ಶ್ವೇತಭವನದಲ್ಲಿ ಟ್ರಂಪ್ ರನ್ನು ಭೇಟಿಯಾದ ಝಿಯೋನಿಸಂ ವಿರೋಧಿ ಯಹೂದಿ ನಾಯಕರ ನಿಯೋಗ
ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಯುದ್ಧವನ್ನು ಅಂತ್ಯಗೊಳಿಸುವಂತೆ ಆಗ್ರಹ: ವರದಿ
ಡೊನಾಲ್ಡ್ ಟ್ರಂಪ್ | Photo Credit : aljazeera.com
ವಾಷಿಂಗ್ಟನ್: ಝಿಯೋನಿಸಂ ವಿರೋಧಿ ನಿಲುವು ಹೊಂದಿರುವ ಹಸಿಡಿಕ್ ಯಹೂದಿ ಧಾರ್ಮಿಕ ನಾಯಕರ ನಿಯೋಗವು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸೆ. 3ರಂದು ಶ್ವೇತಭವನದಲ್ಲಿ ಭೇಟಿಯಾಯಿತು.
ಹಸಿಡಿಕ್ ಯಹೂದಿ ಸಮುದಾಯದ ಹಲವು ರಬ್ಬಿಗಳು ನಿಯೋಗದಲ್ಲಿದ್ದರು. ನಿಯೋಗವು ಟ್ರಂಪ್ ಅವರಿಗೆ ಪತ್ರವೊಂದನ್ನು ನೀಡಿದ್ದು, ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಯುದ್ಧವನ್ನು ಅಂತ್ಯಗೊಳಿಸುವಂತೆ ಒತ್ತಾಯಿಸಿತು ಎಂದು Aljazeera ವರದಿ ಮಾಡಿದೆ.
‘ಝಿಯೋನಿಸ್ಟ್ ಗಳು ಮತ್ತು ಇಸ್ರೇಲಿ ನಾಯಕರು ಇಡೀ ಯಹೂದಿ ಸಮುದಾಯದ ಪರವಾಗಿ ಮಾತನಾಡುವುದಿಲ್ಲ’ ಎಂಬ ನಿಲುವನ್ನು ರಬ್ಬಿಗಳು ಪತ್ರದಲ್ಲಿ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಇಸ್ರೇಲ್ ನಲ್ಲಿ ಯೆಶಿವಾ ವಿದ್ಯಾರ್ಥಿಗಳ ಸೇನಾ ನೇಮಕಾತಿ ವಿವಾದವೂ ಭೇಟಿಯ ವೇಳೆ ಪ್ರಸ್ತಾಪವಾಯಿತು. ಯೆಶಿವಾಗಳಲ್ಲಿ ಪೂರ್ಣಾವಧಿ ಧಾರ್ಮಿಕ ಅಧ್ಯಯನ ನಡೆಸುವ ಅಲ್ಟ್ರಾ ಆರ್ಥಡಾಕ್ಸ್ ಯಹೂದಿ ವಿದ್ಯಾರ್ಥಿಗಳಿಗೆ ದೀರ್ಘಕಾಲದಿಂದ ಸೇನಾ ಸೇವೆಯಿಂದ ವಿನಾಯಿತಿ ನೀಡಲಾಗುತ್ತಿತ್ತು. ಆದರೆ, ಈ ವಿನಾಯಿತಿ ಇತ್ತೀಚಿನ ವರ್ಷಗಳಲ್ಲಿ ಇಸ್ರೇಲ್ ನಲ್ಲಿ ತೀವ್ರ ರಾಜಕೀಯ ಹಾಗೂ ಸಾಮಾಜಿಕ ವಿವಾದಕ್ಕೆ ಕಾರಣವಾಗಿದೆ.
ನಿಯೋಗವನ್ನು ರಬ್ಬಿ ಆರನ್ ಟೀಟೆಲ್ ಬಾಮ್ ಮುನ್ನಡೆಸಿದರು. ಅವರು ಸ್ಯಾಟ್ಮಾರ್ ಹಸಿಡಿಕ್ ಸಮುದಾಯದ ಪ್ರಮುಖ ಧಾರ್ಮಿಕ ನಾಯಕರಲ್ಲಿ ಒಬ್ಬರು. ಸ್ಯಾಟ್ಮಾರ್ ಚಳವಳಿಯು ಇಸ್ರೇಲ್ ರಾಜ್ಯದ ಸ್ಥಾಪನೆ ಮತ್ತು ಝಿಯೋನಿಸಂ ಅನ್ನು ಧಾರ್ಮಿಕ ಕಾರಣಗಳ ಆಧಾರದಲ್ಲಿ ವಿರೋಧಿಸುತ್ತದೆ.
ಶ್ವೇತಭವನದಲ್ಲಿ ಯಹೂದಿ ಧಾರ್ಮಿಕ ನಾಯಕರೊಂದಿಗೆ ಈ ಹಿಂದೆ ನಡೆದ ಸಭೆಗಳಿಗಿಂತ ಈ ಭೇಟಿ ಭಿನ್ನವಾಗಿತ್ತು. ಸುಮಾರು 50 ವರ್ಷಗಳ ಬಳಿಕ ಶ್ವೇತಭವನದಲ್ಲಿ ಇಂತಹ ಸಭೆ ನಡೆದಿರುವುದು ವಿಶೇಷ ಎಂದು ಅಮೆರಿಕದ ಕೆಲವು ಯಹೂದಿ ಮಾಧ್ಯಮಗಳು ವರದಿ ಮಾಡಿವೆ.
ಯಹೂದಿ ಸಮುದಾಯವನ್ನು ಪ್ರತಿನಿಧಿಸುವವರು ಯಾರು ಎಂಬ ಪ್ರಶ್ನೆ, ಗಾಝಾದಲ್ಲಿನ ಇಸ್ರೇಲ್–ಹಮಾಸ್ ಯುದ್ಧ ಹಾಗೂ ಯೆಶಿವಾ ವಿದ್ಯಾರ್ಥಿಗಳ ಸೇನಾ ನೇಮಕಾತಿ ಸೇರಿದಂತೆ ಪ್ರಮುಖ ವಿಷಯಗಳು ಟ್ರಂಪ್ ಮತ್ತು ಹಸಿಡಿಕ್ ರಬ್ಬಿಗಳ ಭೇಟಿಯಲ್ಲಿ ಚರ್ಚೆಗೆ ಬಂದವು ಎಂದು ತಿಳಿದು ಬಂದಿದೆ.