×
Ad

ಗಾಝಾದಲ್ಲಿ ಇಸ್ರೇಲ್ ಕದನವಿರಾಮ ಘೋಷಿಸಬೇಕೆಂಬ ವಿಶ್ವಸಂಸ್ಥೆ ಭದ್ರತಾ ಮಂಡಳಿ ನಿರ್ಣಯವನ್ನು ಮತ್ತೆ ವೀಟೋ ಮಾಡಿ ವ್ಯಾಪಕ ಟೀಕೆಗೊಳಗಾದ ಅಮೆರಿಕ

Update: 2024-02-21 17:03 IST

Photo: PTI

ವಾಷಿಂಗ್ಟನ್:‌ ಗಾಝಾದಲ್ಲಿ ಇಸ್ರೇಲ್‌ ಕದನ ವಿರಾಮ ಘೋಷಿಸಬೇಕೆಂದು ಹೇಳುವ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಕರಡು ನಿರ್ಣಯವನ್ನು ಅಮೆರಿಕಾ ಮತ್ತೆ ವೀಟೋ ಮಾಡಿದೆ. ಅಮೆರಿಕಾದ ಈ ನಡೆ ಅದರ ಎದುರಾಳಿ ದೇಶಗಳು ಮತ್ತು ಮಿತ್ರದೇಶಗಳಿಂದಲೂ ಟೀಕೆಗೆ ಗುರಿಯಾಗಿದೆ.

ವಿಶ್ವ ಸಂಸ್ಥೆಯಲ್ಲಿನ ಚೀನಾ ಪ್ರತಿನಿಧಿ ಝಂಗ್‌ ಜುನ್‌ ಪ್ರತಿಕ್ರಿಯಿಸಿ, “ಅಮೆರಿಕಾದ ಕ್ರಮದಿಂದ ತುಂಬಾ ನಿರಾಸೆಯಾಗಿದೆ, ಈ ವೀಟೋ ತಪ್ಪು ಸಂದೇಶ ರವಾನಿಸುತ್ತದೆ ಹಾಗೂ ಗಾಝಾವನ್ನು ಇನ್ನಷ್ಟು ಅಪಾಯಕಾರಿ ವಲಯವನ್ನಾಗಿಸುತ್ತದೆ, ಇನ್ನಷ್ಟು ನರಮೇಧಕ್ಕೆ ಹಸಿರು ನಿಶಾನೆ ನೀಡಿದಂತಾಗುತ್ತದೆ,” ಎಂದು ಹೇಳಿದ್ದಾರೆ.

ವಿಶ್ವ ಸಂಸ್ಥೆಯ ರಷ್ಯಾ ರಾಯಭಾರಿ ವಸಿಲಿ ನೆಬೆನ್ಝಿಯಾ ಮಾತನಾಡಿ ಅಮೆರಿಕಾದ ವೀಟೋ ಭದ್ರತಾ ಮಂಡಳಿಯ ಇತಿಹಾಸದಲ್ಲಿ ಇನ್ನೊಂದು ಕಪ್ಪು ಪುಟ, ಗಾಝಾದಲ್ಲಿ ಇಸ್ರೇಲ್‌ ತನ್ನ ಅಮಾನವೀಯ ಕ್ರಮಗಳನ್ನು ಮುಂದುವರಿಸುವಂತಾಗಲು ಹೆಚ್ಚು ಸಮಯ ಪಡೆಯುವ ತಂತ್ರವಿದು,” ಎಂದು ಅವರು ಹೇಳಿದ್ದಾರೆ.

ಫ್ರಾನ್ಸ್‌ ರಾಯಭಾರಿ ಪ್ರತಿಕ್ರಿಯಿಸಿ, ನಿರ್ಣಯ ವೀಟೋ ಆಗಿರುವುದಕ್ಕೆ ಅಸಮಾಧಾನ ಸೂಚಿಸಿ ಫ್ರಾನ್ಸ್‌ ಎಲ್ಲಾ ಒತ್ತೆಯಾಳುಗಳ ಬಿಡುಗಡೆಗೆ ಮತ್ತು ಕದನವಿರಾಮಕ್ಕಾಗಿ ಶ್ರಮಿಸುವುದು ಎಂದು ಹೇಳಿದರು.

ಅಮೆರಿಕಾದ ವೀಟೋ ವಿಷಾದನೀಯ ಎಂದು ಫೆಲೆಸ್ತೀನಿ ರಾಯಭಾರಿ ರಿಯಾದ್‌ ಮನ್ಸೂರ್‌ ಹೇಳಿದರಲ್ಲದೆ ಭದ್ರತಾ ಮಂಡಳಿ ಮತ್ತು ವಿಶ್ವಸಂಸ್ಥೆಯ ಎಲ್ಲಾ ಅಂಗಸಂಸ್ಥೆಗಳ ಬಾಗಿಲು ತಟ್ಟುವುದನ್ನು ಫೆಲೆಸ್ತೀನ್‌ ಮುಂದುವರಿಸಲಿದೆ ಎಂದು ಅವರು ಹೇಳಿದರು.

ಹಮಾಸ್‌ ಕೂಡ ಪ್ರತಿಕ್ರಿಯಿಸಿ ಅಮೆರಿಕಾದ ವೀಟೋ ಇಸ್ರೇಲ್‌ಗೆ ಫೆಲೆಸ್ತೀನೀಯರನ್ನು ಹತ್ಯೆಗೈದು ನಿರಾಶ್ರಿತರನ್ನಾಗಿಸುವ ತನ್ನ ಉದ್ದೇಶ ಈಡೇರಿಸಲು ನೆರವಾಗಲಿದೆ ಎಂದು ಹೇಳಿದೆ.

ಸೌದಿ ಅರೇಬಿಯಾ ಮತ್ತು ಖತರ್‌ ಕೂಡ ಅಮೆರಿಕಾದ ಕ್ರಮವನ್ನು ಖಂಡಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News