×
Ad

ಚಿತ್ತಾಪುರ | ಕೋಲಿ ಸಮಾಜದ ಸಂಘಟನೆಗೆ ಒಗ್ಗಟ್ಟು ಅಗತ್ಯ: ಭೀಮಣ್ಣ ಸಾಲಿ

Update: 2026-01-19 19:25 IST

ಚಿತ್ತಾಪುರ: ನಿಜಶರಣ ಅಂಬಿಗರ ಚೌಡಯ್ಯನವರ 906ನೇ ಜಯಂತಿಯನ್ನು ಈ ಬಾರಿ ಅತ್ಯಂತ ಸರಳ ಹಾಗೂ ಶಿಸ್ತುಬದ್ಧವಾಗಿ ಆಚರಿಸಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಕೋಲಿ ಸಮಾಜದ ಸಂಘಟನೆ ಹಾಗೂ ಬಲವರ್ಧನೆಗೆ ಎಲ್ಲರ ಒಗ್ಗಟ್ಟು ಅತಿ ಅಗತ್ಯವಾಗಿದೆ ಎಂದು ಸಮಾಜದ ಹಿರಿಯ ಮುಖಂಡ ಭೀಮಣ್ಣ ಸಾಲಿ ಹೇಳಿದರು.

ಪಟ್ಟಣದ ಅಂಬಿಗರ ಚೌಡಯ್ಯ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ರಾಜ್ಯದ ವಿವಿಧೆಡೆ ಭಿನ್ನವಾಗಿ ಜಯಂತಿ ಆಚರಿಸಲಾಗಿತ್ತು. ಆದರೆ ಈ ಬಾರಿ ಸಮಾಜದ ಹಿತದೃಷ್ಟಿಯಿಂದ ಎಲ್ಲರೂ ಒಂದಾಗಿ ಆಚರಿಸಲು ದೃಢಸಂಕಲ್ಪ ಮಾಡಿದ್ದೇವೆ. ಸಮಾಜದಲ್ಲಿ ಮೇಲು-ಕೀಳು ಎನ್ನದೆ, ಎಲ್ಲರೂ ಸಮಾನರು ಎಂಬ ಭಾವನೆಯೊಂದಿಗೆ ಕಾರ್ಯಕ್ರಮ ರೂಪಿಸಲಾಗಿದೆ ಎಂದು ತಿಳಿಸಿದರು.

ಜ.21ರಂದು ಬೆಳಿಗ್ಗೆ 10 ಗಂಟೆಗೆ ಪಟ್ಟಣದ ಲಾಡ್ಜಿಂಗ್ ಕ್ರಾಸ್‌ನಲ್ಲಿ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಧ್ವಜಾರೋಹಣ ನೆರವೇರಿಸಲಾಗುವುದು. ತದನಂತರ ಅಂಬಿಗರ ಚೌಡಯ್ಯ ಕಲ್ಯಾಣ ಮಂಟಪದ ಆವರಣದಲ್ಲಿಯೂ ಧ್ವಜಾರೋಹಣ ನಡೆಯಲಿದೆ. ಇದೇ ವೇಳೆ ತಾಲೂಕು ಆಡಳಿತದ ವತಿಯಿಂದ ಪ್ರಜಾ ಸೌಧದ ಆವರಣದಲ್ಲಿ ಆಯೋಜಿಸಲಾಗಿರುವ ಅಧಿಕೃತ ಕಾರ್ಯಕ್ರಮದಲ್ಲಿ ಸಮಾಜದ ಬಾಂಧವರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಕೋಲಿ ಸಮಾಜದ ತಾಲೂಕು ಅಧ್ಯಕ್ಷರಾದ ನಿಂಗಣ್ಣ ಹೆಗಲೇರಿ, ಶಿವಕುಮಾರ ಯಾಗಾಪುರ, ಮುಖಂಡರಾದ ಹಣಮಂತ ಸಂಕನೂರ್, ಗುಂಡು ಐನಾಪುರ, ಸಾಬಣ್ಣ ಭರಾಟೆ, ಪ್ರಭು ಹಲಕರ್ಟಿ, ಸುರೇಶ ಬೆನಕನಳ್ಳಿ, ರಾಜೇಶ ಹೋಳಿಕಟ್ಟಿ, ಮಲ್ಲಿಕಾರ್ಜುನ ಅಲ್ಲೂರಕರ್, ಲಕ್ಷ್ಮೀಕಾಂತ ಸಾಲಿ ಸೇರಿದಂತೆ ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News