Kalaburagi | ಸಮಾನತೆ, ಮಾನವೀಯ ಮೌಲ್ಯಗಳಿಗೆ ದಾರ್ಶನಿಕ ಚಿಂತನೆ ಅಗತ್ಯ: ರಘುನಾಥ ಚ.ಹ
‘ವರ್ತಮಾನದ ವಿವೇಚನೆಯ ದಿಕ್ಕುಗಳು’ ಕೃತಿ ಲೋಕಾರ್ಪಣೆ
ಕಲಬುರಗಿ : ಸಮಾಜದಲ್ಲಿ ಸಮಾನತೆ, ಮಾನವೀಯತೆ ಹಾಗೂ ಪ್ರಜ್ಞಾವಂತ ಚಿಂತನೆಗಳನ್ನು ಬೆಳೆಸುವ ದಾರ್ಶನಿಕರ ವಿಚಾರಗಳು ಇಂದಿನ ಕಾಲಘಟ್ಟದಲ್ಲಿ ಅತ್ಯಂತ ಅಗತ್ಯವಾಗಿವೆ ಎಂದು ಹಿರಿಯ ಸಾಹಿತಿ ರಘುನಾಥ ಚ.ಹ ಅಭಿಪ್ರಾಯಪಟ್ಟರು.
ಗುಲ್ಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಹಾಗೂ ಕಲಾ ನಿಕಾಯದ ಡೀನ್ ಪ್ರೊ. ಎಚ್.ಟಿ. ಪೊತೆಯವರ ‘ವರ್ತಮಾನದ ವಿವೇಚನೆಯ ದಿಕ್ಕುಗಳು’ ಕೃತಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಈ ಕೃತಿ ಬಹುತ್ವ ಭಾರತ, ಮಾನವೀಯ ಮೌಲ್ಯಗಳು ಹಾಗೂ ಸಮಾಜಮುಖಿ ಚಿಂತನೆಗಳನ್ನು ಒಳಗೊಂಡ ಮಹತ್ವದ ವೈಚಾರಿಕ ಕೃತಿಯಾಗಿದೆ. ಪ್ರೊ. ಪೊತೆಯವರು ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಯನ್ನು ಸಾಹಿತ್ಯದ ಮೂಲಕ ಪರಿಣಾಮಕಾರಿಯಾಗಿ ಪರಿಚಯಿಸುತ್ತಿದ್ದು, ಪ್ರಗತಿಪರ ಮತ್ತು ಜನಪರ ಮೌಲ್ಯಗಳನ್ನು ತಮ್ಮ ಬರಹಗಳಲ್ಲಿ ಪ್ರತಿಪಾದಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾಜದಲ್ಲಿನ ಅಸಮಾನತೆ, ಅನ್ಯಾಯ ಮತ್ತು ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವ ಅಗತ್ಯವಿದ್ದು, ಗಾಂಧಿ ಹಾಗೂ ಅಂಬೇಡ್ಕರ್ ಅವರ ವಿಚಾರಧಾರೆಗಳು ಇಂದಿನ ಸಮಾಜಕ್ಕೆ ಮಾರ್ಗದರ್ಶಿಯಾಗಬೇಕು ಎಂದು ಹೇಳಿದರು. ಎಸ್‌ಐಆರ್ ಹೆಸರಿನಲ್ಲಿ ಮತದಾನದ ಹಕ್ಕು ಕುಂಠಿತಗೊಳಿಸುವ ಪ್ರಯತ್ನಗಳು ಆತಂಕಕಾರಿ ಬೆಳವಣಿಗೆಯಾಗಿವೆ ಎಂದೂ ಅಭಿಪ್ರಾಯಪಟ್ಟರು.
ಕೃತಿ ಕುರಿತು ಮಾತನಾಡಿದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಕಿರಣ್ ಗಾಜನೂರ, ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯದ ವಿಚಾರಧಾರೆಗಳು ಜನಸಾಮಾನ್ಯರ ವಿಮೋಚನೆಗೆ ದಾರಿ ಮಾಡಿಕೊಟ್ಟಿವೆ ಎಂದು ಹೇಳಿದರು.
ಕೃತಿ ರಚನೆಕಾರ ಪ್ರೊ. ಎಚ್.ಟಿ. ಪೊತೆಯವರು ಮಾತನಾಡಿ, ಸಮಾಜಮುಖಿ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಕೃತಿ ರಚಿಸಿರುವುದಾಗಿ ತಿಳಿಸಿದರು. ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಖಾಯಂ ಪ್ರಾಧ್ಯಾಪಕರ ಕೊರತೆಯನ್ನು ನಿವಾರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ಶಶಿಕಾಂತ ಉಡಿಕೇರಿ ಮಾತನಾಡಿ, ಕನ್ನಡ ಅಧ್ಯಯನ ಸಂಸ್ಥೆ ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತಿದ್ದು, ಪ್ರೊ. ಪೊತೆಯವರ ಬರಹಗಳು ಸಮಾನತೆ ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರವಹಿಸುತ್ತಿವೆ ಎಂದು ಹೇಳಿದರು. ವಿದ್ಯಾರ್ಥಿಗಳು ಸಂವಿಧಾನಾತ್ಮಕ ಮೌಲ್ಯಗಳನ್ನು ಅರಿತು ಜವಾಬ್ದಾರಿಯುತ ನಾಗರಿಕರಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಿಶೇಷಾಧಿಕಾರಿ ಹಾಗೂ ಹಿರಿಯ ಪ್ರಾಧ್ಯಾಪಕ ಪ್ರೊ. ರಮೇಶ ರಾಠೋಡ, ಡಾ. ಸೂರ್ಯಕಾಂತ ಸುಜ್ಯಾತ್, ಅಪ್ಪಾರಾವ್ ಅಕ್ಕೋಣಿ, ಪ್ರೊ. ಈಶ್ವರ್ ಇಂಗನ್, ಪ್ರೊ. ವಿ.ಆರ್. ಬಡಿಗೇರ್, ಪ್ರೊ. ಕೆ.ಎಸ್. ಬಂಧು, ಡಾ. ಎಂ.ಬಿ. ಕಟ್ಟಿ, ಡಾ.ಹಣಮಂತ ಮೇಲಕೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಡಾ. ಸಂತೋಷಕುಮಾರ ಎಸ್. ಕಂಬಾರ ಸ್ವಾಗತಿಸಿದರು. ಸಿದ್ದಾರ್ಥ ಚಿಮ್ಮಾಇದ್ಲಾಯಿ ವಂದಿಸಿದರು. ಡಾ. ಕಿರಣ್ ವಲ್ಲೇಪುರೆ ಕಾರ್ಯಕ್ರಮ ನಿರೂಪಿಸಿದರು.