Bidar | ಕಲಬುರಗಿ ಕಾರಾಗೃಹದಿಂದ ಪರಾರಿಯಾಗಿದ್ದ ಇನ್ನೋರ್ವ ಕೈದಿಯ ಬಂಧನ
Update: 2026-08-20 13:05 IST
ಬೀದರ್ : ಕಲಬುರಗಿ ಕಾರಾಗೃಹದಿಂದ ಪರಾರಿಯಾಗಿದ್ದ ಮೂವರು ಕೈದಿಗಳ ಪೈಕಿ ಇನ್ನೋರ್ವ ಕೈದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಪರಾರಿಯಾಗಿದ್ದ ಮೂವರನ್ನು ಮರುಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪೊಕ್ಸೋ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿರುವ ಬಸವಕಲ್ಯಾಣ ತಾಲೂಕಿನ ಇಸ್ಲಾಂಪುರ್ ಗ್ರಾಮದ ನಿವಾಸಿ ಮಸ್ತಾನ್ ಕಮಲಾಪುರೆ ಬಂಧನವಾದ ಕೈದಿ. ಈತನನ್ನು ಬುಧವಾರ ರಾತ್ರಿ ಬಸವ ಕಲ್ಯಾಣ ತಾಲೂಕಿನ ರಾಜೇಶ್ವರ್ ಗ್ರಾಮದಲ್ಲಿ ಬೀದರ್ ಪೊಲೀಸರು ಬಂಧಿಸಿದ್ದಾರೆ.
ಜು.4ರಂದು ಕಲಬುರಗಿ ಕಾರಾಗೃಹದಿಂದ ಮೂವರು ಕೈದಿಗಳು ಪರಾರಿಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರು ಕೈದಿಗಳನ್ನು ಕೆಲ ದಿನಗಳ ಹಿಂದೆ ಬಂಧಿಸಿದ್ದರು. ಇದೀಗ ಮಸ್ತಾನ್ ಬಂಧನದೊಂದಿಗೆ ಪರಾರಿಯಾಗಿದ್ದ ಮೂವರು ಕೈದಿಗಳ ಮರುಬಂಧನವಾದಂತಾಗಿದೆ.