ. ಆದರೆ ಶಾಂತಿ ಪಾಲನಾ ಪಡೆಯತ್ತ ಗುಂಡು ಹಾರಿಸಿಲ್ಲ ಎಂದವರು ಹೇಳಿದ್ದಾರೆ. ರವಿವಾರ ದಕ್ಷಿಣ ಲೆಬನಾನಿನಲ್ಲಿ ಗಸ್ತು ತಿರುಗುತ್ತಿದ್ದ ಯುಎನ್‍ಐಎಫ್‍ಐಎಲ್ ಪಡೆಯ ಮೇಲಿಂದ ಇಸ್ರೇಲ್ ಡ್ರೋನ್ ಆಕ್ರಮಣಕಾರಿ ರೀತಿಯಲ್ಲಿ ಹಾರುತ್ತಿತ್ತು. ಶಾಂತಿಪಾಲಕರು ಡ್ರೋನ್ ಅನ್ನು ತಟಸ್ಥಗೊಳಿಸಲು ಅಗತ್ಯವಾದ ರಕ್ಷಣಾತ್ಮಕ ಪ್ರತಿಕ್ರಮಗಳನ್ನು ಅನ್ವಯಿಸಿದರು. ಇದೇ ಸಂದರ್ಭ ಮತ್ತೊಂದು ಇಸ್ರೇಲಿ ಡ್ರೋನ್ ಶಾಂತಿಪಾಲನಾ ಪಡೆಯತ್ತ ನುಗ್ಗಿಬಂದು ಗ್ರೆನೇಡನ್ನು ಎಸೆದಿದೆ.ಈ ಘಟನೆಯು ದಕ್ಷಿಣ ಲೆಬನಾನಿನಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಆದೇಶವನ್ನು ಅನುಷ್ಠಾನಗೊಳಿಸುತ್ತಿರುವ ಶಾಂತಿಪಾಲನಾ ಪಡೆಯ ಸುರಕ್ಷತೆ ಮತ್ತು ಭದ್ರತೆಯ ಕಡೆಗಣನೆಯನ್ನು ತೋರಿಸುತ್ತದೆ ಎಂದು ಯುಎನ್‍ಐಎಫ್‍ಐಎಲ್ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News