ಬಿಜೆಪಿ ‘ಸಿದ್ಧಾಂತ’ ಸಮರ್ಥಿಸುವ ಚಲನಚಿತ್ರಗಳು
ರಾಷ್ಟ್ರೀಯ ಭದ್ರತಾ ಸಂಬಂಧಿ ಕತೆಗಳನ್ನು ಹೀಗೆ ಅತಿರಂಜಿತವಾಗಿ ಚಿತ್ರಿಸಿ ಚಲನಚಿತ್ರ ಮಾಡಿದರೆ ತಪ್ಪು ಸಂದೇಶ ರವಾನೆಯಾಗುತ್ತದೆ. ಭಾರತದ ಮುಸ್ಲಿಮರಿಗೂ ಮತ್ತು ಭಯೋತ್ಪಾದಕ ಚುಟುವಟಿಕೆಗಳಿಗೂ ಅನಗತ್ಯವಾಗಿ ತಳಕು ಹಾಕುವ ಈ ಪ್ರಯತ್ನ ಮತ ವಿಭಜನೆಯ ಕಾರ್ಯ ತಂತ್ರವಾಗಿದೆ. ನರೇಂದ್ರ ಮೋದಿಯವರು ನಿಜಕ್ಕೂ ವಿಕಸಿತ ಭಾರತದ ಕನಸುಗಾರನಾಗಿದ್ದರೆ ಮತೀಯ ಕಥಾನಕಗಳ ಸೃಷ್ಟಿಯ ಅಗತ್ಯವೇ ಬೀಳುವುದಿಲ್ಲ. ಭಾರತವನ್ನು ಅಭಿವೃದ್ಧಿ ಪಡಿಸಲು ಸಾಧ್ಯವಾಗಿಲ್ಲ. ಹಾಗಾಗಿಯೇ ಚರಿತ್ರೆಯಲ್ಲಿನ ಮತೀಯ ಘಟನೆಗಳನ್ನು ಹೆಕ್ಕಿ ಹಿಂದೂ-ಮುಸ್ಲಿಮ್ ವಿಭಜನೆಯ ಕಥಾನಕ ರೂಪಿಸಲಾಗುತ್ತಿದೆ. ಭಾರತದ ಸೌಹಾರ್ದ ಪರಂಪರೆಯನ್ನು ಅಳಿಸಿ ಹಾಕುವ ಪ್ರಯತ್ನಗಳು ಯಾವತ್ತೂ ಸಫಲವಾಗಿಲ್ಲ. ವಿವಿಧತೆಯಲ್ಲಿ ಏಕತೆ ಭಾರತದ ನೈಜ ಶಕ್ತಿಯಾಗಿದೆ.
ಚಲನಚಿತ್ರ ಮಾಧ್ಯಮ ಅತ್ಯಂತ ಪ್ರಭಾವಶಾಲಿಯಾದುದು. ಸಾಹಿತ್ಯ, ಸಂಗೀತ, ಅಭಿನಯ ಮಾತು ನೃತ್ಯ ಕಲಾ ಪ್ರಕಾರಗಳ ಸಂಗಮದಂತಿರುವ ಚಲನಚಿತ್ರ ತಂತ್ರಜ್ಞಾನದ ವಿಕಾಸದ ಫಲವಾಗಿ ಹೆಚ್ಚು ಜನಪ್ರಿಯವಾಗಿದೆ. ರಂಗಭೂಮಿ ಮತ್ತು ಇತರ ಪ್ರದರ್ಶಕ ಕಲೆಗಳು ಭಾರತೀಯ ಜ್ಞಾನ ಪರಂಪರೆಯ ಪ್ರಸಾರದಲ್ಲಿ ಮಹತ್ವದ ಪಾತ್ರ ವಹಿಸಿವೆ. ರಾಮಾಯಣ ಮತ್ತು ಮಹಾಭಾರತದಂತಹ ಮಹಾಕಾವ್ಯಗಳು ಜನಮಾನಸಕ್ಕೆ ಹತ್ತಿರವಾಗಿದ್ದೇ ಪ್ರದರ್ಶಕ ಕಲೆಗಳ ಕ್ರಿಯಾಶೀಲತೆಯ ಕಾರಣಕ್ಕೆ.
ಭಾರತದಲ್ಲಿ ಚಲನಚಿತ್ರಗಳಿಗೆ ಸುದೀರ್ಘ ಇತಿಹಾಸವಿಲ್ಲ. 1896ರಲ್ಲಿ ಮುಂಬೈಯ ಕೆಲವರು ಚಲನಚಿತ್ರ ನಿರ್ಮಾಣಕ್ಕೆ ಪ್ರಯತ್ನಿಸಿದರೂ ಅದು ಪೂರ್ಣ ಪ್ರಮಾಣದಲ್ಲಿ ಯಶಸ್ಸು ಪಡೆಯಲಿಲ್ಲ. 1913ರಲ್ಲಿ ತೆರೆ ಕಂಡ, ದಾದಾ ಸಾಹೇಬ್ ಫಾಲ್ಕೆ ನಿರ್ಮಾಣ ಮತ್ತು ನಿರ್ದೇಶನದ ರಾಜಾ ಹರಿಶ್ಚಂದ್ರ ಮೂಕಿ ಚಲನಚಿತ್ರವೇ ‘ಮೊದಲ ಚಿತ್ರ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 1931ರಲ್ಲಿ ತೆರೆ ಕಂಡ, ಅರದೇಶಿ ಇರಾನಿ ನಿರ್ದೇಶನದ ‘ಆಲಮ್‌ಆರಾ’ ಚಲನಚಿತ್ರ ಮೊದಲ ಟಾಕಿ (ಮಾತನಾಡುವ)ಚಿತ್ರವೆನಿಸಿಕೊಂಡಿದೆ. 1940ರ ನಂತರ ಭಾರತೀಯ ಚಲನಚಿತ್ರ ರಂಗದ ಸುವರ್ಣ ಯುಗ ಆರಂಭವಾಯಿತು. ಅಲ್ಲಿಂದ ಟೆಲಿವಿಷನ್ ಮತ್ತು ಧಾರಾವಾಹಿ ಯುಗ ಆರಂಭವಾಗುವವರೆಗೂ ಚಲನಚಿತ್ರಗಳು ಅನಭಿಷಕ್ತ ದೊರೆಗಳಂತೆ ಮೆರೆದವು. ಭಾರತೀಯರ ಚಿಂತನಾ ಕ್ರಮದಲ್ಲಿ ಗಣನೀಯ ಪ್ರಮಾಣದಲ್ಲಿ ಬದಲಾವಣೆ ಮೂಡಿಸಿದ ಚಲನಚಿತ್ರಗಳು ಯುವ ಸಮುದಾಯವನ್ನು ಸಾಕಷ್ಟು ಪ್ರಭಾವಿಸಿದ್ದವು. ಪ್ರಥ್ವಿರಾಜ್ ಕಪೂರ್, ರಾಜ್ ಕಪೂರ್ ಮತ್ತವರ ನಂತರದ ತಲೆಮಾರು ಚಲನಚಿತ್ರ ರಂಗವನ್ನು ಮಾತ್ರ ಉಸಿರಾಡುತ್ತಿತ್ತು. ಚೋಪ್ರಾ ಕುಟುಂಬ, ಕಪೂರ್ ಕುಟುಂಬ ಸೇರಿದಂತೆ ಹಲವಾರು ಮನೆತನಗಳು ಚಲನಚಿತ್ರ ರಂಗವನ್ನು ಅವಲಂಬಿಸಿ ಬದುಕು ಸಾಗಿಸುತ್ತಿವೆ. ದೇವದಾಸ್ ಖ್ಯಾತಿಯ ದಿಲೀಪ್ ಕುಮಾರ್, ಕಪೂರ್ ಕುಟುಂಬದ ಶಶಿ ಕಪೂರ್, ಶಮ್ಮಿ ಕಪೂರ್, ರಿಷಿ ಕಪೂರ್ ಅಷ್ಟೇ ಯಾಕೆ ಇತ್ತೀಚಿನ ರಣಬೀರ್ ಕಪೂರ್ ಚಲನಚಿತ್ರ ರಂಗಕ್ಕೆ ಸಮರ್ಪಿಸಿಕೊಂಡಿದ್ದಾರೆ. ದೇವಾನಂದ, ಸಂಜೀವ್ ಕುಮಾರ್, ರಾಜ್‌ಕುಮಾರ್, ಧರ್ಮೇಂದ್ರ, ಅಮಿತಾಭ್ ಬಚ್ಚನ್, ವೈಜಯಂತಿ ಮಾಲಾ, ಮಧು ಬಾಲಾ, ಹೇಮಾ ಮಾಲಿನಿ, ಶ್ರೀದೇವಿ, ರೇಖಾ ಮತ್ತು ಇತ್ತೀಚಿನ ಬಹುಪಾಲು ಕಲಾವಿದರು ಪಕ್ಷಾತೀತವಾಗಿ ಚಲನಚಿತ್ರ ರಂಗವನ್ನು ಆರಾಧಿಸಿದ್ದಾರೆ. ಭಾರತೀಯ ಚಲನಚಿತ್ರಗಳು ಭಾರತದಲ್ಲಿ ಮಾತ್ರವಲ್ಲ ಅನೇಕ ಹೊರದೇಶಗಳಲ್ಲೂ ಜನಪ್ರಿಯತೆ ಪಡೆದುಕೊಂಡಿವೆ. ಮೊಗಲ್-ಇ-ಆಝಮ್, ಉಮ್ರಾ ಒ ಜಾನ್, ದೇವದಾಸ್, ಶೋಲೆ ಮುಂತಾದ ಚಲನಚಿತ್ರಗಳು ಭಾರತೀಯ ಚಿತ್ರರಂಗ ಅಭಿಮಾನ ಪಡುವಂತೆ ಮಾಡಿದ್ದವು. ಉತ್ಕಟವಾದ ಪ್ರೀತಿ, ತ್ಯಾಗ, ಸಮಾನತೆ, ಬಂಡಾಯ, ವೈಚಾರಿಕತೆ ಪ್ರತಿಪಾದಿಸಿದ ಭಾರತೀಯ ಚಲನಚಿತ್ರ ರಂಗ ಹಿಂದಿ ಮಾತ್ರವಲ್ಲ ಪ್ರಾದೇಶಿಕ ಭಾಷೆಗಳ ಚಿತ್ರಗಳು ಜನಜೀವನವನ್ನು ಆತ್ಯಂತಿಕವಾಗಿ ಪ್ರಭಾವಿಸಿವೆ. ಕನ್ನಡ, ತಮಿಳು, ಮಲಯಾಳಿ, ತೆಲುಗು ಮತ್ತು ಬೆಂಗಾಲಿ ಚಲನಚಿತ್ರಗಳು ಬಾಲಿವುಡ್ ಪರಂಪರೆಯನ್ನು ಗಾಢವಾಗಿ ಪ್ರಭಾವಿಸುವ ಮಟ್ಟಕ್ಕೆ ಬೆಳೆದು ನಿಂತಿವೆ. ಹಿಂದಿ ಮತ್ತು ಭಾರತೀಯ ಪ್ರಾದೇಶಿಕ ಭಾಷಾ ಚಲನಚಿತ್ರಗಳು ಸೌಹಾರ್ದ ಪರಂಪರೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಅತ್ಯುತ್ತಮ ಚಿತ್ರಗಳನ್ನು ನೀಡಿವೆ. ಅತ್ಯುತ್ತಮ ಸಮಾಜ ನಿರ್ಮಾಣದ ಕನಸು ಹೊತ್ತ ಚಲನಚಿತ್ರಗಳನ್ನು ನೀಡಿದ್ದಾರೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅಸಮಾನತೆ ಪ್ರತಿಪಾದಿಸುವ, ದ್ವೇಷ ಭಾವ ಪ್ರಚೋದಿಸುವ ಮತ್ತು ಮತಭೇದ ಹುಟ್ಟು ಹಾಕುವ ಒಂದೇ ಒಂದು ಚಲನಚಿತ್ರವನ್ನು ಯಾರೊಬ್ಬರೂ ನಿರ್ಮಿಸಿರಲಿಲ್ಲ. ಜವಾಹರಲಾಲ್ ನೆಹರೂ, ಲಾಲ್ ಬಹಾದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ, ಮೊರಾರ್ಜಿ ದೇಸಾಯಿ, ವಿ.ಪಿ. ಸಿಂಗ್, ರಾಜೀವ್ ಗಾಂಧಿ, ಪಿ.ವಿ. ನರಸಿಂಹ ರಾವ್, ಅಟಲ್ ಬಿಹಾರಿ ವಾಜಪೇಯಿ, ಎಚ್.ಡಿ. ದೇವೇಗೌಡ ಸೇರಿದಂತೆ ಯಾವ ಪ್ರಧಾನ ಮಂತ್ರಿಯೂ ಚಲನಚಿತ್ರ ರಂಗವನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡಿರಲಿಲ್ಲ. ಚಲನಚಿತ್ರ ರಂಗದ ಮಂದಿಗೆ ಪ್ರಶಸ್ತಿ ಪುರಸ್ಕಾರ ನೀಡುವಾಗಲೂ ತಜ್ಞರ ಅಭಿಪ್ರಾಯಗಳನ್ನೇ ಗೌರವಿಸಿದ್ದಾರೆ ಹೊರತು ಅನಗತ್ಯ ರಾಜಕೀಯ ಹಸ್ತಕ್ಷೇಪ ಮಾಡಿಲ್ಲ. ರಾಜಕೀಯ ವ್ಯವಸ್ಥೆಯನ್ನು ವಿಡಂಬಿಸುವ ‘ಅಂಧಾ ಕಾನೂನು’, ‘ಆಂಧಿ’ಯಂತಹ ಚಲನಚಿತ್ರಗಳನ್ನು ಗೌರವದಿಂದ ಕಾಣಲಾಗಿದೆ.
ಖ್ಯಾತ ಚಿತ್ರ ಸಾಹಿತಿ ಗುಲ್ಝಾರ್ ನಿರ್ಮಾಣ ಮತ್ತು ನಿರ್ದೇಶನದ ‘ಆಂಧಿ’ ಚಲನಚಿತ್ರ 1975ರಲ್ಲಿ ತೆರೆ ಕಂಡಿತ್ತು. ಆಂಧಿ ಪರೋಕ್ಷವಾಗಿ ಇಂದಿರಾ ಗಾಂಧಿಯವರ ಸರ್ವಾಧಿಕಾರಿ ನಿಲುವನ್ನು ವಿರೋಧಿಸುವ ಚಲನಚಿತ್ರವಾಗಿತ್ತು. ತುರ್ತು ಪರಿಸ್ಥಿತಿಯ ಕರಾಳ ಸತ್ಯವನ್ನು ಅನಾವರಣ ಮಾಡುವುದು ಗುಲ್ಝಾರ್ ಅವರ ಉದ್ದೇಶವಾಗಿತ್ತು. ಆಂಧಿ ಗಲ್ಲಾ ಪೆಟ್ಟಿಗೆಯಲ್ಲಿ ಭಾರೀ ಯಶಸ್ಸು ಪಡೆಯಲಿಲ್ಲ. ಆದರೆ ತುರ್ತು ಪರಿಸ್ಥಿತಿಯ ಕರಾಳ ಮುಖಗಳನ್ನು ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಗಿತ್ತು. ಆಂಧಿ ಚಲನಚಿತ್ರ ನಿರ್ಮಿಸಿದ ಗುಲ್ಝಾರ್ ಅವರನ್ನು ಇಂದಿರಾ ಗಾಂಧಿ ಶತ್ರುವೆಂದು ಪರಿಗಣಿಸಲಿಲ್ಲ.
ಚಲನಚಿತ್ರ ಮಾಧ್ಯಮವನ್ನು ಸರ್ವಾಧಿಕಾರಿ ವ್ಯವಸ್ಥೆಯ ವಿರುದ್ಧ ಪ್ರತಿಭಟನೆಯ ಅಸ್ತ್ರವಾಗಿ ಬಳಸಿಕೊಂಡ ಅಸಂಖ್ಯಾತ ನಿದರ್ಶನಗಳು ದೊರೆಯುತ್ತವೆ. ಜಗದ್ವಿಖ್ಯಾತ ನಟ, ನಿರ್ದೇಶಕ ಚಾರ್ಲಿ ಚಾಪ್ಲಿನ್ ಅವರನ್ನು ಬಹಳ ಜನ ಹಾಸ್ಯ ಕಲಾವಿದ ಎಂದು ಭಾವಿಸಿದ್ದಾರೆ. ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಆಡಳಿತ ವೈಖರಿಯನ್ನು ವಿರೋಧಿಸುವ ‘ದಿ ಗ್ರೇಟ್ ಡಿಕ್ಟೇಟರ್’ ಚಲನಚಿತ್ರವನ್ನು ನಿರ್ಮಿಸಿ ರಾಜಕೀಯ ಪ್ರಜ್ಞೆ ಮೂಡಿಸಲು ಯತ್ನಿಸಿದ್ದರು.
ಚಲನಚಿತ್ರಗಳ ನಿರ್ಮಾಣದ ಉದ್ದೇಶವೇ ಅನ್ಯಾಯ, ಅಸಮಾನತೆ ವಿರುದ್ಧ ಜಾಗೃತಿ ಮೂಡಿಸುವುದು. ಸುನೀಲ್ ದತ್ ದೇಶ ಭಕ್ತಿ ಜಾಗೃತಗೊಳಿಸುವ, ಸೌಹಾರ್ದ ಪರಂಪರೆ ಎತ್ತಿ ಹಿಡಿಯುವ ಅನೇಕ ಚಲನಚಿತ್ರಗಳಲ್ಲಿ ಅಭಿನಯಿಸಿದ್ದರು. ಗುರು ದತ್ ಅಭಿನಯಿಸಿದ ಚಲನಚಿತ್ರಗಳು ಈಗಲೂ ಪ್ರಸ್ತುತ ಎನಿಸುತ್ತಿವೆ. ಪ್ರೀತಿ, ಪ್ರಣಯ, ನೃತ್ಯ, ಕಾದಾಟದ ಚಲನಚಿತ್ರಗಳಲ್ಲಿ ಅಭಿನಯಿಸುತ್ತಿದ್ದ ಆಮಿತಾಭ್ ಬಚ್ಚನ್ ತರಹದ ಅನೇಕ ನಾಯಕ ನಟರು ಸಾಮಾಜಿಕ ಕಾಳಜಿಯುಳ್ಳ ಚಿತ್ರಗಳಲ್ಲಿ ಅಭಿನಯಿಸತೊಡಗಿದರು. ಅಮಿತಾಭ್ ಬಚ್ಚನ್ ಅವರು ಅಭಿನಯಿಸಿದ ‘ಪಿಂಕ್’ ಚಲನಚಿತ್ರ ಅತ್ಯಾಚಾರ ಪ್ರಕರಣಗಳ ವ್ಯಾಖ್ಯಾನವನ್ನೇ ಮರು ರೂಪಿಸಿತು.
ಡಾ. ರಾಜಕುಮಾರ್ ಅಭಿನಯಿಸಿದ ‘ಬಂಗಾರದ ಮನುಷ್ಯ’ ಚಲನಚಿತ್ರ ಯುವ ಸಮುದಾಯವನ್ನು ಅಪಾರವಾಗಿ ಪ್ರಭಾವಿಸಿತ್ತು. ಎಂ.ಜಿ.ಆರ್., ಎನ್.ಟಿ.ಆರ್., ಶಿವಾಜಿ ಗಣೇಶನ್, ದಿಲೀಪ್ ಕುಮಾರ್, ಅಶೋಕ್ ಕುಮಾರ್ ಕಾಲದ ನಟರು ವ್ಯಾಪಕವಾಗಿ ಜನಜೀವನವನ್ನು ಆವರಿಸಿದ್ದರು. ನಂತರ ಬಂದ ಮಮ್ಮುಟ್ಟಿ, ಕಮಲ್ ಹಾಸನ್, ರಜನಿಕಾಂತ್, ಚಿರಂಜೀವಿ, ಶಂಕರನಾಗ್, ಅನಂತನಾಗ್, ವಿಷ್ಣುವರ್ಧನ್, ಜಿತೇಂದ್ರ, ರಾಜೇಶ್ ಖನ್ನಾ ಮುಂತಾದವರು ಭಾರತೀಯ ಚಿತ್ರರಂಗಕ್ಕೆ ಹೊಸ ಸಂವೇದನೆಯನ್ನು ಜೋಡಿಸಿದರು. ವಿಶೇಷವಾಗಿ ಆಮಿರ್ ಖಾನ್ ಅಭಿನಯಿಸಿದ ‘ಲಗಾನ್’, ‘ಪಿ.ಕೆ.’, ‘ತಾರೆ ಝಮೀನ್ ಪರ್’, ‘ತ್ರೀ ಈಡಿಯಟ್’, ‘ದಂಗಲ್’ ಚಲನಚಿತ್ರಗಳು ಭಾರತೀಯ ಪರಂಪರೆಯ ಅಂತಃಸ್ಸತ್ವವನ್ನು ಮರು ಸ್ಥಾಪಿಸಲು ಯತ್ನಿಸಿದ್ದವು. ಆಮಿರ್ ಖಾನ್ ಅವರ ಚಲನಚಿತ್ರಗಳು ಚೀನಾ, ಜಪಾನ್ ದೇಶಗಳಲ್ಲಿ ಅಪಾರ ಜನಮನ್ನಣೆ ಗಳಿಸಿದ್ದವು. ಶಾರುಕ್ ಖಾನ್, ಸಲ್ಮಾನ್ ಖಾನ್, ಹೃತಿಕ್ ರೋಷನ್ ಮುಂತಾದ ನಟರು ಕತೆ ಆಯ್ಕೆಯಲ್ಲೇ ತಮ್ಮ ಕಾಳಜಿ ಸ್ಪಷ್ಟ ಪಡಿಸುತ್ತಿದ್ದರು. ಸಲ್ಮಾನ್ ಖಾನ್ ಅವರ ‘ಭಜರಂಗಿ ಭಾಯಿ ಜಾನ್’ ಚಲನಚಿತ್ರ ಕೋಮು ಸೌಹಾರ್ದ ಪರಂಪರೆಗೆ ಹೊಸ ಅರ್ಥ ನೀಡಿತು. ಒಟ್ಟು ಹೇಳಬೇಕೆಂದರೆ, ಭಾರತೀಯ ಚಿತ್ರರಂಗದಲ್ಲಿ ಹಿಂದಿ ಮತ್ತು ಭಾರತೀಯ ಪ್ರಾದೇಶಿಕ ಭಾಷೆಗಳು ಸೇರಿದಂತೆ ಎಲ್ಲೆಡೆ ಅತ್ಯುತ್ತಮ ಸಂದೇಶ ರವಾನಿಸುವ ಚಲನಚಿತ್ರಗಳೇ ನಿರ್ಮಾಣವಾಗುತ್ತಿವೆ. ಗುಣಮಟ್ಟದಲ್ಲಿ ಕಳಪೆ ಚಲನಚಿತ್ರಗಳು ನಿರ್ಮಾಣವಾಗಿರಬಹುದು. ಆದರೆ ಸಾಮಾನ್ಯವಾಗಿ ದ್ವೇಷ ಬಿತ್ತುವ ಚಿತ್ರಗಳು, ಜೀವ ವಿರೋಧಿ ವಿಚಾರ ಪ್ರಸಾರ ಮಾಡುವ ಚಲನಚಿತ್ರಗಳನ್ನು ನಿರ್ಮಾಣ ಮಾಡುವ ದುಸ್ಸಾಹಸ ಯಾರೂ ಮಾಡುತ್ತಿರಲಿಲ್ಲ. ಆದರೆ ಸನ್ಮಾನ್ಯ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ಹುದ್ದೆ ಅಲಂಕರಿಸಿದ ಮೇಲೆ ದ್ವೇಷ ಬಿತ್ತುವ ಚಲನಚಿತ್ರಗಳು ಹೆಚ್ಚು ಹೆಚ್ಚು ತೆರೆ ಕಾಣುತ್ತಿವೆ. ಕೆಲವು ಚಲನಚಿತ್ರಗಳನ್ನು ಮೋದಿ-ಅಮಿತ್ ಶಾ ಜೋಡಿಯೇ ಸಲಹೆ ನೀಡಿ ನಿರ್ಮಿಸಿದಂತಿವೆ. ಚಲನಚಿತ್ರ ಮಾಧ್ಯಮವನ್ನು ಕೆಟ್ಟ ರಾಜಕಾರಣಕ್ಕೆ ಬಳಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಸತ್ಯ ಘಟನೆಯ ಹೆಸರಲ್ಲಿ ದ್ವೇಷ ಬಿತ್ತುವ, ಧರ್ಮಗಳ ಆಧಾರದಲ್ಲಿ ಸಮಾಜವನ್ನು ವಿಭಜಿಸುವ ಕಟ್ಟು ಕತೆಗಳು ಚಲನಚಿತ್ರ ರೂಪು ಪಡೆಯುತ್ತಿವೆ.
ಯುಪಿಎ ಕಾಲಾವಧಿಯಲ್ಲಿ ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರಕಾರ ಅಸ್ತಿತ್ವದಲ್ಲಿ ಇತ್ತು. 2004ರಿಂದ 2014ರವರೆಗೆ ಖ್ಯಾತ ಅರ್ಥ ಶಾಸ್ತ್ರಜ್ಞ ಡಾ. ಮನಮೋಹನ್ ಸಿಂಗ್ ಅವರು ಆಕಸ್ಮಿಕವಾಗಿ ಭಾರತದಂತಹ ದೊಡ್ಡ ದೇಶದ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಹೌದು ಡಾ. ಮನಮೋಹನ್ ಸಿಂಗ್ ಅವರಿಗೆ ಅಧಿಕಾರ ರಾಜಕಾರಣದ ಪಟ್ಟುಗಳು ಗೊತ್ತಿರಲಿಲ್ಲ. ಆದರೆ ಅಭಿವೃದ್ಧಿ ರಾಜಕಾರಣದ ಪಟ್ಟುಗಳು ತಿಳಿದಿದ್ದವು. ಭಾರತ ವಿಶ್ವ ಮಾರುಕಟ್ಟೆಗೆ ತೆರೆದುಕೊಂಡಾಗ ಆ ಸಂದರ್ಭವನ್ನು ಇತ್ಯಾತ್ಮಕವಾಗಿ ಬಳಸಿಕೊಳ್ಳುವ ಜಾಣ್ಮೆಯುಳ್ಳ ಪ್ರಧಾನಿ ಬೇಕಿತ್ತು. ಡಾ. ಮನಮೋಹನ್ ಸಿಂಗ್ ಅವರ ಪ್ರಯತ್ನದ ಫಲವಾಗಿಯೇ ಐ.ಟಿ., ಬಿ.ಟಿ. ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಹೆಚ್ಚಿದವು. ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆ ಗ್ರಾಮೀಣ ನಿರುದ್ಯೋಗ ಪ್ರಮಾಣ ತಗ್ಗಿಸುವಲ್ಲಿ ಮಹತ್ವದ ಪಾತ್ರ ವಹಿಸಿತ್ತು. ಡಾ. ಮನಮೋಹನ್ ಸಿಂಗ್ ಹತ್ತು ವರ್ಷಗಳ ಅಧಿಕಾರವಧಿಯಲ್ಲಿ ಭಾರತವನ್ನು ಸಾಕಷ್ಟು ಮುನ್ನಡೆಸಿದರು. ದುರಂತವೆಂದರೆ, ಡಾ. ಮನಮೋಹನ್ ಸಿಂಗ್ ನೇತೃತ್ವದ ಸರಕಾರ ಜಾರಿಗೆ ತಂದ ಅತ್ಯುತ್ತಮ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ಪ್ರಚಾರ ಮಾಡಲು ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯವಾಗಲಿಲ್ಲ. ಒಳ್ಳೆಯ ಕೆಲಸಗಳ ಪ್ರಚಾರ ಮಾಡಿಕೊಳ್ಳುವುದು ದೂರದ ಮಾತಾಯಿತು. ಡಾ. ಮನಮೋಹನ್ ಸಿಂಗ್ ಸರಕಾರದ ವಿರುದ್ಧ ಮೋದಿ ಮತ್ತವರ ತಂಡದ ಅಪಪ್ರಚಾರಕ್ಕೆ ತಕ್ಕ ಉತ್ತರ ಕೊಡಲು ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳಿಗೆ ಸಾಧ್ಯವಾಗಲಿಲ್ಲ. ಕಾಂಗ್ರೆಸ್ ಪಕ್ಷದ ದೌರ್ಬಲ್ಯ ಮನಗಂಡೇ ಮೋದಿ ಅಭಿಮಾನಿಗಳು ‘ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಚಲನಚಿತ್ರ ನಿರ್ಮಿಸಿ ಬಿಡುಗಡೆ ಮಾಡಿದರು. ಆ ಚಲನಚಿತ್ರ ಚುನಾವಣಾ ಪ್ರಚಾರದ ಸರಕಿನಂತಿತ್ತು. ನರೇಂದ್ರ ಮೋದಿ ಪ್ರಧಾನಿಯಾಗಿ ಹತ್ತು ವರ್ಷ ಗತಿಸಿವೆ. ಅವರು ಸೃಷ್ಟಿಸಿದ ಅವಾಂತರಗಳ ಕುರಿತು ನೂರಾರು ಚಲನಚಿತ್ರಗಳು ನಿರ್ಮಾಣವಾಗಬೇಕಿತ್ತು. ಚಾರ್ಲಿ ಚಾಪ್ಲಿನ್ ನಿರ್ಮಾಣದ ಗ್ರೇಟ್ ಡಿಕ್ಟೇಟರ್ ಚಲನಚಿತ್ರವನ್ನು ಭಾರತೀಯ ಭಾಷೆಗಳಿಗೆ ಡಬ್ ಮಾಡಿ ತೋರಿಸಿದರೆ ಅದು ಮೋದಿ ಆಡಳಿತ ವೈಖರಿಯನ್ನೇ ಪ್ರತಿ ಬಿಂಬಿಸುತ್ತದೆ. ಚಲನಚಿತ್ರ ಮಾಧ್ಯಮವನ್ನು ಮೋದಿ ಆಡಳಿತದ ವಿರುದ್ಧ ಇಲ್ಲಿಯವರೆಗೆ ಯಾರೂ ಬಳಸಿಲ್ಲ. ಬದಲಿಗೆ ಮೋದಿ ತಂಡವೇ ಬಿಜೆಪಿಯ ಕೋಮುವಾದಿ ಸಿದ್ಧಾಂತ ಪ್ರಚಾರ ಮಾಡುವ ಚಲನಚಿತ್ರಗಳು ಮತ್ತು ವೆಬ್ ಸೀರೀಸ್ ನಿರ್ಮಾಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿವೆ.
‘ದಿ ಕಾಶ್ಮೀರ್ ಫೈಲ್ಸ್’ ಚಲನಚಿತ್ರ ನಿರ್ಮಾಣದ ಉದ್ದೇಶವೇ ಭಾರತೀಯ ಮುಸ್ಲಿಮ್ ಸಮುದಾಯದ ಬಗ್ಗೆ ಅಪನಂಬಿಕೆ ಮೂಡಿಸುವುದಾಗಿತ್ತು. ಸಂಸ್ಕಾರ ಭಾರತಿ ಸಾಂಸ್ಕೃತಿಕ ಸಂಘಟನೆಯೊಂದಿಗೆ ಸಂಬಂಧ ಇಟ್ಟುಕೊಂಡಿರುವ ವಿವೇಕ್ ಅಗ್ನಿ ಹೋತ್ರಿ ಮತ್ತು ನಟಿ ಪಲ್ಲವಿ ಜೋಶಿ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ನಿರ್ದೇಶನ ಮತ್ತು ನಿರ್ಮಾಣದ ಜವಾಬ್ದಾರಿ ಹೊತ್ತವರು. ಕಾಶ್ಮೀರಿ ಪಂಡಿತರ ಹತ್ಯೆ ಪ್ರಕರಣಗಳನ್ನು ವೈಭವೀಕರಿಸುವ ಮತ್ತು ಕಾಶ್ಮೀರಿ -ಭಾರತೀಯ ಮುಸ್ಲಿಮರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಈ ಕಟ್ಟು ಕತೆ ಮನುಷ್ಯ ಸಂಬಂಧಗಳ ನೆಲೆಯನ್ನೇ ಸ್ಪರ್ಶಿಸಿಲ್ಲ. ಭಯೋತ್ಪಾದಕ ಸಂಘಟನೆಗಳ ವಿಧ್ವಂಸಕ ಕೃತ್ಯಗಳಿಗೆ ಭಾರತೀಯ ಮುಸ್ಲಿಮ್ ಸಮುದಾಯ ಹೊಣೆಗಾರರಾಗುವುದಿಲ್ಲ. ಭಯೋತ್ಪಾದಕ ಸಂಘಟನೆಗಳ ಕುಕೃತ್ಯಕ್ಕೆ ಅನೇಕ ಭಾರತೀಯ ಮುಸ್ಲಿಮ್ ಯೋಧರೂ ಪ್ರಾಣ ಕಳೆದುಕೊಂಡಿರುತ್ತಾರೆ. ಚರಿತ್ರೆಯೊಳಗಿನ ಒಂದು ದುಷ್ಕೃತ್ಯಕ್ಕೆ ವರ್ತಮಾನದ ಒಂದು ಸಮುದಾಯವನ್ನು ಹೊಣೆಗಾರರನ್ನಾಗಿಸುವುದೇ ಅಮಾನವೀಯ ಎನಿಸಿಕೊಳ್ಳುತ್ತದೆ.
ಬ್ರಿಟಿಷರು ಭಾರತವನ್ನು ದೀರ್ಘ ಕಾಲ ಆಳಿದ್ದರು. ಅವರ ಆಳ್ವಿಕೆಯ ಅವಧಿಯಲ್ಲಿ ಅತ್ಯಂತ ಭೀಕರವಾದ ಜಲಿಯನ್ ವಾಲಾ ಭಾಗ್ ಹತ್ಯಾಕಾಂಡ ನಡೆಯಿತು. ಜನರಲ್ ರಿಜಿನಾಲ್ಡ್ ಡೈರ್ ಗೋಲಿಬಾರ್‌ಗೆ ಆದೇಶ ನೀಡಿದ್ದರಿಂದ ಅಂದಾಜು ಒಂದೂವರೆ ಸಾವಿರ ಭಾರತೀಯರು ಜೀವ ಕಳೆದುಕೊಂಡರು. ಹನ್ನೆರಡು ನೂರಕ್ಕೂ ಹೆಚ್ಚು ಜನ ಗಾಯಗೊಂಡರು. ಜನರಲ್ ಡೈರ್ ಮಾಡಿದ ತಪ್ಪಿಗೆ ಇಂದಿನ ಬ್ರಿಟಿಷ್ ಪ್ರಜೆಗಳನ್ನು ಹೊಣೆಗಾರರನ್ನಾಗಿಸಿ ಅವರನ್ನು ದ್ವೇಷ ಮಾಡಬಹುದು. ಅಸಂಖ್ಯಾತ ಭಾರತೀಯರು ಬ್ರಿಟಿಷ್ ಸಾಮ್ರಾಜ್ಯದಲ್ಲಿ ಸೌಹಾರ್ದ ಬದುಕು ಕಟ್ಟಿಕೊಂಡಿದ್ದಾರೆ. ಕಾಶ್ಮೀರಿ ಪಂಡಿತರ ಸಾವಿಗೆ ಭಾರತೀಯರು, ಮುಸ್ಲಿಮರು ಸೇರಿದಂತೆ ಎಲ್ಲರೂ ಕಣ್ಣೀರು ಮಿಡಿದಿದ್ದಾರೆ. ಹೀಗಿದ್ದಾಗ ‘ದಿ ಕಾಶ್ಮೀರ್ ಫೈಲ್ಸ್’ನಂತಹ ಕೆಟ್ಟ ಚಲನಚಿತ್ರ ನಿರ್ಮಿಸಿ ಚುನಾವಣಾ ಲಾಭ ಮಾಡಿಕೊಳ್ಳುವುದು ನೀಚತನದ ಪರಮಾವಧಿ. ದುರಂತವೆಂದರೆ ‘ದಿ ಕಾಶ್ಮೀರ್ ಫೈಲ್ಸ್’ ಚಲನಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ ರಾಷ್ಟ್ರ ಪ್ರಶಸ್ತಿ ನೀಡುತ್ತಾರೆ. ಪಲ್ಲವಿ ಜೋಶಿಗೆ ಅತ್ಯುತ್ತಮ ಪೋಷಕ ನಟಿ ಎಂದು ರಾಷ್ಟ್ರ ಪ್ರಶಸ್ತಿ ದಯ ಪಾಲಿಸುತ್ತಾರೆ. ಅಂದರೆ ಭಾರತ ಸರಕಾರವೇ ದ್ವೇಷ ಬಿತ್ತುವ ಚಲನಚಿತ್ರಗಳನ್ನು ಉತ್ತೇಜಿಸುತ್ತಿದೆ ಎಂದಾಯಿತು.
‘ದಿ ಕೇರಳ ಸ್ಟೋರಿ’ 2023ರಲ್ಲಿ ನಿರ್ಮಾಣವಾದ ಹಿಂದಿ ಚಲನಚಿತ್ರ. ಸುದೀಪ್ತೊ ನಿರ್ದೇಶನದ ಈ ಚಲನಚಿತ್ರವನ್ನು ವಿಪುಲ್ ಅಮೃತ್ ಲಾಲ್ ಅವರು ನಿರ್ಮಿಸಿದ್ದಾರೆ. ಈ ಚಿತ್ರ ಹಿಂದುತ್ವ ಪ್ರತಿಪಾದಕರ ‘ಲವ್ ಜಿಹಾದ್’ ತತ್ವವನ್ನು ನಿರೂಪಿಸುತ್ತದೆ. ಇದು ಕೂಡ ಸತ್ಯ ಘಟನೆಗಳನ್ನು ಆಧರಿಸಿದ ಚಲನಚಿತ್ರ ಎಂದು ಹೇಳಿಕೊಂಡಿದ್ದಾರೆ. ಆದರೆ ಸಮರ್ಪಕ ಆಧಾರಗಳೇ ಇಲ್ಲ. ಹಿಂದೂ ಮಹಿಳೆಯರನ್ನು ಮುಸ್ಲಿಮ್ ಯುವಕರು ‘ಲವ್ ಜಿಹಾದ್’ ಮೂಲಕ ಬಳಸಿಕೊಳ್ಳುತ್ತಾರೆ ಎಂದು ದ್ವೇಷ ಬಿತ್ತುವ ಉದ್ದೇಶ ಹೊಂದಿದೆ. ಈ ಚಲನಚಿತ್ರಕ್ಕೂ ಅತ್ಯುತ್ತಮ ನಿರ್ದೇಶನಕ್ಕಾಗಿ ರಾಷ್ಟ್ರ ಪ್ರಶಸ್ತಿ ದಯ ಪಾಲಿಸಲಾಯಿತು. ಒಂದು ಚಲನಚಿತ್ರವಾಗಿಯೂ ‘ದಿ ಕೇರಳ ಸ್ಟೋರಿ’ ಸದಭಿರುಚಿಯ ಚಿತ್ರ ಎನಿಸುವುದಿಲ್ಲ. ಮುಸ್ಲಿಮ್ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಹುನ್ನಾರದ ಭಾಗವಾಗಿ ಈ ಚಲನಚಿತ್ರ ನಿರ್ಮಾಣವಾಗಿತ್ತು. ಕರ್ನಾಟಕ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಈ ಚಿತ್ರವನ್ನು ವ್ಯಾಪಕವಾಗಿ ಪ್ರದರ್ಶನ ಮಾಡಲಾಯಿತು. ಆದರೆ ಕರ್ನಾಟಕದ ಮತದಾರ ‘ದಿ ಕೇರಳ ಸ್ಟೋರಿ’ಯ ಕಟ್ಟು ಕತೆಯನ್ನು ನಂಬಲಿಲ್ಲ.
ಬಿಜೆಪಿ ಸಂಸದೆ ಮತ್ತು ಚಿತ್ರ ನಟಿ ಕಂಗನಾ ರಣಾವತ್ ಅವರು ನಿರ್ದೇಶಿಸಿ ನಿರ್ಮಾಣ ಮಾಡಿದ ‘ಎಮರ್ಜೆನ್ಸಿ’ ಚಲನಚಿತ್ರ 2025ರಲ್ಲಿ ತೆರೆ ಕಂಡಿದೆ. ಇಂದಿರಾಗಾಂಧಿ ಮತ್ತು ಗಾಂಧಿ ಪರಿವಾರವನ್ನು ಖಳನಾಯಕರನ್ನಾಗಿ ಬಿಂಬಿಸಿ ಇಂದಿನ ಕಾಂಗ್ರೆಸ್ ಪಕ್ಷವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಹುನ್ನಾರದ ಭಾಗವಾಗಿ ಆ ಚಲನಚಿತ್ರ ಹುಟ್ಟಿಕೊಂಡಿದೆ. ಇತ್ತೀಚೆಗೆ ‘ಹಕ್’ ಎಂಬ ಹಿಂದಿ ಚಲನಚಿತ್ರ ತೆರೆ ಕಂಡಿದೆ. ಸುಪರ್ಣ ವರ್ಮಾ ನಿರ್ದೇಶನದ ಈ ಚಲನಚಿತ್ರ ಶಾಬಾನು ಪ್ರಕರಣವನ್ನು ಮುಖ್ಯ ತಿರುಳನ್ನಾಗಿಸಿ ಕತೆ ಚಿತ್ರಕತೆ ಸಿದ್ಧಪಡಿಸಲಾಗಿದೆ. ಮುಸ್ಲಿಮ್ ಸಮುದಾಯ ಮತ್ತು ಆ ಸಮುದಾಯದ ಧರ್ಮ ಗುರುಗಳು ಮಹಿಳಾ ವಿರೋಧಿ ಮನಸ್ಥಿತಿಯವರು ಎಂದು ನಿರೂಪಿಸಲು ಯತ್ನಿಸಲಾಗಿದೆ. ಶಾಬಾನು ಪ್ರಕರಣ, ಅದರಲ್ಲಿ ಕಾಂಗ್ರೆಸ್ ಪಕ್ಷ ನಡೆದುಕೊಂಡ ರೀತಿ ಮತ್ತು ಸುಪ್ರೀಂ ಕೋರ್ಟ್ ತೀರ್ಪುಗಳು ಸಾರ್ವಜನಿಕವಾಗಿ ಲಭ್ಯ ಇವೆ. ಹೀಗಿರುವಾಗ ಆ ಕಥೆಯನ್ನೇ ಮರು ರೂಪಿಸುವ ಮೂಲಕ ಭಾರತೀಯ ಮುಸ್ಲಿಮ್ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ಈ ಚಿತ್ರದಲ್ಲಿ ಮಾಡಲಾಗಿದೆ.
ಇತ್ತೀಚೆಗೆ ಬಿಡುಗಡೆಯಾದ ‘ದುರಂಧರ್’ ಚಲನಚಿತ್ರ ಕೂಡಾ ಚರಿತ್ರೆಯ ಒಂದು ಘಟನೆ ಹೆಕ್ಕಿ ತೆಗೆದು ಪಾಕಿಸ್ತಾನಿ ಮುಸ್ಲಿಮರ ಕ್ರೌರ್ಯವನ್ನು ಅತಿರಂಜಿತವಾಗಿ ಚಿತ್ರಿಸಿ ಇಂದಿನ ಭಾರತೀಯ ಮುಸ್ಲಿಮರು ಕ್ರೂರಿಗಳು ಎಂದು ನಿರೂಪಿಸುವ ಪ್ರಯತ್ನ ಇಲ್ಲಿ ನಡೆದಿದೆ. ಈ ಚಲನಚಿತ್ರವನ್ನು ಆರು ಗಲ್ಫ್ ದೇಶಗಳು ಬ್ಯಾನ್ ಮಾಡಿವೆ. ಯುಎಇ, ಸೌದಿ ಅರೇಬಿಯ, ಖತರ್, ಕುವೈತ್, ಒಮಾನ್ ಮತ್ತು ಬಹರೈನ್ ದೇಶಗಳಲ್ಲಿ ಈ ಚಲನಚಿತ್ರ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿಲ್ಲ.
‘ಫ್ರೀಡಂ ಅಟ್ ಮಿಡ್ ನೈಟ್’ ಕೃತಿ ಮೂಲತಃ ಮಹಾತ್ಮಾ ಗಾಂಧೀಜಿಯವರ ಮಹತ್ವ ಸಾರುವ ಪುಸ್ತಕ. ಭಾರತ-ಪಾಕಿಸ್ತಾನ ವಿಭಜನೆಯ ಸಂದರ್ಭದಲ್ಲಿ ಮಹಾತ್ಮಾ ಗಾಂಧಿ ಒಬ್ಬರೇ ನೈಜ ಕಾಳಜಿಯೊಂದಿಗೆ ಶ್ರಮಿಸಿ ರಕ್ತ ಪಾತದ ನಷ್ಟದ ಪ್ರಮಾಣ ತಗ್ಗಿಸಿದವರು. ಮಹಾತ್ಮಾ ಗಾಂಧಿ ಅಂದು ನೌಕಾಲಿ ಮತ್ತು ಕೋಲ್ಕತಾ ನಗರದಲ್ಲಿ ಶಾಂತಿ ಸ್ಥಾಪನೆಗೆ ಶ್ರಮಿಸಿದ ಕಥಾನಕ ಈ ಕೃತಿಯ ಮುಖ್ಯ ಕಾಳಜಿ. ಡಾಮಿನಿಕ್ ಲ್ಯಾಪಿರ್ರೆ ಮತ್ತು ಲ್ಯಾರಿ ಕಾಲಿನ್ಸ್ ರಚಿಸಿದ ಈ ಪುಸ್ತಕವನ್ನು ಆಧರಿಸಿ ನಿಖಿಲ್ ಅಡ್ವಾಣಿ ವೆಬ್ ಸೀರೀಸ್ ತಯಾರಿಸಿದ್ದಾರೆ. ಈ ಸೀರೀಸ್ ವೀಕ್ಷಿಸಿದ ಎಲ್ಲರಿಗೂ ಮಹಾತ್ಮಾ ಗಾಂಧಿ ಖಳನಾಯಕನಾಗಿ ಕಾಣುತ್ತಾರೆ. ಹಠಮಾರಿ ಸ್ವಭಾವದ ಮಹಾತ್ಮಾ ಗಾಂಧಿ ಪಾಕಿಸ್ತಾನ ದೇಶಕ್ಕೆ ರೂ.55 ಕೋಟಿ ನೀಡಲು ಒತ್ತಾಯಿಸಿ ಉಪವಾಸ ಸತ್ಯಾಗ್ರಹ ಕೈಗೊಂಡ ಕಾರಣಕ್ಕೆ ನಾಥೂರಾಮ್ ಗೋಡ್ಸೆ ಹತ್ಯೆ ಮಾಡಿದ ಎಂಬ ಭಾವನೆ ಮೂಡುವಂತೆ ಕಟ್ಟಿಕೊಟ್ಟಿದ್ದಾರೆ. ಈ ವೆಬ್ ಸೀರೀಸ್ ನೋಡಿದ ಎಲ್ಲರಿಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಹೀರೋ ಎನಿಸಿಕೊಳ್ಳುತ್ತಾರೆ. ಆದರೆ ಮಹಾತ್ಮಾ ಗಾಂಧಿಯವರ ಬಗ್ಗೆ ಗೌರವ ಮೂಡುವುದಿಲ್ಲ. ಜವಾಹರಲಾಲ್ ನೆಹರೂ ಕೂಡಾ ಅವಕಾಶವಾದಿಯಾಗಿ ಕಾಣುತ್ತಾರೆ. ಸೌಹಾರ್ದಯುತ ಭಾರತದ ಚರಿತ್ರೆಯನ್ನು ಕೋಮುವಾದಿ ಕಣ್ಣುಗಳಿಂದ ಪುನರ್ ವ್ಯಾಖ್ಯಾನಿಸುವ ಪರಿಯೇ ವಿಕೃತವಾದುದು. ಕಂದಹಾರ್, ತಾಜ್ ಹೋಟೆಲ್ ಮೇಲೆ ಭಯೋತ್ಪಾದಕರು ನಡೆಸಿದ ದಾಳಿ ಮತ್ತು ಅಜಿತ್ ದೋವಲ್ ಅವರನ್ನು ಹೀರೋ ಆಗಿ ಬಿಂಬಿಸುವ ಚಲನಚಿತ್ರಗಳು ಮತ್ತು ವೆಬ್ ಸೀರೀಸ್‌ಗಳು ನಿರಂತರ ನಿರ್ಮಾಣಗೊಳ್ಳುತ್ತಿವೆ. ರಾಷ್ಟ್ರೀಯ ಭದ್ರತಾ ಸಂಬಂಧಿ ಕತೆಗಳನ್ನು ಹೀಗೆ ಅತಿರಂಜಿತವಾಗಿ ಚಿತ್ರಿಸಿ ಚಲನಚಿತ್ರ ಮಾಡಿದರೆ ತಪ್ಪು ಸಂದೇಶ ರವಾನೆಯಾಗುತ್ತದೆ. ಭಾರತದ ಮುಸ್ಲಿಮರಿಗೂ ಮತ್ತು ಭಯೋತ್ಪಾದಕ ಚುಟುವಟಿಕೆಗಳಿಗೂ ಅನಗತ್ಯವಾಗಿ ತಳಕು ಹಾಕುವ ಈ ಪ್ರಯತ್ನ ಮತ ವಿಭಜನೆಯ ಕಾರ್ಯ ತಂತ್ರವಾಗಿದೆ. ನರೇಂದ್ರ ಮೋದಿಯವರು ನಿಜಕ್ಕೂ ವಿಕಸಿತ ಭಾರತದ ಕನಸುಗಾರನಾಗಿದ್ದರೆ ಮತೀಯ ಕಥಾನಕಗಳ ಸೃಷ್ಟಿಯ ಅಗತ್ಯವೇ ಬೀಳುವುದಿಲ್ಲ. ಭಾರತವನ್ನು ಅಭಿವೃದ್ಧಿ ಪಡಿಸಲು ಸಾಧ್ಯವಾಗಿಲ್ಲ. ಹಾಗಾಗಿಯೇ ಚರಿತ್ರೆಯಲ್ಲಿನ ಮತೀಯ ಘಟನೆಗಳನ್ನು ಹೆಕ್ಕಿ ಹಿಂದೂ-ಮುಸ್ಲಿಮ್ ವಿಭಜನೆಯ ಕಥಾನಕ ರೂಪಿಸಲಾಗುತ್ತಿದೆ. ಭಾರತದ ಸೌಹಾರ್ದ ಪರಂಪರೆಯನ್ನು ಅಳಿಸಿ ಹಾಕುವ ಪ್ರಯತ್ನಗಳು ಯಾವತ್ತೂ ಸಫಲವಾಗಿಲ್ಲ. ವಿವಿಧತೆಯಲ್ಲಿ ಏಕತೆ ಭಾರತದ ನೈಜ ಶಕ್ತಿಯಾಗಿದೆ.