ಬರ ಘೋಷಣೆ, ರೈತರ ಪರಿಹಾರಕ್ಕೆ ಆಗ್ರಹಿಸಿ ಕಲಬುರಗಿ ಬಂದ್‌

Update: 2026-08-20 08:54 IST

ಕಲಬುರಗಿ: ಕಲ್ಯಾಣ ಕರ್ನಾಟಕದಲ್ಲಿ ಭೀಕರ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ, ಕಲಬುರಗಿಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಿ ರೈತರ ಸಂಕಷ್ಟಕ್ಕೆ ಸರ್ಕಾರ ತಕ್ಷಣ ಸ್ಪಂದಿಸಬೇಕು ಎಂದು ಸಂಯುಕ್ತ ಹೋರಾಟ ಕರ್ನಾಟಕ ಸಮಿತಿಯ ವತಿಯಿಂದ ಇಲ್ಲಿನ ಕೇಂದ್ರೀಯ ಬಸ್ ನಿಲ್ದಾಣದ ಎದುರು ಪ್ರತಿಭಟನೆ ನಡೆಸಲಾಯಿತು.

ಗುರುವಾರ ಬೆಳಗ್ಗೆ 5.30 ಗಂಟೆಗೆ ಪ್ರತಿಭಟನೆ ಶುರುವಾಗಿದ್ದರಿಂದ ಬಸ್ ನಿಲ್ದಾಣದಿಂದ ಬಸ್‌ಗಳ ಸಂಚಾರದಲ್ಲಿ ವ್ಯತ್ಯಯ ಕಂಡುಬಂತು. ಕಲಬುರಗಿ ಬಂದ್‌ಗೆ ಬೆಳಗ್ಗೆ ಉತ್ತಮ ಪ್ರತಿಕ್ರಿಯೆ ದೊರಕಿದ್ದು, ಮಧ್ಯಾಹ್ನದವರೆಗೆ ಪ್ರತಿಭಟನೆ ಮುಂದುವರಿಯಲಿದೆ.

ಎಲ್-ನಿನೋ ಪರಿಣಾಮ ಹಾಗೂ ಮುಂಗಾರು ಮಳೆಯ ಕೊರತೆಯಿಂದ ಜಿಲ್ಲೆಯಾದ್ಯಂತ ಕೃಷಿ ಚಟುವಟಿಕೆಗಳು ತೀವ್ರವಾಗಿ ಹದಗೆಟ್ಟಿವೆ. ಹೆಸರು, ಉದ್ದು, ಸೋಯಾಬೀನ್, ಎಳ್ಳು, ಹತ್ತಿ, ಕಬ್ಬು ಸೇರಿದಂತೆ ಪ್ರಮುಖ ಬೆಳೆಗಳು ಸಮರ್ಪಕವಾಗಿ ಬೆಳವಣಿಗೆಯಾಗದೆ ರೈತರು ಭಾರಿ ನಷ್ಟ ಅನುಭವಿಸುತ್ತಿದ್ದಾರೆ. ಬೆಳೆ ವಿಮೆಯಲ್ಲಿಯೂ ರೈತರಿಗೆ ಅನ್ಯಾಯವಾಗಿದ್ದು, ಸರ್ಕಾರ ಬರ ಪರಿಹಾರ ಘೋಷಿಸುವಲ್ಲಿ ವಿಳಂಬ ಮಾಡುತ್ತಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಲಬುರಗಿಯನ್ನು ಭೀಕರ ಬರಪೀಡಿತ ಪ್ರದೇಶವೆಂದು ಘೋಷಿಸಿ, ರೈತರಿಗೆ ಪ್ರತಿ ಎಕರೆಗೆ 50 ಸಾವಿರ ರೂ. ಬರ ಪರಿಹಾರ ನೀಡಬೇಕು. ಬೆಳೆ ವಿಮೆಯಿಂದ ವಂಚಿತರಾಗಿರುವ ಎಲ್ಲ ರೈತರಿಗೆ ಕೂಡಲೇ ವಿಮಾ ಮೊತ್ತ ಬಿಡುಗಡೆ ಮಾಡಬೇಕು ಹಾಗೂ ರೈತರ ಸಾಲ ಮನ್ನಾ ಮಾಡಬೇಕು ಎಂದು ರೈತರು ಆಗ್ರಹಿಸಿದರು.

ಮಹಾರಾಷ್ಟ್ರದ ಪುಣೆ ಸಮೀಪದ ಉಜನಿ ಜಲಾಶಯದಿಂದ ಕರ್ನಾಟಕದ ಪಾಲಿನ 15 ಟಿಎಂಸಿ ನೀರನ್ನು ಬಿಡುಗಡೆ ಮಾಡಬೇಕು. ಅಂತರ್ಜಲ ಮಟ್ಟ ಕುಸಿದಿರುವುದರಿಂದ ಬೋರ್‌ವೆಲ್ ಹಾಗೂ ಬಾವಿಗಳು ಬತ್ತುತ್ತಿದ್ದು, ಕಬ್ಬು ಸೇರಿದಂತೆ ವಿವಿಧ ಬೆಳೆಗಳು ಒಣಗುತ್ತಿವೆ. ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಅಗತ್ಯವಿರುವ ಕಡೆಗಳಲ್ಲಿ ಗೋಶಾಲೆಗಳನ್ನು ತೆರೆಯಬೇಕು ಎಂದು ಪಟ್ಟು ಹಿಡಿದರು.

ಹಿಂಗಾರು ಬಿತ್ತನೆಗೆ ರೈತರಿಗೆ ಉಚಿತವಾಗಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಒದಗಿಸಬೇಕು. ರೈತರಿಗೆ ನ್ಯಾಯಯುತ ಬೆಲೆ ದೊರೆಯುವಂತೆ C2+50ರಷ್ಟು ಕನಿಷ್ಠ ಬೆಂಬಲ ಬೆಲೆ (MSP) ಜಾರಿಗೆ ಕಾನೂನು ರೂಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಸಂಚಾಲಕ ಶರಣಬಸಪ್ಪ ಮಮಶೆಟ್ಟಿ ಮಾತನಾಡಿ, ಕೆಲವು ದಿನಗಳಿಂದ ಅಧಿವೇಶನ ನಡೆಯುತ್ತಿದ್ದರೂ ರೈತರ ಸಂಕಷ್ಟಗಳ ಬಗ್ಗೆ ಮಾತನಾಡುತ್ತಿಲ್ಲ. ಇವರು ಯಾವ ಪುರುಷಾರ್ಥಕ್ಕಾಗಿ ಅಧಿವೇಶನ ಮಾಡುತ್ತಿದ್ದಾರೆ ಗೊತ್ತಾಗುತ್ತಿಲ್ಲ. ರೈತರಿಗೆ ಬರ ಪರಿಹಾರ, ಸಾಲಮನ್ನಾ ಘೋಷಣೆ, ವಿಮೆ ಹಣ ಬಿಡುಗಡೆ ಮಾಡುವ ಕುರಿತು ಮಾತನಾಡಬೇಕು ಎಂದು ಆಗ್ರಹಿಸಿದರು.

ರೈತ ಮುಖಂಡ ಭೀಮಾಶಂಕರ ಮಾಡಿಯಾಳ ಮಾತನಾಡಿ, ಮಳೆಯಿಲ್ಲದೆ ರೈತರು ಕಂಗೆಟ್ಟು ಹೋಗಿದ್ದಾರೆ, ಸಾಲದ ಶೂಲದಿಂದಾಗಿ ರೈತರು ಆತ್ಮಹತ್ಯೆಗೆ ಒಳಗಾಗುತ್ತಿದ್ದಾರೆ, ಹಲವು ಬಾರಿ ಹೋರಾಟ ಕೈಗೊಂಡರೂ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ದೂರಿದರು.

ಪ್ರತಿಭಟನೆಯಲ್ಲಿ ಮೌಲಾ ಮುಲ್ಲಾ, ನಾಗೇಂದ್ರ ಥಂಬೆ, ಎಂ. ಬಿ. ಸಜ್ಜನ್, ಕರೆಪ್ಪ ಕರಗೊಂಡ, ಸಿದ್ದು ಎಸ್. ಎಲ್., ಪದ್ಮಿನಿ ಕಿರಣಗಿ, ಅಶ್ಫಾಕ್ ಮುಲ್ಲಾ ಸೇರಿದಂತೆ ಹಲವರು ರೈತರು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News