×
Ad

ಕಲಬುರಗಿ ನಗರದ ಸಮಗ್ರ ಅಭಿವೃದ್ದಿಗೆ ಬದ್ಧ: ಸಚಿವ ಪ್ರಿಯಾಂಕ್ ಖರ್ಗೆ

Update: 2026-05-18 21:50 IST

ಕಲಬುರಗಿ: ಕಲಬುರಗಿ ‌ನಗರದ ಸಮಗ್ರ ಅಭಿವೃದ್ದಿಗಾಗಿ ನೀಲನಕ್ಷೆ ತಯಾರಿಸಲಾಗಿದ್ದು, ವರ್ತಮಾನ‌ ಹಾಗೂ ಭವಿಷ್ಯದ ಜನರನ್ನು ಗುರಿಯಾಗಿಸಿಕೊಂಡು ಅವರಿಗೆ ಅನುಕೂಲವಾಗುವಂತೆ ಕಾರ್ಯಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ಕೈಗೆತ್ತಿಕೊಂಡ ವಿವಿಧ ಯೋಜನೆಗಳಿಗೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡುತ್ತಿದ್ದರು.

3.16 ಕೋಟಿ ರೂ. ವೆಚ್ಚದಲ್ಲಿ 17 ವಾರ್ಡ್ ಗಳಲ್ಲಿನ ಉದ್ಯಾನವನಗಳ ಅಭಿವೃದ್ದಿ, 5 ಕೋಟಿ ರೂ‌ ವೆಚ್ಚದಲ್ಲಿ 4 ಪ್ರಮುಖ ಸರ್ಕಲ್ ಗಳ ಅಭಿವೃದ್ದಿ, 3.58 ಕೋಟಿ ರೂ. ವೆಚ್ಚದಲ್ಲಿ 18 ರುದ್ರಭೂಮಿಗಳ ಅಭಿವೃದ್ದಿ ಹಾಗೂ  25 ಲಕ್ಷ ರೂ. ವೆಚ್ಚದಲ್ಲಿ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯ ಅಭಿವೃದ್ದಿ ಹೀಗೆ ಒಟ್ಟು 40 ಕಾಮಗಾರಿಗಳು ಸೇರಿವೆ ಎಂದರು.

ಅಪ್ಪಾ ಕೆರೆ, ಕಲಬುರಗಿ ಕೋಟೆ ಅಭಿವೃದ್ದಿ ಸೇರಿದಂತೆ ಹಲವಾರು ಜನಪರ ಹಾಗೂ ಪ್ರವಾಸೋದ್ಯಮ ಪೂರಕ ಯೋಜನೆಗಳು‌ ಕಲಬುರಗಿಗೆ ಮುಂಬರುವ ದಿನಗಳಲ್ಲಿ ಬರಲಿವೆ ಎಂದ ಖರ್ಗೆ, ಕಾಂಗ್ರೆಸ್ ಸರಕಾರ ಕಲಬುರಗಿ ಜಿಲ್ಲೆಯನ್ನು ಅದನ್ನೂ ಪ್ರಮುಖವಾಗಿ ಕಲಬುರಗಿ ನಗರದ ಸಮಗ್ರ ಅಭಿವೃದ್ದಿ ಮಾಡಿ ನವ ನಗರ ನಿರ್ಮಾಣ ಮಾಡಲಿದೆ ಎಂದು ಭರವಸೆ ನೀಡಿದರು.

ಕೇಂದ್ರ ಸರಕಾರ ರಾಜ್ಯಕ್ಕೆ ಅನುದಾನ ಬಿಡುಗಡೆಗೆ ತಾರತಮ್ಯ ಎಸಗುತ್ತಿದೆ ಎಂದು ಹೇಳಿದ ಸಚಿವರು, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಅಡಿಯಲ್ಲಿ ಜಾರಿಗೆ ತರಲಾದ ಜಲ್ ಜೀವನ್ ಮಿಷನ್ ಕಾರ್ಯಕ್ರಮಕ್ಕೆ ಬೇಕಾಗುವ 15,000 ಕೋಟಿ ಅನುದಾನ ನೀಡಬೇಕಿತ್ತು. ಆದರೆ, ಅನುದಾನ ಬಿಡುಗಡೆ ಮಾಡದೆ ಇರುವುದರಿಂದಾಗಿ ರಾಜ್ಯ ಸರಕಾರ ತನ್ನ ಅನುದಾನ ಬಳಸಿ ಕಾಮಗಾರಿ ಮುಂದುವರೆಸಿದೆ ಎಂದರು.

ಅಡುಗೆ ಅನಿಲ ಸೇರಿದಂತೆ ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದ್ದು ಸಾರ್ವಜನಿಕರು‌ ಜೀವನ ನಿರ್ವಹಣೆಗೆ ಪರದಾಡುತ್ತಿದ್ದಾರೆ. ಇದನ್ನು ವಿಕಸಿತ್ ಭಾರತ ಎನ್ನಬಹುದಾ? ಜನರು ಸಂಕಟಪಡುತ್ತಿರುವಾಗ ಮೋದಿ ಖರ್ಚು ಕಡಿಮೆ ಮಾಡಿ ಎನ್ನುತ್ತಿದ್ದಾರೆ. ಮನೆ ನಡೆಸಲು ಜನಸಾಮಾನ್ಯರಿಗೆ ಸಾಧ್ಯವಾಗುತ್ತಿಲ್ಲ. ಮೋದಿ ಅವರ ಆರ್ಥಿಕ ನೀತಿ ಕೇವಲ ಅದಾನಿ ಹಾಗೂ ಅಂಬಾನಿಯಂತ ಶ್ರೀಮಂತರಿಗೆ ಮಾತ್ರ ಅನುಕೂಲವಾಗಿದೆ ಹೊರತು ಬಡವರಿಗೆ ಅನುಕೂಲವಾಗಿಲ್ಲ ಎಂದರು.

ಮೋದಿ ಕನಿಷ್ಠ 200 ದೇಶಗಳಿಗೆ ಭೇಟಿ ನೀಡಿರಬಹುದು. ಅವರ ಪ್ರವಾಸಕ್ಕೆ 850 ಕೋಟಿ ರೂ. ಖರ್ಚಾಗಿದೆ. ಅವರ ಖರ್ಚಿಗೆ ಹೋಲಿಸಿದರೆ, ದೇಶಕ್ಕೆ ನಯಾಪೈಸೆ ಅನುಕೂಲವಾಗಿಲ್ಲ ಎಂದು ಟೀಕಿಸಿದ ಪ್ರಿಯಾಂಕ್‌ ಖರ್ಗೆ, ರಾಜ್ಯ ಸರಕಾರ ವಾರ್ಷಿಕ 6.50 ಲಕ್ಷ ಕೋಟಿ ರೂ. ತೆರಿಗೆಯನ್ನು ಕೇಂದ್ರಕ್ಕೆ ಕೊಡುತ್ತಿದೆ. ಅದಕ್ಕೆ ಬದಲಾಗಿ ಕೇಂದ್ರ ನಮಗೆ ವಾಪಸ್ ಕೊಡುತ್ತಿರುವುದು ಶೂನ್ಯ ಎಂದರು.

ವೇದಿಕೆಯ ಮೇಲೆ ಜಗದೇವ ಗುತ್ತೇದಾರ್, ಜಿಲ್ಲಾಧಿಕಾರಿ ಇಕ್ರಮ್ ಶರೀಫ್, ಪಾಲಿಕೆ ಆಯುಕ್ತ ಅವಿನಾಶ್ ಶಿಂಧೆ, ಜಿಲ್ಲಾ ಪಂಚಾಯತ್ ಸಿಇಒ ಭಂವರ್ ಸಿಂಗ್ ಮೀನಾ, ಪಾಲಿಕೆಯ ಮಹಾಪೌರ ವರ್ಷಾ ಜಾನೆ, ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಪಾಟೀಲ್ ಹರವಾಳ ಸೇರಿದಂತೆ ಪಾಲಿಕೆಯ ಸದಸ್ಯರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News