ಶೇ. 50ರಷ್ಟು ಸುಂಕಕ್ಕೆ ಕೆನಡಾ ವಿರೋಧ; ಅಮೆರಿಕದೊಂದಿಗೆ ವ್ಯಾಪಾರ ಮಾತುಕತೆ ಸ್ಥಗಿತ

Update: 2026-08-22 12:00 IST

Photo Credit : NDTV 

ವಾಷಿಂಗ್ಟನ್: ಕೆನಡಾ ಉತ್ಪನ್ನಗಳ ಮೇಲೆ ಅಮೆರಿಕ ವಿಧಿಸಿರುವ ಶೇ. 50ರಷ್ಟು ಸುಂಕವನ್ನು ತಿರಸ್ಕರಿಸಿರುವ ಕೆನಡಾ, ಅಮೆರಿಕದೊಂದಿಗಿನ ವ್ಯಾಪಾರ ಮಾತುಕತೆಯನ್ನು ಅಮಾನತುಗೊಳಿಸಿದೆ. ಇದರಿಂದ ಐತಿಹಾಸಿಕ ಮಿತ್ರ ರಾಷ್ಟ್ರಗಳಾದ ಅಮೆರಿಕ ಮತ್ತು ಕೆನಡಾ ನಡುವಿನ ವ್ಯಾಪಾರ ಮಾತುಕತೆ ಕೊನೆಯ ಕ್ಷಣದಲ್ಲಿ ಸ್ಥಗಿತಗೊಂಡಿದೆ.

ಪ್ರತಿ ವರ್ಷ ಕೆನಡಾದಿಂದ ಅಮೆರಿಕಕ್ಕೆ ಆಮದಾಗುವ ಉತ್ಪನ್ನಗಳ ಪೈಕಿ ಶೇ. 5ರಷ್ಟು ಉತ್ಪನ್ನಗಳ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶೇ. 50ರಷ್ಟು ಸುಂಕ ವಿಧಿಸಿದ್ದಾರೆ. ಹಾಕಿ ಸ್ಟಿಕ್‌ ನಿಂದ ಟಂಗ್ ಡಿಪ್ರೆಸ್ಸರ್‌ ವರೆಗಿನ ಉತ್ಪನ್ನಗಳಿಗೂ ಈ ಸುಂಕ ಅನ್ವಯವಾಗಲಿದೆ.

‘ಕೆನಡಾದ ಕಾರ್ಮಿಕರು ಹಾಗೂ ಉದ್ಯಮಗಳನ್ನು ರಕ್ಷಿಸಲು ಅಮೆರಿಕ ವಿಧಿಸಿರುವ ಸುಂಕಕ್ಕೆ ಡಾಲರ್‌ ಗೆ ಡಾಲರ್‌ ನಂತೆ ಪ್ರತಿಕ್ರಿಯಿಸಲಾಗುವುದು’ ಎಂದು ಕೆನಡಾ ಪ್ರಧಾನಿ ಮಾರ್ಕ್ ಕಾರ್ನೆ ಹೇಳಿದ್ದಾರೆ. ಈ ತಿರುಗೇಟಿನಿಂದ ಉಭಯ ದೇಶಗಳ ನಡುವಿನ ವ್ಯಾಪಾರ ಬಿಕ್ಕಟ್ಟು ಮತ್ತಷ್ಟು ಬಿಗಡಾಯಿಸಿದೆ.

ಅಮೆರಿಕ, ಕೆನಡಾ ಮತ್ತು ಮೆಕ್ಸಿಕೊ ಮೂರು ದೇಶಗಳ ಉದ್ಯಮಗಳಿಗೆ ಮಹತ್ವದ್ದಾಗಿರುವ ಉತ್ತರ ಅಮೆರಿಕ ವ್ಯಾಪಾರ ಒಪ್ಪಂದದ ಭವಿಷ್ಯದ ಬಗ್ಗೆಯೂ ಅನಿಶ್ಚಿತತೆ ಸೃಷ್ಟಿಯಾಗಿದೆ.

ಕಬ್ಬಿಣ, ಅಲ್ಯೂಮಿನಿಯಂ, ಆಟೊಮೊಬೈಲ್ ಮತ್ತು ಸೌದಿನ ಮೇಲೆ ರಿಯಾಯಿತಿ ನೀಡುವಂತೆ ಕೆನಡಾ ಕೋರಿತ್ತು. ಆದರೆ, ಅದಕ್ಕೆ ಅಮೆರಿಕ ಒಪ್ಪಲಿಲ್ಲ ಎಂದು ಡೊನಾಲ್ಡ್ ಟ್ರಂಪ್ ಸರಕಾರದ ಹಿರಿಯ ಆಡಳಿತಾಧಿಕಾರಿಯೊಬ್ಬರು ಸುದ್ದಿಗಾರರಿಗೆ ತಿಳಿಸಿದ್ದಾರೆ.

‘ಈ ವಾರದ ಆರಂಭದಲ್ಲಿ ಕೆಲವು ಷರತ್ತುಗಳಡಿ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಒಪ್ಪಿಗೆ ಸೂಚಿಸಿದ್ದ ಕೆನಡಾ, ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಲು ನಿರಾಕರಿಸಿದೆ. ನಮ್ಮ ಮಾರುಕಟ್ಟೆಯಲ್ಲಿ ಪ್ರಮುಖ ರಫ್ತುದಾರರಿಗೆ ಅತ್ಯುತ್ತಮ ಮನ್ನಣೆ ದೊರೆಯಲಿದೆ ಎಂದು ಕೆನಡಾಗೆ ಆಹ್ವಾನ ನೀಡಲಾಗಿತ್ತು. ಆದರೆ, ಹೊಸ ಬೇಡಿಕೆಗಳು ಹಾಗೂ ಇನ್ನಿತರ ಬದ್ಧತೆಗಳಿಂದ ಹಿಂದೆ ಸರಿಯುವ ಮೂಲಕ, ಈ ಹಿಂದಿನ ದಿನಗಳಲ್ಲಿ ಸಾಧಿಸಲಾಗಿದ್ದ ಎಚ್ಚರಿಕೆಯ ಸಮತೋಲನವನ್ನು ಕೆನಡಾ ತಲೆಕೆಳಗಾಗಿಸಿದೆ’ ಎಂದು ಅಮೆರಿಕ ವ್ಯಾಪಾರ ಪ್ರತಿನಿಧಿ ಜಾಮೀಸನ್ ಗ್ರೀರ್ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಮಧ್ಯರಾತ್ರಿಗೂ ಮುನ್ನ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಗ್ರೀರ್ ಅವರ ಹೇಳಿಕೆಯನ್ನು ಸುದ್ದಿಗಾರರಿಗೆ ಓದಿ ಹೇಳಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News