×
Ad

ವನ್ಯಜೀವಿಗಳಿಂದ ನಿರ್ದಿಷ್ಟ ಅಂತರ ಕಾಯ್ದುಕೊಳ್ಳಬೇಕು: ಸಚಿವ ಈಶ್ವರ್‌ ಖಂಡ್ರೆ

ದುಬಾರೆಯಲ್ಲಿ ಆನೆ ಕಾದಾಟದ ವೇಳೆ ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ಸಂತಾಪ

Update: 2026-05-18 23:19 IST

ಕಲಬುರಗಿ, ಮೇ 18: ಕೊಡಗು ಜಿಲ್ಲೆ ದುಬಾರೆ ಶಿಬಿರದಲ್ಲಿ ಎರಡು ಸಾಕಾನೆಗಳ ಕಾದಾಟದ ವೇಳೆ ಅನಿರೀಕ್ಷಿತವಾಗಿ ಆಯತಪ್ಪಿ ಬಿದ್ದ ಆನೆಯ ಕೆಳಗೆ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟಿದ್ದು, ಇದು ಆಘಾತಕರ ಘಟನೆಯಾಗಿದೆ ಎಂದು ಅರಣ್ಯ ಸಚಿವ ಈಶ್ವರ್‌ ಬಿ. ಖಂಡ್ರೆ ಸಂತಾಪ ಸೂಚಿಸಿದ್ದಾರೆ.

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಈಶ್ವರ್‌ ಬಿ. ಖಂಡ್ರೆ, ‘ಆನೆಗಳನ್ನು ಸ್ನಾನ ಮಾಡಿಸುವಾಗ ನದಿಯ ಬಳಿ ನಿಂತು ನೋಡುತ್ತಿದ್ದ ತಮಿಳುನಾಡಿನ 33 ವರ್ಷದ ಪ್ರವಾಸಿ ಮಹಿಳೆ ತುಳಸಿ ಎಂಬವರು ಈ ಮೃತಪಟ್ಟಿದ್ದಾರೆಂದು ಅಧಿಕಾರಿಗಳು ತಮಗೆ ತಿಳಿಸಿದ್ದು, ಇದು ನೋವಿನ ಸಂಗತಿ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಈ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ ದೇವರು ನೀಡಲಿʼ ಎಂದು ಹೇಳಿದ್ದಾರೆ.  

ಸಾಕಾನೆಗಳಾದ ಕಂಚನ್ ಮತ್ತು ಮಾತಾರ್ಂಡ ಆನೆಗಳು ಸ್ನಾನ ಮಾಡಿಸುತ್ತಿದ್ದ ವೇಳೆ ಪರಸ್ಪರ ಕಾದಾಟ ನಡೆಸಿದ್ದು, ಮಾವುತರು ನಿಯಂತ್ರಿಸುತ್ತಿದ್ದರೂ ಮುನ್ನುಗ್ಗಿದ ಕಂಜನ್ ಆನೆ, ಮಾತಾರ್ಂಡ ಆನೆಗೆ ಗುದ್ದಿದ ಪರಿಣಾಮ ಮಾತಾರ್ಂಡ ಆನೆ ಆಯತಪ್ಪಿ ಕೆಳಗೆ ಬಿದ್ದಿದೆ. ಈ ವೇಳೆ ಮಹಿಳೆ ಆನೆಯ ಕೆಳಗೆ ಸಿಲುಕಿ ಮೃತಪಟ್ಟಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇದು ಯಾರೂ ಊಹಿಸದಂತಹ ಘಟನೆಯಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ಇಂತಹ ಅಚಾತುರ್ಯಗಳು ಆಗದ ರೀತಿಯಲ್ಲಿ ಕ್ರಮ ವಹಿಸಲು ಸೂಚಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಆನೆಗಳು ಸೇರಿದಂತೆ ವನ್ಯಜೀವಿಗಳನ್ನು ಪಳಗಿಸಿದ್ದರೂ, ಪ್ರಾಣಿಗಳ ಸ್ವಭಾವವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಅವು ಯಾವಾಗ ಯಾವ ರೀತಿ ವರ್ತಿಸುತ್ತವೆಂದು ಊಹಿಸುವುದೂ ಕಷ್ಟವಾಗುತ್ತದೆ. ಹೀಗಾಗಿ ಆನೆಗಳ ಸೊಂಡಿಲು ಮುಟ್ಟುವುದು, ಪಕ್ಕದಲ್ಲಿ ನಿಂತು ಫೋಟೋ ತೆಗೆಸಿಕೊಳ್ಳುವುದು, ಆನೆ ಮೈತೊಳೆಯಲು ಅವಕಾಶ ನೀಡುವುದು, ಬೆಲ್ಲ, ಬಾಳೆಹಣ್ಣು ತಿನ್ನಿಸುವುದನ್ನು ನಿರ್ಬಂಧಿಸಬೇಕು. ಅಲ್ಲದೆ, ವನ್ಯಜೀವಿಗಳಿಂದ ಪ್ರವಾಸಿಗರು ನಿರ್ದಿಷ್ಟ ಅಂತರ ಕಾಯ್ದುಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ಈಶ್ವರ ಖಂಡ್ರೆ ಸೂಚಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News