ಲೆಬನಾನ್, ಸಿರಿಯಾ, ಗಾಝಾದಿಂದ ಪಡೆಗಳನ್ನು ಹಿಂತೆಗೆದುಕೊಳ್ಳುವುದಿಲ್ಲ: ಇಸ್ರೇಲ್ ರಕ್ಷಣಾ ಸಚಿವ
Update: 2026-07-01 21:11 IST
ಇಸ್ರೇಲ್ ಕಾಟ್ಜ್ | Photo Credit : AP
ಜೆರುಸಲೆಮ್, ಜು.1: ಲೆಬನಾನ್, ಸಿರಿಯಾ ಮತ್ತು ಗಾಝಾದಲ್ಲಿ ಸ್ಥಾಪಿಸಲಾಗಿರುವ ಸ್ವಯಂ ಘೋಷಿತ `ಸುರಕ್ಷತಾ ವಲಯಗಳಲ್ಲಿ' ಇಸ್ರೇಲ್ ಪಡೆಗಳು ಹಿಂತೆಗೆದುಕೊಳ್ಳುವ ಯಾವುದೇ ನಿರ್ದಿಷ್ಟ ಕಾಲಮಿತಿಯಿಲ್ಲದೆ ಮುಂದುವರಿಯಲಿವೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಬುಧವಾರ ತಿಳಿಸಿದ್ದಾರೆ.
ನಮ್ಮ ನಿವಾಸಿಗಳು ಮತ್ತು ಸಮುದಾಯಗಳನ್ನು ರಕ್ಷಿಸಲು ಐಡಿಎಫ್ (ಇಸ್ರೇಲ್ ರಕ್ಷಣಾ ಪಡೆ) ಲೆಬನಾನ್, ಸಿರಿಯಾ ಮತ್ತು ಗಾಝಾದ ಸುರಕ್ಷತಾ ವಲಯಗಳಲ್ಲಿ ಅನಿರ್ದಿಷ್ಟಾವಧಿಯವರೆಗೆ ಉಳಿಯಲಿದೆ. ನಾವು ಸುರಕ್ಷತಾ ವಲಯಗಳಿಂದ ಹಿಂದೆ ಸರಿಯುವುದಿಲ್ಲ. ಲೆಬನಾನ್‍ನಲ್ಲಿನ ತನ್ನ ಕಾರ್ಯಾಚರಣೆಗಳ ಹಿನ್ನೆಲೆಯಲ್ಲಿ ಇರಾನ್ ಏನಾದರೂ ಇಸ್ರೇಲ್ ಮೇಲೆ ದಾಳಿ ಮಾಡಿದರೆ, ಆ ದೇಶದ ಮೇಲೆ ಸಂಪೂರ್ಣ ಶಕ್ತಿಯೊಂದಿಗೆ ಪ್ರತಿದಾಳಿ ನಡೆಸಲಾಗುವುದು ಎಂದು ಕಾಟ್ಜ್ ಎಚ್ಚರಿಕೆ ನೀಡಿರುವುದಾಗಿ ವರದಿಯಾಗಿದೆ.