ಇರಾನ್ ಯುದ್ಧದಿಂದಾಗಿ ಮದ್ದುಗುಂಡುಗಳ ಕೊರತೆಯನ್ನು ದೃಢಪಡಿಸಿದ ಅಮೆರಿಕ ಸೇನೆ
ಸಾಂದರ್ಭಿಕ ಚಿತ್ರ (AI)
ವಾಷಿಂಗ್ಟನ್: ಇರಾನ್ ವಿರುದ್ಧದ ಯುದ್ಧದಿಂದಾಗಿ ಅಮೆರಿಕವು ಮದ್ದುಗುಂಡುಗಳ ಕೊರತೆಯನ್ನು ಎದುರಿಸುತ್ತಿದೆ ಎಂದು ರಕ್ಷಣಾ ಇಲಾಖೆಯ ಮಹಾನಿರೀಕ್ಷಕರು ಸೋಮವಾರ ಖಚಿತಪಡಿಸಿದ್ದು, ಇದು ಶಸ್ತ್ರಾಸ್ತ್ರಗಳ ಸಂಪೂರ್ಣ ದಾಸ್ತಾನಿದೆ ಎಂಬ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ವಿರುದ್ಧವಾಗಿದೆ.
ಕಾಂಗ್ರೆಸ್‌ಗೆ ಸಲ್ಲಿಸಿದ ಕಡ್ಡಾಯ ವರದಿಯಲ್ಲಿ,ಫೆಬ್ರವರಿ 28 ಮತ್ತು ಜೂನ್ 30ರ ನಡುವೆ ‘ಆಪರೇಷನ್ ಎಪಿಕ್ ಫ್ಯೂರಿ’ಗಾಗಿ (ಒಇಎಫ್) ಸುಮಾರು 33.4 ಶತಕೋಟಿ ಡಾಲರ್ ವೆಚ್ಚವಾಗಿದ್ದು, ಇದರಲ್ಲಿ ಮದ್ದುಗುಂಡುಗಳಿಗಾಗಿ 22.3 ಶತಕೋಟಿ ಡಾಲರ್ ವೆಚ್ಚ ಕೂಡ ಸೇರಿದೆ ಎಂದು ಮಹಾನಿರೀಕ್ಷಕರು ತಿಳಿಸಿದ್ದಾರೆ. ಇದು ಕಾಂಗ್ರೆಸ್‌ಗೆ ಸಲ್ಲಿಸಲಾಗಿರುವ ಇಂತಹ ಮೊದಲ ವರದಿಯಾಗಿದೆ.
ಒಇಎಫ್‌ಗಾಗಿ ಮದ್ದುಗುಂಡುಗಳ ಬಳಕೆಯು ವ್ಯೆಹಾತ್ಮಕ ದಾಸ್ತಾನು ಕೊರತೆಗೆ ಕಾರಣವಾಗಿದೆ ಮತ್ತು ಮದ್ದುಗುಂಡುಗಳ ಮರುಪೂರಣಕ್ಕಾಗಿ ಕೈಗಾರಿಕಾ ಮೂಲದ ಅಡಚಣೆಗಳನ್ನು ಬಹಿರಂಗಪಡಿಸಿದೆ. ಈ ಕೊರತೆಗಳು ಮತ್ತು ವಿಳಂಬಗಳನ್ನು ಎದುರಿಸಲು ಪೆಂಟಗನ್ ಕ್ರಮ ಕೈಗೊಳ್ಳುತ್ತಿದೆ ಎಂದು ವರದಿಯು ತಿಳಿಸಿದೆ.
ಅಮೆರಿಕದಿಂದ ಶಸ್ತ್ರಾಸ್ತ್ರ ಖರೀದಿಯನ್ನು ಅವಲಂಬಿಸಿರುವ ಉಕ್ರೇನ್ ಮತ್ತು ತೈವಾನ್‌ನಂತಹ ಸರಕಾರಗಳಲ್ಲಿ ಈ ಕೊರತೆಯು ಕಳವಳ ಮೂಡಿಸುವ ಸಾಧ್ಯತೆಯಿದೆ. ರಷ್ಯಾ ವಿರುದ್ಧದ ಯುದ್ಧದಲ್ಲಿ ಉಕ್ರೇನ್‌ಗೆ ಅಮೆರಿಕ ನಿರ್ಮಿತ ಪೇಟ್ರಿಯಾಟ್ ವಾಯು ರಕ್ಷಣಾ ವ್ಯವಸ್ಥೆಗಳಿಗೆ ಹೆಚ್ಚಿನ ಛೇದಕ ಕ್ಷಿಪಣಿಗಳ ತುರ್ತು ಅಗತ್ಯವಿದೆ. ಇದೇ ವೇಳೆ ಚೀನಾವನ್ನು ದೂರವಿರಿಸಲು ಅಮೆರಿಕದೊಂದಿಗೆ ಶಸ್ತ್ರಾಸ್ತ್ರ ಒಪ್ಪಂದಗಳನ್ನು ತೈವಾನ್ ಅವಲಂಬಿಸಿದೆ.
ಮಧ್ಯಪೂರ್ವದಲ್ಲಿ ಆರು ತಿಂಗಳ ಯುದ್ಧದ ಸಮಯದಲ್ಲಿ ಶಸ್ತ್ರಾಸ್ತ್ರಗಳ ದಾಸ್ತಾನು ಕುಸಿದಿದೆ ಎಂಬ ಕಳವಳಗಳನ್ನು ಟ್ರಂಪ್ ಪದೇ ಪದೇ ತಳ್ಳಿಹಾಕಿದ್ದಾರೆ. ಅಮೆರಿಕವು ವಾಸ್ತವದಲ್ಲಿ ಅನಿಯಮಿತ ಮದ್ದುಗುಂಡುಗಳನ್ನು ಹೊಂದಿದೆ ಎಂದು ಅವರು ಇತ್ತೀಚೆಗೆ ಹೇಳಿದ್ದಾರೆ.
ಅಮೆರಿಕವು ತನ್ನ ಇತಿಹಾಸದಲ್ಲೇ ಅತ್ಯಧಿಕ ಶಸ್ತ್ರಾಸ್ತ್ರಗಳನ್ನು ಉತ್ಪಾದಿಸುತ್ತಿದೆ ಎಂದು ಟ್ರಂಪ್ ಸೋಮವಾರ ತನ್ನ ಟ್ರುಥ್ ಸೋಷಿಯಲ್ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ.
ಇರಾನ್ ಯುದ್ಧ ಆರಂಭಗೊಂಡ ಬಳಿಕ ಅಮೆರಿಕದ ನಾಲ್ಕು ಎಫ್-15 ಫೈಟರ್ ಜೆಟ್‌ಗಳು ಧ್ವಂಸಗೊಂಡಿವೆ,ಒಂದು ಎಫ್-35 ಯುದ್ಧವಿಮಾನ ಮತ್ತು ಏಳು ಕೆಸಿ-135 ಟ್ಯಾಂಕರ್ ವಿಮಾನಗಳು ಹಾನಿಗೊಳಗಾಗಿವೆ,ಸುಮಾರು 30ರಷ್ಟು ಎಂಕ್ಯೂ-9 ರೀಪರ್ ಡ್ರೋನ್‌ಗಳು ಧ್ವಂಸಗೊಂಡಿವೆ ಎಂದು ಸೆಂಟ್‌ಕಾಮ್ ಈ ಹಿಂದೆ ವರದಿ ಮಾಡಿತ್ತು. ಬಹ್ರೇನ್‌ನಲ್ಲಿರುವ ಅಮೆರಿಕ ನೌಕಾಪಡೆಯ ಪ್ರಮುಖ ಲಾಜಿಸ್ಟಿಕ್ಸ್ ಕೇಂದ್ರದ ಮೇಲೆ ಇರಾನ್ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸಿದ್ದನ್ನು ವರದಿಯು ದೃಢಪಡಿಸಿತ್ತು.