ರಾಜ್ಯೋತ್ಸವ ಪ್ರಶಸ್ತಿ: ಸಲಹಾ ಸಮಿತಿ ರಚನೆಯಲ್ಲೇ ಕೈಚಳಕ
ಅರುವತ್ತು ವರ್ಷ ಮೇಲ್ಪಟ್ಟವರು ಮಾತ್ರ ರಾಜ್ಯೋತ್ಸವ ಪ್ರಶಸ್ತಿ ಪಡೆಯಲು ಅರ್ಹರು ಎಂಬ ಮಾನದಂಡ ರೂಪಿಸಿರುವಾಗ ಈ ಸಲಹಾ ಸಮಿತಿಯಲ್ಲಿ ಅರುವತ್ತು ವರ್ಷ ಮೇಲ್ಪಟ್ಟವರನ್ನು ಸೇರಿಸಿಕೊಳ್ಳಬಾರದು. ಯಾಕೆಂದರೆ, ಅವರಲ್ಲಿ ಹಲವರು ರಾಜ್ಯೋತ್ಸವ ಪ್ರಶಸ್ತಿಯ ಆಕಾಂಕ್ಷಿಗಳು ಇರುತ್ತಾರೆ. ಅವರಿಗೆ ಪ್ರಶಸ್ತಿ ತಪ್ಪಿಸಲೆಂದೇ ಈ ಸಲಹಾ ಸಮಿತಿಗೆ ಸೇರಿಸಲಾಗಿದೆ ಎಂಬ ಭಾವನೆ ಮೂಡುತ್ತದೆ. ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಯ ಸಲಹಾ ಸಮಿತಿಯಲ್ಲಿ ಈ ಹಿಂದೆ ಹಲವಾರು ಸಮಿತಿಯಲ್ಲಿ ಕಾರ್ಯ ನಿರ್ವಹಿಸಿದವರ ಹೆಸರುಗಳು ಪುನರಾವರ್ತನೆಯಾಗಿವೆ. ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡಮಿಯ ಅಧ್ಯಕ್ಷರು ನೃತ್ಯ ಕ್ಷೇತ್ರದವರೇ ಆಗಿದ್ದರಿಂದ, ನೃತ್ಯ ಕ್ಷೇತ್ರದ ಮತ್ತಿಬ್ಬರನ್ನು ಸಲಹಾ ಸಮಿತಿಗೆ ಸೇರಿಸುವ ಅಗತ್ಯವಿರಲಿಲ್ಲ. ಬೇರೆ ಕ್ಷೇತ್ರಕ್ಕೆ ಸೇರಿದ ತಜ್ಞರಿಗೆ ಅವಕಾಶ ನೀಡಬಹುದಾಗಿತ್ತು.
ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯ
ಇವ ನಮ್ಮವ ಇವ ನಮ್ಮವ ಇವ ನಮ್ಮವನೆಂದೆನಿಸಯ್ಯ
ಕೂಡಲಸಂಗಮದೇವಾ ನಿಮ್ಮ ಮನೆಯ ಮಗನೆಂದೆನಿಸಯ್ಯ
-ಬಸವಣ್ಣ
ಕರ್ನಾಟಕ ಸರಕಾರ ಪ್ರತಿವರ್ಷ ನವೆಂಬರ್ ಒಂದರಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪ್ರತಿಭಾವಂತ ಕನ್ನಡಿಗರನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುವ ಪರಿಪಾಠ ಬೆಳೆದು ಬಂದಿದೆ. ಕಾಲಕಾಲಕ್ಕೆ ಪ್ರಶಸ್ತಿಯ ಮೊತ್ತ ಮತ್ತು ಮಾನದಂಡಗಳು ಬದಲಾಗುತ್ತಾ ಬಂದಿವೆ. ಹತ್ತು ವರ್ಷಗಳ ಹಿಂದೆ ರಾಜ್ಯೋತ್ಸವ ಪ್ರಶಸ್ತಿಗೆ ವಯಸ್ಸಿನ ಮಿತಿ ನಿಗದಿಪಡಿಸರಲಿಲ್ಲ. ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳಲೋ, ಅರ್ಹ ಸಾಧಕರಿಗೆ ಪ್ರಶಸ್ತಿ ನೀಡಲೆಂದೋ ಅರುವತ್ತು ವರ್ಷ ಮೇಲ್ಪಟ್ಟ ಸಾಧಕರಿಗೆ ಮಾತ್ರ ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸಲಾಗುವುದು ಎಂಬ ನಿಯಮ ರೂಪಿಸಿದರು. ಆ ನಿಯಮವನ್ನು ಉಲ್ಲಂಘನೆ ಮಾಡಿದ ನಿದರ್ಶನಗಳು ಸಾಕಷ್ಟಿವೆ. ಇತ್ತೀಚಿನ ವರ್ಷಗಳಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪ್ರತಿಭೆ, ನಿಜವಾದ ಸಾಧನೆ ಗುರುತಿಸಿ ಕೊಡುವುದರ ಬದಲು ಕೇವಲ ವಯಸ್ಸಿಗೆ ನೀಡುವಂತಾಗಿದೆ.
ಬಹಳ ವರ್ಷಗಳ ಕಾಲ ಪ್ರಶಸ್ತಿಯ ಮೊತ್ತ ಕೇವಲ ರೂ. ಹತ್ತು ಸಾವಿರ ಇತ್ತು. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಮೇಲೆ ಪ್ರಶಸ್ತಿಯ ಮೊತ್ತವನ್ನು ರೂ. ಒಂದು ಲಕ್ಷಕ್ಕೆ ಹೆಚ್ಚಿಸಲಾಯಿತು. ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿದ್ದಾಗ ಇನ್ನೂ ನಾಲ್ಕು ಹೆಜ್ಜೆ ಮುಂದೆ ಹೋಗಿ ರಾಜ್ಯೋತ್ಸವ ಪ್ರಶಸ್ತಿಯ ಮೊತ್ತವನ್ನು ರೂ. ಐದು ಲಕ್ಷಕ್ಕೆ ಹೆಚ್ಚಿಸಿದರು. ದುರಂತ ನೋಡಿ, ಕರ್ನಾಟಕ ಚಲನಚಿತ್ರ ಪ್ರಶಸ್ತಿಗಳ ನಗದು ಮೊತ್ತ ಇಪ್ಪತ್ತು ಸಾವಿರಕ್ಕೆ ನಿಂತು ಇಪ್ಪತ್ತೈದು ವರ್ಷಗಳೇ ಕಳೆದಿವೆ.
ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿಗಳ ಸಂಖ್ಯೆ ಸರಕಾರಗಳ ಮರ್ಜಿಯನ್ನು ಅವಲಂಬಿಸಿ ಹೆಚ್ಚು ಕಮ್ಮಿಯಾಗುತ್ತಾ ಬಂದಿವೆ. ಎಸ್. ಬಂಗಾರಪ್ಪ, ಎನ್. ಧರಂಸಿಂಗ್ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯೋತ್ಸವ ಪ್ರಶಸ್ತಿಗಳ ಸಂಖ್ಯೆ ಎರಡು ನೂರರವರೆಗೆ ಏರಿದೆ. ಪ್ರಶಸ್ತಿಗಳ ಸಂಖ್ಯೆ ಹೆಚ್ಚಾದರೆ ಮೌಲ್ಯ ಕಡಿಮೆಯಾಗುತ್ತದೆ ಎಂಬುದು ಕೆಲವರ ವಾದ. ಆದರೆ ಎನ್. ಧರಂಸಿಂಗ್ ಮತ್ತು ಎಸ್. ಬಂಗಾರಪ್ಪ ಅವರು ‘‘ಕರ್ನಾಟಕ ಪ್ರತಿಭಾವಂತರ ನಾಡು. ವಿವಿಧ ಕ್ಷೇತ್ರಗಳ ಅಸಂಖ್ಯಾತ ಸಾಧಕರಿದ್ದಾರೆ. ಹೆಚ್ಚು ಜನರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡುವುದರಲ್ಲಿ ತಪ್ಪಿಲ್ಲ’’ ಎಂದು ಬಲವಾಗಿ ಸಮರ್ಥಿಸಿಕೊಂಡಿದ್ದರು. ಮುಖ್ಯಮಂತ್ರಿಗಳಾದ ಎಸ್. ಬಂಗಾರಪ್ಪ ಮತ್ತು ಎಚ್.ಡಿ. ಕುಮಾರಸ್ವಾಮಿಯವರು ರಾಜ್ಯೋತ್ಸವ ಪ್ರಶಸ್ತಿಯನ್ನು ತಮಗೆ ಬೇಕಾದವರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲೇ ಘೋಷಿಸಿ ಆಯ್ಕೆ ಸಮಿತಿಯ ಗೌರವವನ್ನು ಹಾಳು ಮಾಡಿದ ನಿದರ್ಶನ ಚರಿತ್ರೆಯಲ್ಲಿ ದಾಖಲಾಗಿದೆ. ಹಲವು ಜನ ಮಂತ್ರಿ, ಮುಖ್ಯಮಂತ್ರಿಗಳು ಅಧಿಕಾರ ಬಲದಿಂದ ತಮಗೆ ಬೇಕಾದ ಅನರ್ಹರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲು ಒತ್ತಡ ಹೇರಿದ ಪ್ರಸಂಗಗಳು ನಡೆದಿವೆ. ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತ್ರ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಯಾವ ಪ್ರಶಸ್ತಿಯ ಆಯ್ಕೆಯಲ್ಲೂ ಹಸ್ತಕ್ಷೇಪ ಮಾಡಿದ ಒಂದೇ ಒಂದು ನಿದರ್ಶನ ಇಲ್ಲ. 2013ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗಲಂತೂ ಸಿದ್ದರಾಮಯ್ಯ ಅವರು ಎಲ್ಲ ಪ್ರಶಸ್ತಿಗಳ ಮೌಲ್ಯ ಹೆಚ್ಚಿಸಲು ಶ್ರಮಿಸಿದರು. ಬಿಜೆಪಿ ಮುಖ್ಯಮಂತ್ರಿಗಳು ಪ್ರಶಸ್ತಿಯ ಮೊತ್ತ ಹೆಚ್ಚಿಸಿ ಮೌಲ್ಯ ಕುಸಿಯುವಂತೆ ಮಾಡಿದ್ದರು. ಆದರೆ ಸಿದ್ದರಾಮಯ್ಯ ಅವರು ಪ್ರಶಸ್ತಿಯ ಮೊತ್ತ ಹೆಚ್ಚಿಸುವ ಉಸಾಬರಿಗೆ ಹೋಗದೆ ಮೌಲ್ಯ ಹೆಚ್ಚಿಸಲು ನಿರಂತರ ಶ್ರಮಿಸಿದ್ದರು. ಪ್ರಶಸ್ತಿಯ ಮೌಲ್ಯ ಹೆಚ್ಚಿಸಿದ್ದರ ಶ್ರೇಯಸ್ಸು ಅಂದಿನ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದ ಶ್ರೇಷ್ಠ ಚಲನಚಿತ್ರ ಕಲಾವಿದೆ ಡಾ. ಉಮಾಶ್ರೀ ಅವರಿಗೆ ಸಲ್ಲಬೇಕು. ಪ್ರಶಸ್ತಿಗಳ ಆಯ್ಕೆ ಅಥವಾ ಸಲಹಾ ಸಮಿತಿಗಳನ್ನು ರಚಿಸುವ ಸಂದರ್ಭದಲ್ಲಿ ಉಮಾಶ್ರೀ ಅವರು ಸಾಮಾಜಿಕ ನ್ಯಾಯ, ಪ್ರಾದೇಶಿಕ ನ್ಯಾಯ, ಮಹಿಳಾ ನ್ಯಾಯ ಮತ್ತು ಪ್ರತಿಭಾ ನ್ಯಾಯವನ್ನು ಕಡ್ಡಾಯವಾಗಿ ಪಾಲಿಸುತ್ತಿದ್ದರು. ಎಲ್ಲಕ್ಕೂ ಮಿಗಿಲಾಗಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿರಿಯ ಮಂತ್ರಿಗಳ ಒತ್ತಡಗಳಿಗೂ ಮಣಿಯುತ್ತಿರಲಿಲ್ಲ. ಸ್ವತಃ ಉಮಾಶ್ರೀ ಅವರಿಗೆ ತಿಳಿವಳಿಕೆ ಇತ್ತು. ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಮಂತ್ರಿ ಉಮಾಶ್ರೀ ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಾಮಾಜಿಕ ನ್ಯಾಯದ ಬದ್ಧತೆಯನ್ನು ಯಾರೂ ಪ್ರಶ್ನಿಸಲಾಗದು. ಸಾಹಿತ್ಯ, ಕಲೆಗಳ ಬಗ್ಗೆ ಅಪಾರ ಪ್ರೀತಿ, ಗೌರವ ಇಟ್ಟುಕೊಂಡಿದ್ದಾರೆ. ಅವರು ಮೂಲತಃ ಸೂಕ್ಷ್ಮ ಸಂವೇದನಾ ಶೀಲ ಗುಣಗಳನ್ನು ಹೊಂದಿದ ವ್ಯಕ್ತಿ. ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ಅವರು ಸುತ್ತಲಿನವರ ಸಲಹೆ ಸೂಚನೆಗಳನ್ನು ಕೇಳಿಯೂ ತಮಗೆ ಸರಿ ಎನಿಸಿದ್ದನ್ನು ಮಾತ್ರ ಜಾರಿಗೆ ತರುತ್ತಿದ್ದರು. ಹಾಗಾಗಿ ಯಾರೊಬ್ಬರೂ ಅವರನ್ನು ಹಾದಿ ತಪ್ಪಿಸಲು ಸಾಧ್ಯವಾಗುತ್ತಿರಲಿಲ್ಲ.
ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ಮೇಲೆ ಅವರನ್ನು ದುರುಪಯೋಗ ಪಡಿಸಿಕೊಳ್ಳುವವರ ಸಂಖ್ಯೆ ಜಾಸ್ತಿಯಾಗಿದೆ. ಇಷ್ಟಾಗಿಯೂ ಸಿದ್ದರಾಮಯ್ಯ ಅವರ ಸಾಮಾಜಿಕ ನ್ಯಾಯದ ಬದ್ಧತೆ, ಸೈದ್ಧಾಂತಿಕ ನಿಲುವಿನಲ್ಲಿನ ಸ್ಪಷ್ಟತೆ ಮಂಕಾಗಿಲ್ಲ. ಅಕಾಡಮಿ, ಪ್ರಾಧಿಕಾರಗಳ ನೇಮಕಾತಿಯ ಸಂದರ್ಭದಲ್ಲಿ ಯಾರದೋ ಸಲಹೆ ಮೇರೆಗೆ ಸಂಘ ಪರಿವಾರಕ್ಕೆ ಸೇರಿದವರನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಿಸಿದ್ದರು. ಸತ್ಯ ಗೊತ್ತಾದ ತಕ್ಷಣ ಆ ನೇಮಕಾತಿಯನ್ನು ರದ್ದು ಪಡಿಸಿದರು. ನೈಜ ಕಾಳಜಿ ಇರುವವರು ಮಾತ್ರ ಇಂತಹ ದಿಟ್ಟ ನಿರ್ಧಾರ ತೆಗೆದುಕೊಳ್ಳಬಲ್ಲರು. ಸಿದ್ದರಾಮಯ್ಯ ಅವರು ಮೂಲತಃ ಜಾತಿವಾದಿಯಲ್ಲ. ಅವರ ಸುತ್ತುವರಿದಿರುವ ಕೆಲ ಜಾತಿವಾದಿ ಶಕ್ತಿಗಳು ಕೆಲವೊಮ್ಮೆ ಹಾದಿ ತಪ್ಪಿಸುತ್ತಿರುತ್ತವೆ. ಸಾಮಾಜಿಕ ನ್ಯಾಯ ಪರಿಕಲ್ಪನೆಯನ್ನು ಆತ್ಯಂತಿಕವಾಗಿ ನಂಬಿದ ಕೊನೆಯ ಮುಖ್ಯಮಂತ್ರಿ ಸಿದ್ದರಾಮಯ್ಯ. ಬಿಜೆಪಿ, ಜೆಡಿಎಸ್ ಮಾತ್ರವಲ್ಲ, ಸಿದ್ದರಾಮಯ್ಯ ಅವರ ಆಳದ ಕಾಳಜಿ, ಸಾಮಾಜಿಕ ನ್ಯಾಯದ ಬದ್ಧತೆ ಕಾಂಗ್ರೆಸ್ ಪಕ್ಷದ ಬೇರೆ ನಾಯಕರಲ್ಲಿಯೂ ನೋಡಲು ಸಿಗುವುದಿಲ್ಲ.
ಎರಡನೇ ಬಾರಿಗೆ ಮುಖ್ಯಮಂತ್ರಿಯಾದಾಗ ಸಿದ್ದರಾಮಯ್ಯ ಅವರು ಕನ್ನಡ ಮತ್ತು ಸಂಸ್ಕೃತಿ ಹಾಗೂ ಶಿಕ್ಷಣ ಮಂತ್ರಿಗಳ ಆಯ್ಕೆಯಲ್ಲಿ ಎಡವಿದರು. ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಮೂಲತಃ ಒಳ್ಳೆಯ ವ್ಯಕ್ತಿ. ಆದರೆ ಅವರ ಒಳ್ಳೆಯತನವನ್ನು ಕೆಲವರು ನಿರಂತರವಾಗಿ ತಮ್ಮ ಸ್ವಾರ್ಥ ಸಾಧನೆಗೆ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಶಿವರಾಜ್ ತಂಗಡಗಿಯವರಿಗೂ ಸಾಮಾಜಿಕ ನ್ಯಾಯ, ಪ್ರಾದೇಶಿಕ ನ್ಯಾಯ, ಪ್ರತಿಭಾ ನ್ಯಾಯದ ಮೇಲೆ ಬಲವಾದ ನಂಬಿಕೆ ಇದೆ. ಸಾಹಿತ್ಯ, ಸಂಸ್ಕೃತಿ ಕುರಿತ ಅವರ ಅಲ್ಪ ತಿಳಿವಳಿಕೆಯನ್ನೇ ಬಂಡವಾಳ ಮಾಡಿಕೊಂಡು ಹಾದಿ ತಪ್ಪಿಸುತ್ತಿ ದ್ದಾರೆ. ಅಕಾಡಮಿ-ಪ್ರಾಧಿಕಾರಗಳ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕದ ಪ್ರತಿಭೆಗಳನ್ನು ಸಂಪೂರ್ಣ ಕಡೆಗಣಿಸಲಾಯಿತು.
ಈಗ 2025ರ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗಾಗಿ ರಚಿಸಿರುವ ಸಲಹಾ ಸಮಿತಿಯಲ್ಲಿ ಹಲವು ಎಡವಟ್ಟುಗಳು ಎದ್ದು ಕಾಣುತ್ತವೆ. ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಗೆ ಸಲಹೆ ನೀಡಲು ವಿವಿಧ ಕ್ಷೇತ್ರಗಳ ಒಟ್ಟು ನಲವತ್ತೇಳು ಜನ ತಜ್ಞರನ್ನು ಸಲಹಾ ಸಮಿತಿಗೆ ಸೇರಿಸಿಕೊಂಡಿದ್ದಾರೆ. ಅವರೊಂದಿಗೆ ಹದಿನೇಳು ಜನ ಪದ ನಿಮಿತ್ತ ಸದಸ್ಯರಿದ್ದಾರೆ. ಈ ಸಲಹಾ ಸಮಿತಿಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿಯವರು ಅಧ್ಯಕ್ಷರಾಗಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯೂ ಸಮಿತಿಯಲ್ಲಿ ಇದ್ದಾರೆ. ಸಂಸ್ಕೃತಿ ಇಲಾಖೆಯ ನಿರ್ದೇಶಕರು ಈ ಸಮಿತಿಯ ಸಂಚಾಲಕ ಸದಸ್ಯರಾಗಿದ್ದಾರೆ. ಅಕಾಡಮಿ -ಪ್ರಾಧಿಕಾರಗಳ ಅಧ್ಯಕ್ಷರ ಸ್ಥಾನಕ್ಕೆ ಅಪಾರ ಅನುಭವ ಹೊಂದಿರುವ ವಿವಿಧ ಕ್ಷೇತ್ರಗಳ ಸಾಧಕರನ್ನೇ ನೇಮಕ ಮಾಡಿರುತ್ತಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರ, ಕುವೆಂಪು ಭಾಷಾ ಭಾರತಿ, ಕರ್ನಾಟಕ ಸಾಹಿತ್ಯ ಅಕಾಡಮಿ, ಕರ್ನಾಟಕ ನಾಟಕ ಅಕಾಡಮಿ, ಕರ್ನಾಟಕ ಲಲಿತ ಕಲಾ ಅಕಾಡಮಿ, ಕರ್ನಾಟಕ ಶಿಲ್ಪ ಕಲಾ ಅಕಾಡಮಿ, ಕರ್ನಾಟಕ ಯಕ್ಷಗಾನ ಅಕಾಡಮಿ, ಕರ್ನಾಟಕ ಜಾನಪದ ಅಕಾಡಮಿ, ಕರ್ನಾಟಕ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡಮಿ, ಕರ್ನಾಟಕ ಚಲನಚಿತ್ರ ಅಕಾಡಮಿ ಮತ್ತು ಕರ್ನಾಟಕ ಮಾಧ್ಯಮ ಅಕಾಡಮಿ ಅಧ್ಯಕ್ಷರನ್ನು ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯ ಸಲಹಾ ಸಮಿತಿಗೆ ಪದನಿಮಿತ್ತ ಸದಸ್ಯರನ್ನಾಗಿ ಸೇರಿಸಿದ್ದಾರೆ. ಆದರೆ ತುಳು, ಕೊಂಕಣಿ, ಬ್ಯಾರಿ, ಅರೆ ಭಾಷಾ ಮತ್ತು ಕೊಡವ ಅಕಾಡಮಿ ಅಧ್ಯಕ್ಷರನ್ನು ಈ ಸಲಹಾ ಸಮಿತಿಗೆ ಸೇರಿಸಿಲ್ಲ. ಈ ಸಲಹಾ ಸಮಿತಿಯಿಂದ ಆರು ರಂಗಾಯಣದ ನಿರ್ದೇಶಕರನ್ನು, ಇಪ್ಪತ್ತೈದು ವಿವಿಧ ಟ್ರಸ್ಟ್ ಮತ್ತು ಪ್ರತಿಷ್ಠಾನಗಳ ಅಧ್ಯಕ್ಷರನ್ನು ಹೊರಗಿಟ್ಟಿದ್ದಾರೆ. ನಲವತ್ತೇಳು ತಜ್ಞರನ್ನು ಸಲಹಾ ಸಮಿತಿಗೆ ಸೇರಿಸಿಕೊಳ್ಳುವ ಮತ್ತು ಕೆಲ ಅಕಾಡಮಿ ಮತ್ತು ವಿವಿಧ ಟ್ರಸ್ಟ್, ಪ್ರತಿಷ್ಠಾನಗಳ ಅಧ್ಯಕ್ಷರನ್ನು ಹೊರಗಿಡುವುದರ ಹಿಂದೆ ಸಮಂಜಸ ತರ್ಕವೇನಾದರೂ ಇದೆಯೇ? ಅದರಲ್ಲೂ ಸಾಹಿತ್ಯ, ಜಾನಪದ, ರಂಗಭೂಮಿ, ಮಾಧ್ಯಮ, ಸಂಗೀತ, ನೃತ್ಯ, ಚಿತ್ರಕಲೆ, ಕಿರುತೆರೆ/ಚಲನಚಿತ್ರ ಕ್ಷೇತ್ರಗಳ ಸಾಧಕರನ್ನು ಗುರುತಿಸಲು ಅಕಾಡಮಿ, ಪ್ರಾಧಿಕಾರ, ರಂಗಾಯಣ ಮತ್ತು ಟ್ರಸ್ಟ್-ಪ್ರತಿಷ್ಠಾನಗಳ ಅಧ್ಯಕ್ಷರುಗಳ ಸಲಹೆ ಸಾಕಿತ್ತಲ್ಲ. ಸರಕಾರವೇ ನೇಮಿಸಿದ ಸಂಸ್ಥೆಗಳ ಅಧ್ಯಕ್ಷರು ಮತ್ತು ನಿರ್ದೇಶಕರ ಮೇಲೆ ಸರಕಾರಕ್ಕೆ ನಂಬಿಕೆ ಇಲ್ಲವೆಂದಾಯಿತು. ಕರ್ನಾಟಕ ವಿಜ್ಞಾನ ಪರಿಷತ್ತು, ಕರ್ನಾಟಕ ಲೇಖಕಿಯರ ಸಂಘ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರುಗಳನ್ನು ಈ ಸಲಹಾ ಸಮಿತಿಗೆ ಸೇರಿಸಿಕೊಳ್ಳಬೇಕಿತ್ತು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ ವಿವಾದದ ಸುಳಿಯಲ್ಲಿ ಸಿಲುಕಿದ್ದರಿಂದ ಅವರನ್ನು ಸಲಹಾ ಸಮಿತಿಯಿಂದ ಹೊರಗಿಟ್ಟಿದ್ದು ಒಪ್ಪಿಕೊಳ್ಳೋಣ. ಜಿಲ್ಲಾ ಮತ್ತು ಸಾಮಾಜಿಕ ಪ್ರಾತಿನಿಧ್ಯ, ಕ್ಷೇತ್ರವಾರು ತಜ್ಞರ ಪ್ರತಿನಿಧಿಗಳ ಅಗತ್ಯ ಕಂಡು ಬಂದಾಗ ಮಾತ್ರ ಹೊರಗಿನ ತಜ್ಞರನ್ನು ಈ ಸಲಹಾ ಸಮಿತಿಗೆ ಸೇರಿಸಿಕೊಂಡಿದ್ದರೆ ಸಮರ್ಥನೀಯ ಕ್ರಮ ಎನಿಸಿಕೊಳ್ಳುತ್ತಿತ್ತು. ಸಮಾಜ ಸೇವೆ, ಕೃಷಿ, ವೈದ್ಯಕೀಯ, ಶಿಕ್ಷಣ, ಆಡಳಿತ, ನ್ಯಾಯಾಂಗ, ಕ್ರೀಡಾ ಕ್ಷೇತ್ರದ ಪ್ರತಿನಿಧಿಗಳು ಸಲಹಾ ಸಮಿತಿಯಲ್ಲಿ ಇರುವುದು ಅಗತ್ಯವಾಗಿತ್ತು. ಕ್ರೀಡಾ ಕ್ಷೇತ್ರದ ಇಬ್ಬರು ಸಲಹಾ ಸಮಿತಿಯಲ್ಲಿ ಇರುವಾಗ ಯುವ ಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಆಯುಕ್ತರನ್ನು ಪದನಿಮಿತ್ತ ಸದಸ್ಯರನ್ನಾಗಿ ಸೇರಿಸುವ ಅಗತ್ಯವಾದರೂ ಏನಿತ್ತು?
ವಿಚಿತ್ರವೆಂದರೆ ಮೊದಲ ಬಾರಿಗೆ ರಾಜ್ಯೋತ್ಸವ ಪ್ರಶಸ್ತಿ ಸಲಹಾ ಸಮಿತಿಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಆಯುಕ್ತರನ್ನು ಪದನಿಮಿತ್ತ ಸದಸ್ಯರನ್ನಾಗಿ ಸೇರಿಸಿದ ಉದ್ದೇಶವಾದರೂ ಏನು? ತುಳು, ಕೊಂಕಣಿ, ಬ್ಯಾರಿ, ಕೊಡವ, ಅರೆಭಾಷಾ ಅಕಾಡಮಿ ಅಧ್ಯಕ್ಷರು, ರಂಗಾಯಣದ ನಿರ್ದೇಶಕರನ್ನು ಮತ್ತು ಸಾಹಿತ್ಯ, ಸಂಗೀತ, ಚಿತ್ರಕಲೆಗಳಿಗೆ ಸಂಬಂಧಿಸಿದ ಟ್ರಸ್ಟ್-ಪ್ರತಿಷ್ಠಾನಗಳ ಅಧ್ಯಕ್ಷರುಗಳನ್ನು ಈ ಸಲಹಾ ಸಮಿತಿಯಿಂದ ಹೊರಗಿಟ್ಟು ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷರನ್ನು ಮಾತ್ರ ಈ ಸಲಹಾ ಸಮಿತಿಗೆ ಪದನಿಮಿತ್ತ ಸದಸ್ಯರನ್ನಾಗಿ ಸೇರಿಸಿ ಕೊಂಡಿದ್ದರ ಹಿಂದೆ ಯಾವ ಮಾನದಂಡ, ತರ್ಕ ಇದೆ? ಅರುವತ್ತು ವರ್ಷ ಮೇಲ್ಪಟ್ಟವರು ಮಾತ್ರ ರಾಜ್ಯೋತ್ಸವ ಪ್ರಶಸ್ತಿ ಪಡೆಯಲು ಅರ್ಹರು ಎಂಬ ಮಾನದಂಡ ರೂಪಿಸಿರುವಾಗ ಈ ಸಲಹಾ ಸಮಿತಿಯಲ್ಲಿ ಅರುವತ್ತು ವರ್ಷ ಮೇಲ್ಪಟ್ಟವರನ್ನು ಸೇರಿಸಿಕೊಳ್ಳಬಾರದು. ಯಾಕೆಂದರೆ, ಅವರಲ್ಲಿ ಹಲವರು ರಾಜ್ಯೋತ್ಸವ ಪ್ರಶಸ್ತಿಯ ಆಕಾಂಕ್ಷಿಗಳು ಇರುತ್ತಾರೆ. ಅವರಿಗೆ ಪ್ರಶಸ್ತಿ ತಪ್ಪಿಸಲೆಂದೇ ಈ ಸಲಹಾ ಸಮಿತಿಗೆ ಸೇರಿಸಲಾಗಿದೆ ಎಂಬ ಭಾವನೆ ಮೂಡುತ್ತದೆ. ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಯ ಸಲಹಾ ಸಮಿತಿಯಲ್ಲಿ ಈ ಹಿಂದೆ ಹಲವಾರು ಸಮಿತಿಯಲ್ಲಿ ಕಾರ್ಯ ನಿರ್ವಹಿಸಿದವರ ಹೆಸರುಗಳು ಪುನರಾವರ್ತನೆಯಾಗಿವೆ. ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡಮಿಯ ಅಧ್ಯಕ್ಷರು ನೃತ್ಯ ಕ್ಷೇತ್ರದವರೇ ಆಗಿದ್ದರಿಂದ, ನೃತ್ಯ ಕ್ಷೇತ್ರದ ಮತ್ತಿಬ್ಬರನ್ನು ಸಲಹಾ ಸಮಿತಿಗೆ ಸೇರಿಸುವ ಅಗತ್ಯವಿರಲಿಲ್ಲ. ಬೇರೆ ಕ್ಷೇತ್ರಕ್ಕೆ ಸೇರಿದ ತಜ್ಞರಿಗೆ ಅವಕಾಶ ನೀಡಬಹುದಾಗಿತ್ತು. ಸಂಗೀತ ಕ್ಷೇತ್ರದ ಸಾಧಕರನ್ನು ಗುರುತಿಸಲು ಇಬ್ಬರನ್ನು ಸಲಹಾ ಸಮಿತಿಗೆ ಸೇರಿಸಲಾಗಿದೆ. ಆ ಇಬ್ಬರೂ ಉತ್ತರ ಕರ್ನಾಟಕದವರು ಮತ್ತು ಹಿಂದೂಸ್ತಾನಿ ಸಂಗೀತದ ತಜ್ಞರು. ಈ ಸಲಹಾ ಸಮಿತಿಯಲ್ಲಿ ಕರ್ನಾಟಕ ಸಂಗೀತ ಮತ್ತು ಸುಗಮ ಸಂಗೀತ ಕ್ಷೇತ್ರದ ತಜ್ಞರು ಇಲ್ಲ. ಸಮಾಜ ಸೇವೆ, ಸಾಹಿತ್ಯ, ಸಂಗೀತ, ಕೃಷಿ, ಜಾನಪದ ಸೇರಿದಂತೆ ಒಟ್ಟು ಹದಿನಾರು ಕ್ಷೇತ್ರಗಳ ಸಾಧಕರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಗುರುತಿಸಲು ಸಲಹಾ ಸಮಿತಿ ರಚಿಸಲಾಗಿದೆ. ಪುಸ್ತಕ ಪ್ರಕಟಣೆಯಲ್ಲಿ ಪ್ರಧಾನ ಪಾತ್ರ ವಹಿಸುವ ಪ್ರಕಾಶನ ಕ್ಷೇತ್ರವನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಸೈನ್ಯದಲ್ಲಿ ಅಪ್ರತಿಮ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸುವ ಇರಾದೆ ರಾಜ್ಯ ಸರಕಾರಕ್ಕೆ ಇದ್ದಂತಿಲ್ಲ. ಪೌರ ಕಾರ್ಮಿಕರಿಗೂ ರಾಜ್ಯೋತ್ಸವ ಪ್ರಶಸ್ತಿ ನೀಡುವ ಪರಿಪಾಠ ಈ ಹಿಂದಿನ ಬಿಜೆಪಿ ಸರಕಾರ ಆರಂಭಿಸಿತ್ತು. ಮಂಗಳಮುಖಿಯರಲ್ಲೂ ಅನೇಕ ಪ್ರತಿಭಾವಂತ ಸಾಧಕರು ಸಿಗುತ್ತಾರೆ. ಅವರನ್ನು ಗುರುತಿಸಿ ಗೌರವಿಸುವ ಇರಾದೆ ಈ ಸಲಹಾ ಸಮಿತಿಯಲ್ಲಿ ವ್ಯಕ್ತವಾಗುವುದಿಲ್ಲ. ಸಲಹಾ ಸಮಿತಿಯಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಯಾವ ಪೂರ್ವಾಗ್ರಹ ಇಲ್ಲದೆ ಗುರುತಿಸುವ ತಜ್ಞರು ಇರಬೇಕೇ ಹೊರತು, ಯಾರನ್ನೋ ತೃಪ್ತಿ ಪಡಿಸಲು ಸಲಹಾ ಸಮಿತಿಗೆ ಸೇರಿಸಬಾರದು. ಸಾಹಿತ್ಯ ಕ್ಷೇತ್ರದ ಒಟ್ಟು ಏಳು ಜನರನ್ನು ಸಲಹಾ ಸಮಿತಿಗೆ ಸೇರಿಸಲಾಗಿದೆ. ಆ ಏಳು ಜನ ತಜ್ಞರಲ್ಲಿ ಕಲ್ಯಾಣ ಕರ್ನಾಟಕದ ಒಬ್ಬರೂ ಇಲ್ಲ. ಕರ್ನಾಟಕ ಸಾಹಿತ್ಯ ಅಕಾಡಮಿ ಅಧ್ಯಕ್ಷರು ಬೆಂಗಳೂರಿನವರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಮಂಗಳೂರಿನವರು, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರು ಮೈಸೂರಿನವರು. ಇನ್ನು ವಿಶೇಷವಾಗಿ ಅನುವಾದ ಕ್ಷೇತ್ರದ ತಜ್ಞರಾದ ಕುವೆಂಪು ಭಾಷಾ ಭಾರತಿ ಅಧ್ಯಕ್ಷರು ವಿಜಯಪುರದವರು. ಕಲ್ಯಾಣ ಕರ್ನಾಟಕದ ಸಾಹಿತಿಗಳ ಸಾಧನೆ ಗುರುತಿಸುವವರು ಯಾರು?
ಯಾವುದೇ ಮಾನದಂಡ ಅನುಸರಿಸದೆ, ತರ್ಕವಿಲ್ಲದೆ ರಚಿಸುವ ಸಲಹಾ ಸಮಿತಿ ನೈಜ ಸಾಧಕರನ್ನು ಕಡೆಗಣಿಸಿ ಅನರ್ಹರನ್ನು ಪ್ರಶಸ್ತಿಗೆ ಆಯ್ಕೆ ಮಾಡುತ್ತದೆ. ಈ ವಯಸ್ಸಿನ ಮಿತಿ ಕ್ರೀಡಾ ಕ್ಷೇತ್ರಕ್ಕೆ ವಿನಾಯಿತಿ ನೀಡಲಾಗಿದೆ. ಕಳೆದ ವರ್ಷ ಬಾಲರಾಮನ ಮೂರ್ತಿ ಮಾಡಿದ ಕಲಾವಿದನಿಗೆ ವಯಸ್ಸಿನ ಮಿತಿ ಸಡಿಲಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿತ್ತು. ಈ ವಯಸ್ಸಿನ ಮಿತಿ ಪ್ರಪಂಚದ ಯಾವ ದೇಶದಲ್ಲೂ ಇಲ್ಲ. ನೊಬೆಲ್ ಪ್ರಶಸ್ತಿಗೂ ವಯಸ್ಸಿನ ಮಿತಿ ವಿಧಿಸಿಲ್ಲ. ಭಾರತ ರತ್ನ, ಪದ್ಮವಿಭೂಷಣ, ಪದ್ಮಭೂಷಣ, ಪದ್ಮಶ್ರೀಗಳಿಗೂ ವಯಸ್ಸು ಪರಿಗಣಿಸುವುದಿಲ್ಲ.
ರಾಜ್ಯೋತ್ಸವ ಪ್ರಶಸ್ತಿಗೆ ವಯಸ್ಸಿನ ಮಿತಿ ಹೇರಿದ್ದರಿಂದ ಕಿರಿಯ ವಯಸ್ಸಿನಲ್ಲಿ ಹಿರಿದಾದ ಸಾಧನೆಗೈದ ಪ್ರತಿಭಾವಂತರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಸಂಚಾರಿ ವಿಜಯ್ ಕಿರಿಯ ವಯಸ್ಸಿನಲ್ಲೇ ಅತ್ಯುತ್ತಮ ನಟನೆಗಾಗಿ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದರು. ಚೋಮನದುಡಿ ಸಿನೆಮಾದ ಅಭಿನಯಯಕ್ಕೆ ವಾಸುದೇವರಾವ್ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ‘ನಾನು ಅವನಲ್ಲ ಅವಳು’ ಸಿನೆಮಾದಲ್ಲಿನ ಅಭಿನಯಕ್ಕೆ ಸಂಚಾರಿ ವಿಜಯ್ ರಾಷ್ಟ್ರ ಪ್ರಶಸ್ತಿಗೆ ಪಾತ್ರರಾಗಿದ್ದರು. ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಿಗಲೇ ಇಲ್ಲ. ಅಪಘಾತದಲ್ಲಿ ನಿಧನ ಹೊಂದಿದ್ದರಿಂದ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಿಗುವ ಅವಕಾಶ ಇಲ್ಲ. ಮೊಗಳ್ಳಿ ಗಣೇಶ್ ಕನ್ನಡದ ಅತ್ಯಂತ ಪ್ರಭಾವಿ ಮತ್ತು ಪ್ರತಿಭಾವಂತ ಕಥೆಗಾರ. ಹೊಸ ಹಾದಿ ನಿರ್ಮಾಣ ಮಾಡಿದ ಆ ಮಹಾನ್ ಕಥೆಗಾರನಿಗೆ ವಯಸ್ಸಿನ ನೆಪ ಮುಂದು ಮಾಡಿ ರಾಜ್ಯೋತ್ಸವ ಪ್ರಶಸ್ತಿ ನೀಡಲಿಲ್ಲ. ಈಗ ನೀಡಿದರೂ ಸ್ವೀಕರಿಸಲು ಮೊಗಳ್ಳಿ ಗಣೇಶ್ ಬದುಕಿಲ್ಲ. ನೈಜ ಸಾಧಕರಿಗೆ ಪ್ರಶಸ್ತಿಗಳನ್ನು ತಪ್ಪಿಸುವುದೇ ಈ ಅರಾಜಕ, ಕುತರ್ಕದ, ಸಲಹಾ ಸಮಿತಿಗಳು. ಸಲಹಾ ಸಮಿತಿಯಲ್ಲಿ ಹೆಚ್ಚು ಸದಸ್ಯರಿದ್ದಷ್ಟು ಪ್ರತಿಭಾವಂತರಿಗೆ ಹೆಚ್ಚು ಅನ್ಯಾಯವಾಗುತ್ತದೆ. ಒಮ್ಮತದ ಅಭಿಪ್ರಾಯ ಮೂಡದೆ ಹೋದಾಗ ಒಂದು ಪ್ರಶಸ್ತಿಗೆ ಐದು ಜನರ ಹೆಸರು ಸೂಚಿಸಲು ಹೇಳುತ್ತಾರೆ. ರಾಜ್ಯೋತ್ಸವ ಪ್ರಶಸ್ತಿಯ ಅಂತಿಮ ಪಟ್ಟಿ ಬಂದಾಗ ಯಾವ ಸಲಹೆಗಳಿಗೂ ಕವಡೆ ಕಾಸಿನ ಕಿಮ್ಮತ್ತು ದೊರೆತಿರುವುದಿಲ್ಲ. ಸಾಮಾಜಿಕ ನ್ಯಾಯ, ಪ್ರಾದೇಶಿಕ ನ್ಯಾಯದ ಹೆಸರಲ್ಲೇ ಪ್ರತಿಭಾವಂತ ಸಾಧಕರನ್ನು ಪ್ರಶಸ್ತಿಯಿಂದ ವಂಚಿಸಲಾಗುತ್ತದೆ. ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್ ಅವರಿಗೆ ಎಂಭತ್ತು ವರ್ಷ ದಾಟಿದ ನಂತರ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಕನ್ನಡದ ಖ್ಯಾತ ಕಥೆಗಾರ ಡಾ. ರಾಜಶೇಖರ ನೀರಾಮಾನ್ವಿ ಅವರಿಗೆ ಎಂಭತ್ತು ದಾಟಿದರೂ ರಾಜ್ಯೋತ್ಸವ ಪ್ರಶಸ್ತಿ ನೀಡಲಿಲ್ಲ. ಅವರು ಬದುಕು ಮುಗಿಸಿದರು. ಅಹಿಂದ ಪದ ನೀಡಿದ, ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿರುವ ಡಾ. ಸಿ.ಎಸ್. ದ್ವಾರಕಾನಾಥ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ತಪ್ಪಿಸಲೆಂದೇ ಕಳೆದ ಬಾರಿ ಪ್ರಶಸ್ತಿಯ ಸಲಹಾ ಸಮಿತಿಗೆ ಸೇರಿಸಿದ್ದರು. ತಂತ್ರ, ಕುತಂತ್ರ ಹೆಣೆದು ನೈಜ ಸಾಧಕರನ್ನು ರಾಜ್ಯೋತ್ಸವ ಪ್ರಶಸ್ತಿಯಿಂದ ವಂಚಿಸುವ ಹುನ್ನಾರ ಸಲಹಾ ಸಮಿತಿಯಲ್ಲಿ ಜಾಣತನದಿಂದ ನುಸುಳಿಕೊಂಡಿರುವ ಕೆಲವರು ಮಾಡುತ್ತಿರುತ್ತಾರೆ. ಅದರಿಂದ ಸರಕಾರಕ್ಕೂ ಕೆಟ್ಟ ಹೆಸರು ಬರುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕುತಂತ್ರಿಗಳ ಮಾತಿಗೆ ಕಿವಿಗೊಡದಿದ್ದರೆ ನೈಜ ಸಾಧಕರಿಗೆ ನ್ಯಾಯ ಸಿಗುತ್ತದೆ. ಪ್ರಶಸ್ತಿಯ ಮೌಲ್ಯ ಹೆಚ್ಚುತ್ತದೆ.