×
Ad

Afzalpur | ಬರ ಘೋಷಣೆ, ಮನರೇಗಾ ಮುಂದುವರಿಕೆ ಸೇರಿ ವಿವಿಧ ಬೇಡಿಕೆಗಳಿಗೆ ರೈತ ಸಂಘದಿಂದ ಪ್ರತಿಭಟನೆ

ಗೊಬ್ಬುರು ಕೆ ಕ್ರಾಸ್‌ನಲ್ಲಿ ಕೆಕೆಆರ್‌ಟಿಸಿ ಬಸ್ ನಿಲುಗಡೆಗೂ ಆಗ್ರಹ

Update: 2026-07-15 22:13 IST

ಅಫಜಲಪುರ, ಜು.16: ತಾಲೂಕನ್ನು ತಕ್ಷಣ ಬರಪೀಡಿತ ಪ್ರದೇಶವೆಂದು ಘೋಷಿಸಿ ಪರಿಹಾರ ಕಾಮಗಾರಿಗಳನ್ನು ಆರಂಭಿಸಬೇಕು, ಗ್ರಾಮೀಣ ಉದ್ಯೋಗ ಖಾತ್ರಿ (ಮನರೇಗಾ) ಯೋಜನೆಯನ್ನು ಹಿಂದಿನ ಮಾದರಿಯಲ್ಲೇ ಮುಂದುವರಿಸಬೇಕು ಹಾಗೂ ಗೊಬ್ಬುರು ಕೆ ಕ್ರಾಸ್‌ನಲ್ಲಿ ಕೆಕೆಆರ್‌ಟಿಸಿ ಬಸ್‌ಗಳನ್ನು ಕಡ್ಡಾಯವಾಗಿ ನಿಲ್ಲಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.

ಗೊಬ್ಬುರು ಕೆ ಕ್ರಾಸ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಮುಖಂಡರು, ಮಳೆ ಕೊರತೆಯಿಂದ ಅಫಜಲಪುರ ತಾಲೂಕಿನಲ್ಲಿ ಮುಂಗಾರು ಬಿತ್ತನೆ ಕುಂಠಿತಗೊಂಡಿದ್ದು, ರೈತರು, ಕೃಷಿ ಕಾರ್ಮಿಕರು ಹಾಗೂ ಗ್ರಾಮೀಣ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ತಕ್ಷಣ ಪರಿಹಾರ ಕಾಮಗಾರಿಗಳನ್ನು ಆರಂಭಿಸಬೇಕು ಎಂದು ಒತ್ತಾಯಿಸಿದರು.

ಮನರೇಗಾ ಯೋಜನೆಯಡಿ 200 ಮಾನವ ದಿನಗಳ ಉದ್ಯೋಗ ಕಲ್ಪಿಸಬೇಕು, ಕೂಲಿ ದರ ಹೆಚ್ಚಿಸಬೇಕು ಹಾಗೂ ಬಾಕಿ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು. ವಿಬಿಜಿ (VBG) ಗುತ್ತಿಗೆ ಪದ್ಧತಿಯನ್ನು ಕೈಬಿಟ್ಟು ಹಿಂದಿನ ಮನರೇಗಾ ವ್ಯವಸ್ಥೆಯನ್ನೇ ಮುಂದುವರಿಸಬೇಕು ಎಂದು ಆಗ್ರಹಿಸಿದರು.

ಗೊಬ್ಬುರು ಕೆ ಕ್ರಾಸ್‌ನಲ್ಲಿ ಕೆಕೆಆರ್‌ಟಿಸಿ ಬಸ್‌ಗಳು ನಿಲ್ಲಿಸದ ಕಾರಣ ವಿದ್ಯಾರ್ಥಿಗಳು, ರೈತರು ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಎಲ್ಲಾ ಬಸ್‌ಗಳಿಗೆ ಕಡ್ಡಾಯ ನಿಲುಗಡೆ ಕಲ್ಪಿಸಬೇಕು ಎಂದು ಸಾರಿಗೆ ಇಲಾಖೆಯನ್ನು ಒತ್ತಾಯಿಸಿದರು.

ಪ್ರತಿಭಟನೆ ಬಳಿಕ ಪ್ರಧಾನಮಂತ್ರಿ, ಮುಖ್ಯಮಂತ್ರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು, ಜಿಲ್ಲಾ ಹಾಗೂ ತಾಲೂಕು ಅಧಿಕಾರಿಗಳು ಮತ್ತು ಕೆಕೆಆರ್‌ಟಿಸಿ ಅಧಿಕಾರಿಗಳಿಗೆ ಉದ್ದೇಶಿಸಿದ ಮನವಿಪತ್ರವನ್ನು ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಶರಣಬಸಪ್ಪ ಮಮ್ಮಶೆಟ್ಟಿ, ಸಂತೋಷ ಮಲಗೊಂಡ ಇಂಗಳಗಿ, ಸಿದ್ದು ದಣ್ಣೂರ, ಅಶೋಕ ಹೂಗಾರ, ಮೈಲಾರಿ ದೊಡ್ಮನಿ, ದೇವಾನಂದ ಬಿರಾದಾರ ಸೇರಿದಂತೆ ರೈತರು, ಮಹಿಳೆಯರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪ್ರತಿಭಟನೆಯ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ದೇವಲ್ ಗಾಣಗಾಪುರ ಪೊಲೀಸ್ ಠಾಣೆ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News