×
Ad

ಕರ್ನಾಟಕ ವಿ.ವಿ.ಗೆ ಕುಲಸಚಿವರೇ ಕಂಟಕ

Update: 2026-02-21 10:40 IST

ಕರ್ನಾಟಕ ಸರಕಾರ ವಿಶ್ವವಿದ್ಯಾನಿಲಯಗಳಿಗೆ ಕುಲಸಚಿವರನ್ನಾಗಿ ನೇಮಕ ಮಾಡುವಾಗ ಕನಿಷ್ಠ ಪಕ್ಷ ಶೈಕ್ಷಣಿಕ ವಲಯದ ಮಹತ್ವ ಗೊತ್ತಿರುವ ಪ್ರಾಮಾಣಿಕರನ್ನು ಆಯ್ಕೆ ಮಾಡಬೇಕು. ಯಾರು ಒಪ್ಪಲಿ ಬಿಡಲಿ ಈ ಹೊತ್ತಿಗೂ ವಿಶ್ವವಿದ್ಯಾನಿಲಯಗಳ ಪದವಿಗಳಿಗೆ ಒಂದು ಮೌಲ್ಯ ಮತ್ತು ಪಾವಿತ್ರ್ಯ ಇದೆ. ಇಂತಹ ಪದವಿಗಳನ್ನು ಹೆಚ್ಚು ಮೌಲ್ಯಯುತ ಮಾಡಬೇಕೆಂದರೆ ಕಳಂಕಿತರನ್ನು ವಿಶ್ವವಿದ್ಯಾನಿಲಯಗಳ ಆಡಳಿತ ವ್ಯವಸ್ಥೆಯಿಂದ ದೂರ ಇಡಬೇಕು.

ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷದ ಬಿ.ಎಸ್. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಡಾ. ಸಿ.ಎನ್. ಅಶ್ವಥ್ ನಾರಾಯಣ ಅವರು ಉನ್ನತ ಶಿಕ್ಷಣ ಇಲಾಖೆಗೆ ಮಂತ್ರಿಯಾಗಿದ್ದರು. ಉನ್ನತ ಶಿಕ್ಷಣ ಇಲಾಖೆಯ ಜೊತೆಗೆ ಅನಾಯಾಸವಾಗಿ ಹಣ ತಂದು ಕೊಡುವ ಐ.ಟಿ., ಬಿ.ಟಿ. ಖಾತೆಯ ಸಚಿವರಾಗಿದ್ದರು. ವೈದ್ಯಕೀಯ ಶಿಕ್ಷಣ ಪಡೆದು ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ಅಕಾಡಮಿಕ್ ಕೌನ್ಸಿಲ್ ಸದಸ್ಯರಾಗಿ ಕಾರ್ಯ ನಿರ್ವಹಿಸಿ ಅನುಭವ ಪಡೆದಿದ್ದ ಡಾ. ಸಿ.ಎನ್. ಅಶ್ವಥ್ ನಾರಾಯಣ ಅವರು ಉನ್ನತ ಶಿಕ್ಷಣ ಇಲಾಖೆಯ ಮಂತ್ರಿಯಾಗುವ ಅವಕಾಶ ಸಿಕ್ಕಾಗ ಅತ್ಯುತ್ತಮ ಕೆಲಸ ಮಾಡಿ ಹೆಸರು ಮಾಡಬಹುದಿತ್ತು. ಸುದೀರ್ಘ ನಾಲ್ಕು ವರ್ಷಗಳ ಕಾಲ ಉನ್ನತ ಶಿಕ್ಷಣ ಸಚಿವರಾಗಿದ್ದ ಡಾ. ಸಿ.ಎನ್. ಅಶ್ವಥ್ ನಾರಾಯಣ ಅವರು ಮನಸ್ಸು ಮಾಡಿದ್ದರೆ ರಾಜ್ಯದ ಎಲ್ಲ ವಿಶ್ವವಿದ್ಯಾನಿಲಯಗಳನ್ನು ಅತ್ಯುತ್ತಮ ಶೈಕ್ಷಣಿಕ ಕೇಂದ್ರಗಳನ್ನಾಗಿ ರೂಪಿಸಬಹುದಿತ್ತು.

ಡಾ. ಸಿ.ಎನ್. ಅಶ್ವಥ್ ನಾರಾಯಣ ಅವರು ರಾಜ್ಯದಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದಾಗ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಆಡಳಿತ ನಡೆಸುತ್ತಿತ್ತು. ಕರ್ನಾಟಕದ ಎಲ್ಲ ಸರಕಾರಿ ವಿಶ್ವವಿದ್ಯಾನಿಲಯಗಳಲ್ಲಿ ಪ್ರತಿಶತ ಅರುವತ್ತರಷ್ಟು ಬೋಧಕ ಮತ್ತು ಬೋಧಕೇತರ ಹುದ್ದೆಗಳು ಖಾಲಿ ಇದ್ದವು. ಈಗ ಖಾಲಿ ಹುದ್ದೆಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಬೋಧಕ ಹುದ್ದೆಗಳು ಖಾಲಿ ಇರುವುದರಿಂದ ವಿಶ್ವವಿದ್ಯಾನಿಲಯಗಳಲ್ಲಿ ಸಂಶೋಧನಾ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿವೆ. ಸ್ನಾತಕೋತ್ತರ ಪದವಿ ಪೂರೈಸಿರುವ ವಿದ್ಯಾರ್ಥಿಗಳಿಗೆ ಪಿಎಚ್.ಡಿ. ಅಧ್ಯಯನ ಕೈಗೊಳ್ಳಲು ಮಾರ್ಗದರ್ಶಕರೇ ಲಭ್ಯ ಇಲ್ಲ. ಅಷ್ಟು ಮಾತ್ರವಲ್ಲ: ರಾಜ್ಯದ ಬಹುಪಾಲು ವಿಶ್ವವಿದ್ಯಾನಿಲಯಗಳು ಮೂಲಭೂತ ಸೌಕರ್ಯಗಳಿಲ್ಲದೆ ಕಳೆಗುಂದಿವೆ. ಕೇಂದ್ರ ಸರಕಾರದಿಂದ ಹೆಚ್ಚು ಅನುದಾನ ತಂದು ಸರಕಾರಿ ವಿಶ್ವವಿದ್ಯಾನಿಲಯಗಳನ್ನು ಖಾಸಗಿ ವಿವಿಗಳಿಗೆ ಮೀರಿಸುವಂತೆ ಅತ್ಯುತ್ತಮ ಗುಣಮಟ್ಟದಲ್ಲಿ ಪುನರ್ ಸಂಘಟಿಸಬಹುದಿತ್ತು. ಶತಮಾನ ಪೂರೈಸಿರುವ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಕೇಂದ್ರೀಯ ವಿಶ್ವವಿದ್ಯಾನಿಲಯವನ್ನಾಗಿ ಪರಿವರ್ತಿಸಬಹುದಿತ್ತು. ಎಪ್ಪತ್ತೈದು ವರ್ಷಗಳನ್ನು ಪೂರೈಸಿರುವ ಕರ್ನಾಟಕ ವಿಶ್ವವಿದ್ಯಾನಿಲಯವನ್ನು ವಿಶ್ವಭಾರತಿ ವಿಶ್ವವಿದ್ಯಾನಿಲಯದ ಅಂತರ್‌ರಾಷ್ಟ್ರೀಯ ಮಟ್ಟದ ಮನ್ನಣೆಗೆ ಪಾತ್ರವಾಗುವಂತೆ ಪುನರ್ ರೂಪಿಸಲು ಅವಕಾಶಗಳಿದ್ದವು. 64 ವರ್ಷಗಳನ್ನು ಪೂರೈಸಿರುವ ಜ್ಞಾನಭಾರತಿ (ಬೆಂಗಳೂರು ವಿಶ್ವವಿದ್ಯಾನಿಲಯ)ಯನ್ನು ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಹಾಗೆ ಅತ್ಯುತ್ತಮ ಗುಣಮಟ್ಟದ ಸಂಶೋಧನಾ ಕೇಂದ್ರವನ್ನಾಗಿ ಕಟ್ಟಬಹುದಿತ್ತು. ಅವಕಾಶ ಇದ್ದಾಗ ಅತ್ಯುತ್ತಮ ಕೆಲಸಗಳನ್ನು ಮಾಡದ ಡಾ. ಸಿ.ಎನ್. ಅಶ್ವಥ್ ನಾರಾಯಣ ಅವರು ಮೂರು ಕೆಟ್ಟ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳನ್ನು ದುಸ್ಥಿತಿಗೆ ತಳ್ಳಿದರು. ಯುಯುಸಿಎಂಎಸ್ ವೆಬ್ ಪೋರ್ಟಲ್ ಪರಿಚಯಿಸುವ ಮೂಲಕ ಕರ್ನಾಟಕದ ಎಲ್ಲ ವಿಶ್ವವಿದ್ಯಾನಿಲಯಗಳ ಸ್ವಾಯತ್ತೆ ಕಿತ್ತುಕೊಂಡರು. ಬೀದರ್, ಹಾವೇರಿ, ಹಾಸನ, ಕೊಡಗು, ಕೊಪ್ಪಳ, ಬಾಗಲಕೋಟೆ, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಹೊಸ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಿ, ಅತ್ಯಂತ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳು ನಿತ್ರಾಣ ಸ್ಥಿತಿಗೆ ತಲುಪುವಂತೆ ಮಾಡಿದರು. ಮೂರನೆಯ ಅತ್ಯಂತ ಕೆಟ್ಟ ನಿರ್ಧಾರವೆಂದರೆ, ಕೆಎಎಸ್ ಅಧಿಕಾರಿಗಳನ್ನು ವಿಶ್ವವಿದ್ಯಾನಿಲಯಗಳ ಕುಲಸಚಿವರನ್ನಾಗಿ ಕಳುಹಿಸುವ ಆದೇಶ ಮಾಡಿದ್ದು. ದೇಶದ ಪ್ರತಿಷ್ಠಿತ ಕೇಂದ್ರೀಯ ವಿಶ್ವವಿದ್ಯಾನಿಲಯಗಳಲ್ಲಾಗಲಿ, ಐಐಟಿಗಳಲ್ಲಾಗಲಿ, ಸರಕಾರದ ಸೇವೆಗಳಲ್ಲಿರುವ ಅಧಿಕಾರಿಗಳನ್ನು ಕುಲಸಚಿವರನ್ನಾಗಿ ನೇಮಿಸುವ ನಿಯಮ ಇಲ್ಲ. ಬೆಂಗಳೂರಿನಲ್ಲಿ ವಿ.ಕೆ.ಆರ್.ವಿ. ರಾವ್ ಸ್ಥಾಪಿಸಿದ (1972) ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಅಧ್ಯಯನ ಸಂಸ್ಥೆಯ (ಐಸೆಕ್) ಕುಲಸಚಿವರ ನೇಮಕಾತಿಯಲ್ಲೂ ಅಧಿಕಾರಿಗಳಿಗೆ ಅವಕಾಶ ಕಲ್ಪಿಸಿಲ್ಲ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮತ್ತು ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಕುಲಸಚಿವರ ನೇಮಕಾತಿಯ ಅಧಿಕಾರ ಸಿಂಡಿಕೇಟ್-ಕುಲಪತಿಗಳಿಗೆ ನೀಡಲಾಗಿದೆ. ಒಂದು ವಿಶ್ವವಿದ್ಯಾನಿಲಯಕ್ಕೆ ಕುಲಸಚಿವರನ್ನು ನೇಮಿಸಿಕೊಳ್ಳುವ ಅಧಿಕಾರ ಸಿಂಡಿಕೇಟ್ ಮತ್ತು ಕುಲಸಚಿವರಿಗೆ ಇದ್ದರೆ ಸುಗಮ ಆಡಳಿತ ಸಾಧ್ಯವಾಗುತ್ತದೆ. ಡಾ.ಸಿ.ಎನ್. ಅಶ್ವಥ್ ನಾರಾಯಣ ಉನ್ನತ ಶಿಕ್ಷಣ ಸಚಿವರಾಗುವುದಕ್ಕೂ ಮೊದಲು ಹಿರಿಯ ಪ್ರಾಧ್ಯಾಪಕರನ್ನು ಕುಲಸಚಿವರನ್ನಾಗಿ ನೇಮಿಸುವ ಪರಿಪಾಠ ಇತ್ತು. ಆಗಲೂ ಸಮಸ್ಯೆಗಳಿದ್ದವು. ಆದರೆ ಕೆಎಎಸ್ ಅಧಿಕಾರಿಗಳನ್ನು ವಿಶ್ವವಿದ್ಯಾನಿಲಯಗಳ ಕುಲಸಚಿವರನ್ನಾಗಿ ನೇಮಕ ಮಾಡಿದ ಮೇಲೆ ಸಂಘರ್ಷಗಳು ಹೆಚ್ಚಾಗಿವೆ. ಕುಲಪತಿ, ಕುಲಸಚಿವ ಮತ್ತು ಸಿಂಡಿಕೇಟ್ ಸದಸ್ಯರ ನಡುವೆ ಸಮನ್ವಯತೆ ಇಲ್ಲದಿದ್ದರೆ ವಿಶ್ವವಿದ್ಯಾನಿಲಯಗಳು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುವುದಿಲ್ಲ. ಕರ್ನಾಟಕದ ಎಲ್ಲ ವಿಶ್ವವಿದ್ಯಾನಿಲಯಗಳು ಸದ್ಯ ಕೆಎಎಸ್ ಅಧಿಕಾರಿಗಳನ್ನು ಕುಲಸಚಿವರನ್ನಾಗಿ ಹೊಂದಿವೆ. ಬೆರಳೆಣಿಕೆಯ ಅಧಿಕಾರಿಗಳು ಸಂಘರ್ಷವಿಲ್ಲದೆ ಶೈಕ್ಷಣಿಕ ಮಹತ್ವ ಅರಿತು ಕಾರ್ಯ ನಿರ್ವಹಿಸುತ್ತಿರಬಹುದು. ಆದರೆ ಬಹುತೇಕ ಕಡೆ ಸಮನ್ವಯತೆಯ ಕೊರತೆ ಢಾಳಾಗಿ ಎದ್ದು ಕಾಣುತ್ತದೆ.

ಆದರೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಕುಲಪತಿ -ಕುಲಸಚಿವರ ನಡುವೆ ಸಮನ್ವಯತೆ ಸಾಧ್ಯವಾಗದೆ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತಗೊಂಡಿವೆ. ಸಿಂಡಿಕೇಟ್ ಮತ್ತು ಅಕಾಡಮಿಯ ಸದಸ್ಯರು ಬೇಸತ್ತು ಹೋಗಿದ್ದಾರೆ. ಕರ್ನಾಟಕ ಸರಕಾರ ಪ್ರಾಮಾಣಿಕರು ಮತ್ತು ಕ್ರಿಯಾಶೀಲರನ್ನು ಸಿಂಡಿಕೇಟ್-ಅಕಾಡಮಿಕ್ ಸದಸ್ಯರನ್ನಾಗಿ ನೇಮಿಸಿದೆ. ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ಯಾರಿಗೂ ಕಿರುಕುಳ ಕೊಡದ ಸಜ್ಜನ ವ್ಯಕ್ತಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯ, ಪ್ರಾದೇಶಿಕ ನ್ಯಾಯ ಮತ್ತು ಪ್ರಾಮಾಣಿಕತೆ-ದಕ್ಷತೆಯನ್ನು ಪರಿಗಣಿಸಿ ಅತ್ಯುತ್ತಮ ಶೈಕ್ಷಣಿಕ ಹಿನ್ನೆಲೆಯುಳ್ಳವರನ್ನೇ ಕುಲಪತಿಯನ್ನಾಗಿ ನೇಮಿಸಿದ್ದಾರೆ. ಮುಖ್ಯಮಂತ್ರಿ ಕಚೇರಿ ಹಣವಿಲ್ಲದವರೂ, ಪ್ರತಿಭಾವಂತರು ಕಲಪತಿಯಾಗಬಹುದು ಎಂಬುದನ್ನು ರುಜುವಾತುಪಡಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯ, ಪ್ರತಿಭಾ ನ್ಯಾಯದ ಆಧಾರದಲ್ಲಿ ಕಳೆದ ಏಳು ತಿಂಗಳ ಹಿಂದೆ ಪ್ರೊ. ಎ.ಎಂ. ಖಾನ್ ಅವರನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯಕ್ಕೆ ಕುಲಪತಿಯನ್ನಾಗಿ ನೇಮಿಸಲು ರಾಜ್ಯಪಾಲರಿಗೆ ಶಿಫಾರಸು ಮಾಡಿದ್ದರು. ರಾಜ್ಯಪಾಲರು ಕೂಡಾ ಅನಗತ್ಯ ರಾಜಕೀಯ ಮಾಡದೆ ಸರಕಾರದ ಶಿಫಾರಸನ್ನು ಮಾನ್ಯ ಮಾಡಿ ಮಂಗಳೂರು ವಿಶ್ವವಿದ್ಯಾನಿಲಯದ ಹಿರಿಯ ಪ್ರಾಧ್ಯಾಪಕ ಪ್ರೊ. ಎ.ಎಂ. ಖಾನ್ ಅವರನ್ನು ಕುಲಪತಿಯನ್ನಾಗಿ ನೇಮಿಸಿ ಆದೇಶ ಹೊರಡಿಸಿದರು. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ, ಡೀನ್ ಆಗಿ, ಮೌಲ್ಯ ಮಾಪನ ಮತ್ತು ಆಡಳಿತಾಂಗದ ಕುಲಸಚಿವರಾಗಿ ಅತ್ಯುತ್ತಮ ಕೆಲಸ ಮಾಡಿ ಸೈ ಎನಿಸಿಕೊಂಡವರು. ಇಲೆಕ್ಟ್ರಾನಿಕ್ಸ್ ವಿಷಯದ ಮೇಲೆ ಪ್ರಭುತ್ವ ಸಾಧಿಸಿರುವ ಪ್ರೊ. ಖಾನ್ ಅವರು ಬೆಲ್ಜಿಯಂ ವಿಶ್ವವಿದ್ಯಾನಿಲಯದಲ್ಲಿ ಪಿಎಚ್.ಡಿ. ಅಧ್ಯಯನ ಕೈಗೊಂಡಿದ್ದಾರೆ. ಬಯೋ ಮೆಡಿಕಲ್ ಇಮೇಜ್ ಪ್ರೊಸೆಸ್ಸಿಂಗ್, ಕಂಪ್ಯೂಟರ್ ನೆಟ್ ವರ್ಕ್ಸ್ ಸೇರಿದಂತೆ ವಿವಿಧ ವಲಯದಲ್ಲಿ ವಿಶೇಷ ಸಂಶೋಧನೆ ಮಾಡಿ ಅಪಾರ ಖ್ಯಾತಿ ಪಡೆದಿದ್ದಾರೆ. ಎಲ್ಲಕ್ಕೂ ಮಿಗಿಲಾಗಿ ಪ್ರಾಮಾಣಿಕ ವ್ಯಕ್ತಿತ್ವ ಕಾಪಾಡಿಕೊಂಡಿದ್ದಾರೆ. ದಕ್ಷರು, ಕ್ರಿಯಾಶೀಲರೂ ಆಗಿರುವ ಪ್ರೊ. ಎ.ಎಂ. ಖಾನ್ ಅವರ ಅಧಿಕಾರಾವಧಿಯಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯಕ್ಕೆ ಕಾಯಕಲ್ಪ ದೊರೆಯಬಹುದೆಂದು ಆ ಭಾಗದ ಜನರು ಕನಸುಗಣ್ಣಿನಿಂದ ಎದುರು ನೋಡುತ್ತಿದ್ದರು.

ಪ್ರೊ. ಎ.ಎಂ. ಖಾನ್ ಅವರು ಮೂಲತಃ ಧಾರವಾಡದವರು. ಕರ್ನಾಟಕ ವಿಶ್ವವಿದ್ಯಾನಿಲಯದ ಭವ್ಯ ಪರಂಪರೆಯ ಬಗ್ಗೆ ಅಪಾರ ಗೌರವ ಹೊಂದಿದದವರು. ಎಲ್ಲಕ್ಕೂ ಮಿಗಿಲಾಗಿ ಆದರ್ಶ ಶಿಕ್ಷಕರ ಮಗನಾಗಿ ಕರ್ನಾಟಕ ವಿಶ್ವವಿದ್ಯಾನಿಲಯದ ಉನ್ನತ ಶೈಕ್ಷಣಿಕ ಪರಂಪರೆಯನ್ನು ವಿಸ್ತರಿಸುವ ಹಂಬಲ ಹೊತ್ತು ಕುಲಪತಿ ಹುದ್ದೆಯ ಜವಾಬ್ದಾರಿ ವಹಿಸಿಕೊಂಡಿದ್ದರು.

ಧಾರವಾಡದ ಕರ್ನಾಟಕ ಕಾಲೇಜು ಮುಂಬೈ ಸರಕಾರದ ಅವಧಿಯಲ್ಲಿ ಆರಂಭವಾಗಿತ್ತು. ದಿವಾನ್ ರಾವ್ ಬಹಾದ್ದೂರು ರೊದ್ದ ಶ್ರೀನಿವಾಸರಾವ್ ಮತ್ತು ರಾವ್ ಬಹಾದ್ದೂರು ಆರ್.ಸಿ. ಅರಟಾಳ್ ರುದ್ರಗೌಡರ ಪ್ರಯತ್ನದ ಫಲವಾಗಿ 1917ರಲ್ಲಿ ಕರ್ನಾಟಕ ಕಾಲೇಜು ಆರಂಭವಾಯಿತು. ಆಗ ಅದು ಮುಂಬೈ ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಸೇರಿತ್ತು. ಕರ್ನಾಟಕ ಕಾಲೇಜು ಆರಂಭವಾಗುವುದಕ್ಕೂ ಮುನ್ನ ಉತ್ತರ ಕರ್ನಾಟಕದ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಮುಂಬೈ, ಪುಣೆ ನಗರಗಳಿಗೆ ಹೋಗಬೇಕಿತ್ತು. ಬ್ರಿಟಿಷ್ ಕಾಲದ ಮುಂಬೈ ಪ್ರಾಂತದ ಶಾಸನ ಸಭೆಯಲ್ಲಿ ಹುಬ್ಬಳ್ಳಿಯ ಸರ್ ಸಿದ್ದಪ್ಪ ತೋಟಪ್ಪ ಕಂಬಳಿಯವರು ಸದಸ್ಯರಾಗಿದ್ದರು. ಅವರ ಪ್ರಭಾವದ ಕಾರಣಕ್ಕೆ ಕರ್ನಾಟಕ ಕಾಲೇಜು ಆರಂಭವಾಯಿತು. ಮೊದ ಮೊದಲು ಕಲಾ ಮತ್ತು ವಿಜ್ಞಾನ ವಿಭಾಗಗಳು ಆರಂಭವಾಗಿದ್ದವು. ನಂತರ ವಾಣಿಜ್ಯ, ಅರ್ಥ ಶಾಸ್ತ್ರದ ವಿಭಾಗಗಳು ಶುರುವಾದವು. ಕರ್ನಾಟಕ ಕಾಲೇಜಿನ ಮೊದಲ ಪ್ರಿನ್ಸಿಪಾಲರಾಗಿ ಖ್ಯಾತ ವಿಜ್ಞಾನಿ ಭಾರತ ರತ್ನ ಸಿ.ವಿ. ರಾಮನ್ ಕಾರ್ಯ ನಿರ್ವಹಿಸಿದ್ದಾರೆ. ಡಿ.ಸಿ. ಪಾವಟೆ, ವಿ.ಕೆ. ಗೋಕಾಕ, ನಂದನ್ ನೀಲಕೇಣಿ, ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರ ಕರ್ನಾಟಕ ಕಾಲೇಜಿನ ಹಳೆಯ ವಿದ್ಯಾರ್ಥಿಗಳು.

ಕರ್ನಾಟಕ ವಿಶ್ವವಿದ್ಯಾನಿಲಯ ಸ್ಥಾಪನೆಯಾಗಿ ಎಪ್ಪತ್ತೈದು ವರ್ಷಗಳು ಕಳೆದಿವೆ. ಕರ್ನಾಟಕ ಕಾಲೇಜು ಶತಮಾನ ಪೂರೈಸಿದ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸರ್ ಸಿದ್ದಪ್ಪ ಕಂಬಳಿಯವರು ಮುಂಬೈ ಪ್ರಾಂತದ ಧಾನಜಿ ಶಹಾ ಕೂಪರ್ ಸರಕಾರದಲ್ಲಿ ಶಿಕ್ಷಣ, ಕೃಷಿ, ಅಬಕಾರಿ ಸಚಿವರಾಗಿದ್ದರು. 1949ರಲ್ಲಿ ಮುಂಬೈ ವಿಧಾನಸಭೆಯಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದ ಕಾಯ್ದೆ ಪಾಸ್ ಆಯಿತು. 1950ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯ ಕಾರ್ಯಾರಂಭ ಮಾಡಿತು. ಮೊದಲ ಕುಲಪತಿಯಾಗಿ ಆರ್. ಜಹಾಗೀರದಾರ್ ನೇಮಕೊಂಡಿದ್ದರು. ಈ ವಿಶ್ವವಿದ್ಯಾನಿಲಯದ ಅಧೀನದಲ್ಲಿ ಐದು ಕಾಲೇಜುಗಳು ಒಂದು ಪಬ್ಲಿಕ್ ಶಾಲೆ ಕಾರ್ಯ ನಿರ್ವಹಿಸುತ್ತವೆ. ಕರ್ನಾಟಕ ಕಲಾ ಕಾಲೇಜು, ಕರ್ನಾಟಕ ವಿಜ್ಞಾನ ಕಾಲೇಜು, ವಿಶ್ವವಿದ್ಯಾನಿಲಯದ ಶಿಕ್ಷಣ ಕಾಲೇಜು, ಸರ್ ಸಿದ್ದಪ್ಪ ಕಂಬಳಿ ಕಾನೂನು ಮಹಾವಿದ್ಯಾನಿಲಯ, ಸಂಗೀತ ಮತ್ತು ಲಲಿತ ಕಲಾ ಮಹಾವಿದ್ಯಾನಿಲಯ ಕಾರ್ಯ ನಿರ್ವಹಿಸುತ್ತಿವೆ. ಈಗಲೂ ಕರ್ನಾಟಕ ವಿಜ್ಞಾನ ಕಾಲೇಜು ಅತ್ಯಂತ ಬೇಡಿಕೆಯುಳ್ಳ ಮಹಾವಿದ್ಯಾನಿಲಯವಾಗಿದೆ. ಕರ್ನಾಟಕ ವಿಶ್ವವಿದ್ಯಾನಿಲಯಕ್ಕೆ ಇಲ್ಲಿಯವರೆಗೆ ಅದರ ಘನತೆ ಗೌರವ ಹೆಚ್ಚಿಸುವ ವ್ಯಕ್ತಿಗಳೇ ಕುಲಪತಿಗಳಾಗಿ ಕಾರ್ಯ ನಿರ್ವಹಿಸಿದ್ದಾರೆ. ಖ್ಯಾತ ಶಿಕ್ಷಣ ತಜ್ಞ ಡಾ. ಡಿ.ಸಿ. ಪಾವಟೆ ಕರ್ನಾಟಕ ವಿಶ್ವವಿದ್ಯಾನಿಲಯಕ್ಕೆ ಭದ್ರ ಬುನಾದಿ ಹಾಕಿದವರಲ್ಲಿ ಪ್ರಮುಖರು. ಡಾ. ಎ.ಎಸ್. ಅಡಕೆ, ಖ್ಯಾತ ಭಾಷಾ ವಿಜ್ಞಾನಿ ಡಾ. ಆರ್.ಸಿ. ಹಿರೇಮಠ, ಖ್ಯಾತ ಅರ್ಥ ಶಾಸ್ತ್ರಜ್ಞ ಡಾ. ಡಿ.ಎಂ. ನಂಜುಂಡಪ್ಪ, ಡಾ. ಜಿ.ಕೆ. ನಾರಾಯಣ ರೆಡ್ಡಿ, ಡಾ. ಎ.ಎಂ. ಪಟಾಣ ಮುಂತಾದವರು ವಿಶ್ವವಿದ್ಯಾನಿಲಯದ ಶ್ರೇಯೋಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸಿದ್ದಾರೆ. ಡಾ. ಎ.ಎಂ. ಪಟಾಣ ಅವರು ಎಲ್ಲ ಸಮುದಾಯದ ಪ್ರತಿಭಾವಂತರನ್ನು ಹುಡುಕಿ ಪ್ರಾಧ್ಯಾಪಕ ಹುದ್ದೆ ನೀಡಿದ್ದರು. ಕರ್ನಾಟಕ ವಿಶ್ವವಿದ್ಯಾನಿಲಯದ ಹೆಸರು ಈ ಹೊತ್ತು ರಾಷ್ಟ್ರೀಯ ಅಂತಾರ್‌ರಾಷ್ಟ್ರೀಯ ಮಟ್ಟದಲ್ಲಿ ಬೆಳಗಲು ಸಾಧ್ಯವಾಗಿದ್ದು ಆ ಎಲ್ಲ ಮಹನೀಯರ ಉದಾತ್ತ ಚಿಂತನೆಗಳಿಂದ, ಜಾತ್ಯತೀತ ನಡೆಯಿಂದ. ಒಂದು ಕಾಲದಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಧಾರವಾಡ, ಬೆಳಗಾವಿ, ಉತ್ತರ ಕನ್ನಡ, ವಿಜಯಪುರ, ಕಲಬುರಗಿ, ರಾಯಚೂರು, ಬೀದರ್, ಬಳ್ಳಾರಿ ಜಿಲ್ಲೆಗಳು ಸೇರಿದ್ದವು. 1980ರಲ್ಲಿ ಕಲಬುರ್ಗಿ ವಿಶ್ವವಿದ್ಯಾನಿಲಯವಾಗಿ ಕೆಲವು ಜಿಲ್ಲೆಗಳು ಕಳಚಿಕೊಂಡವು. 1953-1965ರವರೆಗೆ ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯ ಮತ್ತು ಮಣಿಪಾಲದ ಕಸ್ತೂರ್‌ಬಾ ಮೆಡಿಕಲ್ ಮಹಾವಿದ್ಯಾಲಯ ಕರ್ನಾಟಕ ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಸೇರಿದ್ದವು. ಜೆ. ಅಲೆಕ್ಸಾಂಡರ್, ಡಾ. ಜಿ.ಎಸ್. ಅಮೂರ್, ಸುರೇಶ್ ಹೆಬ್ಲೀಕರ್, ಟಿ.ಎಂ.ಪೈ, ಗಿರೀಶ್ ಕಾರ್ನಾಡ್, ಅನಿಲ್ ಸಹಸ್ರ ಬುಧೆ ಈ ವಿಶ್ವವಿದ್ಯಾನಿಲಯದ ಹಳೆಯ ವಿದ್ಯಾರ್ಥಿಗಳು.

ಇಂತಹ ಶ್ರೇಷ್ಠ ವಿಶ್ವವಿದ್ಯಾನಿಲಯದಲ್ಲಿ ಕುಲಪತಿ -ಕುಲಸಚಿವ ಹುದ್ದೆ ಅಲಂಕರಿಸುವುದೆಂದರೆ ಅತ್ಯಂತ ಗೌರವದ ಪ್ರತೀಕ. ಆದರೆ ಕೆಲವರಿಗೆ ಒಂದು ಸಂಸ್ಥೆಯ ಘನತೆ ಗೌರವ ತಿಳಿದಿರುವುದಿಲ್ಲ. ಅತ್ಯಂತ ಪ್ರತಿಷ್ಠಿತ ಕರ್ನಾಟಕ ವಿಶ್ವವಿದ್ಯಾನಿಲಯಕ್ಕೆ ಕುಲಸಚಿವನ್ನಾರಾಗಿ ಕೆ. ಎಸ್. ಅಧಿಕಾರಿ ಡಾ. ಶಂಕರಪ್ಪ ವಣಿಕ್ಯಾಳ ಅವರನ್ನು ಕರ್ನಾಟಕ ಸರಕಾರ ನೇಮಿಸಿದೆ. ಡಾ. ಶಂಕರಪ್ಪ ವಣಿಕ್ಯಾಳ ಅವರ ಸಂಬಂಧಿ ಶಂಕರಣ್ಣ ವಣಿಕ್ಯಾಳ ಎರಡು ಬಾರಿ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದರು. ಒಂದು ಅವಧಿಗೆ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಶಹಾಪುರ ತಾಲೂಕಿನ ನಗನೂರು ಗ್ರಾಮದ ಡಾ. ಶಂಕರಪ್ಪ ವಣಿಕ್ಯಾಳ ಪ್ರತಿಭಾವಂತ. ಪಿಎಸ್‌ಐ ಮತ್ತು ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರ ಹುದ್ದೆಗೆ ಆಯ್ಕೆಯಾದವರು. ತಹಶೀಲ್ದಾರ್ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿದವರು. ಆದರೆ ಹುದ್ದೆ ದೊರಕಿದಾಗ ಜನೋಪಯೋಗಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದರೆ ಡಾ. ಶಂಕರಪ್ಪ ವಣಿಕ್ಯಾಳ ಬೇಡಿಕೆಯುಳ್ಳ ಅಧಿಕಾರಿಯಾಗಿ ಹೊರ ಹೊಮ್ಮುತ್ತಿದ್ದರು. ಅತ್ಯಂತ ಸಜ್ಜನ ಮತ್ತು ಪ್ರಾಮಾಣಿಕ ರಾಜಕಾರಣಿ ಹಾಲಿ ಮಂತ್ರಿ ಶರಣಬಸಪ್ಪ ದರ್ಶನಾಪುರ ಅವರು ಡಾ. ಶಂಕರಪ್ಪ ವಣಿಕ್ಯಾಳ ಅವರನ್ನು ಶಹಾಪುರ ತಾಲೂಕಿನ ತಹಶೀಲ್ದಾರ್ ಹುದ್ದೆಗೆ ಹಾಕಿಸಿಕೊಂಡಿದ್ದರು. ಆದರೆ ವಣಿಕ್ಯಾಳ ಅವರ ಕಾರ್ಯ ವೈಖರಿ ಕಂಡು ಹೌಹಾರಿದ ದರ್ಶನಾಪುರ ಅವರು ಅಂದಿನ ಕಲಬುರಗಿ ಜಿಲ್ಲಾಧಿಕಾರಿ ಪಂಕಜ ಪಾಂಡೆಯವರಿಗೆ ಹೇಳಿ ತಕ್ಷಣವೇ ಶಹಾಪುರದಿಂದ ರಿಲೀವ್ ಮಾಡಿಸಿದ್ದರು. ಡಾ. ಶಂಕರಪ್ಪ ಅವರನ್ನು ಸರಕಾರ ಬಸವ ಕಲ್ಯಾಣ ಅಭಿವೃದ್ಧಿ ಪ್ರಾಧಿಕಾರದ ಆಡಳಿತ ಅಧಿಕಾರಿಯನ್ನಾಗಿ ವರ್ಗಾವಣೆ ಮಾಡಿತ್ತು. ಅಲ್ಲಿ ಅಂದಾಜು ರೂ. 800ಕೋಟಿ ಹಣವಿತ್ತು. ಆಗ ಮಂತ್ರಿಯಾಗಿದ್ದ ಹಾಲಿ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರು ಮತ್ತು ಈಗ ಅರಣ್ಯ ಖಾತೆಯ ಮಂತ್ರಿಯಾಗಿರುವ ಈಶ್ವರ್ ಖಂಡ್ರೆಯವರು ಅಲ್ಲಿಗೆ ಬರಲು ಬಿಡಲೇ ಇಲ್ಲ. ಕಾರಣ ಡಾ. ಶಂಕರಪ್ಪ ವಣಿಕ್ಯಾಳ ಅವರ ಕಾರ್ಯ ವೈಖರಿ. ವಣಿಕ್ಯಾಳ ಅವರು ಕಲಬುರಗಿ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. 2022ರ ಮಾರ್ಚ್ ತಿಂಗಳಲ್ಲಿ ಡಾ. ಶಂಕರಪ್ಪ ವಣಿಕ್ಯಾಳ ಅವರನ್ನು ಕಲಬುರ್ಗಿ ಮಹಾನಗರ ಪಾಲಿಕೆಯ ಆಯುಕ್ತರನ್ನಾಗಿ ವರ್ಗಾವಣೆ ಮಾಡಿದ್ದರು. ಇವರ ಕಾರ್ಯವೈಖರಿಗೆ ಬೇಸತ್ತ ಕೆಲವರು ಗುಸು ಗುಸು ಮಾತನಾಡಿಕೊಳ್ಳುತ್ತಿದ್ದರು. ಅದೇ ವರ್ಷದ ಜೂನ್ ತಿಂಗಳಲ್ಲಿ ಲಂಚಕ್ಕೆ ಪೀಡಿಸುತ್ತಿದ್ದಾರೆಂದು ಶರಣಬಸಪ್ಪ ಅಂಬೇಸಿಂಗ್ ಎಂಬವರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು. ಕೋವಿಡ್ ಸುರಕ್ಷಾ ಹೆಲ್ಪ್‌ಲೈನ್ ಕಾರ್ಯ ನಿರ್ವಹಿಸಿದ್ದ ಶರಣಪ್ಪ ರೂ. 7.5ಲಕ್ಷದ ಬಿಲ್ ಪಾವತಿಸುವಂತೆ ಹಲವು ಬಾರಿ ಮನವಿ ಮಾಡಿದ್ದಾರೆ. ಡಾ. ಶಂಕರಪ್ಪ ಅವರ ಅಕೌಂಟಂಟ್ ಚೆನ್ನಪ್ಪ ಬನ್ನೂರ್ ಮೂಲಕ ಹಣದ ವ್ಯವಹಾರ ನಡೆಸಿ ಎಸಿಬಿ ತಂಡ ರೆಡ್ ಹ್ಯಾಂಡ್ ಆಗಿ ಬಲೆಗೆ ಹಾಕಿದೆ. ಡಾ. ಶಂಕರಪ್ಪ ಅವರ ಮನೆ ಶೋಧ ನಡೆಸಿದ ಎಸಿಬಿ ತಂಡ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ನಾಲ್ಕು ದಿನ ನ್ಯಾಯಾಂಗ ಬಂಧನದಲ್ಲಿದ್ದು ಜಾಮೀನು ಕೋರಿ ಕಲಬುರಗಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಗಿರೀಶ್ ಕಾಶೇಂಪುರ್ ಎಸಿಬಿ ಪರ ಸಮರ್ಥ ವಾದ ಮಂಡಿಸಿ ಜಾಮೀನು ನಿರಾಕರಣೆಗೆ ಭೂಮಿಕೆ ಸಿದ್ಧಪಡಿಸಿದ್ದಾರೆ. ಆಗ ನ್ಯಾಯಾಧೀಶರಾಗಿದ್ದ ಗೌರವಾನ್ವಿತ ಎಂ.ಜಿ. ಮೇಡಂ ಅವರು ಜಾಮೀನು ನಿರಾಕರಿಸಿದ್ದಾರೆ. ಅನಿವಾರ್ಯವಾಗಿ ಡಾ. ಶಂಕರಪ್ಪ ವಣಿಕ್ಯಾಳ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ವಾಸ ಅನುಭವಿಸುವಂತಾಗಿದೆ.

ಕರ್ನಾಟಕ ಸರಕಾರ ವಿಶ್ವವಿದ್ಯಾನಿಲಯಗಳಿಗೆ ಕುಲಸಚಿವರನ್ನಾಗಿ ನೇಮಕ ಮಾಡುವಾಗ ಕನಿಷ್ಠ ಪಕ್ಷ ಶೈಕ್ಷಣಿಕ ವಲಯದ ಮಹತ್ವ ಗೊತ್ತಿರುವ ಪ್ರಾಮಾಣಿಕರನ್ನು ಆಯ್ಕೆ ಮಾಡಬೇಕು. ಯಾರು ಒಪ್ಪಲಿ ಬಿಡಲಿ ಈ ಹೊತ್ತಿಗೂ ವಿಶ್ವವಿದ್ಯಾನಿಲಯಗಳ ಪದವಿಗಳಿಗೆ ಒಂದು ಮೌಲ್ಯ ಮತ್ತು ಪಾವಿತ್ರ್ಯ ಇದೆ. ಇಂತಹ ಪದವಿಗಳನ್ನು ಹೆಚ್ಚು ಮೌಲ್ಯಯುತ ಮಾಡಬೇಕೆಂದರೆ ಕಳಂಕಿತರನ್ನು ವಿಶ್ವವಿದ್ಯಾನಿಲಯಗಳ ಆಡಳಿತ ವ್ಯವಸ್ಥೆಯಿಂದ ದೂರ ಇಡಬೇಕು. ಕಳಂಕಿತ ಅಧಿಕಾರಿಗೆ ಹುದ್ದೆ ನಿರಾಕರಿಸಲು ಆಗುವುದಿಲ್ಲ. ಎಲ್ಲೋ ಒಂದು ಕಡೆ ವ್ಯವಸ್ಥೆ ಮಾಡಲಿ. ಜೈಲಿಗೆ ಹೋಗಿ ಬಂದ ಡಾ. ಶಂಕರಪ್ಪ ವಣಿಕ್ಯಾಳ ಅವರನ್ನು ಕರ್ನಾಟಕ ವಿಶ್ವವಿದ್ಯಾನಿಲಯದಂತಹ ಭವ್ಯ ಪರಂಪರೆಯುಳ್ಳ ಸಂಸ್ಥೆಗೆ ಕುಲಸಚಿವರನ್ನಾಗಿ ನೇಮಕ ಮಾಡಿದರೆ ಕೆಟ್ಟ ಹೆಸರು ಬರದೇ ಇರುತ್ತದೆಯೇ?

ಡಾ. ಶಂಕರಪ್ಪ ವಣಿಕ್ಯಾಳ ಅವರು ಸಂವೇದನಾಶೀಲ ವ್ಯಕ್ತಿಯಾಗಿದ್ದರೆ ಹಳೆಯ ಕಳಂಕ ತೊಡೆದು ಕೊಳ್ಳುವ ಸಂಕಲ್ಪ ಮಾಡುತ್ತಿದ್ದರು. ಆದರೆ ವಣಿಕ್ಯಾಳ ಅವರಿಗೆ ಬದಲಾಗುವ ಇರಾದೆಯೇ ಇಲ್ಲ. ಎಷ್ಟೇ ಹೆಸರು ಕೆಡಲಿ ದುಡ್ಡು ಮಾಡಲೇಬೇಕೆಂದು ನಿರ್ಧಾರ ಮಾಡಿಕೊಂಡ ಆತ ಸದ್ಯ ಕರ್ನಾಟಕ ವಿಶ್ವವಿದ್ಯಾನಿಲಯಕ್ಕೆ ಕಂಟಕವಾಗಿ ಪರಿಣಮಿಸಿದ್ದಾರೆ. ಕಳೆದ ಏಳು ತಿಂಗಳಿಂದ ಕರ್ನಾಟಕ ವಿಶ್ವವಿದ್ಯಾನಿಲಯದ ಆಡಳಿತ ವ್ಯವಸ್ಥೆ ಸ್ಥಗಿತಗೊಂಡಿದೆ. ಅಕಾಡಮಿಕ್ ಕೌನ್ಸಿಲ್ ಮತ್ತು ಸಿಂಡಿಕೇಟ್ ಸಭೆಗಳಲ್ಲಿ ಕೈಗೊಂಡ ನಿರ್ಣಯಗಳನ್ನು ಅನುಷ್ಠಾನಗೊಳಿಸುವುದು ಆಡಳಿತದ ಕುಲಸಚಿವ ಮತ್ತು ಮೌಲ್ಯಮಾಪನ ಕುಲಸಚಿವರ ಆದ್ಯ ಕರ್ತವ್ಯ. ಮುಂದಿನ ಸಭೆಯಲ್ಲಿ ಅನುಪಾಲನ ವರದಿ ಮಂಡಿಸಬೇಕೇ ಹೊರತು ಕಾನೂನು ಅಭಿಪ್ರಾಯ ಕೋರಲಾಗಿದೆ ಎಂದು ಹೇಳಕೂಡದು. ಡಾ. ಶಂಕರಪ್ಪ ವಣಿಕ್ಯಾಳ ತನ್ನ ಘನತೆ ಗೌರವವನ್ನು ಕಳೆದುಕೊಂಡಿದ್ದಲ್ಲದೆ ಈಗ ಕರ್ನಾಟಕ ವಿಶ್ವವಿದ್ಯಾನಿಲಯಕ್ಕೆ ಕಂಟಕವಾಗಿದ್ದು ಬಹು ದೊಡ್ಡ ದುರಂತ. ಕುಲಪತಿ ಮತ್ತು ಆಡಳಿತ ಮಂಡಳಿಯ ನಿರ್ಧಾರಗಳನ್ನು ಅನುಷ್ಠಾನಗೊಳಿಸಲು ಅಡ್ಡಿಯಾಗುವುದೆಂದರೆ ಘನ ರಾಜ್ಯಪಾಲರಿಗೆ, ಸರಕಾರಕ್ಕೆ ಅಗೌರವ ತೋರಿದಂತೆ. ಒಂದು ವಿಶ್ವವಿದ್ಯಾನಿಲಯ ವ್ಯವಸ್ಥೆಯಲ್ಲಿ ಸಿಂಡಿಕೇಟ್, ಅಕಾಡಮಿಕ್ ಕೌನ್ಸಿಲ್ ಅತ್ಯುನ್ನತ ಪ್ರಾಧಿಕಾರ. ಕುಲಪತಿ ಆ ಸಂಸ್ಥೆಯ ಮುಖ್ಯಸ್ಥರು. ಶಾಸನ ಬದ್ಧ ಪ್ರಾಧಿಕಾರಗಳು ಮತ್ತು ಸ್ಥಾನಕ್ಕೆ ಧಿಕ್ಕರಿಸಿ ಕಾರ್ಯ ನಿರ್ವಹಿಸುವುದು ಅಪರಾಧವೇ ಸರಿ. ಕರ್ನಾಟಕ ವಿಶ್ವವಿದ್ಯಾನಿಲಯದ ಘನತೆ ಗೌರವಕ್ಕೆ ನಿತ್ಯ ಚ್ಯುತಿ ತರುತ್ತಿರುವ ಕುಲಸಚಿವರನ್ನು ತಕ್ಷಣವೇ ಬೇರೆಡೆಗೆ ವರ್ಗಾಯಿಸಬೇಕು. ಅತ್ಯುತ್ತಮ ಕೆಲಸ ಮಾಡಬೇಕೆಂಬ ಹಂಬಲದ ಕುಲಪತಿ ಮತ್ತು ಸಿಂಡಿಕೇಟ್, ಅಕಾಡಮಿಕ್ ಕೌನ್ಸಿಲ್ ಸದಸ್ಯರ ಅತ್ಯುತ್ಸಾಹಕ್ಕೆ ಸರಕಾರ ಒತ್ತಾಸೆಯಾಗಿ ನಿಲ್ಲಬೇಕು. ಉನ್ನತ ಶಿಕ್ಷಣ ಸಚಿವರಾದ ಸುಧಾಕರ್ ಅವರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಳ್ಳೆಯ ಕೆಲಸ ಮಾಡುವಾಗ ಯಾವತ್ತೂ ಹಿಂದೆ ಬಿದ್ದಿಲ್ಲ. ಕರ್ನಾಟಕ ವಿಶ್ವವಿದ್ಯಾನಿಲಯದ ಕೆಟ್ಟ ನಿದರ್ಶನ ಎಲ್ಲೆಡೆ ಪಸರಿಸುವ ಮುನ್ನ ಸರಕಾರ ಕಠಿಣ ನಿರ್ಧಾರ ಕೈಗೊಳ್ಳಬೇಕು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಡಾ. ರಾಜಶೇಖರ ಹತಗುಂದಿ

contributor

Similar News