×
Ad

Aland | ಹತಗುಂದಾದಲ್ಲಿ 'ನಾದ ನಿರಂಜನ' ಸಂಗೀತ ರಸಸಂಜೆ

ಜನಪದ ಕಲೆ ಉಳಿವಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಅಗತ್ಯ: ಶಾಂತಯ್ಯ ಹಿರೇಮಠ

Update: 2026-07-15 22:23 IST

ಆಳಂದ : ಇಂದಿನ ತಾಂತ್ರಿಕ ಯುಗದಲ್ಲಿ ಸಾಹಿತ್ಯ, ಸಂಗೀತ ಹಾಗೂ ಜನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಂಘ-ಸಂಸ್ಥೆಗಳು ಮತ್ತು ಸರ್ಕಾರ ಕೈಗೊಳ್ಳುತ್ತಿರುವ ಕಾರ್ಯಗಳು ಶ್ಲಾಘನೀಯ ಎಂದು ಶಾಂತಯ್ಯ ಹಿರೇಮಠ ಹೇಳಿದರು.

ತಾಲೂಕಿನ ಹತಗುಂದಾ ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಆವರಣದಲ್ಲಿ ಬಸವನ ಸಂಗೊಳಗಿ ಶ್ರೀ ಬಸವೇಶ್ವರ ಜಾನಪದ ಕಲಾ ಸಂಘ (ರಿ) ಆಶ್ರಯದಲ್ಲಿ ಆಯೋಜಿಸಿದ್ದ ‘ನಾದ ನಿರಂಜನ’ ಸಾಂಸ್ಕೃತಿಕ ಹಾಗೂ ಸಂಗೀತ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.

ಜನಪದ ಕಲೆ, ಭಕ್ತಿಗೀತೆ ಹಾಗೂ ಸುಗಮ ಸಂಗೀತ ನಮ್ಮ ಸಂಸ್ಕೃತಿಯ ಜೀವಾಳವಾಗಿದ್ದು, ಇವುಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ ಉಳಿಸುವ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ. ಇಂತಹ ಕಾರ್ಯಕ್ರಮಗಳು ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವುದರ ಜೊತೆಗೆ ಸಮಾಜದಲ್ಲಿ ಸೌಹಾರ್ದತೆ ಮತ್ತು ಸಾಂಸ್ಕೃತಿಕ ಜಾಗೃತಿ ಮೂಡಿಸುತ್ತವೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಲ್ಲಯ್ಯಸ್ವಾಮಿ ಸುಂಟನೂರ ವಹಿಸಿದ್ದರು. ವೇದಿಕೆಯಲ್ಲಿ ಅರುಣಕುಮಾರ ಓಗೆ, ಪ್ರಭುಲಿಂಗ ಬಿರೆದಾರ, ನಾಗೇಂದ್ರಪ್ಪ ಅಲ್ದಕ್, ವೀರಣ್ಣ ಕಂಬಾರ, ರವಿ ಅಲ್ದಕ್ ಹಾಗೂ ದೇವಿಂದ್ರ ಅಲ್ದಕ್ ಉಪಸ್ಥಿತರಿದ್ದರು.

ಸಂಗೀತ ಕಾರ್ಯಕ್ರಮದಲ್ಲಿ ಸೂರ್ಯಕಾಂತ ಶಾಸ್ತ್ರಿ, ರಾಜೇಂದ್ರ ವಿಶ್ವಕರ್ಮ, ಮಡಿವಾಳಪ್ಪ ನಂದೂರ, ಶರಣಯ್ಯ ಮಠಪತಿ, ಶರಣು ಸಾಗನೂರ, ಅಡವಯ್ಯ ಹಿರೇಮಠ, ಗುರಲಿಂಗಯ್ಯ ಸ್ವಾಮಿ ಹಿತ್ತಲಶಿರೂರ, ರವಿಸ್ವಾಮಿ ಗೋಟೂರ ಹಾಗೂ ಶರಣಪ್ಪ ಬಿಲಗುಂದಿ ಅವರು ಭಕ್ತಿಗೀತೆ, ಜನಪದ ಗೀತೆ ಹಾಗೂ ಸುಗಮ ಸಂಗೀತವನ್ನು ಪ್ರಸ್ತುತಪಡಿಸಿ ನೆರೆದಿದ್ದ ಸಂಗೀತಾಸಕ್ತರನ್ನು ರಂಜಿಸಿದರು. ಅವರ ಸುಮಧುರ ಗಾಯನಕ್ಕೆ ಪ್ರೇಕ್ಷಕರು ಕರತಾಡನದ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು.

ರೇವಣಯ್ಯಸ್ವಾಮಿ ನಿರೂಪಿಸಿದರು. ಸಂಘದ ಅಧ್ಯಕ್ಷ ಗುರುಪಾದಯ್ಯ ಸ್ವಾಮಿ ಸ್ವಾಗತಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ಕಲಾಭಿಮಾನಿಗಳು ಹಾಗೂ ವಿವಿಧ ಭಾಗಗಳಿಂದ ಆಗಮಿಸಿದ್ದ ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News