Kalaburagi | ಎಸ್ಐಆರ್ ಪರಿಷ್ಕರಣೆ ಪರಿಷ್ಕೃತ ವೇಳಾಪಟ್ಟಿ ಪ್ರಕಟ
ಆ.17ರಂದು ಕರಡು, ಅ.19ರಂದು ಅಂತಿಮ ಮತದಾರರ ಪಟ್ಟಿ ಪ್ರಕಟ: ಇಕ್ರಮ್ ಶರೀಫ್
ಕಲಬುರಗಿ, ಜು.16: ಭಾರತ ಚುನಾವಣಾ ಆಯೋಗವು ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಕಾರ್ಯಕ್ಕೆ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದ್ದು, ಅದರಂತೆ ಕಲಬುರಗಿ ಜಿಲ್ಲೆಯಲ್ಲಿ ಬಿಎಲ್‌ಒಗಳು ಆಗಸ್ಟ್ 8ರವರೆಗೆ ಮನೆ-ಮನೆಗೆ ಭೇಟಿ ನೀಡಿ ಗಣತಿ ನಮೂನೆ ವಿತರಣೆ, ಸಂಗ್ರಹಣೆ ಹಾಗೂ ಡಿಜಿಟೈಸೇಷನ್ ಕಾರ್ಯ ನಡೆಸಲಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಇಕ್ರಮ ಶರೀಫ್ ತಿಳಿಸಿದ್ದಾರೆ.
ಪರಿಷ್ಕೃತ ವೇಳಾಪಟ್ಟಿಯಂತೆ ಆಗಸ್ಟ್ 8ರವರೆಗೆ ಗಣತಿ ನಮೂನೆ ವಿತರಣೆ ಮತ್ತು ಸಂಗ್ರಹಣೆ ನಡೆಯಲಿದ್ದು, ಇದೇ ಅವಧಿಯಲ್ಲಿ ಮತಗಟ್ಟೆಗಳ ರೇಷನಲೈಸೇಷನ್ ಕಾರ್ಯವೂ ನಡೆಯಲಿದೆ. ಆಗಸ್ಟ್ 17ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಿ, ಸೆಪ್ಟೆಂಬರ್ 16ರವರೆಗೆ ಆಕ್ಷೇಪಣೆಗಳನ್ನು ಸ್ವೀಕರಿಸಲಾಗುತ್ತದೆ. ಅಕ್ಟೋಬರ್ 15ರೊಳಗೆ ಆಕ್ಷೇಪಣೆಗಳನ್ನು ವಿಲೇವಾರಿ ಮಾಡಿ, ಅಕ್ಟೋಬರ್ 19ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಜೂನ್ 30ರಿಂದ ಆರಂಭವಾದ ಎಸ್‌ಐಆರ್ ಕಾರ್ಯದಲ್ಲಿ ಜಿಲ್ಲೆಯ 23,71,542 ಮತದಾರರ ಪೈಕಿ ಇದುವರೆಗೆ 23,59,324 ಮಂದಿಗೆ ಗಣತಿ ನಮೂನೆ ವಿತರಿಸಲಾಗಿದೆ. ಅಲ್ಲದೆ, 8,89,088 ಮತದಾರರಿಂದ ಭರ್ತಿ ಮಾಡಿದ ನಮೂನೆಗಳನ್ನು ಸಂಗ್ರಹಿಸಿ ಡಿಜಿಟೈಸ್ ಮಾಡಲಾಗಿದೆ.
ಮನೆ-ಮನೆ ಸಮೀಕ್ಷೆಯಲ್ಲಿ 9,782 ಮತದಾರರು ನಿಧನ ಹೊಂದಿರುವುದು, 361 ಮಂದಿ ವಿಳಾಸದಲ್ಲಿ ಇಲ್ಲದಿರುವುದು, 9,061 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡಿರುವುದು ಹಾಗೂ 2,364 ಮಂದಿ ಈಗಾಗಲೇ ನೋಂದಣಿಯಾಗಿರುವುದು ಪತ್ತೆಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.