×
Ad

ಕಲ್ಯಾಣ ಕರ್ನಾಟಕದಲ್ಲಿ‌ ಜಿಡಿಪಿ ಹೆಚ್ಚಳಕ್ಕೆ ಒತ್ತು: ಡಾ.ಅಜಯ್ ಸಿಂಗ್

Update: 2026-05-18 22:47 IST

ಕಲಬುರಗಿ: ರಾಜ್ಯದ ಸರಾಸರಿ ಹೋಲಿಸಿದಾಗ ಕಲ್ಯಾಣ‌ ಕರ್ನಾಟಕ ಭಾಗದಲ್ಲಿ ಜಿಡಿಪಿ, ತಲಾ ಆದಾಯ ತುಂಬಾ ಕಡಿಮೆ ಇದೆ. ಇದನ್ನು ವೃದ್ಧಿಸಲು ಕೃಷಿ, ಕೈಗಾರಿಕೆ, ಪ್ರವಾಸೋದ್ಯಮ, ಜವಳಿ ಕ್ಷೇತ್ರದಲ್ಲಿ ಪ್ರದೇಶಕ್ಕೆ ಪ್ರತ್ಯೇಕ ನೀತಿ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರತ್ಯೇಕ ನೀತಿ ರೂಪಿಸಿ ಜಾರಿಗೊಳಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಕೆ.ಕೆ.ಆರ್.ಡಿ.ಬಿ ಅಧ್ಯಕ್ಷ ಡಾ.ಅಜಯ್ ಸಿಂಗ್ ಹೇಳಿದರು.

ಐವಾನ್-ಎ-ಶಾಹಿ ಅತಿಥಿಗೃಹದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಾ.ಅಜಯ್ ಸಿಂಗ್, ರಾಜ್ಯದ ಜಿಡಿಪಿಗೆ ಕಲ್ಯಾಣ‌ ಕರ್ನಾಟಕ ಕೊಡುಗೆ ಹೆಚ್ಚಿಸುವ ಗುರಿಯೊಂದಿಗೆ ವಿವಿಧ ವಲಯಗಳಲ್ಲಿ ಯೋಜನೆಗಳನ್ನು ಅನುಷ್ಟಾನಕ್ಕೆ ತರುವ ಉದ್ದೇಶದಿಂದ ಮಂಡಳಿಯಲ್ಲಿ ಯೋಜನೆ, ನೀತಿ ಮತ್ತು ದತ್ತಾಂಶ ವಿಶ್ಲೇಷಣಾ ‌ವಿಭಾಗ ತೆರೆದು ಮುಂದಿನ‌ ಐದು ವರ್ಷಕ್ಕೆ ರೂಪಿಸಲಾಗುವುದು ಎಂದರು.

ಇಂದು ನಡೆದ‌ ಮಂಡಳಿ ಸಭೆಯಲ್ಲಿ 5,000 ಕೋಟಿ ರೂ. ಮೊತ್ತಕ್ಕೆ ಕ್ರಿಯಾ ಯೋಜನೆ ರೂಪಿಸಲು ಒಮ್ಮತ್ಯದ ನಿರ್ಧಾರ ಮಂಡಳಿ ತೆಗೆದುಕೊಂಡಿದೆ. ಆಯವ್ಯಯದಲ್ಲಿ ಘೋಷಿಸಿದ ಯೋಜನೆಗಳಿಗೆ‌ ಆಯಾ ಇಲಾಖೆಯ ಅನುದಾನ ಜೊತೆಗೆ ಹೆಚ್ಚುವರಿಯಾಗಿ ಮಂಡಳಿ ಅನುದಾನ ನೀಡಲಾಗುವುದು. ಆರೋಗ್ಯ-ಶಿಕ್ಷಣ‌ ಆವಿಷ್ಕಾರ, ಕಲ್ಯಾಣ ಪಥ, ವಸತಿ ನಿಲಯ ಯೋಜನೆಗಳಿಗೆ ಈ ವರ್ಷವು ಸಹ ಅನುದಾನ ನೀಡಲಾಗುವುದು ಎಂದ ಅವರು, ಉದ್ಯೋಗ‌ ಮತ್ತು ಉದ್ಯೋಗಾಧರಿತ ಕೌಶಲ್ಯ ಹೆಚ್ಚಿಸಲು ಸೇಡಂ, ಜೇವರ್ಗಿ, ಸಿಂಧನೂರು, ರಾಯಚೂರಿನಲ್ಲಿ ತಲಾ 73 ಕೋಟಿ ರೂ.‌ ವೆಚ್ಚದಲ್ಲಿ ಜಿಟಿಟಿಸಿ ಸ್ಥಾಪನೆ ಮಾಡಲಾಗುವುದು ಎಂದರು.

ಕಳೆದ ವರ್ಷ ಕಲಬುರಗಿ-ಯಾದಗಿರಿಯಲ್ಲಿ ಇಂಡಸ್ಟ್ರಿ ಹಬ್ ಸ್ಥಾಪನೆಗೆ ‌ಅನುದಾನ‌ ಮೀಸಲಿಡಲಾಗಿತ್ತು.‌ ಅದೇ‌ ರೀತಿ ಈ ವರ್ಷ ರಾಯಚೂರು-ಕೊಪ್ಪಳದಲ್ಲಿ ಕೈಗಾರಿಕೆ ಹಬ್ ಸ್ಥಾಪನೆಗೆ ಒತ್ತು ನೀಡಲಾಗುತ್ತಿದೆ. ಸರಕಾರ ರಾಜ್ಯದ ಇತರೆ ನಿಗಮಕ್ಕೆ ಬಸ್ ನೀಡುತ್ತದೆ. ಆದರೆ ಕೆ.ಕೆ.ಆರ್.ಟಿ.ಸಿ. ನಿಗಮಕ್ಕೆ ಕೆ.ಕೆ.ಆರ್.ಡಿ.ಬಿ ಮಂಡಳಿಯಿಂದ ಬಸ್ ಖರೀದಿ ಮಾಡಿಕೊಳ್ಳಲು ನಿರ್ದೇಶನ ನೀಡುತ್ತದೆ.‌ ಹೀಗಾದರೆ ಮೀಸಲಾತಿ ಎಲ್ಲಿ ಸಿಕ್ಕಂತಾಗುತ್ತದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅಜಯ್ ಸಿಂಗ್ ಅವರು, ಸರ್ಕಾರ ಇತರೆ ನಿಗಮಕ್ಕೆ‌ ನೀಡಿದಂತೆ ಕೆ.ಕೆ.ಅರ್.ಟಿ.ಸಿ.‌ಸಂಸ್ಥೆಗೆ ಬಸ್ ನೀಡಿದಲ್ಲಿ ಮಾತ್ರ ಹೆಚ್ಚುವರಿ ಬಸ್ ಒದಗಿಸಲು ಮಂಡಳಿ‌ ಸಿದ್ಧವಿದೆ. ಒಂದು ವೇಳೆ ಸರ್ಕಾರ‌ ಕೆ.ಕೆ.ಆರ್.ಟಿ.ಸಿ ಗೆ ಬಸ್ ನೀಡದಿದ್ದಲ್ಲಿ‌ ಮಂಡಳಿಯಿಂದಲೂ‌ ಅನುದಾನ ನೀಡುವುದಿಲ್ಲ‌ ಎಂದು ಸ್ಪಷ್ಟಪಡಿಸಿದರು.

ಕಳೆದ‌ 2023-24 ರಿಂದ‌ 2025-26ನೇ ಸಾಲಿನ‌ ಅಂತ್ಯದವರೆಗೆ ಸುಮಾರು 9,500 ಕೋಟಿ ರೂ. ಅನುದಾನ ಖರ್ಚು ಮಾಡಲಾಗಿದೆ. ಪ್ರಸಕ್ತ 2026-27ನೇ ಸಾಲಿಗೆ ರಾಜ್ಯ ಸರ್ಕಾರದಿಂದ‌ ಹಂಚಿಕೆಯಾದ 5,000 ಕೋಟಿ ರೂ. ಅನುದಾನ ಇದೇ ವರ್ಷದಲ್ಲಿ ಖರ್ಚು ಮಾಡಿ ಅಭಿವೃದ್ಧಿಯಲ್ಲಿ ಹೊಸ ಕ್ರಾಂತಿ ಮಾಡುವ ಗುರಿ ಹೊಂದಲಾಗಿದೆ ಎಂದು ಡಾ.ಅಜಯ್ ಸಿಂಗ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಡಳಿ ಕಾರ್ಯದರ್ಶಿ ನಳಿನ್ ಅತುಲ್ ಸಹ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News