ಉನ್ನತ ಹುದ್ದೆಗಳಲ್ಲಿ ಮಹಿಳೆಯರಿದ್ದ ಮಾತ್ರಕ್ಕೆ ಸಮಾನತೆ ಸಾಧಿಸಿದಂತಲ್ಲ: ನ್ಯಾ. ನಾಗರತ್ನ
ಕಾನೂನು ವೃತ್ತಿಯಲ್ಲಿ ಮೂರನೇ ಒಂದರಷ್ಟು ಮೀಸಲಾತಿಗೆ ಒತ್ತಾಯ
ನ್ಯಾಯಮೂರ್ತಿ ಬಿ.ವಿ. ನಾಗರತ್ನ (Photo: PTI)
ಲಂಡನ್: ಮಹಿಳೆಯರು ಉನ್ನತ ಸಾರ್ವಜನಿಕ ಹುದ್ದೆಗಳನ್ನು ಅಲಂಕರಿಸಿರುವುದೇ ಸಮಾಜದಲ್ಲಿ ಸಮಾನತೆ ಸಾಧನೆಯಾಗಿದೆ ಎಂಬುದಕ್ಕೆ ಸಾಕ್ಷಿಯಲ್ಲ. ಮಹಿಳೆಯರಿಗೆ ಕಾನೂನಿನ ಮೂಲಕ ಖಾತರಿಪಡಿಸಿರುವ ಹಕ್ಕುಗಳನ್ನು ವಾಸ್ತವವಾಗಿ ಚಲಾಯಿಸಲು ಎದುರಾಗುವ ಅಡೆತಡೆಗಳು, ವಿಳಂಬ ಮತ್ತು ಸಾಮಾಜಿಕ ಪರಿಣಾಮಗಳು ಇನ್ನೂ ಸವಾಲಾಗಿವೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಹೇಳಿದ್ದಾರೆ.
ನ. 18ರಂದು ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಸಾಮರ್ವಿಲ್ಲೆ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ನೆಲಿಯಾ ಸೊರಾಬ್ಜಿ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಉದ್ಘಾಟನಾ ಉಪನ್ಯಾಸ ನೀಡಿದ ಅವರು, ಉನ್ನತ ಸಾರ್ವಜನಿಕ ಹುದ್ದೆಗಳಲ್ಲಿ ಮಹಿಳೆಯರ ಉಪಸ್ಥಿತಿಯೊಂದರಿಂದಲೇ ಸಮಾಜದಾದ್ಯಂತ ಸಮಾನತೆ ಸ್ಥಾಪಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
‘The Doors She Opened: Cornelia Sorabji and the Progress of Women’s Rights in India’ ವಿಷಯದ ಕುರಿತು ಮಾತನಾಡಿದ ಅವರು, ಮಹಿಳೆಯೊಬ್ಬಳು ಉನ್ನತ ಹುದ್ದೆಯಲ್ಲಿದ್ದರೂ ಸಮಾಜದ ಇತರ ಮಹಿಳೆಯರು ಶಿಕ್ಷಣ, ಉದ್ಯೋಗ, ಆಸ್ತಿ ಹಕ್ಕು ಮತ್ತು ಪರಿಣಾಮಕಾರಿ ಕಾನೂನು ಪರಿಹಾರಗಳಿಂದ ವಂಚಿತರಾಗಿರಬಹುದು ಎಂದು ಹೇಳಿದರು.
ತಾರತಮ್ಯ ನೀತಿಗಳನ್ನು ತೊಡೆದುಹಾಕಿದ ಅಥವಾ ಮಹಿಳೆಯರಿಗೆ ಅನುಕೂಲಕರ ಶಾಸನಗಳನ್ನು ಜಾರಿಗೊಳಿಸಿದ ಸಂಖ್ಯೆಗಳ ಆಧಾರದಲ್ಲಿ ಮಾತ್ರ ಮಹಿಳಾ ಹಕ್ಕುಗಳ ಪ್ರಗತಿಯನ್ನು ಅಳೆಯಲಾಗದು. ಹೆಚ್ಚು ಶಾಸನಗಳನ್ನು ಜಾರಿಗೊಳಿಸಿದ ಮಾತ್ರಕ್ಕೆ ಮಹಿಳೆಯರ ಮೇಲಿನ ಹಿಂಸೆಯನ್ನು ನಿವಾರಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.
ಜಾತಿ, ವರ್ಗ, ಅಂಗವೈಕಲ್ಯ, ಧರ್ಮ ಮತ್ತು ಪ್ರಾಂತ್ಯದ ಆಧಾರದಲ್ಲಿ ವೇತನರಹಿತ ಗೃಹಕಾರ್ಯ ಹಾಗೂ ಆರೈಕೆ ವಲಯದಲ್ಲಿ ತೊಡಗಿರುವ ಮಹಿಳೆಯರ ನಡುವೆ ಉಂಟಾಗುವ ಅಸಮಾನತೆಗಳತ್ತ ಅವರು ಗಮನ ಸೆಳೆದರು.
ಕಾನೂನು ವೃತ್ತಿಯಲ್ಲಿ ಮಹಿಳಾ ವಕೀಲರಿಗೆ ಮೀಸಲಾತಿ ಇರಬೇಕು ಎಂದೂ ಅವರು ಪ್ರತಿಪಾದಿಸಿದರು. ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳು, ಕಾನೂನು ನೆರವು ವಲಯ ಸೇರಿದಂತೆ ಸರಕಾರಿ ಸಮಿತಿಗಳಲ್ಲಿ ಮಹಿಳಾ ವಕೀಲರಿಗೆ ಮೂರನೇ ಒಂದರಷ್ಟು ಮೀಸಲಾತಿ ಇರಬೇಕು ಎಂದು ತಾವು ನಿರಂತರವಾಗಿ ವಾದಿಸುತ್ತಿರುವುದಾಗಿ ಹೇಳಿದರು.
ಈ ಪ್ರಾತಿನಿಧ್ಯವು ಕಾನೂನು ವೃತ್ತಿಗೆ ಪ್ರವೇಶಿಸುವ ಹಕ್ಕನ್ನು ಮೀರಿ ಇರಬೇಕು. ಸರಕಾರವನ್ನು ಪ್ರತಿನಿಧಿಸುವುದು, ಸಾರ್ವಜನಿಕ ಸಂಸ್ಥೆಗಳಿಗೆ ಸಲಹೆ ನೀಡುವುದು ಹಾಗೂ ಕಾನೂನು ಅಧಿಕಾರ ಚಲಾಯಿಸುವ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಅವಕಾಶಗಳಲ್ಲಿಯೂ ಮಹಿಳೆಯರಿಗೆ ಪ್ರಾತಿನಿಧ್ಯ ದೊರೆಯಬೇಕು ಎಂದು ಅವರು ಪ್ರತಿಪಾದಿಸಿದರು.
ಭಾರತದಲ್ಲಿ ಅನೇಕ ಮಹಿಳೆಯರು ಅತ್ಯಂತ ಅರ್ಹತೆ ಹೊಂದಿದ್ದರೂ, ಶಿಕ್ಷಣ ಅಥವಾ ವೃತ್ತಿಯನ್ನು ಮುಂದುವರಿಸುವುದು ಕಷ್ಟಕರವಾಗುತ್ತಿದೆ ಎಂದು ಹೇಳುವ ಮೂಲಕ ನ್ಯಾ. ಬಿ.ವಿ. ನಾಗರತ್ನ ಉಪನ್ಯಾಸ ಮುಕ್ತಾಯಗೊಳಿಸಿದರು.
ಸಂವಿಧಾನದಲ್ಲಿ ಅಡಕವಾಗಿರುವ ಅಮೂಲ್ಯ ಗುರಿಗಳನ್ನು ಸಾಧಿಸಬೇಕಾದರೆ, ಈ ಗಂಭೀರ ವಿಷಯದ ಕುರಿತು ಭಾರತೀಯ ಸಮಾಜ, ನಿರ್ದಿಷ್ಟವಾಗಿ ಪುರುಷ ಸಮಾಜ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಅವರು ಕಿವಿಮಾತು ಹೇಳಿದರು.