ಭಾರತಕ್ಕೆ ವೆನೆಝುವೆಲಾದ ತೈಲ ಮಾರಾಟಕ್ಕೆ ಅಮೆರಿಕ ಸಿದ್ಧತೆ: ಶ್ವೇತಭವನ
ಆಮದು ಮಾಡಿಕೊಳ್ಳಲು ರಿಲಯನ್ಸ್ ಸಜ್ಜು
ಸಾಂದರ್ಭಿಕ ಚಿತ್ರ
ವಾಷಿಂಗ್ಟನ್: ಅಮೆರಿಕದ ಕಟ್ಟುನಿಟ್ಟಿನ ನಿಯಂತ್ರಿತ ಹೊಸ ಚೌಕಟ್ಟಿನಡಿಯಲ್ಲಿ ಭಾರತಕ್ಕೆ ವೆನೆಝುವೆಲಾದ ಕಚ್ಚಾ ತೈಲವನ್ನು ಖರೀದಿಸಲು ಅವಕಾಶ ನೀಡಲು ಅಮೆರಿಕ ಸಿದ್ಧವಾಗಿದೆ ಎಂದು ಶ್ವೇತಭವನ ತಿಳಿಸಿದೆ. ಅಮೆರಿಕದ ನಿರ್ಬಂಧಗಳಿಂದ ಸ್ಥಗಿತಗೊಂಡಿದ್ದ ವೆನೆಝುವೆಲಾ–ಭಾರತ ತೈಲ ವ್ಯಾಪಾರವನ್ನು ಭಾಗಶಃ ಪುನರಾರಂಭಿಸುವ ಸಾಧ್ಯತೆ ಕಂಡು ಬಂದಿದೆ.
ಭಾರತವು ತನ್ನ ಹೆಚ್ಚುತ್ತಿರುವ ಇಂಧನ ಅಗತ್ಯಗಳನ್ನು ಪೂರೈಸುವ ಉದ್ದೇಶದಿಂದ ವೆನೆಝುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಬಹುದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಟ್ರಂಪ್ ಆಡಳಿತದ ಹಿರಿಯ ಅಧಿಕಾರಿಯೊಬ್ಬರು, ಇದಕ್ಕೆ ಅಮೆರಿಕ ಸಮ್ಮತಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಸಂಬಂಧಿತ ನಿಯಮಾವಳಿ ಹಾಗೂ ತಾಂತ್ರಿಕ ವಿವರಗಳು ಇನ್ನೂ ರೂಪುಗೊಳ್ಳುವ ಹಂತದಲ್ಲಿವೆ ಎಂದು ಅವರು ಹೇಳಿದ್ದಾರೆ.
ಇತ್ತೀಚೆಗೆ ಯುಎಸ್ ಇಂಧನ ಕಾರ್ಯದರ್ಶಿ ಕ್ರಿಸ್ಟೋಫರ್ ರೈಟ್, ಬಹುತೇಕ ಎಲ್ಲಾ ದೇಶಗಳಿಗೆ ವೆನೆಝುವೆಲಾದ ತೈಲ ಮಾರಾಟಕ್ಕೆ ವಾಷಿಂಗ್ಟನ್ ಮುಕ್ತವಾಗಿರುತ್ತದೆ ಎಂದು ಹೇಳಿದ್ದರು. ಆದರೆ ಈ ವ್ಯಾಪಾರ ಸಂಪೂರ್ಣವಾಗಿ ಯುಎಸ್ ಸರ್ಕಾರದ ನಿಯಂತ್ರಣದಲ್ಲಿ ನಡೆಯಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ತೈಲ ಮಾರಾಟದಿಂದ ಲಭಿಸುವ ಹಣವನ್ನು ಯುಎಸ್ ಸರ್ಕಾರದ ಮೇಲ್ವಿಚಾರಣೆಯಲ್ಲಿರುವ ಖಾತೆಗಳ ಮೂಲಕ ನಿರ್ವಹಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಅಮೆರಿಕದ ನಿರ್ಬಂಧಗಳು ಜಾರಿಯಾಗುವ ಮೊದಲು, ಭಾರತವು ವೆನೆಝುವೆಲಾದ ಪ್ರಮುಖ ಕಚ್ಚಾ ತೈಲ ಗ್ರಾಹಕರಲ್ಲೊಂದು ದೇಶವಾಗಿತ್ತು. ಭಾರತದ ಸಂಕೀರ್ಣ ಸಂಸ್ಕರಣಾಗಾರಗಳಿಗೆ ಅಗತ್ಯವಿರುವ ಭಾರೀ ಕಚ್ಚಾ ತೈಲವನ್ನು ವೆನೆಝುವೆಲಾದಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಹೊಸ ಒಪ್ಪಂದ ಜಾರಿಗೆ ಬಂದರೆ, ಭಾರತ ತನ್ನ ಇಂಧನ ಆಮದು ಮೂಲಗಳನ್ನು ವಿಸ್ತಾರ ಮಾಡಿಕೊಳ್ಳಲು ನೆರವಾಗಲಿದೆ ಎಂಬ ನಿರೀಕ್ಷೆಯಿದೆ.
ನ್ಯೂಯಾರ್ಕ್‌ನಲ್ಲಿ ನಡೆದ ಇಂಧನ ಸಮ್ಮೇಳನದಲ್ಲಿ ಮಾತನಾಡಿದ ರೈಟ್, ಅಮೆರಿಕದ ವಶದಲ್ಲಿರುವ 30 ಮಿಲಿಯನ್‌ನಿಂದ 50 ಮಿಲಿಯನ್ ಬ್ಯಾರೆಲ್‌ಗಳಷ್ಟು ವೆನೆಝುವೆಲಾದ ಕಚ್ಚಾ ತೈಲವನ್ನು ಮಾರಾಟ ಮಾಡುವ ಯೋಜನೆ ಇದೆ ಎಂದು ಹೇಳಿದ್ದಾರೆ.
ಇದರ ನಡುವೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವೆನೆಝುವೆಲಾದ ತೈಲ ವಲಯವನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ 50 ಮಿಲಿಯನ್ ಬ್ಯಾರೆಲ್‌ಗಳವರೆಗೆ ಕಚ್ಚಾ ತೈಲವನ್ನು ಸಂಸ್ಕರಿಸಿ ಮಾರಾಟ ಮಾಡುವುದಾಗಿ ಹೇಳಿದ್ದಾರೆ. ಜಾಗತಿಕ ತೈಲ ಕಂಪೆನಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಈ ಕ್ರಮವನ್ನು ಆರ್ಥಿಕ ಅವಕಾಶ ಹಾಗೂ ರಾಜಕೀಯ ಬೆಳವಣಿಗೆ ಎಂದು ವಿವರಿಸಿದ್ದಾರೆ. ವೆನೆಝುವೆಲಾದ ತೈಲ ವಲಯದಲ್ಲಿ ಕನಿಷ್ಠ 100 ಬಿಲಿಯನ್ ಡಾಲರ್ ಹೂಡಿಕೆ ನಡೆಯಲಿದೆ ಎಂದೂ ಅವರು ಹೇಳಿದ್ದಾರೆ.
ನಿರ್ಬಂಧಗಳು ಹಾಗೂ ವ್ಯವಸ್ಥಾಪನಾ ಅಡಚಣೆಗಳಿಂದಾಗಿ ವೆನೆಝುವೆಲಾದ ಲಕ್ಷಾಂತರ ಬ್ಯಾರೆಲ್‌ಗಳಷ್ಟು ಕಚ್ಚಾ ತೈಲವು ಪ್ರಸ್ತುತ ಕಡಲಾಚೆಯ ಸಂಗ್ರಹ ಟ್ಯಾಂಕ್‌ಗಳು ಹಾಗೂ ಹಡಗುಗಳಲ್ಲಿ ಸಿಲುಕಿಕೊಂಡಿದೆ. ಈ ಪೈಕಿ ಕೆಲವಕ್ಕೆ ಮಾತ್ರ ಸಾಗಾಟಕ್ಕೆ ಅಮೆರಿಕ ಹೊರಗಿನ ಖರೀದಿದಾರರಿಗೆ ಅವಕಾಶ ನೀಡಲಾಗುತ್ತಿದ್ದು, ತೈಲ ರಫ್ತುಗಳ ಮೇಲೆ ವಾಷಿಂಗ್ಟನ್ ನಿಯಂತ್ರಣ ಮುಂದುವರಿಸಲಿದೆ ಎಂದು ಯುಎಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತ, ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಝುವೆಲಾದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳಲು ಅಮೆರಿಕದ ಅನುಮತಿ ಪಡೆಯಲು ಯುಎಸ್ ಸ್ಟೇಟ್ ಹಾಗೂ ಖಜಾನೆ ಇಲಾಖೆಗಳೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ವರದಿಯಾಗಿದೆ. ರಷ್ಯಾದಿಂದ ಆಗುವ ತೈಲ ಪೂರೈಕೆಯನ್ನು ಕಡಿತಗೊಳಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.