Kalaburagi | ‘ಮೇರಾ ಯುವ ಭಾರತ’ ಯೋಜನೆಗೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿಯಾಗಲಿ: ಡಿಸಿ
ಜಿಲ್ಲಾ ಸಲಹಾ ಸಮಿತಿ ಸಭೆ
ಕಲಬುರಗಿ : ಕೇಂದ್ರ ಸರ್ಕಾರದ ‘ಮೇರಾ ಯುವ ಭಾರತ’ ಯೋಜನೆಯಡಿ ಯುವ ನಾಯಕತ್ವ, ಸಮುದಾಯ ಅಭಿವೃದ್ಧಿ ಹಾಗೂ ರಾಷ್ಟ್ರೀಯ ಏಕತೆ ಬೆಳೆಸುವ ಉದ್ದೇಶದಿಂದ 2026-27ನೇ ಸಾಲಿನ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಜಿಲ್ಲೆಯ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿಯಾಗುವಂತೆ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ‘ಮೇರಾ ಯುವ ಭಾರತ’ ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, 15ರಿಂದ 29 ವರ್ಷದೊಳಗಿನ ಯುವಕರು ನೋಂದಣಿಗೆ ಅರ್ಹರಾಗಿದ್ದು, ಜಿಲ್ಲೆಯ ಪ್ರೌಢಶಾಲೆ, ಪದವಿಪೂರ್ವ, ಪದವಿ, ಐಟಿಐ, ಡಿಪ್ಲೊಮಾ, ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊಳ್ಳುವಂತೆ ಕ್ರಮ ಕೈಗೊಳ್ಳಬೇಕು ಎಂದರು.
ನೋಂದಾಯಿತ ಯುವಕರಿಗೆ ಕೌಶಲ್ಯ ತರಬೇತಿ, ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕೆ ಪೂರಕ ಚಟುವಟಿಕೆಗಳು, ನಶಾ ಮುಕ್ತ ಭಾರತ ಅಭಿಯಾನ, ಕ್ರೀಡಾಕೂಟಗಳು, ಯುವ ಕ್ಲಬ್ ಅಭಿವೃದ್ಧಿ, ಯುವ ನಾಯಕತ್ವ ಬಲವರ್ಧನೆ ಹಾಗೂ ರಾಷ್ಟ್ರೀಯ ಯುವಜನೋತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
ಆಗಸ್ಟ್ 15ರವರೆಗೆ ನಡೆಯುವ ನೋಂದಣಿ ಅಭಿಯಾನವನ್ನು ಯಶಸ್ವಿಗೊಳಿಸಲು ಪ್ರತಿಯೊಂದು ಶಿಕ್ಷಣ ಸಂಸ್ಥೆಯಲ್ಲಿ ‘ಮೇರಾ ಯುವ ಭಾರತ’ ಕ್ಯಾಂಪಸ್ ರಾಯಭಾರಿ ಹಾಗೂ ನೋಡಲ್ ಅಧಿಕಾರಿಯನ್ನು ನೇಮಿಸಿ, ವಿದ್ಯಾರ್ಥಿಗಳ ಗರಿಷ್ಠ ನೋಂದಣಿಯನ್ನು ಖಚಿತಪಡಿಸಿಕೊಳ್ಳುವಂತೆ ಸೂಚಿಸಿದರು.
ಮೇರಾ ಯುವ ಭಾರತ ಅಧಿಕಾರಿ ಸುಮಿತ್ ಫರ್ಕಿ ಅವರು ಮಾತನಾಡಿ, 2026-27ನೇ ಸಾಲಿನ ಕ್ರಿಯಾ ಯೋಜನೆ, ಕಾರ್ಯಕ್ರಮಗಳ ರೂಪುರೇಷೆ ಕುರಿತು ಮಾಹಿತಿ ನೀಡಿದಲ್ಲದೆ ಜಿಲ್ಲೆಯಲ್ಲಿ ಈಗಾಗಲೆ ಜುಲೈ 1 ರಿಂದಲೆ ನೋಂದಣಿ ಆರಂಭವಾಗಿದ್ದು, ಇದೂವರೆಗೆ ತುಂಬಾ ಕಡಿಮೆ ಸಂಖ್ಯೆಯಲ್ಲಿ ನೋಂಣಿಯಾಗಿದೆ. ಜಿಲ್ಲೆಯ ಯುವ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ನೋಂಣಿಗೆ ಇಲಾಖೆಗಳ ಸಹಕಾರ ಕೋರಿದಲ್ಲದೆ https://mybharat.gov.in/yuva_register ಲಿಂಕ್ ಮೂಲಕ 15 ರಿಂದ 29 ವಯಸ್ಸಿನ ಯುವ-ಯುವತಿಯರು ಆಗಸ್ಟ್ 15 ರೊಳಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಜಗದೇವಪ್ಪ, ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು, ಡಿ.ಡಿ.ಪಿ.ಐ, ಡಿ.ಡಿ.ಪಿ.ಯು, ಎನ್.ಸಿ.ಸಿ., ಕೌಶಲ್ಯಾಭಿವೃದ್ಧಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಭಾಗವಹಿಸಿದ್ದರು.