ಸರಕಾರಿ ಮೆಡಿಕಲ್ ಕಾಲೇಜುಗಳಲ್ಲಿ ಎನ್.ಆರ್.ಐ. ಕೋಟಾ!
ಸರಕಾರಿ ಮೆಡಿಕಲ್ ಕಾಲೇಜುಗಳ ಅಪ್ಪಟ ಮೆರಿಟ್ ಸೀಟುಗಳನ್ನು ಕಿತ್ತುಕೊಂಡು ಎನ್.ಆರ್.ಐ.ಗಳಿಗೆ ಮಾರಿ ಆರ್ಥಿಕ ಸ್ವಾವಲಂಬನೆ ಸಾಧಿಸುವುದಕ್ಕಿಂತ ಖಾಸಗಿ ಮತ್ತು ಡೀಮ್ಡ್ ಮೆಡಿಕಲ್ ಕಾಲೇಜುಗಳ ಆಡಳಿತ ಮಂಡಳಿಯೊಂದಿಗೆ ಚೌಕಾಸಿ ನಡೆಸಿ ಅಲ್ಲೇ ಸರಕಾರಿ ಎನ್.ಆರ್.ಐ. ಕೋಟಾ ನಿಗದಿಪಡಿಸಬಹುದಲ್ಲ. ಅಷ್ಟಕ್ಕೂ ಪ್ರತಿಶತ 15ರಷ್ಟು ಸರಕಾರಿ ಮೆಡಿಕಲ್ ಕಾಲೇಜುಗಳ ಸೀಟುಗಳನ್ನು ಕನ್ನಡಿಗ ಎನ್.ಆರ್.ಐ.ಗಳಿಗೆ ನೀಡುತ್ತಾರೆ ಎಂಬುದರ ಬಗ್ಗೆ ಸ್ಪಷ್ಟನೆ ಇಲ್ಲ. ಈಗಾಗಲೇ ಮೋದಿಯವರು ಪ್ರತಿಶತ 15ರಷ್ಟು ಸೀಟುಗಳನ್ನು ಆಲ್ ಇಂಡಿಯಾ ಕೋಟಾ ಅಂತ ನಿಗದಿಪಡಿಸಿ ಕನ್ನಡದ ಮಕ್ಕಳಿಗೆ ಅನ್ಯಾಯ ಮಾಡಿದ್ದರು. ಈಗ ಮತ್ತೆ ರಾಜ್ಯ ಸರಕಾರವೇ ಕನ್ನಡದ ಮಕ್ಕಳಿಗೆ ಅನ್ಯಾಯ ಮಾಡುತ್ತಿದೆ.
ಇಡೀ ಭಾರತದಲ್ಲೇ ಕರ್ನಾಟಕ ಗುಣಮಟ್ಟದ ವೈದ್ಯಕೀಯ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ. ಅಷ್ಟು ಮಾತ್ರವಲ್ಲ ಅತಿ ಹೆಚ್ಚು ವೈದ್ಯಕೀಯ ಕಾಲೇಜುಗಳನ್ನು ಹೊಂದಿರುವ ಕೆಲವೇ ರಾಜ್ಯಗಳ ಪೈಕಿ ಕರ್ನಾಟಕವೂ ಒಂದು. ಅತ್ಯುತ್ತಮ ಮೂಲಭೂತ ಸೌಕರ್ಯಗಳನ್ನು ಹೊಂದಿರುವ ಕರ್ನಾಟಕದ ಮೆಡಿಕಲ್ ಕಾಲೇಜುಗಳು ನಿರಂತರ ಬೇಡಿಕೆ ಉಳಿಸಿಕೊಂಡಿವೆ.
2020ಕ್ಕೂ ಮೊದಲು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ (ಎಂ.ಸಿ.ಐ.)ಮೆಡಿಕಲ್ ಕಾಲೇಜುಗಳನ್ನು ಆರಂಭಿಸಲು ಅನುಮತಿ ಮತ್ತು ಮಾನ್ಯತೆ ನೀಡುತ್ತಿತ್ತು. ಈಗ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್.ಎಂ.ಸಿ.) ಮೆಡಿಕಲ್ ಕಾಲೇಜುಗಳಿಗೆ ಮಾನ್ಯತೆ ನೀಡುವ ಮತ್ತು ಅವುಗಳನ್ನು ಶಿಸ್ತುಬದ್ಧವಾಗಿ ಮುನ್ನಡೆಸುವ, ನಿಯಂತ್ರಿಸುವ ಸಂಸ್ಥೆಯಾಗಿದೆ. ನೀಟ್ ಪರೀಕ್ಷೆ ಮೂಲಕ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮೆಡಿಕಲ್ ಸೀಟುಗಳನ್ನು ಹಂಚುವ ಹೊಣೆಗಾರಿಕೆ ಮೆಡಿಕಲ್ ಕೌನ್ಸಿಲ್ ಕಮಿಟಿ ನಿರ್ವಹಿಸುತ್ತದೆ. ನ್ಯಾಷನಲ್ ಮೆಡಿಕಲ್ ಕಮಿಷನ್ ಬಿಗಿ ನಿಯಂತ್ರಣ ಹೊಂದಿರುವುದರಿಂದ ಮೆಡಿಕಲ್ ಕಾಲೇಜುಗಳು ಅತ್ಯಂತ ಶಿಸ್ತುಬದ್ಧವಾಗಿ ಮತ್ತು ಅತ್ಯುತ್ತಮ ಗುಣಮಟ್ಟದ ಮೂಲಭೂತ ಸೌಕರ್ಯಗಳೊಂದಿಗೆ ಕಾರ್ಯ ನಿರ್ವಹಿಸುತ್ತಿವೆ. ಖಾಸಗಿ ಅಥವಾ ಸರಕಾರಿ ಯಾವುದೇ ಮೆಡಿಕಲ್ ಕಾಲೇಜು ಇರಲಿ ದಿ ನ್ಯಾಷನಲ್ ಮೆಡಿಕಲ್ ಕಮಿಷನ್ ನಿಗದಿಪಡಿಸಿರುವ ಮಾನದಂಡಗಳನ್ನು ಪೂರೈಸಬೇಕು ಮತ್ತು ಸ್ಟ್ಯಾಂಡರ್ಡ್ ಉಳಿಸಿಕೊಂಡಿರಬೇಕು. ಕರ್ನಾಟಕದಲ್ಲಿ ಸರಕಾರಿ ಶಾಲೆ-ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳು ಮೂಲಭೂತ ಸೌಕರ್ಯದಿಂದ ವಂಚಿತವಾಗುತ್ತಿವೆ. ಗುಣಮಟ್ಟದ ಶಿಕ್ಷಣ ದಿನೇ ದಿನೇ ಮರೀಚಿಕೆಯಾಗುತ್ತಿದೆ. ಆದರೆ ಕರ್ನಾಟಕದಲ್ಲಿ ವೈದ್ಯಕೀಯ ಕಾಲೇಜುಗಳು ಅದರಲ್ಲೂ ಸರಕಾರಿ ವೈದ್ಯಕೀಯ ಕಾಲೇಜುಗಳು ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಮುಂಚೂಣಿಯಲ್ಲಿವೆ.
ಬೆಂಗಳೂರು ಮೆಡಿಕಲ್ ಕಾಲೇಜು, ಮೈಸೂರು ಮೆಡಿಕಲ್ ಕಾಲೇಜು, ಕರ್ನಾಟಕ ಮೆಡಿಕಲ್ ಕಾಲೇಜು ಹುಬ್ಬಳ್ಳಿ ಮತ್ತು ವಿಜಯನಗರ ಮೆಡಿಕಲ್ ಕಾಲೇಜು, ಬಳ್ಳಾರಿ ಹಳೆಯ ಸರಕಾರಿ ವೈದ್ಯಕೀಯ ಕಾಲೇಜುಗಳು. ಅವು ಮೊದಲಿಂದಲೂ ಶಿಕ್ಷಣದ ಗುಣಮಟ್ಟ ಕಾಯ್ದುಕೊಂಡು ಬೇಡಿಕೆ ಉಳಿಸಿಕೊಂಡಿವೆ. 2004ರವರೆಗೆ ಕರ್ನಾಟಕದಲ್ಲಿ ಸರಕಾರಿ ಮೆಡಿಕಲ್ ಕಾಲೇಜುಗಳ ಸಂಖ್ಯೆ ಬೆರಳೆಣಿಕೆಯಷ್ಟು ಇದ್ದವು. ಆಗ ಖಾಸಗಿ ಮೆಡಿಕಲ್ ಕಾಲೇಜುಗಳ ಸಂಖ್ಯೆಯೇ ಜಾಸ್ತಿ ಇತ್ತು. ವೈದ್ಯಕೀಯ ಶಿಕ್ಷಣ ಸಚಿವ ಸ್ಥಾನಕ್ಕೆ ಈಗಿನಷ್ಟು ಹೆಚ್ಚಿನ ಬೇಡಿಕೆ ಇರಲಿಲ್ಲ.
ಈಗ ಕರ್ನಾಟಕದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಸ್ಥಾನಕ್ಕೆ ಅಪಾರ ಗೌರವ ಮತ್ತು ಮನ್ನಣೆ ಇದೆ. ಏಳೂವರೆ ವರ್ಷಗಳ ಕಾಲ ವೈದ್ಯಕೀಯ ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಿಸಿರುವ ಮತ್ತು ಈಗಲೂ ಅದೇ ಖಾತೆಯಲ್ಲಿ ಮುಂದುವರಿದಿರುವ ಡಾ. ಶರಣಪ್ರಕಾಶ್ ಪಾಟೀಲ್ ದಕ್ಷತೆ, ಕ್ರಿಯಾಶೀಲತೆ ಶಿಕ್ಷಣದ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ಮಹತ್ತರ ಪಾತ್ರ ವಹಿಸಿದೆ. ಸರಕಾರಿ ಮೆಡಿಕಲ್ ಕಾಲೇಜುಗಳಲ್ಲಿನ ಎಂ.ಬಿ.ಬಿ.ಎಸ್. ಮತ್ತು ಸ್ನಾತಕೋತ್ತರ ಪದವಿ ಸೀಟುಗಳ ಪ್ರಮಾಣ ಹೆಚ್ಚಿಸಿಕೊಳ್ಳುವಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ಮೂಲಭೂತ ಸೌಕರ್ಯಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಮೂಲಭೂತ ಸೌಕರ್ಯ ಒದಗಿಸುವಲ್ಲಿ ಡಾ. ಶರಣಪ್ರಕಾಶ ಪಾಟೀಲ್ ಹಗಲಿರುಳು ಶ್ರಮಿಸಿದ್ದಾರೆ. ಹೊಸದಾಗಿ ಅಸ್ತಿತ್ವಕ್ಕೆ ಬಂದ ಸರಕಾರಿ ಮೆಡಿಕಲ್ ಕಾಲೇಜುಗಳ ಕಟ್ಟಡಗಳು ಮತ್ತು ಕ್ಯಾಂಪಸ್‌ಗಳು ಖಾಸಗಿಯವರಿಗೆ ಕಮ್ಮಿ ಇಲ್ಲದಂತೆ ನಿರ್ಮಾಣಗೊಂಡಿವೆ. ಸರಕಾರಿ ಕಟ್ಟಡಗಳು ಇಷ್ಟು ಚೆನ್ನಾಗಿ ತಲೆ ಎತ್ತಿ ನಿಲ್ಲಬಹುದು ಎಂಬುದಕ್ಕೆ ಮಾದರಿಯಾಗಿವೆ.
ಕರ್ನಾಟಕದಲ್ಲಿ ಒಟ್ಟು 72 ಮೆಡಿಕಲ್ ಕಾಲೇಜುಗಳಿವೆ. ಅವುಗಳಲ್ಲಿ 24 ಸರಕಾರಿ ಮೆಡಿಕಲ್ ಕಾಲೇಜುಗಳಿವೆ. 22 ಸರಕಾರಿ ಮೆಡಿಕಲ್ ಕಾಲೇಜುಗಳನ್ನು ಕರ್ನಾಟಕ ಸರಕಾರದ ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ವಹಿಸುತ್ತದೆ. ಇನ್ನೆರಡು ಸರಕಾರಿ ವೈದ್ಯಕೀಯ ಕಾಲೇಜುಗಳು ಕೇಂದ್ರ ಸರಕಾರದ ಇ.ಎಸ್.ಐ.ಸಿ. ಅನುದಾನ ಸಂಹಿತೆಗೆ ಒಳಪಟ್ಟಿವೆ. ಈ ಎರಡು ಮೆಡಿಕಲ್ ಕಾಲೇಜುಗಳ ಪೈಕಿ ಒಂದು ಕಲಬುರಗಿಯಲ್ಲಿ ಮತ್ತು ಇನ್ನೊಂದು ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಬೆಂಗಳೂರಿನಲ್ಲಿ ಎರಡು ಸರಕಾರಿ ಮೆಡಿಕಲ್ ಕಾಲೇಜುಗಳು ಕಾರ್ಯ ನಿರ್ವಹಿಸುತ್ತಿವೆ. ಬೆಂಗಳೂರು ಮೆಡಿಕಲ್ ಕಾಲೇಜು ಅತ್ಯಂತ ಹಳೆಯ ಮತ್ತು ಗುಣಮಟ್ಟದ ಶಿಕ್ಷಣಕ್ಕಾಗಿ ಖ್ಯಾತಿ ಪಡೆದಿದೆ. ಬೆಂಗಳೂರಿನಲ್ಲೇ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಅಟಲ್ ಬಿಹಾರಿ ವಾಜಪೇಯಿ ಮೆಡಿಕಲ್ ಕಾಲೇಜು ಬಿಜೆಪಿ ಸರಕಾರದ ಅವಧಿಯಲ್ಲಿ ಆರಂಭಿಸಲಾಗಿತ್ತು. ಬೆಂಗಳೂರು ಮೆಡಿಕಲ್ ಕಾಲೇಜು, ಬೆಳಗಾವಿ ಮೆಡಿಕಲ್ ಕಾಲೇಜು, ಬೀದರ್ ಮೆಡಿಕಲ್ ಕಾಲೇಜು, ಚಾಮರಾಜನಗರ ಮೆಡಿಕಲ್ ಕಾಲೇಜು, ಗದಗ ಮೆಡಿಕಲ್ ಕಾಲೇಜು, ಗುಲ್ಬರ್ಗಾ ಮೆಡಿಕಲ್ ಕಾಲೇಜು, ಹಾಸನ ಮೆಡಿಕಲ್ ಕಾಲೇಜು, ಹುಬ್ಬಳ್ಳಿಯ ಕರ್ನಾಟಕ ಮೆಡಿಕಲ್ ಕಾಲೇಜು, ಕಾರವಾರ ಮೆಡಿಕಲ್ ಕಾಲೇಜು, ಕೊಡಗು ಮೆಡಿಕಲ್ ಕಾಲೇಜು, ಕೊಪ್ಪಳ ಮೆಡಿಕಲ್ ಕಾಲೇಜು, ಮಂಡ್ಯ ಮೆಡಿಕಲ್ ಕಾಲೇಜು, ಮೈಸೂರು ಮೆಡಿಕಲ್ ಕಾಲೇಜು, ರಾಯಚೂರು ಮೆಡಿಕಲ್ ಕಾಲೇಜು, ಶಿವಮೊಗ್ಗ ಮೆಡಿಕಲ್ ಕಾಲೇಜು, ಬಳ್ಳಾರಿಯ ವಿಜಯನಗರ ಮೆಡಿಕಲ್ ಕಾಲೇಜು, ಚಿಕ್ಕಮಗಳೂರು ಮೆಡಿಕಲ್ ಕಾಲೇಜು, ಚಿಕ್ಕಬಳ್ಳಾಪುರ ಮೆಡಿಕಲ್ ಕಾಲೇಜು, ಯಾದಗಿರಿ ಮೆಡಿಕಲ್ ಕಾಲೇಜು, ಹಾವೇರಿ ಮೆಡಿಕಲ್ ಕಾಲೇಜು, ಚಿತ್ರದುರ್ಗ ಮೆಡಿಕಲ್ ಕಾಲೇಜು -ಹೀಗೆ ಒಟ್ಟು 22 ಸರಕಾರಿ ಮೆಡಿಕಲ್ ಕಾಲೇಜುಗಳು ಸುಸಜ್ಜಿತ ಕಟ್ಟಡ ಮತ್ತು ಕ್ಯಾಂಪಸ್‌ನೊಂದಿಗೆ ಕಾರ್ಯ ನಿರ್ವಹಿಸುತ್ತಿವೆ. ಸರಕಾರಿ ಮೆಡಿಕಲ್ ಕಾಲೇಜುಗಳಿಗೆ ಇರುವ ಮೂಲಭೂತ ಸೌಕರ್ಯಗಳ ಭಾಗ್ಯ ಸರಕಾರಿ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಿಗೆ ಇಲ್ಲ. ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಒಟ್ಟು 24 ಸರಕಾರಿ ಮೆಡಿಕಲ್ ಕಾಲೇಜುಗಳಲ್ಲಿ ಗುಣಮಟ್ಟ ಮತ್ತು ಮೂಲಭೂತ ಸೌಕರ್ಯಕ್ಕೆ ಅನುಗುಣವಾಗಿ ಎಂ.ಬಿ.ಬಿ.ಎಸ್. ಮತ್ತು ಸ್ನಾತಕೋತ್ತರ ಸೀಟುಗಳ ಸಂಖ್ಯೆ ನಿಗದಿಯಾಗಿರುತ್ತದೆ. ಡಾ. ಶರಣಪ್ರಕಾಶ ಪಾಟೀಲರ ಪ್ರಯತ್ನದ ಫಲವಾಗಿ ಸದ್ಯ ಕರ್ನಾಟಕದ ಸರಕಾರಿ ಮೆಡಿಕಲ್ ಕಾಲೇಜುಗಳಲ್ಲಿ ಒಟ್ಟು 4,250 ಎಂ.ಬಿ.ಬಿ.ಎಸ್. ಸೀಟುಗಳು ಲಭ್ಯ ಇವೆ. ಬೆಂಗಳೂರು ಮೆಡಿಕಲ್ ಕಾಲೇಜು, ಮೈಸೂರು ಮೆಡಿಕಲ್ ಕಾಲೇಜು ಮತ್ತು ಬಳ್ಳಾರಿಯ ವಿಜಯನಗರ ಮೆಡಿಕಲ್ ಕಾಲೇಜುಗಳಿಗೆ ತಲಾ 250 ಎಂ.ಬಿ.ಬಿ.ಎಸ್. ಸೀಟುಗಳ ಇಂಟೇಕ್ ನಿಗದಿಪಡಿಸಲಾಗಿದೆ. ಬೆಳಗಾವಿ, ಬೀದರ್, ಗುಲ್ಬರ್ಗಾ, ಹಾಸನ, ಹುಬ್ಬಳ್ಳಿ, ರಾಯಚೂರು ಮತ್ತು ಬೆಂಗಳೂರಿನ ಅಟಲ್ ಬಿಹಾರಿ ವಾಜಪೇಯಿ ಮೆಡಿಕಲ್ ಕಾಲೇಜುಗಳಿಗೆ ತಲಾ 200 ಎಂ.ಬಿ.ಬಿ.ಎಸ್. ಸೀಟುಗಳ ಇಂಟೇಕ್ ನಿಗದಿಪಡಿಸಲಾಗಿದೆ. ಉಳಿದ ಹದಿನಾಲ್ಕು ಸರಕಾರಿ ಮೆಡಿಕಲ್ ಕಾಲೇಜುಗಳಿಗೆ ತಲಾ ನೂರು ಎಂ.ಬಿ.ಬಿ.ಎಸ್.ಸೀಟುಗಳ ಇಂಟೇಕ್ ನಿಗದಿಪಡಿಸಿದ್ದಾರೆ. ಸರಕಾರಿ ಮೆಡಿಕಲ್ ಕಾಲೇಜುಗಳಲ್ಲಿ ಕೆಲವು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಎಂದು ಇನ್ನೂ ಕೆಲವು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಎಂದೂ ಕರೆಯಲ್ಪಡುತ್ತವೆ. 39 ಖಾಸಗಿ ಮೆಡಿಕಲ್ ಕಾಲೇಜುಗಳು ಮತ್ತು 24 ಸರಕಾರಿ ಮೆಡಿಕಲ್ ಕಾಲೇಜುಗಳು: ಒಟ್ಟು 63 ಮೆಡಿಕಲ್ ಕಾಲೇಜುಗಳು ಬೆಂಗಳೂರಿನ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಸಂಲಗ್ನತೆ ಪಡೆದುಕೊಂಡಿವೆ. 9 ಡೀಮ್ಡ್ ಮೆಡಿಕಲ್ ಕಾಲೇಜುಗಳು ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಸೇರಿಲ್ಲ. ಅವು ನೇರ ಯು.ಜಿ.ಸಿ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತವೆ.
ಸರಕಾರಿ ಮೆಡಿಕಲ್ ಕಾಲೇಜುಗಳಲ್ಲಿ ಲಭ್ಯ ಇರುವ ಒಟ್ಟು 4,250 ಎಂ.ಬಿ.ಬಿ.ಎಸ್. ಸೀಟುಗಳನ್ನು ಸದ್ಯ ಸಂಪೂರ್ಣ ಮೆರಿಟ್ ಆಧಾರದಲ್ಲಿ ಹಂಚಿಕೆ ಮಾಡಲಾಗುತ್ತಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರ ಆಡಳಿತದ ಚುಕ್ಕಾಣಿ ಹಿಡಿದ ಮೇಲೆ ನೀಟ್ ಪರೀಕ್ಷೆ ಶುರು ಮಾಡಿ, ಪ್ರತಿಶತ ಹದಿನೈದು ಎಂ.ಬಿ.ಬಿ.ಎಸ್. ಸೀಟುಗಳನ್ನು ಆಲ್ ಇಂಡಿಯಾ ಕೋಟಾ ಎಂದು ನಿಗದಿಪಡಿಸಿದರು. ಆ ಸೀಟುಗಳನ್ನು ಮೆಡಿಕಲ್ ಕೌನ್ಸಿಲ್ ಕಮಿಟಿಯು, ನೀಟ್ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದವರಿಗೆ ಮೆರಿಟ್ ಆಧಾರದಲ್ಲಿ ಹಂಚಿಕೆ ಮಾಡುತ್ತದೆ. ಈ ಮೊದಲು ಆ ಎಲ್ಲ ಸೀಟುಗಳು ಕರ್ನಾಟಕದ ಪ್ರತಿಭಾವಂತ ಅಭ್ಯರ್ಥಿಗಳಿಗೆ ಸಿಗುತ್ತಿದ್ದವು. ಕರ್ನಾಟಕವೂ ಸೇರಿದಂತೆ ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವ ಭಾರತದ ವಿವಿಧ ರಾಜ್ಯಗಳ ಅಭ್ಯರ್ಥಿಗಳು ಈ ಪಾಲನ್ನು ತಮ್ಮದಾಗಿಸಿಕೊಳ್ಳುತ್ತಾರೆ. 4,250 ಲಭ್ಯ ಎಂ.ಬಿ.ಬಿ.ಎಸ್. ಸೀಟುಗಳಲ್ಲಿ ಪ್ರತಿಶತ 85 ಸೀಟುಗಳು ಕರ್ನಾಟಕದ ಪ್ರತಿಭಾವಂತ ಅಭ್ಯರ್ಥಿಗಳಿಗೆ ದೊರೆಯುತ್ತವೆ. ಇದರಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗವಾರು ಸೀಟುಗಳು ಹಂಚಿಕೆಯಾಗುತ್ತವೆ. ಪ್ರತಿಶತ ಐದರಷ್ಟು ಕನ್ನಡ ಮಾಧ್ಯಮದ, ಪ್ರತಿಶತ ಹದಿನೈದರಷ್ಟು ಗ್ರಾಮೀಣ ಮತ್ತು ಪ್ರತಿಶತ ಎಂಟರಷ್ಟು ಸೀಟುಗಳು ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ಹಂಚಿಕೆ ಮಾಡಬೇಕು. ಕಲ್ಯಾಣ ಕರ್ನಾಟಕ ಭಾಗದ ಸರಕಾರಿ ಮೆಡಿಕಲ್ ಕಾಲೇಜುಗಳಲ್ಲಿ ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳಿಗೆ ಪ್ರತಿಶತ 70ರಷ್ಟು ಸೀಟುಗಳನ್ನು ಹಂಚಿಕೆ ಮಾಡಬೇಕು. ಸರಕಾರಿ ಮೆಡಿಕಲ್ ಕಾಲೇಜುಗಳಲ್ಲಿನ ಲಭ್ಯ ಪ್ರತಿಶತ 85ರಷ್ಟು ಸೀಟುಗಳನ್ನು ಕೌನ್ಸಿಲಿಂಗ್ ಮೂಲಕ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಹಂಚಿಕೆ ಮಾಡುತ್ತದೆ. ಸರಕಾರಿ ಮೆಡಿಕಲ್ ಕಾಲೇಜುಗಳಲ್ಲಿ ಸೀಟು ಪಡೆದುಕೊಳ್ಳವ ಅಭ್ಯರ್ಥಿಗಳಿಗೆ ಅತಿ ಕಡಿಮೆ ಶುಲ್ಕ ನಿಗದಿಯಾಗಿ ರುತ್ತದೆ. ಬಡ ಪ್ರತಿಭಾವಂತ ಮಕ್ಕಳೂ ವೈದ್ಯಕೀಯ ಶಿಕ್ಷಣ ಪಡೆಯಲು ಸಾಧ್ಯವಾಗಿದ್ದು ಸರಕಾರಿ ಮೆಡಿಕಲ್ ಕಾಲೇಜುಗಳ ಕಾರಣಕ್ಕೆ.
ಕರ್ನಾಟಕದಲ್ಲಿ ವೈದ್ಯಕೀಯ ಶಿಕ್ಷಣ ನೀಡುತ್ತಿರುವ 48 ಖಾಸಗಿ ಮೆಡಿಕಲ್ ಕಾಲೇಜುಗಳನ್ನು ಮೂರು ಬಗೆಯಲ್ಲಿ ವಿಂಗಡಿಸಬಹುದು. ಖಾಸಗಿ ಮೆಡಿಕಲ್ ಕಾಲೇಜುಗಳು, ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತ ಮೆಡಿಕಲ್ ಕಾಲೇಜುಗಳು ಮತ್ತು ಡೀಮ್ಡ್ ಮೆಡಿಕಲ್ ಕಾಲೇಜುಗಳು ಎಂದು.
ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಒಟ್ಟು ಹದಿನಾಲ್ಕು ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತ ಮೆಡಿಕಲ್ ಕಾಲೇಜುಗಳಿವೆ. 9 ಡೀಮ್ಡ್ ಮೆಡಿಕಲ್ ಕಾಲೇಜುಗಳಲ್ಲಿ ಒಂದು ಧಾರ್ಮಿಕ ಅಲ್ಪಸಂಖ್ಯಾತ ಮೆಡಿಕಲ್ ಕಾಲೇಜು ಇದೆ. ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತ ಮೆಡಿಕಲ್ ಕಾಲೇಜುಗಳಲ್ಲಿ ಸರಕಾರಿ ಸೀಟುಗಳ ಪ್ರಮಾಣ ಕೇವಲ ಪ್ರತಿಶತ 25ರಷ್ಟು ಇರುತ್ತದೆ. ಅಂದರೆ ಅಲ್ಲಿ ಮೆರಿಟ್ ಅಭ್ಯರ್ಥಿಗಳಿಗೆ ದೊರೆಯುವುದು ನೂರಕ್ಕೆ 25 ಸೀಟುಗಳು ಮಾತ್ರ. ಕಳೆದ ಶೈಕ್ಷಣಿಕ ವರ್ಷದವರೆಗೂ ರಾಜ್ಯದಲ್ಲಿರುವ 9 ಡೀಮ್ಡ್ ಮೆಡಿಕಲ್ ಕಾಲೇಜುಗಳ ಆಡಳಿತ ಮಂಡಳಿಯವರು ಮೆರಿಟ್ ಕೋಟಾ ಅಂದರೆ ಸರಕಾರಿ ಸೀಟುಗಳನ್ನು ನಿಗದಿಪಡಿಸಲು ಸಮ್ಮತಿಸಿರಲಿಲ್ಲ. ಪಾಪ ಡಾ. ಶರಣಪ್ರಕಾಶ ಪಾಟೀಲರು ನಿರಂತರ ಮಾತುಕತೆ ನಡೆಸಿ ಡೀಮ್ಡ್ ಮೆಡಿಕಲ್ ಕಾಲೇಜುಗಳಲ್ಲೂ ಪ್ರತಿಶತ 25ರಷ್ಟು ಮೆರಿಟ್ ಕೋಟಾ ನೀಡಲು ಒಪ್ಪಿಸಿದ್ದಾರೆ. 35 ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ (ಅಲ್ಪಸಂಖ್ಯಾತರಲ್ಲದ) ಪ್ರತಿಶತ 40ರಷ್ಟು ಎಂ.ಬಿ.ಬಿ.ಎಸ್. ಸೀಟುಗಳು ಮೆರಿಟ್ ಅಭ್ಯರ್ಥಿಗಳಿಗೆ ಅಂದರೆ ಪ್ರತಿಭಾವಂತರಿಗೆ ದೊರೆಯುತ್ತವೆ. ಈ ಮೆಡಿಕಲ್ ಕಾಲೇಜುಗಳಲ್ಲಿ ಶುಲ್ಕ ಪ್ರಮಾಣ ಮಧ್ಯಮ ವರ್ಗದವರ ಕೈಗೆ ಎಟುಕುವಂತಿರುತ್ತದೆ. ಸಮಸ್ಯೆಯೆಂದರೆ ಖಾಸಗಿ ಮತ್ತು ಡೀಮ್ಡ್ ಮೆಡಿಕಲ್ ಕಾಲೇಜುಗಳಲ್ಲಿ ಸರಕಾರಿ ಕೋಟಾದ ಅಭ್ಯರ್ಥಿಗಳನ್ನು ಮಲ ಮಕ್ಕಳಂತೆ ನಡೆಸಿಕೊಳ್ಳುತ್ತಾರೆ.
ಪ್ರಸ್ತುತ 2025-26ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಅನ್ವಯವಾಗುವಂತೆ ಹೆಚ್ಚುವರಿಯಾಗಿ ದೊರೆತ 450 ಎಂ.ಬಿ.ಬಿ.ಎಸ್. ಸೀಟುಗಳಲ್ಲಿ ಪ್ರತಿಶತ ಹದಿನೈದರಷ್ಟು ಸೀಟುಗಳನ್ನು ಎನ್.ಆರ್.ಐ. ಕೋಟಾದಲ್ಲಿ ವಿದೇಶದಲ್ಲಿ ನೆಲೆಸಿರುವ ಭಾರತೀಯರಿಗೆ ನೀಡುವ ತೀರ್ಮಾನ ರಾಜ್ಯ ಸರಕಾರ ಕೈಗೊಂಡಿದೆ. ಪ್ರತೀ ಎಂ.ಬಿ.ಬಿ.ಎಸ್. ಸೀಟನ್ನು ಕೇವಲ 25 ಲಕ್ಷ ಹಣಕ್ಕೆ ಮಾರಾಟ ಮಾಡುವ ಯೋಜನೆ ಸರಕಾರದ್ದು. ಖಾಸಗಿ ಮತ್ತು ಡೀಮ್ಡ್ ಮೆಡಿಕಲ್ ಕಾಲೇಜುಗಳಲ್ಲಿ ಮೊದಲಿನಿಂದಲೂ ಪ್ರತಿಶತ ಹದಿನೈದರಷ್ಟು ಎಂ.ಬಿ.ಬಿ.ಎಸ್. ಸೀಟುಗಳನ್ನು ವಿದೇಶದಲ್ಲಿ ನೆಲೆಸಿರುವ ಭಾರತೀಯರಿಗೆ (ಎನ್.ಆರ್.ಐ) ನೀಡಲಾಗುತ್ತಿದೆ. ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಒಂದು ಎಂ.ಬಿ.ಬಿ.ಎಸ್. ಸೀಟಿನ ಬೆಲೆ ಒಂದರಿಂದ ಒಂದೂವರೆ ಕೋಟಿ ರೂಪಾಯಿ. ಸರಕಾರಿ ಮೆಡಿಕಲ್ ಕಾಲೇಜುಗಳನ್ನು ಆರ್ಥಿಕವಾಗಿ ಸ್ವಾವಲಂಬಿ ಸಂಸ್ಥೆಯನ್ನಾಗಿ ಮಾಡುವುದಕ್ಕಾಗಿ ಪ್ರತಿಶತ ಹೈದಿನೈದರಷ್ಟು ಸೀಟುಗಳನ್ನು ಎನ್.ಆರ್.ಐ.ಗಳಿಗೆ ಮಾರಾಟ ಮಾಡಬೇಕಾಗಿದೆ ಎಂಬ ಸಮರ್ಥನೆ, ಸಮಜಾಯಿಸಿ ಸರಕಾರದ್ದು. ಆರ್ಥಿಕ ಸ್ವಾವಲಂಬನೆ ಕೇವಲ 25 ಲಕ್ಷ ರೂ. ಪಡೆಯುವುದರಿಂದ ಆಗುವುದಿಲ್ಲ. ಸದ್ಯ ಹೆಚ್ಚುವರಿಯಾಗಿ ದೊರೆತ ಸೀಟುಗಳಲ್ಲಿ ಎನ್.ಆರ್.ಐ.ಗಳಿಗೆ ನೀಡುವುದಾಗಿ ಹೇಳಿದ್ದಾರೆ. ಮುಂದಿನ ವರ್ಷದಿಂದ ಒಟ್ಟು ಸರಕಾರಿ ಮೆಡಿಕಲ್ ಕಾಲೇಜುಗಳ 4,250 ಎಂ.ಬಿ.ಬಿ.ಎಸ್. ಸೀಟುಗಳ ಪೈಕಿ ಪ್ರತಿಶತ 15 ಎಂದಾದರೆ 638 ಸೀಟುಗಳನ್ನು ಮೆರಿಟ್ ಕೋಟಾದಿಂದ ಕಿತ್ತುಕೊಂಡಾಗುತ್ತದೆ.ಸರಕಾರಿ ಮೆಡಿಕಲ್ ಕಾಲೇಜುಗಳ ಅಪ್ಪಟ ಮೆರಿಟ್ ಸೀಟುಗಳನ್ನು ಕಿತ್ತುಕೊಂಡು ಎನ್.ಆರ್.ಐ.ಗಳಿಗೆ ಮಾರಿ ಆರ್ಥಿಕ ಸ್ವಾವಲಂಬನೆ ಸಾಧಿಸುವುದಕ್ಕಿಂತ ಖಾಸಗಿ ಮತ್ತು ಡೀಮ್ಡ್ ಮೆಡಿಕಲ್ ಕಾಲೇಜುಗಳ ಆಡಳಿತ ಮಂಡಳಿಯೊಂದಿಗೆ ಚೌಕಾಸಿ ನಡೆಸಿ ಅಲ್ಲೇ ಸರಕಾರಿ ಎನ್.ಆರ್.ಐ. ಕೋಟಾ ನಿಗದಿಪಡಿಸಬಹುದಲ್ಲ. ಅಷ್ಟಕ್ಕೂ ಪ್ರತಿಶತ 15ರಷ್ಟು ಸರಕಾರಿ ಮೆಡಿಕಲ್ ಕಾಲೇಜುಗಳ ಸೀಟುಗಳನ್ನು ಕನ್ನಡಿಗ ಎನ್.ಆರ್.ಐ.ಗಳಿಗೆ ನೀಡುತ್ತಾರೆ ಎಂಬುದರ ಬಗ್ಗೆ ಸ್ಪಷ್ಟನೆ ಇಲ್ಲ. ಈಗಾಗಲೇ ಮೋದಿಯವರು ಪ್ರತಿಶತ 15ರಷ್ಟು ಸೀಟುಗಳನ್ನು ಆಲ್ ಇಂಡಿಯಾ ಕೋಟಾ ಅಂತ ನಿಗದಿಪಡಿಸಿ ಕನ್ನಡದ ಮಕ್ಕಳಿಗೆ ಅನ್ಯಾಯ ಮಾಡಿದ್ದರು. ಈಗ ಮತ್ತೆ ರಾಜ್ಯ ಸರಕಾರವೇ ಕನ್ನಡದ ಮಕ್ಕಳಿಗೆ ಅನ್ಯಾಯ ಮಾಡುತ್ತಿದೆ. ಸರಕಾರಿ ಮೆಡಿಕಲ್ ಕಾಲೇಜುಗಳಲ್ಲಿ ಲಭ್ಯ ಇರುವ ಮೆರಿಟ್ ಸೀಟುಗಳಲ್ಲಿ ಪ್ರತಿಶತ 15ರಷ್ಟನ್ನು ಎನ್.ಆರ್.ಐ.ಗಳಿಗೆ ನೀಡಬೇಕೆಂಬ ತೀರ್ಮಾನವನ್ನು ರಾಜ್ಯದ ಪ್ರತಿಭಾವಂತ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಪುನರ್ ಪರಿಶೀಲನೆ ಮಾಡಬೇಕು.
ರಾಜ್ಯದಲ್ಲಿನ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತ ಮೆಡಿಕಲ್ ಕಾಲೇಜುಗಳಲ್ಲಿನ ಒಟ್ಟು ಸೀಟುಗಳಲ್ಲಿ ಪ್ರತಿಶತ 25 ಮಾತ್ರ ಸರಕಾರಿ ಕೋಟಾದಲ್ಲಿ ಸಿಗುತ್ತದೆ. ಆದರೆ ಡೀಮ್ಡ್ ಮೆಡಿಕಲ್ ಕಾಲೇಜುಗಳು ಯಾವ ಆಧಾರದಲ್ಲಿ ಮೆರಿಟ್ ಸೀಟುಗಳ ಸಂಖ್ಯೆಯನ್ನು ಪ್ರತಿಶತ 25ಕ್ಕೆ ಇಳಿಸಲಾಗಿದೆ? ಡೀಮ್ಡ್ ಮೆಡಿಕಲ್ ಕಾಲೇಜು ಆಗುವುದಕ್ಕಿಂತ ಮೊದಲು ಅಲ್ಲಿ 60:40ರ ಅನುಪಾತದಲ್ಲಿ ಸೀಟುಗಳ ಹಂಚಿಕೆ ಯಾಗುತ್ತಿತ್ತು. 9 ಡೀಮ್ಡ್ ಮೆಡಿಕಲ್ ಕಾಲೇಜುಗಳಲ್ಲಿ ಸಚಿವರಾದ ಎಂ.ಬಿ. ಪಾಟೀಲರ ಶ್ರೀ ಬಿ.ಎಂ. ಪಾಟೀಲ್ ಮೆಡಿಕಲ್ ಕಾಲೇಜು, ಡಾ. ಜಿ. ಪರಮೇಶ್ವರ್ ಅವರ ಶ್ರೀ ಸಿದ್ದಾರ್ಥ ಮೆಡಿಕಲ್ ಕಾಲೇಜು, ಕಾಂಗ್ರೆಸ್ ಶಾಸಕ ಮಹಾಂತೇಶ್ ಕೌಜಲಗಿಯವರ ಜವಾಹರಲಾಲ್ ನೆಹರೂ ಮೆಡಿಕಲ್ ಕಾಲೇಜು, ದಿ. ಆರ್.ಎಲ್. ಜಾಲಪ್ಪ ಅವರ ಶ್ರೀ ದೇವರಾಜ ಅರಸು ಮೆಡಿಕಲ್ ಕಾಲೇಜುಗಳು ಸೇರಿಕೊಂಡಿವೆ. ಜನ ಸೇವೆ ಮಾಡುವವರು ಸರಕಾರದ ಪರ ಇರಬೇಕಲ್ಲವೇ?
ಕರ್ನಾಟಕ ಅತ್ಯುತ್ತಮ ಗುಣಮಟ್ಟದ ವೈದ್ಯಕೀಯ ಶಿಕ್ಷಣಕ್ಕೆ ಹೆಸರು ಮಾಡಿದೆ. ಹಾಗೆಯೇ ವೈದ್ಯಕೀಯ ಶಿಕ್ಷಣದ ವ್ಯಾಪಾರ ವಹಿವಾಟು ಅತಿ ಹೆಚ್ಚು ನಡೆಯುವುದು ಕರ್ನಾಟಕದಲ್ಲೇ. ಖಾಸಗಿ ಮತ್ತು ಡೀಮ್ಡ್ ಮೆಡಿಕಲ್ ಕಾಲೇಜುಗಳನ್ನು ನಿಯಂತ್ರಿಸುವ ಇಚ್ಛಾಶಕ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ನಿರೀಕ್ಷಿಸಲಾಗದು. ಯಾಕೆಂದರೆ ಖಾಸಗಿ ಮೆಡಿಕಲ್ ಕಾಲೇಜು ಲಾಬಿ ಶಕ್ತಿಯುತವಾಗಿ ಬೆಳೆದು ನಿಂತಿದೆ. ಕನಿಷ್ಠ ಪಕ್ಷ ಸರಕಾರಿ ಮೆಡಿಕಲ್ ಕಾಲೇಜುಗಳಲ್ಲಿ ಲಭ್ಯ ಇರುವ ಸೀಟುಗಳನ್ನು ರಾಜ್ಯದ ಬಡ ಮಕ್ಕಳಿಗೆ ಸಿಗುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಲಿ. ಇಲ್ಲಿ ಕೇವಲ ಎಂ.ಬಿ.ಬಿ.ಎಸ್. ಸೀಟುಗಳ ವಿರಾಟ್ ಸ್ವರೂಪ ಕಟ್ಟಿಕೊಡಲಾಗಿದೆ. ಸ್ನಾತಕೋತ್ತರ ಪದವಿ ಸೀಟುಗಳ ಬೆಲೆ ಕೇಳಿದರೇನೇ ಮಧ್ಯಮ ವರ್ಗದವರು ಬೆಚ್ಚಿ ಬೀಳುತ್ತಾರೆ. ಡಾ. ಶರಣ ಪ್ರಕಾಶ ಪಾಟೀಲ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂವೇದನಾಶೀಲರು. ಕರ್ನಾಟಕದ ಬಡ ಪ್ರತಿಭಾವಂತರಿಗೆ ಅನ್ಯಾಯವಾಗದಂತೆ ನಿರ್ಧಾರ ಕೈಗೊಳ್ಳಲಿ.