ಕಲಬುರಗಿ: ತಕ್ಷಣ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಜಾರಿಗೆ ಆಗ್ರಹಿಸಿ ಧರಣಿ
ಕಲಬುರಗಿ: ಮಹಿಳಾ ಮೀಸಲಾತಿ ಅನುಷ್ಠಾನವನ್ನು ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯಿಂದ ಬೇರ್ಪಡಿಸಿ, ಸಂಸತ್ತು ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿಯನ್ನು ತಕ್ಷಣ ಜಾರಿಗೆ ತರಬೇಕು ಎಂದು ಆಗ್ರಹಿಸಿ ಮಹಿಳಾ ಮೀಸಲಾತಿಗಾಗಿ ರಾಷ್ಟ್ರೀಯ ಮೈತ್ರಿ ಒಕ್ಕೂಟದ ವತಿಯಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಸಂವಿಧಾನದ 106ನೇ ತಿದ್ದುಪಡಿ ಕಾಯ್ದೆ-2023 ಮೂಲಕ ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸುವ ಮಹತ್ವದ ಹೆಜ್ಜೆ ಇಡಲಾಗಿದೆ. ಆದರೆ ಇದರ ಅನುಷ್ಠಾನವನ್ನು ಮುಂದಿನ ಜನಗಣತಿ ಹಾಗೂ ಕ್ಷೇತ್ರ ಮರುವಿಂಗಡಣೆ ಪೂರ್ಣಗೊಳ್ಳುವವರೆಗೆ ಮುಂದೂಡಿರುವುದು ಮಹಿಳೆಯರ ಸಾಂವಿಧಾನಿಕ ಹಕ್ಕನ್ನು ವಿಳಂಬಗೊಳಿಸಿದಂತಾಗಿದೆ ಎಂದು ಆಕ್ಷೇಪಿಸಿದರು.
ಮಹಿಳಾ ಮೀಸಲಾತಿಗಾಗಿ ದೇಶದ ಮಹಿಳೆಯರು ಸುಮಾರು ಮೂರು ದಶಕಗಳಿಂದ ಕಾಯುತ್ತಿದ್ದಾರೆ. 1996ರಲ್ಲಿ ಮಂಡಿಸಲಾದ ಮೂಲ ಮಹಿಳಾ ಮೀಸಲಾತಿ ಮಸೂದೆ ಹಾಗೂ 2010ರಲ್ಲಿ ರಾಜ್ಯಸಭೆಯಲ್ಲಿ ಅಂಗೀಕರಿಸಲಾದ ಮಸೂದೆಯಲ್ಲಿಯೂ ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆಯ ಷರತ್ತುಗಳು ಇರಲಿಲ್ಲ. ಆದ್ದರಿಂದ ಈ ಷರತ್ತುಗಳನ್ನು ತೆಗೆದುಹಾಕಿ, ಮುಂಬರುವ ಚುನಾವಣೆಗಳಿಂದಲೇ ಮಹಿಳಾ ಮೀಸಲಾತಿಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಮಹಿಳಾ ಮೀಸಲಾತಿ ಕೇವಲ ರಾಜಕೀಯ ಪ್ರಾತಿನಿಧ್ಯದ ವಿಷಯವಲ್ಲ. ಇದು ಸಂವಿಧಾನದ ಸಮಾನತೆ, ಪ್ರಜಾಪ್ರಭುತ್ವ ನ್ಯಾಯ ಹಾಗೂ ದೇಶದ ಮಹಿಳೆಯರಿಗೆ ನೀಡಿರುವ ಭರವಸೆಯ ಅನುಷ್ಠಾನದ ಪ್ರಶ್ನೆಯಾಗಿದೆ ಎಂದು ಮುಖಂಡರು ಹೇಳಿದರು.
ಪ್ರತಿಭಟನೆಯಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯ ಮುಖಂಡೆ ಕೆ. ನೀಲಾ, ಜಿಲ್ಲಾಧ್ಯಕ್ಷೆ ಪದ್ಮ ಕಿರಣಗಿ, ಜಯಶ್ರೀ, ರಾಷ್ಟ್ರೀಯ ಮಹಿಳಾ ಒಕ್ಕೂಟದ ಅಧ್ಯಕ್ಷೆ ಪದ್ಮಾವತಿ ಪಾಟೀಲ, ವಿದ್ಯಾಶ್ರೀ, ಫಾತಿಮಾ ಶೇಕ್, ಶಾಂತಾ ಘಂಟಿ, ಲವಿತ್ರ ವಸ್ತ್ರದ್, ಮಲ್ಲಮ್ಮ, ಜಗದೇವಿ ಹೆಗಡೆ, ಲತಾ ಚೌಹಾಣ್, ಲಕ್ಷ್ಮಿ ಕವಳೆ ಸೇರಿದಂತೆ ಹಲವರು ಭಾಗವಹಿಸಿದ್ದರು.
"ವಿಶ್ವದಲ್ಲೇ ಅತಿದೊಡ್ಡ ಪ್ರಜಾಪ್ರಭುತ್ವ ಎನಿಸುವ ಭಾರತದಲ್ಲಿ ಈವರೆಗೆ ಸಂಸತ್ತು, ಶಾಸನ ಸಭೆಗಳಲ್ಲಿ ಶೇ.25 ರಷ್ಟು ಮಹಿಳೆಯರು ಆಯ್ಕೆಯಾಗಿ ಹೋಗಲಿಲ್ಲ. ಅಧಿಕಾರದಲ್ಲಿರುವ ಕೋಮುವಾದಿ ಪಕ್ಷಗಳು ಮಹಿಳೆಯರನ್ನು ನಿರ್ಲಕ್ಷಿಸಿವೆ. ಮಹಿಳಾ ಮೀಸಲಾತಿಯ ಮಸೂದೆಯನ್ನು ಇದೇ ಅಧಿವೇಶನದಲ್ಲಿ ಮುಂದಿಟ್ಟು ಪಾಸ್ ಮಾಡಬೇಕು, ಇಲ್ಲದಿದ್ದರೆ ವಿದ್ಯಾರ್ಥಿಗಳಂತೆ ನಮ್ಮ ಹೋರಾಟ ತೀವ್ರಗೊಳ್ಳಲಿದೆ".
ಕೆ.ನೀಲಾ (ಹೋರಾಟಗಾರ್ತಿ)
" ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯಿಂದ ಬೇರ್ಪಡಿಸಿ, ಸಂಸತ್ತು ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿಯನ್ನು ಯಾವುದೇ ಷರತ್ತುಗಳು ಇಲ್ಲದೆ ತಕ್ಷಣ ಜಾರಿಗೆ ತರಬೇಕು, ಮಹಿಳಾ ಮೀಸಲಾತಿಯಲ್ಲಿ 185 ದೇಶಗಳಲ್ಲಿ 151ನೆಯ ಸ್ಥಾನದಲ್ಲಿದ್ದೇವೆ. ಮಹಿಳೆಯರು ಇದೀಗ ಕೇವಲ ಶೇ.14 ಪ್ರತಿಶತದಲ್ಲಿದ್ದೇವೆ. ಮಹಿಳೆಯರ ಸಂಖ್ಯೆ ಹೆಚ್ಚಾಗಲಿ".
ಪದ್ಮಿನಿ ಕಿರಣಗಿ (ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಜಿಲ್ಲಾಧ್ಯಕ್ಷೆ)