ಭಾರತ- ಪಾಕ್ ಸಂಘರ್ಷ ಶಮನಕ್ಕೆ ಅಮೆರಿಕ ಪ್ರಯತ್ನ
ಮಾರ್ಕೊ ರುಬಿಯೊ | ಸಚಿವ ಎಸ್.ಜೈಶಂಕರ್
PC: X/ Jaishankar
ವಾಷಿಂಗ್ಟನ್: ಪಹಲ್ಗಾಮ್ ದಾಳಿಯ ಬಳಿಕ ಭಾರತ ಹಾಗೂ ಪಾಕಿಸ್ತಾನದ ನಡುವಿನ ಸಂಘರ್ಷ ಉಲ್ಬಣಿಸಿದ್ದು, ಇದನ್ನು ಶಮನಗೊಳಿಸುವ ಪ್ರಯತ್ನವನ್ನು ಅಮೆರಿಕ ಆರಂಭಿಸಿದೆ. ಅಮೆರಿಕದ ರಕ್ಷಣಾ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಮತ್ತು ಪಾಕಿಸ್ತಾನದ ಪ್ರಧಾನಿ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಆದರೆ ಭಯೋತ್ಪಾದನೆ ವಿರುದ್ಧದ ಭಾರತೀಯ ಹೋರಾಟಕ್ಕೆ ಸಹಕಾರ ನೀಡಲು ಬದ್ಧ ಎಂದು ಸ್ಪಷ್ಟಪಡಿಸಿದ್ದಾರೆ.
ಪಹಲ್ಗಾಮ್ ಭಯಾನಕ ಉಗ್ರ ಕೃತ್ಯದ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ ಅವರು, ಸಂಘರ್ಷ ಶಮನಕ್ಕೆ ಪಾಕಿಸ್ತಾನದ ಜತೆಗೂಡಿ ಪ್ರಯತ್ನ ನಡೆಸುವಂತೆಯೂ ಭಾರತಕ್ಕೆ ಸಲಹೆ ಮಾಡಿದ್ದಾರೆ. ದಕ್ಷಿಣ ಏಷ್ಯಾದಲ್ಲಿ ಶಾಂತಿ ಮತ್ತು ಸುಭದ್ರತೆ ಕಾಪಾಡಲು ನೆರವಾಗುವಂತೆ ರುಬಿಯೊ ಕೋರಿದ್ದಾಗಿ ರಕ್ಷಣಾ ಇಲಾಖೆ ವಕ್ತಾರ ಟಾಮಿ ಬ್ರೂಸ್ ಹೇಳಿಕೆ ನೀಡಿದ್ದಾರೆ.
ಪಹಲ್ಗಾಮ್ ನಲ್ಲಿ ಉಗ್ರರು ಬರ್ಬರ ಕೃತ್ಯ ಎಸಗಿದ ಬಳಿಕ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಕದನ ವಿರಾಮವನ್ನು ಉಲ್ಲಂಘಿಸಿ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಯುದ್ಧಪರಿಸ್ಥಿತಿ ತಲೆದೋರಿದೆ. ಪಾಕಿಸ್ತಾನ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದೆ ಎಂದು ಆಪಾದಿಸಿ, ಸಿಂಧೂ ಜಲ ಒಪ್ಪಂದ ರದ್ದು ಮತ್ತು ಅಟ್ಟಾರಿ ಗಡಿ ಬಂದ್ ಸೇರಿದಂತೆ ಪಾಕಿಸ್ತಾನ ವಿರುದ್ಧ ಹಲವು ಕ್ರಮಗಳನ್ನು ಭಾರತ ಈಗಾಗಲೇ ಕೈಗೊಂಡಿದೆ.
ಈ ದಾಳಿಯ ಬಗೆಗಿನ ತನಿಖೆಯಲ್ಲಿ ಸಹಕರಿಸುವಂತೆಯೂ ರುಬಿಯೊ ಪಾಕಿಸ್ತಾನದ ಪ್ರಧಾನಿ ಸೆಹಬಾಝ್ ಷರೀಫ್ ಅವರನ್ನು ಆಗ್ರಹಿಸಿದ್ದಾರೆ.