ನಾವು ಪರಮಾಣು ಸಂಘರ್ಷವನ್ನು ನಿಲ್ಲಿಸಿದ್ದೇವೆ, ಮಿಲಿಯಗಟ್ಟಲೆ ಜನರ ಪ್ರಾಣ ಉಳಿಸಿದ್ದೇವೆ: ಸ್ವಯಂ ಬೆನ್ನು ತಟ್ಟಿಕೊಂಡ ಟ್ರಂಪ್
ಡೊನಾಲ್ಡ್ ಟ್ರಂಪ್ | PC : PTI
ಹೊಸದಿಲ್ಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತನ್ನ ಆಡಳಿತವು ಭಾರತ ಮತ್ತು ಪಾಕಿಸ್ತಾನ ನಡುವೆ ಪರಮಾಣು ಸಂಘರ್ಷವನ್ನು ನಿಲ್ಲಿಸಿದೆ, ಇಲ್ಲದಿದ್ದರೆ ಮಿಲಿಯಗಟ್ಟಲೆ ಜನರು ಸಾಯುತ್ತಿದ್ದರು ಎಂದು ಸೋಮವಾರ ಘೋಷಿಸಿದ್ದು, ಇದು ಹಲವರ ಹುಬ್ಬುಗಳನ್ನು ಮೇಲಕ್ಕೇರಿಸಿದೆ. ಭಾರತೀಯ ಉಪಖಂಡದಲ್ಲಿ ಹೆಚ್ಚುತ್ತಿದ್ದ ಮಿಲಿಟರಿ ಉದ್ವಿಗ್ನತೆಗಳ ನಡುವೆ ಕದನ ವಿರಾಮವನ್ನು ಏರ್ಪಡಿಸುವಲ್ಲಿ ಮಧ್ಯಸ್ಥಿಕೆಗಾಗಿ ಹೆಗ್ಗಳಿಕೆಯನ್ನು ಅವರು ಮತ್ತೊಮ್ಮೆ ತನ್ನ ಆಡಳಿತಕ್ಕೆ ಕೊಟ್ಟುಕೊಂಡಿದ್ದಾರೆ.
ವ್ಯಾಪಾರ ರಾಜತಾಂತ್ರಿಕತೆ ಈ ಮಹತ್ವದ ಸಾಧನೆಗೆ ಒಂದು ಕಾರಣವಾಗಿತ್ತು ಎಂದು ಹೇಳಿರುವ ಟ್ರಂಪ್, ಭಾರತ ಮತ್ತು ಪಾಕಿಸ್ತಾನದ ನಾಯಕತ್ವಗಳು ಅಚಲ ಮತ್ತು ಶಕ್ತಿಶಾಲಿಯಾಗಿದ್ದವು. ಅವರು ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಕೊಂಡು ಕದನ ವಿರಾಮಕ್ಕೆ ಒಪ್ಪಿಕೊಂಡು ಬುದ್ಧಿವಂತಿಕೆ ಮತ್ತು ವಿವೇಚನೆಯನ್ನು ಪ್ರದರ್ಶಿಸಿದ್ದಾರೆ ಎಂದರು.
ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ‘ಉದ್ವಿಗ್ನತೆಯನ್ನು ಶಮನಗೊಳಿಸಲು ಅಮೆರಿಕವು ವ್ಯಾಪಾರವನ್ನು ಅಸ್ತ್ರವನ್ನಾಗಿ ಬಳಸಿಕೊಂಡಿತ್ತು. ನಾವು ನಿಮ್ಮೊಂದಿಗೆ ಬಹಳಷ್ಟು ವ್ಯಾಪಾರ ನಡೆಸಲಿದ್ದೇವೆ. ನೀವು ಸಂಘರ್ಷವನ್ನು ನಿಲ್ಲಿಸಿದರೆ ನಾವು ನಿಮ್ಮೊಂದಿಗೆ ವ್ಯಾಪಾರ ನಡೆಸುತ್ತೇವೆ, ಇಲ್ಲದಿದ್ದರೆ ನಿಮ್ಮೊಂದಿಗೆ ಯಾವುದೇ ವ್ಯಾಪಾರವಿರುವುದಿಲ್ಲ ಎಂದು ನಾನು ಅವರಿಗೆ ಹೇಳಿದ್ದೆ ’ ಎಂದು ಹೇಳಿದರು.
ಪರಿಸ್ಥಿತಿಯ ಗಂಭೀರತೆಯನ್ನು ಒತ್ತಿ ಹೇಳಿದ ಟ್ರಂಪ್,‘ಅದು ಕೆಟ್ಟ ಪರಮಾಣು ಯುದ್ಧವಾಗುತ್ತಿತ್ತು. ಮಿಲಿಗಟ್ಟಲೆ ಜನರು ಸಾಯುತ್ತಿದ್ದರು. ಹೀಗಾಗಿ ನಮ್ಮ ಕೆಲಸದ ಬಗ್ಗೆ ನನಗೆ ತುಂಬ ಹೆಮ್ಮೆಯಿದೆ ’ಎಂದರು.
ಈ ನಡುವೆ ಸೋಮವಾರ ದಿಲ್ಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಏರ್ ಮಾರ್ಷಲ್ ಎ.ಕೆ.ಭಾರ್ತಿ ಅವರು, ಪರಮಾಣು ಮೂಲಸೌಕರ್ಯ ಹೊಂದಿದೆಯೆಂದು ಶಂಕಿಸಲಾಗಿರುವ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಕಿನಾರಾ ಹಿಲ್ಸ್ ಮೇಲೆ ಭಾರತೀಯ ವಾಯುಪಡೆಯು ದಾಳಿ ನಡೆಸಿತ್ತು ಎನ್ನುವುದನ್ನು ನಿರಾಕರಿಸಿದರು. ಅಲ್ಲೇನಿದೆ ಎನ್ನುವುದು ವಾಯುಪಡೆಗೆ ಗೊತ್ತಿಲ್ಲ,ಅದನ್ನು ಗುರಿಯಾಗಿಸಿಕೊಂಡು ದಾಳಿಯನ್ನೂ ಅದು ನಡೆಸಿಲ್ಲ ಎಂದು ಭಾರ್ತಿ ಸ್ಪಷ್ಟಪಡಿಸಿದರು.