Kalaburagi | ದಂಡ ಪಾವತಿಸಿ ಇಬ್ಬರು ಕೈದಿಗಳ ಬಿಡುಗಡೆಗೆ ನೆರವಾದ ಕಾರ್ಮೆಲ್ ಜ್ಯೋತಿ ಟ್ರಸ್ಟ್
ಕಲಬುರಗಿ: ಆರ್ಥಿಕ ಸಂಕಷ್ಟದಿಂದ ನ್ಯಾಯಾಲಯ ವಿಧಿಸಿದ್ದ ದಂಡದ ಮೊತ್ತ ಪಾವತಿಸಲು ಸಾಧ್ಯವಾಗದೆ ಕೇಂದ್ರ ಕಾರಾಗೃಹದಲ್ಲೇ ಉಳಿದಿದ್ದ ಇಬ್ಬರು ಶಿಕ್ಷಿತ ಕೈದಿಗಳ ಬಿಡುಗಡೆಗೆ ಕಡಗಂಚಿಯ ಕಾರ್ಮೆಲ್ ಜ್ಯೋತಿ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಮಾನವೀಯ ನೆರವು ನೀಡಿದೆ.
ಶನಿವಾರ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಟ್ರಸ್ಟ್ ವತಿಯಿಂದ ಇಬ್ಬರು ಕೈದಿಗಳ ದಂಡದ ಮೊತ್ತವನ್ನು ಪಾವತಿಸಿ ಅವರ ಬಿಡುಗಡೆಗೆ ಸಹಕಾರ ನೀಡಲಾಯಿತು.
ಬಿಡುಗಡೆಯಾದವರಲ್ಲಿ ಶಿಕ್ಷಾ ಬಂದಿ ಸಂಖ್ಯೆ 1233ರ ದಿಗಂಬರ ಸುಭಾಷ್ ನಾಟೀಕರ್ ಹಾಗೂ ಶಿಕ್ಷಾ ಬಂದಿ ಸಂಖ್ಯೆ 286ರ ಶಿವಕುಮಾರ ತಂದೆ ಅರ್ಜುನ ಪ್ರಸಾದ್ ಸೇರಿದ್ದಾರೆ. ದಿಗಂಬರ ಅವರ 13 ಸಾವಿರ ರೂ. ಹಾಗೂ ಶಿವಕುಮಾರ ಅವರ 15 ಸಾವಿರ ರೂ. ಸೇರಿದಂತೆ ಒಟ್ಟು 28 ಸಾವಿರ ರೂ. ದಂಡದ ಮೊತ್ತವನ್ನು ಟ್ರಸ್ಟ್ ವತಿಯಿಂದ ಭರಿಸಲಾಯಿತು.
ಆರ್ಥಿಕವಾಗಿ ದುರ್ಬಲರಾಗಿದ್ದ ಕಾರಣ ಈ ಇಬ್ಬರು ಕೈದಿಗಳಿಗೆ ದಂಡ ಪಾವತಿಸಲು ಸಾಧ್ಯವಾಗದೆ, ಶಿಕ್ಷೆಯ ಅವಧಿ ಪೂರ್ಣಗೊಂಡಿದ್ದರೂ ಬಿಡುಗಡೆ ದೊರಕಿರಲಿಲ್ಲ. ಈ ವಿಷಯವನ್ನು ಗಮನಿಸಿದ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ರಾಕೇಶ್ ಕಾಂಬಳೆ ಅವರು ಸ್ಥಳೀಯ ಸಾಮಾಜಿಕ ಸಂಸ್ಥೆಗಳ ನೆರವು ಕೋರಿದ್ದರು.
ಇದರ ಬೆನ್ನಲ್ಲೇ ಕಾರ್ಮೆಲ್ ಜ್ಯೋತಿ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್‌ನ ಫಾದರ್ ವಿಲಿಯಂ ಮಿರಿಂದಾ ಹಾಗೂ ಫಾದರ್ ಮ್ಯಾಕ್ಸಿಮ್ ದಂಡದ ಮೊತ್ತವನ್ನು ಪಾವತಿಸಿ ಕೈದಿಗಳ ಬಿಡುಗಡೆಗೆ ನೆರವಾದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಅಧೀಕ್ಷಕ ರಾಕೇಶ್ ಕಾಂಬಳೆ, ಆರ್ಥಿಕವಾಗಿ ಹಿಂದುಳಿದ ಕೈದಿಗಳ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿಸಿರುವ ಟ್ರಸ್ಟ್‌ನ ಸಮಾಜಮುಖಿ ಸೇವೆ ಶ್ಲಾಘನೀಯವಾಗಿದೆ. ಇಂತಹ ಮಾನವೀಯ ಕಾರ್ಯಗಳು ಇತರ ಸಾಮಾಜಿಕ ಸಂಸ್ಥೆಗಳಿಗೂ ಮಾದರಿಯಾಗಲಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಕಾರಾಗೃಹದ ಸಹಾಯಕ ಅಧೀಕ್ಷಕರಾದ ಬಿ. ಸುರೇಶ್, ಚನ್ನಪ್ಪ ಯಟಗಾರ್, ಸಹಾಯಕ ಆಡಳಿತಾಧಿಕಾರಿ ಭೀಮಾಶಂಕರ ಡಾಂಗೆ, ಶಿಕ್ಷಕ ನಾಗರಾಜ ಮೂಲಗೆ ಸೇರಿದಂತೆ ಕಾರಾಗೃಹದ ಅಧಿಕಾರಿಗಳು ಉಪಸ್ಥಿತರಿದ್ದರು.