Chincholi | ಪರಿಸರದ ಉಳಿವಿನಲ್ಲೇ ಮಾನವನ ಉಳಿವು ಅಡಗಿದೆ: ಮಾರುತಿ ಗಂಜಗಿರಿ
ಚಿಂಚೋಳಿ: ಪರಿಸರ ರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕು. ಪರಿಸರದ ಉಳಿವಿನೊಂದಿಗೆ ನಮ್ಮ ಉಳಿವು ಇದೆ ಎಂಬುದನ್ನು ಎಲ್ಲರೂ ಅರಿಯಬೇಕೆಂದು ಸಾಮಾಜಿಕ ಹೋರಾಟಗಾರ ಮಾರುತಿ ಗಂಜಗಿರಿ ತಿಳಿಸಿದರು.
ಇಲ್ಲಿನ ಹೆಲೆನ್ಸ್ ಪದವಿ ಪೂರ್ವ ಕಾಲೇಜು ಹಾಗೂ ಸಾಮಾಜಿಕ ಅರಣ್ಯ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡುತ್ತಿದ್ದರು.
ನಮ್ಮ ದೈನಂದಿನ ಜೀವನದ ವಿಶೇಷ ದಿನಗಳನ್ನು ಸ್ಮರಣೀಯವಾಗಿಸಲು ಹಾಗೂ ನಮ್ಮ ಆರೋಗ್ಯ ರಕ್ಷಣೆಗೆ ಪೂರಕವಾಗಿರುವ ಸಸಿಗಳನ್ನು ನೆಟ್ಟು ಪೋಷಿಸಿ ಬೆಳೆಸುವ ಕೆಲಸಕ್ಕೆ ಪ್ರತಿಯೊಬ್ಬರೂ ಮುಂದಾಗಬೇಕು. ಪರಿಸರ ಉಳಿಸಿ ಬೆಳೆಸಲು ತಮ್ಮ ಜೀವನವನ್ನೇ ಮುಡುಪಾಗಿಟ್ಟು ಇತಿಹಾಸದ ಪುಟದಲ್ಲಿ ಅಜರಾಮರವಾಗಿರುವ ಸಾಲುಮರದ ತಿಮ್ಮಕ್ಕನವರ ಆದರ್ಶ ಹಾಗೂ ಇತಿಹಾಸವನ್ನು ಇಂದಿನ ಯುವ ಪೀಳಿಗೆ ಅರಿಯಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅರಣ್ಯ ಇಲಾಖೆಯ ಡಿ.ಆರ್.ಎಫ್.ಒ. ಮದರಸಾಬ್, ಫಾರೆಸ್ಟ್ ಬೀಟ್ ಅಧಿಕಾರಿಗಳಾದ ರುಕ್ಸನಾ ಹಾಗೂ ಮಲ್ಲಿನಾಥ್ ಅವರು ಪರಿಸರ ಸಂರಕ್ಷಣೆಯ ಕುರಿತು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫಾದರ್ ಡಿಸೋಜಾ ವಹಿಸಿದ್ದರು. ವೇದಿಕೆಯಲ್ಲಿ ಅರ್ಪಿತಾ, ಸಿಸ್ಟರ್ ಮರಿಯಾ ಹಾಗೂ ಮೋಹನಕುಮಾರ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶಮೀನಾಬೇಗಂ ಕಾರ್ಯಕ್ರಮ ನಿರೂಪಿಸಿದರು, ರೇಣುಕಾ ಎಲ್ಲರನ್ನೂ ಸ್ವಾಗತಿಸಿದರು. ಶೃತಿ ವಂದಿಸಿದರು. ಕಾಂಪ್ಲೆಕ್ಸ್‌ನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.