ಫೆಬ್ರವರಿಯಲ್ಲಿ 22ನೇ ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
ಸರ್ವಾಧ್ಯಕ್ಷರಾಗಿ ಮುಡುಬಿ ಗುಂಡೇರಾವ್ ಆಯ್ಕೆ
ಮುಡಬಿ ಗುಂಡೇರಾವ್
ಕಲಬುರಗಿ : ಫೆಬ್ರವರಿ ತಿಂಗಳಲ್ಲಿ ನಗರದಲ್ಲಿ ಜರುಗಲಿರುವ ಕಲಬುರಗಿ ಜಿಲ್ಲಾ 22ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಸಂಶೋಧಕ ಸಾಹಿತಿ ಮುಡುಬಿ ಗುಂಡೇರಾವ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.
ನಗರದ ಕನ್ನಡ ಭವನದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಸಂಶೋಧನಾ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ ಸಂಶೋಧಕರೊಬ್ಬರನ್ನು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕೆಂಬ ಪರಿಷತ್ತಿನ ನಿರ್ಣಯದಂತೆ ಈ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಕನ್ನಡದ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಂಡು ನಮ್ಮ ಭಾಷೆಯ ಉಳಿವಿಗೆ ಶ್ರಮಿಸುತ್ತಿದೆ. ನಮ್ಮ ಕನ್ನಡ ಭಾಷೆಯ ಬೆಳವಣಿಗೆಗೆ ಕನ್ನಡ ಸಾಹಿತ್ಯ ಸಮ್ಮೇಳನ ಪೂರಕವಾಗಿದೆ. ಹಾಗಾಗಿ ಅರ್ಥಪೂರ್ಣ ಸಮ್ಮೇಳನ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ತೇಗಲತಿಪ್ಪಿ ವಿವರಿಸಿದ್ದಾರೆ.
ಸಮ್ಮೇಳನಾಧ್ಯಕ್ಷ ಮುಡುಬಿ ಗುಂಡೇರಾವ ಪರಿಚಯ:
ಜಿಲ್ಲೆಯ ಸಾಹಿತ್ಯ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಮೀಸಲಿಟ್ಟು ಅವಿರತ ಶ್ರಮಿಸಿದ ವ್ಯಕ್ತಿ ಮುಡುಬಿ ಗುಂಡೇರಾವ್ ಅವರದ್ದು ಬಹುಮುಖ ಪ್ರತಿಭೆ.
ಹಲವು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವ ಇವರು ಗೌರವ ಉಪನ್ಯಾಸಕರಾಗಿ, ಪ್ರಾಧ್ಯಾಪಕರಾಗಿ, ಸಾಹಿತಿ, ಸಂಶೋಧಕರಾಗಿ, ಸೇಡಂ ತಾಲೂಕಾ ಕಸಾಪ ಕಾರ್ಯದರ್ಶಿ, ಅಧ್ಯಕ್ಷರಾಗಿ, ಸೇಡಂ ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಜಿಲ್ಲೆಯ ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ಕಾಣಿಕೆ ನೀಡುತ್ತಿದ್ದಾರೆ.
ಕಮಲಾಪೂರ ತಾಲೂಕಿನ ಹೊಡಲ್ ಗ್ರಾಮದವರಾದ ಗುಂಡೇರಾವ ಅವರು, ಎಂ.ಎ., ಎಂ.ಫಿಲ್ ಪದವಿ ಪಡೆದ ಬಳಿಕ ಸೇಡಂನ ನೃಪತುಂಗ ಪ್ರಥಮದರ್ಜೆ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ನಂತರ ಸರಕಾರಿ ಶಾಲೆಯ ಶಿಕ್ಷಕರಾಗಿ, ಮುಖ್ಯ ಗುರುಗಳಾಗಿ, ಸಂಪನ್ಮೂಲ ವ್ಯಕ್ತಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸೇಡಂ ತಾಲೂಕು ದರ್ಶನ, ಸೇಡಿಂಬ ದುರ್ಗದ ಶಾಸನಗಳು, ಸ್ವಾಭಿಮಾನ-1 ಮತ್ತು 2, ಸಂಗೀತ ಸಂಪದ, ಮನ್ನೆದಡಿ ಸಾಸಿರನಾಡು, ಭಾವೈಕ್ಯತೆಯ ಕ್ಷೇತ್ರ ಮಳಖೇಡ ದರ್ಗಾ, ಸಾಹಿತ್ಯ ಚಿಲುಮೆ, ಮಾನ್ಯಖೇಟದ ಸಿರಿ, ನಡೆದಾಡುವ ದೇವರು ಡಾ.ಶಿವಕುಮಾರ ಸ್ವಾಮಿಜಿ, ಆಳಂದ ಸಾಸಿರ ನಾಡು, ಕಾಳಗಿ ಕಾಳೇಶ್ವರ, ಶರಣು ಶರಣಾರ್ಥಿ, ಕವಿರಾಜ ಮಾರ್ಗ ಪರಿಸರ, ಆಲೂರು ಕೆಂಚ ವೃಷಬೇಂದ್ರ ಶ್ರೀ, ಸ್ವಾತಂತ್ರ್ಯ ಹೋರಾಟದಲ್ಲಿ ಮುಧೋಳ ಸೇರಿದಂತೆ ಸುಮಾರು 20 ಕ್ಕೂ ಹೆಚ್ಚು ಮೌಲಿಕ ಪುಸ್ತಕಗಳನ್ನು ಬರೆಯುವ ಮೂಲಕ ಸಂಶೋಧನೆಗೆ ಹೊಸ ಆಯಾಮ ಕಲ್ಪಿಸಿದ್ದಾರೆ.
ಸಭೆಯಲ್ಲಿ ಜಿಲ್ಲಾ ಕಸಾಪ ದ ಶಿವರಾಜ ಅಂಡಗಿ, ಧರ್ಮಣ್ಣ ಧನ್ನಿ, ಶರಣರಾಜ ಛಪ್ಪರಬಂದಿ, ರೆಹಮಾನ್ ಪಟೇಲ್, ಸೈಯ್ಯದ್ ನಜಿರುದ್ದಿನ್ ಮುತ್ತವಲ್ಲಿ, ಶಕುಂತಲಾ ಪಾಟೀಲ, ಜಯಶ್ರೀ ಜಮಾದಾರ, ಜ್ಯೋತಿ ಕೋಟನೂರ, ವಿನೋದಕುಮಾರ ಜೆ.ಎಸ್., ಶಿವಾನಂದ ಪೂಜಾರಿ, ಕಲ್ಯಾಣಕುಮಾರ ಶೀಲವಂತ, ಡಾ. ದಿನೇಶ ಮದಕರಿ, ರಾಜೇಂದ್ರ ಮಾಡಬೂಳ, ಸಿದ್ಧಲಿಂಗ ಬಾಳಿ, ರವೀಂದ್ರಕುಮಾರ ಭಂಟನಳ್ಳಿ, ಹಣಮಂತರಾವ ಪೆಂಚನಪಳ್ಳಿ, ಶಿವಲೀಲಾ ಕಲಗುರ್ಕಿ, ಎಸ್.ಕೆ. ಬಿರಾದಾರ, ನಾಗಪ್ಪ ಸಜ್ಜನ್, ಹಣಮಂತ ಶೇರಿ, ಸುರೇಶ ದೇಶಪಾಂಡೆ, ಸುರೇಶ ಲೇಂಗಟಿ, ಸಂತೋಷ ಕುಡಳ್ಳಿ, ಶರಣಬಸಪ್ಪ ಕೋಬಾಳ, ವೀರಭದ್ರಪ್ಪ ಗುರುಮಿಠಕಲ್, ಪ್ರಭಾವತಿ ಮೇತ್ರಿ, ಪ್ರಭುಲಿಂಗ ಮೂಲಗೆ, ರವಿಕುಮಾರ ಶಹಾಪೂರಕರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.