×
Ad

ಕಲಬುರಗಿ | ಜ.21ರಂದು ಅಂಬಿಗರ ಚೌಡಯ್ಯನವರ 906ನೇ ಜಯಂತೋತ್ಸವ : ಅವ್ವಣ್ಣ ಮ್ಯಾಕೇರಿ

"ಜೀಪ್ ರ‍್ಯಾಲಿ, ಹೆಲಿಕ್ಯಾಪ್ಟರ್ ಮೂಲಕ ಪುಷ್ಪಾರ್ಚನೆ"

Update: 2026-01-19 19:05 IST

ಕಲಬುರಗಿ : ಜ.21ರಂದು ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ 906ನೇ ಜಯಂತೋತ್ಸವ ನಿಮಿತ್ತ ನಗರದಲ್ಲಿ ಎರಡು ದಿನಗಳ ಕಾಲ ಅದ್ದೂರಿಯಾಗಿ ಆಚರಣೆಗೆ ಕೋಲಿ - ಕಬ್ಬಲಿಗ ಸಮಾಜದ ಮುಖಂಡರು ನಿರ್ಧರಿಸಿದ್ದಾರೆ ಎಂದು ಕೋಲಿ ಸಮಾಜದ ಮುಖಂಡ ಅವ್ವಣ್ಣ ಮ್ಯಾಕೇರಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜ.20 ರಂದು ಬೆಳಗ್ಗೆ 11 ಗಂಟೆಗೆ ಇಲ್ಲಿನ ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದಿಂದ ಜೀಪ್ ರ‍್ಯಾಲಿಗೆ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ್ ಅವರು ಚಾಲನೆ ನೀಡುವರು. ಅಂದು ಸಂಜೆ ಜಗತ್ ವೃತ್ತದಲ್ಲಿ ಬಹಿರಂಗ ಸಭೆ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದಲ್ಲಿ ಅಂಬಿಗರ ಚೌಡಯ್ಯನವರ ವಚನ ಸಂಕಿರಣ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನಿಸಲಾಗುವುದು ಎಂದರು.

ಜ.21 ರಂದು ಬೆಳಗ್ಗೆ 11 ಗಂಟೆಗೆ ನಗರದ ಗಂಜ್ ಪ್ರದೇಶದ ನಗರೇಶ್ವರ ಶಾಲೆಯ ಸಮೀಪ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಹೆಲಿಕ್ಯಾಪ್ಟರ್ ಮೂಲಕ ಪುಷ್ಪಾರ್ಚನೆ ಮಾಡಲಾಗುವುದು. ಅಲ್ಲಿಂದ ವಿವಿಧ ವಾಧ್ಯ, ಗೊಂಬೆಗಳ ಪ್ರದರ್ಶನ, ನಾಸಿಕ ಡೋಲ್, ಜನಪದ ಕಲಾ ತಂಡಗಳು, ಹುಲಿ ಕುಣಿತ ಸೇರಿದಂತೆ ವಿವಿಧ ವೇಷಧಾರಿಗಳ ಮೂಲಕ ನಡೆಯುವ ಮೆರವಣಿಗೆಯು ಡಾ.ಎಸ್.ಎಂ.ಪಂಡಿತ್ ರಂಗಮಂದಿರಕ್ಕೆ ತಲುಪಲಿದೆ. ಅಂಬಿಗರ ಚೌಡಯ್ಯನವರ ಭಾವಚಿತ್ರ ಹಾಗೂ ವಚನ ಗ್ರಂಥ ಹೊತ್ತ ರಥವು ಮೆರವಣಿಗೆಯಲ್ಲಿ ಗಮನ ಸೆಳೆಯಲಿದೆ ಎಂದು ವಿವರಿಸಿದರು.

ಅಲ್ಲದೆ, ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರತಿಭಾವಂತ ಮಕ್ಕಳಿಗೆ ಲ್ಯಾಪ್‌ ಟಾಪ್, ಅಂಗವಿಕಲ ಮಕ್ಕಳಿಗೆ ತ್ರಿಚಕ್ರ ಸೈಕಲ್ ವಿತರಿಸಲಾಗುವುದು. ಈ ವೇಳೆಯಲ್ಲಿ ಸಚಿವರು, ಶಾಸಕರು, ಸಮುದಾಯದ ಹಲವರು ಮುಖಂಡರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಾಯಿಬಣ್ಣ ನೀಲಪ್ಪಗೊಳ, ರವಿರಾಜ್ ಕೊರವಿ, ಬಸವರಾಜ ಬೂದಿಹಾಳ, ರಮೇಶ್ ನಾಟಿಕಾರ್, ಬಸವರಾಜ ಹರವಾಳ, ಶಿವಾನಂದ ಹೊನಗುಂಟಿ, ಲಚ್ಚಪ್ಪ ಜಮಾದಾರ್, ಅಂಬು ಡಿಗ್ಗಿ, ಬಸವರಾಜ ಗುಂಡಲಗೇರಿ, ಶ್ಯಾಮರಾವ್ ಸುಲ್ತಾನಪುರ, ಶಾಂತಪ್ಪ ಕೂಡಿ, ವಿಜಯಕುಮಾರ್ ಹದಗಲ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಅಂಬಿಗರ ಚೌಡಯ್ಯನವರ ಜಯಂತಿ ಈ ಬಾರಿ ಅದ್ಧೂರಿ, ಅರ್ಥಪೂರ್ಣವಾಗಿ ಆಚರಣೆಗೆ ನಿರ್ಧರಿಸಲಾಗಿದೆ. ಜಯಂತಿ ನಿಮಿತ್ತ ಅನ್ನದಾನ, ಬಡ ಮಕ್ಕಳಿಗೆ ಸನ್ಮಾನ, ಲ್ಯಾಪ್‌ ಟಾಪ್ ವಿತರಣೆ ಮಾಡಲಾಗುತ್ತಿದೆ.

-ಜಯಪ್ರಕಾಶ ಕಮಕನೂರ, (ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ)

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News