×
Ad

Afzalpur | ತಾಲೂಕಿನ ಶಾಸನಗಳು, ಸ್ಮಾರಕಗಳು ಕರುನಾಡಿನ ಇತಿಹಾಸದ ಕನ್ನಡಿ: ಮುಡುಬಿ ಗುಂಡೇರಾವ್

ಚಿಣಮಗೇರಾದಲ್ಲಿ ಐತಿಹಾಸಿಕ ಸ್ಥಳ ಪರಿಚಯಾತ್ಮಕ ಕಾರ್ಯಕ್ರಮ

Update: 2026-06-17 19:38 IST

ಅಫಜಲಪುರ: ಶಾಸನಗಳು, ಕೋಟೆ-ಕೊತ್ತಲುಗಳು ಹಾಗೂ ಐತಿಹಾಸಿಕ ಸ್ಮಾರಕಗಳು ಇತಿಹಾಸ ರಚನೆಗೆ ಪೂರಕವಾಗಿದ್ದು, ಅಫಜಲಪುರ ತಾಲೂಕಿನ ವಿವಿಧ ಗ್ರಾಮಗಳಲ್ಲಿರುವ ಪುರಾತನ ಅವಶೇಷಗಳು ಕರುನಾಡಿನ ಸಮೃದ್ಧ ಇತಿಹಾಸವನ್ನು ಸಾರುತ್ತವೆ ಎಂದು ಸಂಶೋಧಕ ಹಾಗೂ ಸಾಹಿತಿ ಮುಡುಬಿ ಗುಂಡೇರಾವ್ ಅಭಿಪ್ರಾಯಪಟ್ಟರು.

ತಾಲೂಕಿನ ಚಿಣಮಗೇರಾದ ಶ್ರೀ ಮಹಾಂತೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗ ಆಯೋಜಿಸಿದ್ದ ಜಿಲ್ಲೆಯ ಐತಿಹಾಸಿಕ ಸ್ಥಳ ಪರಿಚಯಾತ್ಮಕ-52 ಕಾರ್ಯಕ್ರಮದಲ್ಲಿ “ಅಫಜಲಪುರ ತಾಲೂಕಿನ ನೆಲದ ಇತಿಹಾಸ” ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ತಾಲೂಕಿನ ಐತಿಹಾಸಿಕ ಪರಂಪರೆಯ ಕುರಿತು ಬೆಳಕು ಚೆಲ್ಲಿದರು.

ಚಿನಮಳ್ಳಿ, ಅತನೂರ, ಮಣ್ಣೂರ, ಮಾಶಾಳ, ಗೊಬ್ಬೂರ, ಬಂದರವಾಡ, ನೀಲೂರ, ಭೈರಾಮಡಗಿ, ದೇವಲ ಗಾಣಗಾಪೂರ, ಘತ್ತರಗಿ, ಚಿಣಮಗೇರಾ ಹಾಗೂ ಬಿದನೂರ ಸೇರಿದಂತೆ ಅನೇಕ ಗ್ರಾಮಗಳಲ್ಲಿರುವ ದೇವಾಲಯಗಳು, ಶಾಸನಗಳು ಮತ್ತು ಸ್ಮಾರಕಗಳು ಕರ್ನಾಟಕದ ಇತಿಹಾಸದ ಮಹತ್ವದ ಅಧ್ಯಾಯಗಳನ್ನು ಅನಾವರಣಗೊಳಿಸುತ್ತವೆ. ನಮ್ಮ ನೆಲದ ಇತಿಹಾಸವೇ ನಮಗೆ ಪ್ರೇರಣೆಯಾಗಿದ್ದು, ಮಕ್ಕಳಲ್ಲಿ ಐತಿಹಾಸಿಕ ಜ್ಞಾನದ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಗತ್ಯ ಎಂದು ಹೇಳಿದರು.

ಬಸವೇಶ್ವರ ಸಮಾಜ ಸೇವಾ ಬಳಗದ ಅಧ್ಯಕ್ಷ ಎಚ್.ಬಿ. ಪಾಟೀಲ್ ಮಾತನಾಡಿ, ಕಳೆದ ಎರಡುವರೆ ವರ್ಷಗಳಿಂದ ಜಿಲ್ಲೆಯ ಐತಿಹಾಸಿಕ ಸ್ಥಳಗಳು ಹಾಗೂ ಸ್ಮಾರಕಗಳ ಪರಿಚಯ ಮತ್ತು ಇತಿಹಾಸ ಜಾಗೃತಿ ಅಭಿಯಾನವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ. ಇಂದಿನ ಪೀಳಿಗೆಯಲ್ಲಿ ಐತಿಹಾಸಿಕ ಪ್ರಜ್ಞೆ ಮೂಡಿಸುವ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಬಳಗ ಕೈಗೊಂಡಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ಲಕ್ಷಿಕಾಂತ ಹಿರೇಗೌಡ್,ಎಂ.ಜಗದೇಶ್ವರಿ, ನವಾಬ್ ಶರೀಫ್,ಮಹಾಂತೇಶ್ ಪಾಟೀಲ್,ಮಹಾಂತೇಶ ಕಲಶೆಟ್ಟಿ,ಸಮಾಜ ಸೇವಕ ರಾಜು ಅವರಾದ ಹಾಗೂ ಸಿಬ್ಬಂದಿ,ವಿದ್ಯಾರ್ಥಿಗಳು ಭಾಗವಹಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News