‘ಕೇರಳ ಸ್ಟೋರಿ’: ಸಾಮರಸ್ಯ ಕದಡುವ ವಿಕೃತಿ
ಕೇರಳ ಅಭಿವೃದ್ಧಿ ಹೊಂದಿದ ರಾಜ್ಯ. ಪ್ರವಾಸೋದ್ಯಮದ ಆದಾಯ ನೆಚ್ಚಿಕೊಂಡು ಬದುಕುತ್ತಿರುವ ಕೇರಳ ‘ಕೇರಳ ಸ್ಟೋರಿ’ಯಂತಹ ವಿಕೃತ ಚಲನಚಿತ್ರಗಳಿಂದ ತನ್ನ ಅಸ್ಮಿತೆಗೆ ಕಳಂಕ ಅಂಟಿಸಿಕೊಳ್ಳುವಂತಾಗಿದೆ. ಕೇರಳ ಹೈಕೋರ್ಟ್ನ ಏಕಸದಸ್ಯ ಪೀಠ ‘ಕೇರಳ ಸ್ಟೋರಿ’ ಭಾಗ ಎರಡು ಚಲನಚಿತ್ರಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿದೆ. ಇದು ತಾತ್ಕಾಲಿಕ ವ್ಯವಸ್ಥೆಯಷ್ಟೇ. ಈಗಾಗಲೇ ಚಿತ್ರ ತಂಡ ತಡೆಯಾಜ್ಞೆ ತೆರವುಗೊಳಿಸಲು ಮೆಲ್ಮನವಿ ಸಲ್ಲಿಸಿದೆ. ರಾಜಕೀಯ ಪ್ರೇರಿತವಾದ, ಕೋಮುವಾದಿ ಕಥಾಹಂದರವುಳ್ಳ ಇಂತಹ ಚಲನಚಿತ್ರಗಳನ್ನು ಸೆನ್ಸರ್ ಮಂಡಳಿ ಪ್ರಮಾಣ ಪತ್ರ ನೀಡಲು ನಿರಾಕರಿಸಬೇಕು. ಆದರೆ ಕೇಂದ್ರದಲ್ಲಿ ಬಿಜೆಪಿ ಸರಕಾರ ಇರುವುದರಿಂದ ಅಂತಹ ಕ್ರಮ ನಿರೀಕ್ಷೆ ಮಾಡಲಾಗದು.
ಹಿಂದಿ ಚಲನಚಿತ್ರ ಕೇರಳ ಸ್ಟೋರಿಯ ಭಾಗ ಎರಡು ಟೀಸರ್ ಬಿಡುಗಡೆಯಾಗಿ ವಿವಾದ ಸೃಷ್ಟಿಸಿದೆ. ಕೇರಳ ಸ್ಟೋರಿಯ ಮೊದಲ ಭಾಗವೂ ಸಮಾಜದಲ್ಲಿನ ಶಾಂತಿ ಸಾಮರಸ್ಯ ಹಾಳು ಮಾಡುವ ಉದ್ದೇಶ ಹೊಂದಿತ್ತು. ಅಂತಿಮವಾಗಿ ಹಿಂದೂ-ಮುಸ್ಲಿಮ್ ಮತ ವಿಭಜನೆ ಮಾಡಿ ಚುನಾವಣಾ ಸಾಧಿಸುವುದು ಆ ಚಿತ್ರ ನಿರ್ಮಾಪಕರ ಗುರಿ.
ಕಾಮಾಕ್ಯ ನಾರಾಯಣಸಿಂಗ್ ನಿರ್ದೇಶನದ ಕೇರಳ ಸ್ಟೋರಿ ಭಾಗ ಒಂದು ಮತ್ತು ಭಾಗ ಎರಡು ಕೆಟ್ಟ ಉದ್ದೇಶ ಇಟ್ಟುಕೊಂಡೇ ನಿರ್ಮಾಣವಾದ ಚಲನಚಿತ್ರಗಳು. ವಿಪುಲ್ ಅಮೃತ್ ಲಾಲ್ ಶಾಹ ಮತ್ತು ಅಮರನಾಥ್ ಬರೆದಿರುವ ಈ ಚಲನಚಿತ್ರ ಭಾರತೀಯ ಜನತಾ ಪಕ್ಷದ ಚುನಾವಣಾ ಪ್ರಚಾರದ ಸಾಮಗ್ರಿಯಂತಿದೆ. ವಿಪುಲ್ ಅಮೃತ್ ಲಾಲ್ ಶಾಹ ಕೇರಳ ಸ್ಟೋರಿ ಸರಣಿ ಚಿತ್ರಗಳನ್ನು ನಿರ್ಮಿಸಿದ್ದಾರೆ. ಉಲ್ಕಾ ಗುಪ್ತಾ, ಐಶ್ವರ್ಯ ಓಜಾ, ಆದಿತಿ ಭಾಟಿಯಾ ತಾರಗಣದಲ್ಲಿದ್ದಾರೆ. ಕೇರಳ ಸ್ಟೋರಿ ಸರಣಿ ಚಲನಚಿತ್ರಗಳ ನಟ, ನಟಿ, ನಿರ್ದೇಶಕ ಮತ್ತು ನಿರ್ಮಾಪಕರು ಒಳ್ಳೆಯ ಚಿತ್ರಗಳಿಗಾಗಿ ಹೆಸರು ಮಾಡಿದವರಲ್ಲ. ಕೇರಳ ಸ್ಟೋರಿ ಸರಣಿ ಚಲನಚಿತ್ರಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ದುರ್ಬಳಕೆಯ ವಿಕೃತ ಮಾದರಿಗಳು.
‘ಕೇರಳ ಸ್ಟೋರಿ’ ಸರಣಿ ಚಿತ್ರಗಳ ಕತೆಯ ಸಾರ: ಹಿಂದೂ ಯುವತಿಯರನ್ನು ‘ಲವ್ ಜಿಹಾದ್’ ಹೆಸರಲ್ಲಿ ಮರುಳು ಮಾಡಿ ಒತ್ತಾಯದ ಮತಾಂತರ ಮಾಡುವುದು. ಹಿಂದೂ ಯುವತಿಯರನ್ನು ಪರಿಪರಿಯಾಗಿ ಶೋಷಣೆಗೆ ಒಳಪಡಿಸುವುದು. ಒಟ್ಟು ಹೇಳಬೇಕೆಂದರೆ ಭಾರತದ ಮುಸ್ಲಿಮ್ ಸಮುದಾಯದ ಮೇಲೆ ಅಪನಂಬಿಕೆ ಮೂಡಿಸುವುದು. ಮುಸ್ಲಿಮರೆಂದರೆ ಧರ್ಮಾಂಧರು ಎಂಬ ಭಾವನೆ ನೆಲೆ ನಿಲ್ಲುವಂತೆ ಮಾಡುವುದು ಕೇರಳ ಸ್ಟೋರಿ ಸರಣಿ ಚಲನಚಿತ್ರ ನಿರ್ಮಾಪಕರ ಗುರಿ.
ಒಳ್ಳೆಯವರು ಮತ್ತು ಕೆಟ್ಟವರು ಹಿಂದೂ, ಮುಸ್ಲಿಮ್, ಸಿಖ್, ಕ್ರಿಶ್ಚಿಯನ್, ಜೈನ ಸೇರಿದಂತೆ ಎಲ್ಲ ಧರ್ಮಗಳಲ್ಲೂ ಇದ್ದಾರೆ. ಯಾವುದೇ ಒಂದು ಧರ್ಮದಲ್ಲಿನ ಒಂದೆರಡು ಕೆಟ್ಟ ನಿದರ್ಶನಗಳನ್ನು ಸಾರ್ವತ್ರಿಕಗೊಳಿಸಿ ಆ ಧರ್ಮದ ಸಮಸ್ತರನ್ನು ಕಟಕಟೆಯಲ್ಲಿ ನಿಲ್ಲಿಸುವುದು ವಿಕೃತಿಯ ಪರಮಾವಧಿ. ಅಷ್ಟಕ್ಕೂ ಅಂತರ್ಧರ್ಮೀಯ ಪ್ರೇಮ ವಿವಾಹಗಳು ಭಾರತ ದೇಶಕ್ಕೆ ಹೊಸದೇನಲ್ಲ. ಪ್ರೀತಿ ಪ್ರೇಮ ಮನುಷ್ಯನಲ್ಲಿ ಅಂತರ್ಗತವಾಗಿರುವ ಸಹಜ ಗುಣಗಳು. ಪ್ರೀತಿ ಪ್ರೇಮದಂತಹ ಉತ್ಕಟ ಭಾವನೆಗಳು ಜಾತಿ, ಧರ್ಮ, ದೇಶದ ಎಲ್ಲೆ ಕಟ್ಟುಗಳನ್ನು ಮೀರಿ ಕ್ರಿಯಾಶೀಲವಾಗಿರುತ್ತವೆ. ಅಪ್ಪಟ ಸ್ನೇಹ ಕೂಡಾ ಹಾಗೆಯೇ. ಭಾರತದಲ್ಲಿ ಹಿಂದೂ-ಮುಸ್ಲಿಮ್ ಪ್ರೇಮ ವಿವಾಹಕ್ಕೆ ಬಹುದೊಡ್ಡ ಇತಿಹಾಸವಿದೆ. ಅಸಂಖ್ಯಾತ ಅಂತರ್ಧರ್ಮೀಯ ಪ್ರೇಮ ವಿವಾಹಗಳು ನಡೆದಿವೆ, ಈಗಲೂ ನಡೆಯುತ್ತಿವೆ. ಭಾರತದ ಸಂವಿಧಾನವೂ ಅಂತಹ ಪ್ರೇಮ ವಿವಾಹಗಳನ್ನು ಮಾನ್ಯ ಮಾಡಿದೆ.
ದಿಲ್ಲಿ ಸುಲ್ತಾನ್ ಅಕ್ಬರ್ ಬಾದಷಹಾ ರಜಪೂತ ಸಮುದಾಯದ ಜೋಧಾಬಾಯಿಯವರನ್ನು ಪ್ರೀತಿಸಿ ಮದುವೆಯಾಗುತ್ತಾರೆ. ಅವರಿಬ್ಬರ ಪ್ರೀತಿ ಮತ್ತು ಮದುವೆಯ ಸಂಬಂಧ ದೀರ್ಘ ಕಾಲ ಬಾಳುತ್ತದೆ. ಜೋಧಾಬಾಯಿಯ ಧಾರ್ಮಿಕ ನಂಬಿಕೆಯನ್ನು ಗೌರವಿಸಿ ಅಕ್ಬರ್ ಬಾದಷಾ ಅರಮನೆಯಲ್ಲಿ ಕೃಷ್ಣ ಮಂದಿರವನ್ನೇ ನಿರ್ಮಾಣ ಮಾಡಿರುತ್ತಾರೆ. ಮರಾಠ ಪೇಶ್ವೆಯ ಕುಟುಂಬದ ಕುಡಿ ಭಾಜಿರಾವ್ ಮುಸ್ಲಿಮ್ ಸಮುದಾಯದ ಮಸ್ತಾನಿಯನ್ನು ಪ್ರೀತಿಸಿ ಮದುವೆಯಾಗುತ್ತಾರೆ. ಅವರ ಪ್ರೀತಿಗೆ, ಸುದೀರ್ಘ ದಾಂಪತ್ಯಕ್ಕೆ ಧರ್ಮ ತಡೆಗೋಡೆಯಾಗುವುದಿಲ್ಲ.
ಭಾರತದ ಅನೇಕ ಖ್ಯಾತನಾಮರು ಅಂತರ್ಧರ್ಮೀಯ ಮದುವೆಯಾಗಿ ಪ್ರೀತಿಯ ಸಾಮರ್ಥ್ಯವನ್ನು ರುಜುವಾತು ಪಡಿಸಿದ್ದಾರೆ. ಶರ್ಮಿಳಾ ಟಾಗೋರ್ ಹಿಂದಿ ಮತ್ತು ಬಂಗಾಳಿ ಚಿತ್ರರಂಗದಲ್ಲಿ ಹೆಸರು ಮಾಡಿದ ಪ್ರತಿಭಾವಂತ ನಟಿ. ಐವತ್ತು ವರ್ಷಗಳ ಹಿಂದೆಯೇ ಖ್ಯಾತ ಕ್ರಿಕೆಟ್ ಆಟಗಾರ ಮನ್ಸೂರ್ ಅಲಿಖಾನ್ ಪಟೌಡಿಯವರನ್ನು ಪ್ರೀತಿಸಿ ಮದುವೆಯಾಗುತ್ತಾರೆ. ಆ ಜೋಡಿ ಸುದೀರ್ಘ ದಾಂಪತ್ಯ ಜೀವನ ಅನುಭವಿಸಿದೆ. ಶರ್ಮಿಳಾ ಟಾಗೋರ್ ಅವರ ಪುತ್ರ ಸೈಫ್ ಅಲಿಖಾನ್ ಕೂಡಾ ಹಿಂದಿ ಚಿತ್ರ ನಟಿ ಕರೀನಾ ಕಪೂರ್ ಜೊತೆಗೆ ಮದುವೆಯಾಗಿ ಸುಖದಿಂದ ಬದುಕುತ್ತಿದ್ದಾರೆ. ಹಿಂದಿ ಚಿತ್ರ ರಂಗದ ಖ್ಯಾತ ನಿರ್ದೇಶಕ ಮಹೇಶ್ ಭಟ್ ಮುಸ್ಲಿಮ್ ಸಮುದಾಯದ ಸೋನಿ ರಾಜದಾನ್ ಅವರೊಂದಿಗೆ ಪ್ರೇಮ ವಿವಾಹ ಮಾಡಿಕೊಂಡಿದ್ದರು. ಅತ್ಯುತ್ತಮ ಕಲಾತ್ಮಕ ಚಲನಚಿತ್ರಗಳಲ್ಲಿ ನಟಿಸಿ ಅಪಾರ ಖ್ಯಾತಿ ಗಳಿಸಿರುವ ನಾಸಿರುದ್ದೀನ್ ಶಾ ಅವರು ಹಿಂದೂ ಸಮುದಾಯಕ್ಕೆ ಸೇರಿದ ನಟಿ ರತ್ನಾ ಪಾಠಕ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಈಗಲೂ ಆ ಜೋಡಿ ಅಪರೂಪದ ದಾಂಪತ್ಯ ಬಂಧನದಲ್ಲಿದೆ. ಹಿರಿಯ ಕಮ್ಯುನಿಸ್ಟ್ ನಾಯಕಿ ಸುಭಾಷಿಣಿ ಅಲಿ ಲಕ್ಷ್ಮಿ ಸೇಹಗಲ್ ಅವರ ಮಗಳು. ಸುಭಾಷಿಣಿ ಅವರು ಮುಸ್ಲಿಮ್ ಸಮುದಾಯದ ಮುಝಪ್ಫರ್ ಅಲಿಯವರನ್ನು ಪ್ರೀತಿಸಿ ಮದುವೆಯಾಗಿದ್ದರು. ಒಂದು ಕಾಲದಲ್ಲಿ ಬಿಜೆಪಿಯಲ್ಲಿ ಸಕ್ರಿಯ ರಾಜಕಾರಣಿಯಗಿದ್ದ ಮತ್ತು ಕೇಂದ್ರ ಮಂತ್ರಿಯಾಗಿದ್ದ ಶತ್ರುಘ್ನ ಸಿನ್ಹಾ ಅಪರೂಪದ ಚಲನಚಿತ್ರ ನಟ. ಅವರ ಮಗಳು ಸೋನಾಕ್ಷಿ ಸಿನ್ಹಾ ಕೂಡಾ ಪ್ರತಿಭಾವಂತ ನಟಿ. ಸೋನಾಕ್ಷಿ ಸಿನ್ಹಾ ಮುಸ್ಲಿಮ್ ಸಮುದಾಯದ ಝಹೀರ್ ಇಕ್ಬಾಲ್ ಅವರೊಂದಿಗೆ ಪ್ರೇಮ ವಿವಾಹ ಮಾಡಿಕೊಂಡಿದ್ದಾರೆ. ಅಂತರ್ಧರ್ಮೀಯ ಮದುವೆಯಾದ ಇಂತಹ ಹಲವಾರು ಜೋಡಿಗಳು ಎಲ್ಲ ಭಾಷೆಯ ಚಿತ್ರರಂಗದಲ್ಲಿ ನೋಡಲು ಸಿಗುತ್ತಾರೆ. ಖ್ಯಾತ ನಟ ಇರ್ಫಾನ್ ಖಾನ್ ಮತ್ತು ಸುತಾಪ ಸಿಖಧರ್, ನಟ ಸುನೀಲ್ ಶೆಟ್ಟಿ ಮತ್ತು ಮನಾ ಖಾದ್ರಿ, ನಟಿ ಸ್ವರಾ ಭಾಸ್ಕರ್ ಮತ್ತು ಫಹದ್ ಅಹ್ಮದ್ ಜೋಡಿ ಪ್ರೀತಿಸಿದ ಕಾರಣಕ್ಕೆ ಮದುವೆಯಾಗಿ ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ. ಹಿಂದಿ ಚಿತ್ರರಂಗದ ಜನಪ್ರಿಯ ನಟ ಶಾರುಕ್ ಖಾನ್ ಹಿಂದೂ ಧರ್ಮದ ಗೌರಿಯವರನ್ನು ಪ್ರೀತಿಸಿಯೇ ಮದುವೆಯಾಗಿದ್ದಾರೆ. ನಟ ಸಲ್ಮಾನ್ ಖಾನ್ ತಾಯಿ ಹಿಂದೂ, ತಂದೆ ಸಲೀಮ್ ಮುಸ್ಲಿಮ್ ಸಮುದಾಯದವರು. ಸಲೀಮ್ ಅವರು ಹಿಂದಿ ಚಿತ್ರರಂಗದ ಪ್ರತಿಭಾವಂತ ಸಂಭಾಷಣೆ-ಗೀತ ರಚನೆಕಾರ. ಚಿತ್ರರಂಗ ಮಾತ್ರವಲ್ಲ, ಉದ್ಯಮ, ರಾಜಕೀಯ, ಸಾಹಿತ್ಯ, ಸಂಗೀತ ಕ್ಷೇತ್ರದಲ್ಲಿರುವ ಹಲವರು ಅಂತರ್ಧರ್ಮೀಯ ಮದುವೆಯಾಗಿದ್ದಾರೆ. ಆ ಎಲ್ಲ ಅಂತರ್ಧರ್ಮೀಯ ಪ್ರೇಮ ವಿವಾಹಗಳನ್ನು ಲವ್ ಜಿಹಾದ್ ಎಂದು ಕರೆದು ಪವಿತ್ರ ಪ್ರೇಮ ಸಂಬಂಧವನ್ನು ವಿಕೃತ ಭಾವನೆಯಿಂದ ಗ್ರಹಿಸಲಾದೀತೇ?
ಭಾರತದ ಚರಿತ್ರೆಯಲ್ಲಿ ಹಿಂದೂ-ಮುಸ್ಲಿಮ್, ಹಿಂದೂ-ಸಿಖ್ ಸಂಘರ್ಷಗಳು ನಡೆದಿವೆ. ಭಾರತ-ಪಾಕ್ ವಿಭಜನೆಯ ಸಂದರ್ಭದಲ್ಲಿ ರಾಜಕೀಯ ಬೆರೆತು ಗಲಭೆಗಳು ನಡೆದಿದ್ದು ನಿಜ. ಅಷ್ಟಾಗಿಯೂ ಮನುಷ್ಯ ಸಂಬಂಧಗಳು ಗಟ್ಟಿಯಾಗಿದ್ದವು. ಹಿಂದೂ-ಮುಸ್ಲಿಮ್, ಹಿಂದೂ-ಸಿಖ್ ಸಾಮರಸ್ಯದ ಕತೆಗಳು ಅಪಾರ ಸಂಖ್ಯೆಯಲ್ಲಿವೆ.
ಚಿತ್ರ ರಂಗದ ನಟ ನಟಿಯರ ಅಂತರ್ಧರ್ಮೀಯ ಪ್ರೇಮ ವಿವಾಹಗಳು ಸುದ್ದಿಯಾಗುತ್ತವೆ. ಸುದ್ದಿಯಾಗದೆ ಘಟಿಸಿದ ಪ್ರೇಮ ಸಂಬಂಧಗಳು ಸಾಕಷ್ಟು ಇರುತ್ತವೆ. ತಮ್ಮ ಬದುಕಿನ ಅಗತ್ಯಕ್ಕಾಗಿ ಪ್ರೀತಿಸುತ್ತಾರೆ, ಮದುವೆಯಾಗುತ್ತಾರೆ ಮತ್ತು ನೆಮ್ಮದಿಯ ದಾಂಪತ್ಯ ನಡೆಸುತ್ತಾರೆ. ಅವರಿಗೆ ಸುದ್ದಿಯಾಗುವ ಇರಾದೆಯೂ ಇರುವುದಿಲ್ಲ. ಒಂದು ಕಾಲದಲ್ಲಿ ಜನತಾ ಪರಿವಾರದ ಭಾಗವಾಗಿದ್ದ ಈಗ ಬಿಜೆಪಿಯಲ್ಲಿರುವ ಸುಬ್ರಹ್ಮಣ್ಯ ಸ್ವಾಮಿ ಆರೆಸ್ಸೆಸ್ ಗರಡಿಯಲ್ಲಿ ಬೆಳೆದವರು. ಅವರ ಮಗಳು ಮುಸ್ಲಿಮ್ ಸುಮುದಾಯದ ಯುವಕನನ್ನು ಮದುವೆಯಾಗಿ ಚೆನ್ನಾಗಿಯೇ ಬದುಕುತ್ತಿದ್ದಾರೆ. ಹಾಗೆ ಪ್ರೀತಿಸಿ ಮದುವೆಯಾದ ಯಾರಿಗೂ ಮತಾಂತರ ಮಾಡುವ, ‘ಲವ್ ಜಿಹಾದ್’ಗೆ ಪ್ರೆರೇಪಿಸುವ ಇರಾದೆಯೇ ಇರುವುದಿಲ್ಲ. ಸಹಜವಾಗಿ ಪ್ರೀತಿ ಮಾಡಿರುತ್ತಾರೆ. ಧರ್ಮ ಸಂಪ್ರದಾಯ ಒಂದು ಹಂತದಲ್ಲಿ ಅಡ್ಡಿಯಾಗುತ್ತವೆ. ಆದರೆ ನೈಜ ಪ್ರೀತಿ ಆ ಎಲ್ಲ ಅಡೆತಡೆಗಳನ್ನು ಮೆಟ್ಟಿ ನಿಂತು ಪ್ರೀತಿಗಾಗಿ ಒಂದಾಗುತ್ತಾರೆ.
ಹಿಂದೂಸ್ತಾನಿ ಸಂಗೀತದ ದಿಗ್ಗಜ, ಕಿರಾಣಾ ಘರಾಣೆಯ ಸ್ಥಾಪಕ ಉಸ್ತಾದ್ ಅಬ್ದುಲ್ ಕರೀಂ ಖಾನ್ ಸಾಹೇಬರು ಬರೋಡಾ ರಾಜ್ಯದ ಮಾಂಡಲೀಕ ಮಾರುತಿರಾವ್ ಮಾನೆಯವರ ಪುತ್ರಿ ತಾರಾಬಾಯಿ ಮಾನೆಯವರನ್ನು ಪ್ರೀತಿಸಿ ಮದುವೆಯಾಗುತ್ತಾರೆ. ಇದು ನೂರು ವರ್ಷಗಳ ಹಿಂದಿನ ಮಾತು. ಉಸ್ತಾದ್ ಅಬ್ದುಲ್ ಕರೀಂ ಖಾನ್-ತಾರಾಬಾಯಿ ಮಾನೆ ದಂಪತಿಗೆ ಖ್ಯಾತ ಹಿಂದೂಸ್ತಾನಿ ಗಾಯಕರಾದ ಸುರೇಶ್ ಮಾನೆ, ಹೀರಾಬಾಯಿ ಬಡೋದೇಕರ್ ಸೇರಿದಂತೆ ಐದು ಜನ ಮಕ್ಕಳು. ಎಲ್ಲರೂ ಧರ್ಮ, ಜಾತಿ ಮೀರಿ ಹಿಂದೂಸ್ತಾನಿ ಸಂಗೀತವನ್ನು ಬೆಳಗಿಸುತ್ತಿದ್ದಾರೆ.
ಭಾರತ ರತ್ನ ಡಾ. ಭೀಮಸೇನ್ ಜೋಶಿಯವರು ಕನ್ನಡಿಗರು. ಭೀಮಸೇನ್ ಜೋಶಿ ಮತ್ತು ಡಾ. ಗಂಗೂಬಾಯಿ ಹಾನಗಲ್ ಅವರು ಸಂಗೀತ ಕಲಿತಿದ್ದು ಒಬ್ಬರೇ ಗುರುಗಳಲ್ಲಿ. ಆ ಸಂಗೀತ ಗುರು ಕುಂದಗೋಳದ ಸವಾಯಿ ಗಂಧರ್ವರು. ಸವಾಯಿ ಗಂಧರ್ವರಿಗೆ ಕಿರಾಣಾ ಘರಾಣೆಯ ಸಂಗೀತ ದೀಕ್ಷೆ ನೀಡಿ ಅತ್ಯುತ್ತಮ ಗಾಯಕರನ್ನಾಗಿ ರೂಪಿಸಿದವರು ಉಸ್ತಾದ್ ಅಬ್ದುಲ್ ಕರೀಂ ಖಾನ್ ಸಾಹೇಬರು. ಅವರೆಲ್ಲರಿಗೆ ಪ್ರೀತಿ ಮುಖ್ಯವಾಗಿತ್ತೇ ಹೊರತು ಧರ್ಮ ಜಾತಿಯ ಬಂಧನ ಬೇಕಾಗಿರಲಿಲ್ಲ. ಹಾಗಂತ ಅವರು ಯಾರೂ ಧರ್ಮಬಾಹಿರ ಕಾರ್ಯ ಮಾಡುತ್ತಿರಲಿಲ್ಲ. ಅತ್ಯಂತ ಧಾರ್ಮಿಕ ಶ್ರದ್ಧಾಳು ಆಗಿದ್ದರೂ ಪ್ರೀತಿ, ಪ್ರೇಮ ಮತ್ತು ವಿಶ್ವಾಸಕ್ಕೆ ಅಡ್ಡಿಯಾಗುವ ಧರ್ಮದ ತಡೆಗೋಡೆಗಳನ್ನು ಅವರು ಲೆಕ್ಕಕ್ಕೆ ಹಿಡಿಯುತ್ತಿರಲಿಲ್ಲ.
ಬಿಜಾಪುರದ ಎರಡನೇ ಇಬ್ರಾಹೀಂ ಆದಿಲ್ ಶಾ ಅಪ್ಪಟ ಧಾರ್ಮಿಕ ಶ್ರದ್ಧೆಯುಳ್ಳ ದೊರೆಯಾಗಿದ್ದ. ಆಕಸ್ಮಿಕವಾಗಿ ಆತ ಹಿಂದೂಸ್ತಾನಿ ಸಂಗೀತದ ಗಾಯಕನೂ ಆಗಿದ್ದ. ಅನೇಕ ಹಿಂದೂಸ್ತಾನಿ ಸಂಗೀತದ ಬಂದೀಶ್ಗಳ ಸೃಷ್ಟಿಕರ್ತನು ಹೌದು. ‘ಕಿತಾಬೆ ಎ ನೌರಸ್’ ಗ್ರಂಥ ಎರಡನೇ ಇಬ್ರಾಹೀಂ ಆದಿಲ್ ಶಾ ಅವರ ಆಸಕ್ತಿಯ ಫಲವಾಗಿ ಹುಟ್ಟಿಕೊಂಡಿದೆ. ಸರಸ್ವತಿಯ ಸ್ತುತಿಯೊಂದಿಗೆ ಸಂಗೀತಾಭ್ಯಾಸ ಮಾಡುತ್ತಿದ್ದ ಎರಡನೇ ಇಬ್ರಾಹೀಂ ಆದಿಲ್ ಶಾ ಕೆಲ ಮೌಲವಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಪ್ರಕರಣ ದಿಲ್ಲಿಯ ಸುಲ್ತಾನ್ ಅಕ್ಬರ್ ಬಾದಷಾ ಅವರಿಗೂ ತಲುಪಿತು. ಆದರೆ ಎರಡನೇ ಇಬ್ರಾಹೀಂ ಆದಿಲ್ ಶಾ ಸಂಗೀತ ಆರಾಧನೆ ಮತ್ತು ಸರಸ್ವತಿ ಸ್ತುತಿ ಸಂಗೀತಾಭ್ಯಾಸದ ಅವಿಭಾಜ್ಯ ಅಂಗವೆಂದೇ ಭಾವಿಸಿ ಮುಂದುವರಿದರು. ಉಸ್ತಾದ್ ಅಬ್ದುಲ್ ಕರೀಂ ಖಾನ್ ಸಾಹೇಬರು, ಎರಡನೇ ಇಬ್ರಾಹೀಂ ಆದಿಲ್ ಶಾ ಅವರ ಬದುಕಿನ ಕತೆಗಳು ಕೋಮುವಾದಿ ಮನಸ್ಥಿತಿಯವರ ಕಣ್ಣಿಗೆ ಬೀಳುವುದಿಲ್ಲ. ಅವರ ಕುರಿತ ಚಲನಚಿತ್ರಗಳು ನಿರ್ಮಾಣವಾದರೆ ಲವ್ ಜಿಹಾದ್ನ ಟೊಳ್ಳುತನ ಅನಾವರಣವಾಗುತ್ತದೆ.
ಪ್ರೀತಿ, ಪ್ರೇಮ, ದೇಶ ಭಕ್ತಿ ಮತ್ತು ಭಯೋತ್ಪಾದನೆ ಕುರಿತ ನೂರಾರು ಚಲನಚಿತ್ರಗಳು ಹಿಂದಿ ಸೇರಿದಂತೆ ಅನೇಕ ಪ್ರಾದೇಶಿಕ ಭಾಷೆಗಳಲ್ಲಿ ತೆರೆ ಕಂಡಿವೆ. ೧೯೯೨ರಲ್ಲಿ ನಿರ್ಮಾಣವಾದ ‘ರೋಜಾ’ ತಮಿಳು ಚಿತ್ರ ಒಂದು ಅದ್ಭುತ ಪ್ರೇಮ ಕಾವ್ಯದಂತೆ ಇತ್ತು. ಭಯೋತ್ಪಾದನೆ ಚಟುವಟಿಕೆಗಳು, ಕೋಮು ಗಲಭೆ ಮತ್ತು ಮಾನವೀಯತೆ ಮೇಳೈಸಿದ ರೋಜಾ, ಬಾಂಬೆ ಮತ್ತು ದಿಲ್ ಸೆ ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನದ ಚಲನಚಿತ್ರಗಳು ರಾಷ್ಟ್ರೀಯ, ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದವು. ಆ ಚಲನಚಿತ್ರಗಳು ಅಂತಿಮವಾಗಿ ಮಾನವೀಯ ಅಂತಃಕರಣದ ಸಂದೇಶ ರವಾನಿಸುತ್ತಿದ್ದವು. ‘ಬಾಂಬೆ’ ಚಲನಚಿತ್ರದಲ್ಲಿ ಅರವಿಂದ ಸ್ವಾಮಿ ಮತ್ತು ಮನಿಶಾ ಕೊಯಿರಾಲ ಅವರ ಮನೋಜ್ಞ ಅಭಿನಯ ಪ್ರೀತಿಯ ತೀವ್ರತೆಯ ಪ್ರತೀಕದಂತಿತ್ತು.
‘ಗದರ್’ ಭಾಗ ಒಂದು ಮತ್ತು ಎರಡು ಚಲನಚಿತ್ರಗಳು ಭಾರತ -ಪಾಕಿಸ್ತಾನ ವಿಭಜನೆ ಸಂದರ್ಭದ ಕತೆಗಳನ್ನೇ ಆಯ್ಕೆ ಮಾಡಿಕೊಂಡಿದ್ದರೂ, ಸಮುದಾಯಗಳನ್ನು ಬೆಸೆಯುವ ಪವಿತ್ರ ಕಾರ್ಯ ಮಾಡುತ್ತವೆ. ‘ಜೋಧಾ ಅಕ್ಬರ್’, ‘ಭಾಜಿರಾವ್-ಮಸ್ತಾನಿ’ ಅಮರ ಪ್ರೇಮ ಕಥಾನಕಗಳನ್ನು ಕಟ್ಟಿಕೊಟ್ಟಿವೆ.
‘ಫನಾ’, ‘ಮಾಚಿಸ್’, ‘ವೀರ ಜಾರ್’ ಸೇರಿದಂತೆ ಅನೇಕ ಚಲನಚಿತ್ರಗಳು ಹಿಂದೂ ಮುಸ್ಲಿಮ್ ಸಂಬಂಧ, ಭಯೋತ್ಪಾದಕ ಚಟುವಟಿಕೆಗಳು ಹಾಗೂ ಅಂತರ್ಧರ್ಮೀಯ ಪ್ರೇಮ ಕುರಿತ ಕತೆಗಳನ್ನು ಆಯ್ಕೆ ಮಾಡಿಕೊಂಡಿದ್ದವು. ಆದರೆ ಆ ಎಲ್ಲ ಚಲನಚಿತ್ರಗಳು ದ್ವೇಷ ಬಿತ್ತುವ ಉದ್ದೇಶ ಹೊಂದಿರಲಿಲ್ಲ.
ಭಾರತದಲ್ಲಿ ನರೇಂದ್ರ ಮೋದಿ ಯುಗ ಶುರುವಾದ ಮೇಲೆ ‘ಉರಿ’, ‘ದಿ ಕಾಶ್ಮೀರ್ ಫೈಲ್’, ‘ಕೇರಳ ಸ್ಟೋರಿ’, ‘ತೇಜಸ್’ನಂಥ ಕೀಳು ಅಭಿರುಚಿಯ ಚಲನಚಿತ್ರಗಳು ನಿರ್ಮಾಣವಾಗತೊಡಗಿವೆ. ಚಲನಚಿತ್ರ ಸೆನ್ಸರ್ ಮಂಡಳಿ ಇಂತಹ ಚಿತ್ರಗಳಿಗೆ ಪ್ರಮಾಣ ಪತ್ರ ನೀಡಿ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದೇ ದೊಡ್ಡ ತಪ್ಪು. ಅಭಿವ್ಯಕ್ತಿ ಸ್ವಾತಂತ್ರ್ಯದ ಮಿತಿಗಳನ್ನು ಮನವರಿಕೆ ಮಾಡಿಕೊಡಲೆಂದೇ ಕೇಂದ್ರ ಚಲನಚಿತ್ರ ಸೆನ್ಸರ್ ಮಂಡಳಿ ಇದೆ. ದ್ವೇಷ ಬಿತ್ತುವ, ಸಮಾಜದಲ್ಲಿನ ಶಾಂತಿ ಸಾಮರಸ್ಯ ಕದಡುವ ಚಲನಚಿತ್ರಗಳನ್ನು ಕಣ್ಣು ಮುಚ್ಚಿ ಸೆನ್ಸರ್ ಮಂಡಳಿ ಒಪ್ಪಿಗೆ ನೀಡಿದ್ದು ಅದರ ವಿಶ್ವಾರ್ಹತೆ ಬಗ್ಗೆ ಗುಮಾನಿ ಹುಟ್ಟಿಕೊಂಡಿವೆ. ಕಂಗನಾ ರಣಾವತ್ ಅಭಿನಯದ ‘ತೇಜಸ್’ ಚಲನಚಿತ್ರ ರಾಮ ಭಕ್ತರನ್ನು ಕೆರಳಿಸುವ ಉದ್ದೇಶ ಹೊಂದಿರುವುದು ಸ್ಪಷ್ಟವಾಗುತ್ತದೆ.
‘ಕೇರಳ ಸ್ಟೋರಿ’ ಭಾಗ ಎರಡರ ಟೀಸರ್ ಬಿಡುಗಡೆಯಾಗುತ್ತಲೇ ಮುಖ್ಯಮಂತ್ರಿ ಪಿಣರಾಯಿ ಅವರು ಆ ಚಿತ್ರ ದುರುದ್ದೇಶ ಹೊಂದಿದೆ ಎಂಬುದು ಬಯಲು ಮಾಡಿದ್ದರು. ಶ್ರೀದೇವ್ ನಂಬೂದರಿ ಅವರು ಕೇರಳ ಹೈಕೋರ್ಟ್ನಲ್ಲಿ ಕೇರಳ ಸ್ಟೋರಿ ಭಾಗ ಎರಡರ ವಿರುದ್ಧ ರಿಟ್ ಅರ್ಜಿ ಸಲ್ಲಿಸಿದ್ದರಿಂದ ಕೋಮುವಾದಿ ಅಜೆಂಡಾ ಸುದ್ದಿಯಾಗಿದೆ. ಕೇರಳ ಸ್ಟೋರಿ ಪ್ರಕರಣವನ್ನು ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್ ನ್ಯಾಯಧೀಶರಾದ ಬೆಚ್ಚು ಕುರಿಯನ್ ಥಾಮಸ್ ಅವರು ಸಂವೇದನಾಶೀಲರಾಗಿ ಪ್ರತಿಕ್ರಿಯೆ ವ್ಯಕ್ತ ಪಡಿಸಿದ್ದಾರೆ. ಚಿತ್ರದ ಹೆಸರು ‘ಕೇರಳ ಸ್ಟೋರಿ’ ಅಂತಿದ್ದರೂ ಆ ಚಲನಚಿತ್ರದ ಘಟನಾವಳಿಗಳು ಉತ್ತರ ಭಾರತದ ಹಳ್ಳಿಗಳಲ್ಲಿ ನಡೆದಿವೆ ಎಂದು ನಿರ್ದೇಶಕ ಹೇಳಿಕೊಂಡಿದ್ದಾರೆ. ಕೇರಳ ಅಭಿವೃದ್ಧಿ ಹೊಂದಿದ ರಾಜ್ಯ. ಪ್ರವಾಸೋದ್ಯಮದ ಆದಾಯ ನೆಚ್ಚಿಕೊಂಡು ಬದುಕುತ್ತಿರುವ ಕೇರಳ ಇಂತಹ ವಿಕೃತ ಚಲನಚಿತ್ರಗಳಿಂದ ತನ್ನ ಅಸ್ಮಿತೆಗೆ ಕಳಂಕ ಅಂಟಿಸಿಕೊಳ್ಳುವಂತಾಗಿದೆ. ಕೇರಳ ಹೈಕೋರ್ಟ್ನ ಏಕಸದಸ್ಯ ಪೀಠ ‘ಕೇರಳ ಸ್ಟೋರಿ’ ಭಾಗ ಎರಡು ಚಲನಚಿತ್ರಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿದೆ. ಇದು ತಾತ್ಕಾಲಿಕ ವ್ಯವಸ್ಥೆಯಷ್ಟೇ. ಈಗಾಗಲೇ ಚಿತ್ರ ತಂಡ ತಡೆಯಾಜ್ಞೆ ತೆರವುಗೊಳಿಸಲು ಮೆಲ್ಮನವಿ ಸಲ್ಲಿಸಿದೆ. ರಾಜಕೀಯ ಪ್ರೇರಿತವಾದ, ಕೋಮುವಾದಿ ಕಥಾಹಂದರವುಳ್ಳ ಇಂತಹ ಚಲನಚಿತ್ರಗಳನ್ನು ಸೆನ್ಸರ್ ಮಂಡಳಿ ಪ್ರಮಾಣ ಪತ್ರ ನೀಡಲು ನಿರಾಕರಿಸಬೇಕು. ಆದರೆ ಕೇಂದ್ರದಲ್ಲಿ ಬಿಜೆಪಿ ಸರಕಾರ ಇರುವುದರಿಂದ ಅಂತಹ ಕ್ರಮ ನಿರೀಕ್ಷೆ ಮಾಡಲಾಗದು. ಅಷ್ಟಕ್ಕೂ ಕೇಂದ್ರ ಮಂತ್ರಿ ಗಿರಿರಾಜ್ ಸಿಂಗ್ ಕೇರಳ ಸ್ಟೋರಿ ಭಾಗ ಎರಡರ ಪರ ಬಹಿರಂಗವಾಗಿಯೇ ವಕಾಲತ್ತು ವಹಿಸಿದ್ದಾರೆ. ಈಗ ನ್ಯಾಯಾಲಯಗಳ ಮೊರೆ ಹೋಗುವುದು ಅನಿವಾರ್ಯವಾಗಿದೆ. ಎಲ್ಲಕ್ಕೂ ಮಿಗಿಲಾಗಿ ಕೋಮುವಾದಿ ಅಜೆಂಡಾ ಹೊಂದಿರುವ, ದ್ವೇಷ ಬಿತ್ತುವ ಚಲನಚಿತ್ರಗಳ ಬಗ್ಗೆ ಅರಿವು ಮೂಡಿಸುವ ಬಹುದೊಡ್ಡ ಜನಾಂದೋಲನ ರೂಪಿಸುವುದು ಅಗತ್ಯವಾಗಿದೆ. ಜನರೇ ಸ್ವಯಂ ಪ್ರೇರಿತರಾಗಿ ತಿರಸ್ಕರಿಸಬೇಕು. ದಿ ಕಾಶ್ಮೀರ್ ಫೈಲ್, ಉರಿ, ತೇಜಸ್ ಮತ್ತು ಕೇರಳ ಸ್ಟೋರಿ ಸರಣಿ ಚಿತ್ರಗಳನ್ನು ಜನರೇ ತಿರಸ್ಕರಿಸಿದ್ದಾರೆ. ಆದರೆ ಎಷ್ಟೋ ಸಲ ದೇಶಭಕ್ತಿ, ಭಯೋತ್ಪಾದನೆ, ಆಂತರಿಕ ಭದ್ರತೆ ಕುರಿತಾದ ಚಲನಚಿತ್ರಗಳು ಜನರ ಮನಸ್ಸಿನಲ್ಲಿ ಪೂರ್ವಾಗ್ರಹ ಬಿತ್ತುವಲ್ಲಿ ಯಶಸ್ವಿಯಾಗುತ್ತವೆ. ಈ ಪಿಡುಗು ಹತ್ತಿಕ್ಕಲು ಜನಜಾಗೃತಿ ಒಂದೇ ಪ್ರಬಲ ಅಸ್ತ್ರ. ಕೇರಳ ಸ್ಟೋರಿಯಂತಹ ಚಲನಚಿತ್ರಗಳು ಉಂಟು ಮಾಡುವ ಅಡ್ಡ ಪರಿಣಾಮಗಳನ್ನು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಕೋಮುವಾದಿ ಪ್ರಯತ್ನಗಳನ್ನು ವಿಫಲಗೊಳಿಸುವ ಸಾಧನಗಳನ್ನು ಅನ್ವೇಷಣೆ ಮಾಡುತ್ತಲೇ ಇರಬೇಕು. ನರೇಂದ್ರ ಮೋದಿಯವರು ಅಧಿಕಾರದಿಂದ ಕೆಳಗೆ ಇಳಿದ ಮೇಲೂ ಕೋಮು ವಿಷ ಜೀವಂತವಾಗಿರುತ್ತದೆ. ಅಧಿಕಾರ ರಾಜಕಾರಣದ ಆಚೆಗೂ ಕೋಮು ವಿಷಕ್ಕೆ ಅಸ್ತಿತ್ವ ಇದೆ ಎನ್ನುವುದನ್ನು ಎಲ್ಲ ಸಂವೇದನಾಶೀಲರು ಮನಗಾಣಬೇಕು. ಪ್ರೀತಿಯ ಅಮೃತ ಧಾರೆ ಜನ ಸಮೂಹದ ವಿವೇಕದ ಭಾಗವಾಗಿದ್ದರೂ ಅದರ ಅಸ್ತಿತ್ವವನ್ನು ನಿರೂಪಿಸುತ್ತಲೇ ಇರಬೇಕು.