×
Ad

ಸಿಂಧೂ ನೀರನ್ನು ತಿರುಗಿಸುವ ಉದ್ದೇಶದ ಯಾವುದೇ ರಚನೆಯನ್ನು ಧ್ವಂಸಗೊಳಿಸುತ್ತೇವೆ: ಭಾರತಕ್ಕೆ ಪಾಕ್ ರಕ್ಷಣಾ ಸಚಿವರ ಬೆದರಿಕೆ

Update: 2025-05-03 22:47 IST

ಖವಾಜಾ ಆಸಿಫ್ | PC : NDTV 

ಇಸ್ಲಮಾಬಾದ್: ಸಿಂಧು ನದಿ ನೀರು ಹಂಚಿಕೆ ಒಪ್ಪಂದದಡಿ ಪಾಕಿಸ್ತಾನಕ್ಕೆ ಸೇರಬೇಕಾಗಿರುವ ನೀರನ್ನು ತಿರುಗಿಸುವ ಉದ್ದೇಶದಿಂದ ಭಾರತ ನಿರ್ಮಿಸುವ ಯಾವುದೇ ರಚನೆಯನ್ನು ಪಾಕಿಸ್ತಾನ ಧ್ವಂಸಗೊಳಿಸುತ್ತದೆ ಎಂದು ಆ ದೇಶದ ರಕ್ಷಣಾ ಸಚಿವ ಖವಾಜಾ ಆಸಿಫ್ ಬೆದರಿಕೆ ಒಡ್ಡಿದ್ದಾರೆ.

ನದಿ ನೀರನ್ನು ತಿರುಗಿಸುವ ಯಾವುದೇ ಕ್ರಮವನ್ನು ಪಾಕಿಸ್ತಾನದ ವಿರುದ್ಧದ ಆಕ್ರಮಣ ಎಂದು ಪರಿಗಣಿಸಲಾಗುವುದು ಎಂದವರು ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ. ಎಪ್ರಿಲ್ 22ರಂದು ಪಹಲ್ಗಾಮ್‍ನಲ್ಲಿ ಭಯೋತ್ಪಾದಕರ ದಾಳಿ ನಡೆದ ಬಳಿಕ ದಶಕಗಳ ಹಿಂದಿನ ಸಿಂಧು ನದಿ ನೀರು ಹಂಚಿಕೆ ಒಪ್ಪಂದವನ್ನು ಭಾರತ ಅಮಾನತುಗೊಳಿಸಿದೆ. ಒಪ್ಪಂದದಡಿ ಸಿಂಧೂ ನದಿಯ 80%ದಷ್ಟು ನೀರು ಪಾಕಿಸ್ತಾನಕ್ಕೆ ಹರಿಯುತ್ತದೆ.

ಭಾರತವು ಸಿಂಧೂ ಜಲಾನಯನ ಪ್ರದೇಶದಲ್ಲಿ ಅಣೆಕಟ್ಟು ನಿರ್ಮಿಸಿದರೆ ಪಾಕಿಸ್ತಾನ ಯಾವ ರೀತಿ ಪ್ರತಿಕ್ರಿಯಿಸಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಆಸಿಫ್ `ಭಾರತವು ಸಿಂಧೂ ನದಿ ನೀರನ್ನು ತಿರುಗಿಸುವುದು ಪಾಕಿಸ್ತಾನದ ವಿರುದ್ಧದ ಆಕ್ರಮಣವಾಗಲಿದೆ. ಈ ನಿಟ್ಟಿನಲ್ಲಿ ಅವರು ಯಾವುದೇ ರಚನೆಗಳನ್ನು ನಿರ್ಮಿಸಿದರೂ ಪಾಕಿಸ್ತಾನ ಅದನ್ನು ನಾಶಗೊಳಿಸುತ್ತದೆ' ಎಂದು ಹೇಳಿರುವುದಾಗಿ ವರದಿಯಾಗಿದೆ. ಕಾಶ್ಮೀರದ ವಿಷಯದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಪೂರ್ಣ ಪ್ರಮಾಣದ ಯುದ್ಧ ನಡೆಯುತ್ತದೆ ಎಂದು ಈ ಹಿಂದೆ ಆಸಿಫ್ ಬೆದರಿಕೆ ಒಡ್ಡಿದ್ದರು.

ಪಾಕಿಸ್ತಾನಕ್ಕೆ ಹರಿಯುವ ಸಿಂಧೂ ನದಿ ನೀರನ್ನು ತಡೆಯುವುದು ಯುದ್ಧದ ಕೃತ್ಯವೆಂದು ಪರಿಗಣಿಸಲಾಗುತ್ತದೆ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಝ್ ಷರೀಫ್ ಕೂಡಾ ಈ ಹಿಂದೆ ಹೇಳಿಕೆ ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News