ಕಲಬುರಗಿ : ಜಿಲ್ಲಾದ್ಯಂತ ಗೌರಿ-ಗಣೇಶ ಚತುರ್ಥಿ ಹಬ್ಬವನ್ನು ಶಾಂತಿಯುತ ಹಾಗೂ ಸೌಹಾರ್ದತೆಯಿಂದ ಆಚರಿಸಬೇಕೆಂದು ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ತಿಳಿಸಿದ್ದಾರೆ.

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಗಣೇಶ ಚತುರ್ಥಿ ಹಬ್ಬದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲಾದ್ಯಂತ ಶಾಂತಿ, ಸೌಹಾರ್ದದಿಂದ ವಿಘ್ನ ವಿನಾಯಕನ ಹಬ್ಬ ಆಚರಿಸುವಂತೆ ಆಯೋಜಕರಿಗೆ ಸೂಚಿಸಿದರು.

ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಸುಲಭವಾಗಿ ಅನುಮತಿ ಪಡೆಯಲು, ಕಲಬುರಗಿ ನಗರಕ್ಕೆ ಸೀಮಿತವಾಗಿ ಮಹಾನಗರ ಪಾಲಿಕೆಯ ಟೌನ್ ಹಾಲ್ ಹಾಗೂ ಆಯಾ ತಾಲೂಕುಗಳಲ್ಲಿ ‘ಸಿಂಗಲ್ ವಿಂಡೋ’ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಆಯೋಜಕರು ಇಲ್ಲಿ ಅರ್ಜಿ ಸಲ್ಲಿಸಿ ಒಂದೇ ಸೂರಿನಡಿ ಎಲ್ಲದಕ್ಕೂ ಅನುಮತಿ ಪಡೆಯಬಹುದಾಗಿದೆ. ಸಿಂಗಲ್ ವಿಂಡೋ ವ್ಯವಸ್ಥೆಯಲ್ಲಿ ಅನುಮತಿಗೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಪ್ರತಿನಿಧಿಗಳು ಹಾಜರಿದ್ದು, ತ್ವರಿತಗತಿಯಲ್ಲಿ ಅನುಮತಿ ನೀಡಲು ನೆರವಾಗಬೇಕೆಂದು ಅಧಿಕಾರಿಗಳಿಗೆ ಅವರು ನಿರ್ದೇಶನ ನೀಡಿದರು.

ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ. ಮತ್ತು ಎಸ್.ಪಿ. ಅಡ್ಡೂರು ಶ್ರೀನಿವಾಸುಲು ಮಾತನಾಡಿದರು.

ಸಭೆಯಲ್ಲಿ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಅವಿನಾಶ್ ಶಿಂಧೆ, ಡಿಸಿಪಿ ಶಾಲು, ಪ್ರೊಬೇಷನರಿ ಐಎಎಸ್ ಅಧಿಕಾರಿ ಶಿಖರ್ ಮೋಘಾ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಶಾಂತಿ ಸಮಿತಿ ಸದಸ್ಯರು, ವಿವಿಧ ಸಮುದಾಯದ ಮುಖಂಡರು, ಸಾರ್ವಜನಿಕರು ಭಾಗವಹಿಸಿದ್ದರು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor