ಕಲ್ಯಾಣ ಕರ್ನಾಟಕ ಭಾಗದ ಉದ್ಯಮದ ಬೆಳವಣಿಗೆಗೆ ಕೃಷಿಕಲ್ಪ ಸೆಂಟರ್ ಆಫ್ ಎಕ್ಸಲೆನ್ಸ್ ಪೂರಕವಾಗಲಿದೆ: ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ: ಕೃಷಿಕಲ್ಪ ಸೆಂಟರ್ ಆಫ್ ಎಕ್ಸಲೆನ್ಸ್ (COE) ಕಲ್ಯಾಣ ಕರ್ನಾಟಕ ಭಾಗದ ಉದ್ಯಮ ಬೆಳವಣಿಗೆಗೆ ಪೂರಕವಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ನಗರದ ಗೋಲ್ಡ್ ಹಬ್ ನಲ್ಲಿ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್, ಐಟಿ - ಬಿಟಿ ಇಲಾಖೆ, ಕೆಕೆ ಆರ್ ಡಿಬಿ ಹಾಗೂ ಕೃಷಿಕಲ್ಪ ಅಡಿಯಲ್ಲಿ ಆಯೋಜಿಸಲಾಗಿದ್ದ ಕೃಷಿಕಲ್ಪ ಸೆಂಟರ್ ಆಫ್ ಎಕ್ಸಲೆನ್ಸ್ (COE) ಉದ್ಘಾಟನೆ ಹಾಗೂ 'ವಿಕಾಸ ಮತ್ತು ಪ್ರೇರಣಾ' ಕಾರ್ಯಕ್ರಮಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಕರ್ನಾಟಕದಲ್ಲಿ 18,000 ನೂತನ ಸ್ಟಾರ್ಟ್ ಅಪ್ ಗಳು ಪ್ರಾರಂಭಕ್ಕೆಗೊಳ್ಳಲು ನೋಂದಣಿ ಮಾಡಿಕೊಂಡಿವೆ, ನವೋದ್ಯಮಕ್ಕೆ ಗೈಡೆನ್ಸ್, ಪೈಲೆಟ್ ಹಾಗೂ ಫಂಡಿಂಗ್ ಬೇಕೆ ಬೇಕು. ಇದಕ್ಕೆ 50 ಲಕ್ಷ ರೂ. ಅನುದಾನದ ಅಗತ್ಯವಿದೆ. ಸಧ್ಯ ರಾಜ್ಯ ಸರಕಾರ ಒಟ್ಟು 1500 ಸ್ಟಾರ್ಟ್ ಅಪ್ ಗಳಿಗೆ ಈ ಅನುದಾನ ನೀಡಲು ತಯಾರಾಗಿದೆ.
ಬೆಂಗಳೂರು ಆಚೆಗೂ ಕೂಡಾ ಉದ್ಯಮ ಸ್ಥಾಪನೆಗೆ ಸರಕಾರ ಆದ್ಯತೆ ನೀಡುತ್ತಿದ್ದು ' ಬಿಯಾಂಡ್ ಬೆಂಗಳೂರು ' ಕಾರ್ಯಕ್ರಮದಡಿ ಬೆಂಗಳೂರು ಹೊರತುಪಡಿಸಿ, ಮೈಸೂರು, ಮಂಗಳೂರು, ಹುಬ್ಬಳ್ಳಿ- ಧಾರವಾಡ, ಬೆಳಗಾವಿ, ಕಲಬುರಗಿ ಮುಂತಾದ ಜಿಲ್ಲೆಗಳಲ್ಲಿ ಉದ್ಯಮ ಸ್ಥಾಪನೆಗೆ ಪೂರಕವಾದ ವಾತಾವರಣ ನಿರ್ಮಿಸಲು ಹಾಗೂ ನವೋದ್ಯಮ ಸ್ಥಾಪನೆಗೆ ಮುಂದಾಗುವ ಸ್ಟಾರ್ಟ್ ಅಪ್ ಗಳಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತಿದೆ ಎಂದ ಸಚಿವರು ಟೈರ್ 2 ಹಾಗೂ 3 ನಗರಗಳ ಬೆಳವಣಿಗೆಗೆ ಹಾಗೂ ಉದ್ಯಮದ ಅಭಿವೃದ್ದಿಗೆ ಬೇಕಾಗುವ ಎಲ್ಲ ಕ್ರಮವಹಿಸಲು ಮುಂದಾಗಿದೆ ಎಂದರು.
ಮುಂಬರುವ ದಿನಗಳಲ್ಲಿನ ನವೋದ್ಯಮದ ಅಭಿವೃದ್ದಿಯನ್ನು ಪರಿಗಣಿಸಿ ಡೀಪ್ ಟೆಕ್ ಸ್ಟಾರ್ಟ್ಅಪ್ ಪ್ರೋತ್ಸಾಹಕ್ಕಾಗಿ ಅನುದಾನ ನೀಡಲು ತಯಾರಿದ್ದು, ಮೈಸೂರಿನಲ್ಲಿ 402, ಮಂಗಳೂರಿನಲ್ಲಿ, 332, ಹುಬ್ಬಳ್ಳಿ- ಧಾರವಾಡ ಭಾಗದಲ್ಲಿ 463 ಹಾಗೂ ಕಕ ಭಾಗದಲ್ಲಿ 282 ಸ್ಟಾರ್ಟ್ ಅಪ್ ಗಳಿದ್ದು, ಇವುಗಳಿಗೆ ರೂ 1,000 ಕೋಟಿ ಅನುದಾನವನ್ನು ನೀಡಿ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಇದರಿಂದ ಟೈರ್ 2 ಹಾಗೂ 3 ನಗರಗಳಲ್ಲಿ ಯುವ ಉದ್ಯಮಗಳ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.
ಐಐಐಟಿ ರಾಯಚೂರಿಗೆ ಹೋಗಿದ್ದು ಅಲ್ಲಿಗೆ ಅನುಕೂಲವಾಗುವಂತಹ ಉದ್ಯಮ ಸ್ಥಾಪನೆಗೆ ಬೇಕಾಗುವ ಮಾನವ ಸಂಪನ್ಮೂಲಗಳನ್ನು ಸೃಜಿಸಿ ಅವುಗಳನ್ನು ಒದಗಿಸಲು ಕೆಕೆ ಆರ್‌ಡಿಬಿಯಿಂದ ಅನುದಾನ ಒದಗಿಸುವಂತೆ ಸಚಿವರು ಡಾ ಅಜಯ್ ಸಿಂಗ್ ಅವರಿಗೆ ಮನವಿ ಮಾಡಿದರು.
ಕಲಬುರಗಿ ರೊಟ್ಟಿ ಬ್ರಾಂಡ್ ದೇಶದಾದ್ಯಂತ ಹೆಸರುವಾಸಿಯಾಗಿದ್ದು ಕೆನಡಾ, ಅಮೇರಿಕಾ ಸೇರಿದಂತೆ ವಿವಿಧ ದೇಶಗಳಿಗೆ ರಫ್ತಾಗುತ್ತಿವೆ. ಇತ್ತೀಚಿಗೆ ಪುಣೆ ಮೂಲದ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು ಕಲಬುರಗಿಯಲ್ಲಿ ಮಹಿಳಾ ಸಂಘಗಳಿಂದ ತಯಾರಿಸಲಾದ ರೊಟ್ಟಿಗಳನ್ನು ಕಳುಹಿಸಲು ಮೂರು ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ, ವರ್ಷವೊಂದಕ್ಕೆ 1 ಲಕ್ಷ ರೊಟ್ಟಿಗಳನ್ನು ಸರಬರಾಜು ಮಾಡಲಾಗುವುದು ಎಂದು ಹೇಳಿದ ಅವರು ಕಲಬುರಗಿ ಬ್ರಾಂಡ್ ರೊಟ್ಟಿಯ ಮೂಲಕ ಮಹಿಳಾ ಸಬಲೀಕರಣಕ್ಕೆ ಸರಕಾರ ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದರು.
ಕೃಷಿ ವಲಯದ ಅಭಿವೃದ್ದಿ ಹಾಗೂ ಸಮಗ್ರ ಬೆಳವಣಿಗೆಗೆ ಸಹಕಾರಿಯಾಗುವಂತೆ ಕಲಬುರಗಿಯಲ್ಲಿ ಅಗ್ರಿಕಲ್ಚರ್ ಸೆಂಟರ್ ಆಫ್ ಎಕ್ಸಲೆನ್ಸ್ ಸ್ಥಾಪನೆಗೆ ಸರಕಾರ ಮುಂದಾಗಿದ್ದು ಕೃಷಿ ವಲಯಕ್ಕಾಗಿ ಇಂತಹ ಒಂದು ಎಕ್ಸಲೆನ್ಸ್ ಸ್ಥಾಪನೆ ಮಾಡಲು ಮುಂದಾಗಿದ್ದು ದೇಶದಲ್ಲೇ ಮೊದಲನೆಯದಾಗಲಿದೆ. ಇದು ಕೃಷಿ ವಲಯದ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.
ಕೆಕೆಆರ್ ಡಿಬಿ ಅಧ್ಯಕ್ಷ ಹಾಗೂ ಶಾಸಕ ಡಾ ಅಜಯ್ ಸಿಂಗ್ ಮಾತನಾಡಿ, ಸರ್ಕಾರ, ಕೆಕೆಆರ್ ಡಿಬಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಉದ್ಯಮ ಸ್ಥಾಪನೆಗೆ ಪೂರಕ ವಾತವಾರಣ ನಿರ್ಮಾಣಕ್ಕೆ ಮುಂದಾಗಿದ್ದು, ಯುವ ಉದ್ಯಮಿಗಳನ್ನು ಉತ್ತೇಜಿಸಲು ಕೃಷಿಕಲ್ಪದೊಂದಿಗೆ ಒಗ್ಗೂಡಿ ಕೃಷಿಕಲ್ಪ ಸೆಂಟರ್ ಆಫ್ ಎಕ್ಸಲೆನ್ಸ್ (COE) ಕಾರ್ಯಕ್ರಮ ರೂಪಿಸಿದೆ ಇವುಗಳ ಅಡಿಯಲ್ಲಿವಿಕಾಸ ಮತ್ತು ಪ್ರೇರಣಾ' ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದೆ ಎಂದರು.
ಮುಂಬರುವ ಐದು ಅಥವಾ ಹತ್ತು ವರ್ಷದಲ್ಲಿ ಈ ಭಾಗಕ್ಕೆ ನೀಡಬೇಕಾದ ಅನುದಾನದ ಬಗ್ಗೆ ಅಗತ್ಯ ಕ್ರಮವಹಿಸಲಾಗುತ್ತಿದೆ. ಗೋವಿಂದ್ ರಾವ್ ವರದಿಯಂತೆ ಈ ಭಾಗಕ್ಕೆ ಹೆಚ್ಚಿನ ಅನುದಾನ ಒದಗಿಸಲಾಗುವುದು. ಕೃಷಿ ಕಲ್ಪಕ್ಕೆ ಕೆಕೆಆರ್ ಡಿಬಿ ಬೆನ್ನೆಲುಬಾಗಿ ನಿಂತು ಈ ಭಾಗದಲ್ಲಿ ಉದ್ಯಮ ಬೆಳವಣಿಗೆಗೆ ಎಲ್ಲ ಅಗತ್ಯ ಸಹಕಾರ ನೀಡಲು ಬದ್ಧವಾಗಿದೆ ಎಂದರು.
ವೇದಿಕೆ ಮೇಲೆ ಕೆಕೆಆರ್‌ಡಿಬಿ ಅಧ್ಯಕ್ಷ ಡಾ ಅಜಯ್ ಸಿಂಗ್, ಶಾಸಕರಾದ ಎಂ ವೈ ಪಾಟೀಲ್, ಅಲ್ಲಮಪ್ರಭು ಪಾಟೀಲ್, ಎಂ ಎಲ್ ಸಿ ಜಗದೇವ ಗುತ್ತೇದಾರ, ಚಂದ್ರಿಕಾ ಪರಮೇಶ್ವರ, ಅರುಣ್ ಕುಮಾರ್ ಎಂ ವೈ ಪಾಟೀಲ, ಪ್ರವೀಣ್ ಹರವಾಳ, ಜಿಲ್ಲಾಧಿಕಾರಿ ಮೊಹಮ್ಮದ್ ಇಕ್ರಮುಲ್ಲಾ ಷರೀಫ್, ಸಿಇಒ ಭಂವರ್ ಸಿಂಗ್ ಮೀನಾ, ಕಮೀಷನರ್ ಡಾ ಶರಣಪ್ಪ ಢಗೆ, ಮಹಾನಗರ ಪಾಲಿಕೆ ಕಮಿಷನರ್ ಅವಿನಾಶ ಶಿಂಧೆ, ಎಸ್ ಪಿ ಅಡ್ಡೂರು ಶ್ರೀನಿವಾಸಲು, ಎಡಿಸಿ ರಾಯಪ್ಪ ಹುಣಸಗಿ, ಎಸಿ ಸಾಹಿತ್ಯ, ಕೃಷಿಕಲ್ಪದ ಸಿಇಒ ಸಿಎಂ ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.